ಕೆಲವೆಡೆ ಸಿಡಿಲು, ಲಘು ಮಳೆ

Team Udayavani, Nov 19, 2019, 11:27 PM IST

ಸಾಂದರ್ಭಿಕ ಚಿತ್ರ

ಮಂಗಳೂರು/ ಉಡುಪಿ: ಮಂಗಳವಾರ ಹಗಲಿಡೀ ಬಿಸಿಲಿದ್ದು, ಸಂಜೆಯ ವೇಳೆಗೆ ಕೆಲವೆಡೆ ಸಿಡಿಲು ಸಹಿತ ತುಂತುರು ಮಳೆಯಾಗಿದೆ. ಉಡುಪಿ, ಮಣಿಪಾಲ ಮತ್ತು ಆಸುಪಾಸಿನ ಕೆಲವೆಡೆ ಮಂಗಳವಾರ ಮುಸ್ಸಂಜೆಯ ವೇಳೆ ಗುಡುಗು ಸಿಡಿಲಿನಿಂದ ಕೂಡಿದ ಸಾಧಾರಣ ಮಳೆಯಾಗಿದೆ.

ಚತುಷ್ಪಥ ಹೆದ್ದಾರಿ ಕಾಮಗಾರಿಯು ಮಣಿಪಾಲದ ಟೈಗರ್‌ ಸರ್ಕಲ್‌ ಮತ್ತು ಎಂಐಟಿ ನಡುವೆ ಪ್ರಗತಿಯಲ್ಲಿದ್ದು, ಮಣ್ಣು ತುಂಬಿಸಿದ ರಸ್ತೆ ಕೆಸರಾಗಿದ್ದರಿಂದ ಹತ್ತಕ್ಕಿಂತಲೂ ಹೆಚ್ಚು ದ್ವಿಚಕ್ರ ವಾಹನಗಳು ನಿಯಂತ್ರಣ ಸಿಗದೆ ಉರುಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಮಡ್ಕ, ಚೊಕ್ಕಾಡಿ, ಪಂಜ ಭಾಗಗಳಲ್ಲಿಯೂ ತುಂತುರು ಮಳೆಯಾಗಿದೆ. ಮಂಗಳೂರು ನಗರದಲ್ಲಿ ಮಂಗಳವಾರ ಸೆಕೆ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು.

10 ವರ್ಷಗಳ ಗರಿಷ್ಠ ಉಷ್ಣಾಂಶ
ಕರಾವಳಿಯಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಗರಿಷ್ಠ ಉಷ್ಣಾಂಶ ಏರಿಕೆಯಾಗುತ್ತಿದ್ದು, ಮಂಗಳವಾರ 37 ಡಿ.ಸೆ. ತಲುಪಿತ್ತು. ನವೆಂಬರ್‌ ತಿಂಗಳಿನಲ್ಲಿ 10 ವರ್ಷಗಳಲ್ಲಿ ದಾಖಲಾದ ಅತೀ ಹೆಚ್ಚಿನ ಉಷ್ಣಾಂಶ ಇದು.

ಕರಾವಳಿಯಲ್ಲಿ ನವೆಂಬರ್‌ನಲ್ಲಿ ಆಗಾಗ ಹಿಂಗಾರು ಮಳೆಯಾಗುವುದರಿಂದ ಈ ರೀತಿಯ ಸುಡು ಬಿಸಿಲು ಇರುವುದಿಲ್ಲ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಬಿಸಿಲು ಹೆಚ್ಚುತ್ತಿದೆ. ಭಾರತೀಯ ಹವಾಮಾನ ಇಲಾಖೆ ಅಂಕಿ ಅಂಶದ ಪ್ರಕಾರ 2008ರ ನ.3ರಂದು 36.8 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಕಳೆದ ವರ್ಷ ನ.11ರಂದು 36.4 ಡಿ.ಸೆ. ದಾಖಲಾಗಿತ್ತು.

ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನಿಲ್‌ ಗವಾಸ್ಕರ್‌ “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಕೆಲವು ದಿನಗಳಿಂದ ಗರಿಷ್ಠ ಉಷ್ಣಾಂಶ ಏರಿಕೆಯಾಗುತ್ತಿದೆ. ಮೋಡಗಳ ಚಲನೆ ಇಲ್ಲದಿರುವುದೇ ಕಾರಣ. ಮುಂದಿನ ಎರಡು ದಿನ ಕರಾವಳಿಯಲ್ಲಿ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ