ಭರವಸೆಗಳ ಅನುಷ್ಠಾನ; ಹೊಸ ಆಡಳಿತದ ಮುಂದಿದೆ ಸವಾಲು

ಮಂಗಳೂರು ಮಹಾನಗರ ಪಾಲಿಕೆ

Team Udayavani, Nov 17, 2019, 4:31 AM IST

ಮಹಾನಗರ: ಮನಪಾ ಚುನಾವಣೆ ಮುಗಿದಿದೆ. ಬಹು ಮತವನ್ನು ಪಡೆದಿರುವ ಬಿಜೆಪಿ ಆಡಳಿತ ಇನ್ನು ಕೆಲವೇ ದಿನಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ. “ಸ್ವಚ್ಛ, ಸುಂದರ ಸುವ್ಯವಸ್ಥಿತ ನಮ್ಮ ಕುಡ್ಲ ಬಿಜೆಪಿಯ ಸಂಕಲ್ಪ’ ಎಂಬ ಘೋಷ ವಾಕ್ಯದೊಂದಿಗೆ ಒಂದಷ್ಟು ಭರವಸೆಗಳನ್ನು ಬಿಜೆಪಿ ತನ್ನ ಚುನಾವಣ ಪ್ರಣಾಳಿಕೆಯಲ್ಲಿ ಜನರ ಮುಂದಿರಿಸಿದೆ. ಇದೀಗ ಮುಂದಿನ 5 ವರ್ಷಗಳಲ್ಲಿ ಈ ಭರವಸೆಗಳನ್ನು ಈಡೇರಿಸುವ ಸವಾಲು ಹೊಸ ಆಡಳಿತದ ಮುಂದಿದೆ.

“ಮಹಾನಗರವನ್ನು ಮುಂದಿನ 5 ವರ್ಷಗಳಲ್ಲಿ ಆಧುನಿಕ ಮೂಲ ಸೌಕರ್ಯಗಳೊಂದಿಗೆ ಪಾರದರ್ಶಕ, ಜನ ಸ್ನೇಹಿ ಆಡಳಿತ ನೀಡಿ ಸಮಗ್ರ ವಿಕಾಸದ ಕಲ್ಪನೆಯೊಂದಿಗೆ ಸ್ವತ್ಛ, ಸುಂದರ, ಸುವ್ಯವಸ್ಥಿತ ಸ್ಮಾರ್ಟ್‌ಸಿಟಿಯನ್ನಾಗಿ ಅಭಿವೃದ್ಧಿಗೊಳಿಸಿ ನಮ್ಮ ಕುಡ್ಲವನ್ನು ದೇಶದ ಅತ್ಯುತ್ತಮ ನಗರವನ್ನಾಗಿಸುವುದು ನಮ್ಮ ಉದ್ದೇಶ’ ಎಂದು ಪ್ರಣಾಳಿಕೆಯಲ್ಲಿ ಬಿಜೆಪಿ ಹೇಳಿಕೊಂಡಿದೆ. ಮುಂದಿನ 5 ವರ್ಷಗಳಲ್ಲಿ ಪಾಲಿಕೆ 5 ಮೇಯರ್‌ಗಳನ್ನು ಕಾಣಲಿದೆ. ಅವರ ನೇತೃತ್ವದಲ್ಲಿ ಪಕ್ಷ ಚುನಾವಣೆ ವೇಳೆ ಜನತೆಗೆ ನೀಡಿರುವ ಭರವಸೆಯನ್ನು ಈಡೇರಿಸಬೇಕಿದೆ.

ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಆಡಳಿತ
ಪ್ರಣಾಳಿಕೆಯ ಭರವಸೆಗಳ ಈಡೇ ರಿಕೆಗೆ ಈ ಬಾರಿ ಬಿಜೆಪಿ ಹೆಚ್ಚು ಪೂರಕ ವಾತಾವರಣ ನೆಲೆ ಗೊಂಡಿದೆ. ನಗರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅನೇಕ ಯೋಜನೆಗಳಿವೆ. ಪ್ರಸ್ತುತ ಕೇಂದ್ರ ಹಾಗೂ ರಾಜ್ಯಗಳೆರಡಲ್ಲೂ ಬಿಜೆಪಿ ಸರಕಾರಗಳಿವೆ. ಇದನ್ನು ಬಳಸಿಕೊಂಡು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಅನುಷ್ಠಾನಗೊಳಿಸಲು ಉತ್ತಮ ಅವಕಾಶವಿದೆ.

ಯೋಜನೆಗಳ ಅನುಷ್ಠಾನದ ಪರಾಮರ್ಶೆ
ಮನಪಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಿತ್ತು .ಇದರಲ್ಲಿ ಬಹುತೇಕ ಮಂದಿ ಚುನಾ ವಣೆಯಲ್ಲಿ ಆಯ್ಕೆಯಾಗಿದ್ದಾರೆ. ಅವರಿಗೆ ಪಾಲಿಕೆ ಆಡಳಿತ ಹೊಸತು. ಮಾರ್ಗದರ್ಶನದ ಆವಶ್ಯಕತೆ ಇದೆ. ಬಿಜೆಪಿ ವತಿಯಿಂದ ಈ ನಿಟ್ಟಿನಲ್ಲಿ ಈಗಾಗಲೇ ಒಂದಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಪ್ರತಿಯೋರ್ವ ಕಾರ್ಪೊರೇಟರ್‌ ತನ್ನ ವಾರ್ಡ್‌ನಲ್ಲಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ತೋರುವ ನಿರ್ವಹಣೆಯನ್ನು ಪ್ರತಿವರ್ಷ ಪರಾಮರ್ಶೆ ಮಾಡುವ ಚಿಂತನೆ ಕೂಡ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ