ಗಡುವು ಕೊನೆ: ಇಂದಿನಿಂದ ಮತ್ತೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಸಾಧ್ಯತೆ

ಅಧಿಕೃತ ಆದೇಶ ಬಾರದೆ ಗೊಂದಲದಲ್ಲಿ ನಗರದ ಆಸ್ತಿ ಮಾಲಕರು

Team Udayavani, May 15, 2019, 2:43 PM IST

ಮಹಾನಗರ: ನಗರ ವ್ಯಾಪ್ತಿಯಲ್ಲಿ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸುವ ಕ್ರಮವನ್ನು ಸರಕಾರವು ತಾತ್ಕಾಲಿಕವಾಗಿ ಮುಂದೂಡಿರುವ ಗಡುವು ಮೇ 15ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ, ಆ ಬಳಿಕ ನಗರದಲ್ಲಿ ಆಸ್ತಿ ವ್ಯವಹಾರಗಳಿಗೆ ಪ್ರಾಪರ್ಟಿ ಕಾರ್ಡ್‌ ಮತ್ತೆ ಕಡ್ಡಾಯವಾಗಲಿದೆ.

ಈ ಸಂಬಂಧ ಸರಕಾರದಿಂದ ಜಿಲ್ಲಾಡಳಿತ ಅಥವಾ ಭೂಮಾಪನ, ಭೂದಾಖಲೆಗಳ ಕಚೇರಿಗೆ ಇಲ್ಲಿವರೆಗೆ ಅಧಿಕೃತ ಆದೇಶ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮೇ 15 ಬಳಿಕ ಪ್ರಾಪರ್ಟಿ ಕಾರ್ಡ್‌ ಕಡ್ಡಾಯದ ಬಗ್ಗೆ ಯಾವ ಕ್ರಮ ಅನುಸರಿಸಬೇಕು ಎನ್ನುವ ಗೊಂದಲದಲ್ಲಿ ನಗರವಾಸಿಗಳು ಸಿಲುಕಿದ್ದಾರೆ.

ನಗರದಲ್ಲಿ ಫೆ. 1ರಿಂದ ಆಸ್ತಿ ನೋಂದಣಿ-ಮಾರಾಟಕ್ಕೆ ಪ್ರಾಪರ್ಟಿ ಕಾರ್ಡ್‌ ಅನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಪ್ರಾಪರ್ಟಿ ಕಾರ್ಡ್‌ ವಿತರಣೆ ವ್ಯವಸ್ಥೆಯಲ್ಲಿ ಕೆಲವು ಗೊಂದಲ ಮತ್ತು ಸರ್ವರ್‌ ಸಮಸ್ಯೆಯಿಂದಾಗಿ ರಾಜ್ಯ ಭೂಮಾಪನ, ಭೂದಾಖಲೆಗಳು ಹಾಗೂ ಸೆಟ್ಲಮೆಂಟ್ ಇಲಾಖೆ ಆಯುಕ್ತ ಮನೀಶ್‌ ಮುದ್ಗಿಲ್ ಅವರು ಕಾರ್ಡ್‌ ಕಡ್ಡಾಯಗೊಳಿಸುವ ಆದೇಶವನ್ನು ಮೇ 15ರ ವರೆಗೆ ಮುಂದೂಡಿದ್ದರು. ಹಾಗಾಗಿ ಈ ಹಿಂದಿನಂತೆ ಅವಶ್ಯ ದಾಖಲೆಗಳ ಆಧಾರದಲ್ಲಿ ಪ್ರಸ್ತುತ ಆಸ್ತಿ ನೋಂದಣಿ ಕಾರ್ಯ ಮುಂದುವರಿದಿದೆ.

ಪ್ರಾಪರ್ಟಿ ಕಾರ್ಡ್‌ ವಿತರಣ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಇಲಾಖೆ ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ. ಪ್ರಾಪರ್ಟಿ ಕಾರ್ಡ್‌ ವಿತರಣ ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ ಇಲಾಖೆಯ ಹೊಸ ಸರ್ವರ್‌ಗೆಜೋಡಿಸಲಾಗಿದೆ. ಅಲ್ಲಿನ ಸರ್ವರ್‌ನಲ್ಲಿ ಸಮಸ್ಯೆಯಿಂದಾಗಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿತ್ತು. ಹೊಸ ಸರ್ವರ್‌ಗೆಜೋಡಣೆ ಮಾಡಿರುವುದರಿಂದ ಈ ಸಮಸ್ಯೆ ನಿವಾರಣೆಯಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಇಲಾಖೆಯಿಂದ ಸಿದ್ಧತೆ
ಮುಂದೂಡಿಕೆ ಗಡುವು ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿಗೆ ಪ್ರಾಪರ್ಟಿಕಾರ್ಡ್‌ ಜೋಡಣೆಯ ನಿಟ್ಟಿನಲ್ಲಿ ಭೂಮಾಪನ, ಭೂದಾಖಲೆಗಳ ಇಲಾಖೆ ಸಿದ್ಧತೆಗಳನ್ನು ನಡೆಸುತ್ತಿದೆ. ನಗರದ ಮಿನಿವಿಧಾನಸೌಧದ ಬಳಿ ಇರುವ ಪ್ರಾಪರ್ಟಿಕಾರ್ಡ್‌ ವಿತರಣ ಕಚೇರಿಯಲ್ಲೂ ಹೊಸ ಸರ್ವರ್‌ ಅಳವಡಿಸಲಾಗಿದ್ದು, ಮಂಗಳವಾರ ಇದರ ಕಾರ್ಯದಕ್ಷತೆಯನ್ನು ಪರಿಶೀಲನೆ ನಡೆಸಲಾಗಿದೆ. ಪ್ರಾಪರ್ಟಿಕಾರ್ಡ್‌ ಸರ್ವರ್‌ನ್ನು ಮಂಗಳೂರು ತಾಲೂಕಿನ ಆಸ್ತಿ ನೋಂದಣಿ ಕಚೇರಿಗಳ (ಸಬ್‌ರಿಜಿಸ್ಟ್ರಾರ್‌) ಸರ್ವರ್‌ಗಳಿಗೆ ಲಿಂಕ್‌ ಮಾಡಲು ಇಲಾಖೆ ಕ್ರಮಕೈಗೊಂಡಿದ್ದು, ಪ್ರಾಯೋಗಿಕವಾಗಿ ಮೂಲ್ಕಿ ಉಪ ನೋಂದಣಿ ಕಚೇರಿಗೆ ಸರ್ವರ್‌ ಲಿಂಕ್‌ ಮಾಡಿ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ. ಪ್ರಾಯೋಗಿಕ ಅಳವಡಿಕೆಗೆ ಅನುಮತಿ ಕೋರಿ ರಾಜ್ಯ ಭೂಮಾಪನ, ಭೂದಾಖಲೆಗಳು, ಸೆಟ್ಲ ಮೆಂಟ್ ಇಲಾಖೆ ಆಯುಕ್ತರಿಗೆ ಜಿಲ್ಲಾಡಳಿತ ಹಾಗೂ ಭೂಮಾಪನ ಇಲಾಖೆ ಪತ್ರ ಬರೆದಿದ್ದು, ಅನುಮತಿ ನಿರೀಕ್ಷಿಸಲಾಗುತ್ತಿದೆ. ಅಸ್ತಿ ನೋಂದಣಿ ಕಚೇರಿಗಳ ಸರ್ವರ್‌ಗಳಿಗೆ ಪ್ರಾಪರ್ಟಿ ಕಾರ್ಡ್‌ ಸರ್ವರ್‌ ಜೋಡಣೆಯಾದ ಬಳಿಕ ಮಾರಾಟ /ಖರೀದಿ ಜಾಗದ ಪ್ರಾಪರ್ಟಿಕಾರ್ಡ್‌ ನಂಬರ್‌ನ್ನು ನೋಂದಣಿ ಕಚೇರಿಯ ಸರ್ವರ್‌ನಲ್ಲಿ ನಮೂದಿಸಿದರೆ ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳು, ವಿವರಗಳು ಲಭ್ಯವಾಗುತ್ತದೆ.

ಪ್ರಾಪರ್ಟಿ ಕಾರ್ಡ್‌ ವಿತರಣೆ ಸರಾಗ
ಪ್ರಾಪರ್ಟಿ ಕಾರ್ಡ್‌ ವಿತರಣೆ ಸರಾಗವಾಗಿ ನಡೆಯುತ್ತಿದ್ದು, ಕಚೇರಿಯಲ್ಲಿ ಹೊಸ ಸರ್ವರ್‌ನ ಕಾರ್ಯಕ್ಷಮತೆಯ ಪರಿಶೀಲನೆ ಕಾರ್ಯ ತಂತ್ರಜ್ಞರಿಂದ ನಡೆಯುತ್ತಿದೆ.
ಪ್ರಸಾದಿನಿ, ಸಹಾಯಕ ನಿರ್ದೇಶಕಿ
ಭೂಮಾಪನ ಇಲಾಖೆ

ಸೂಚನೆ ಬಂದಿಲ್ಲ
ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಮುಂದೂಡಿಕೆ ಮೇ 15ಕ್ಕೆ ಮುಕ್ತಾಯವಾಗುತ್ತದೆ. ಮುಂದಿನ ಕ್ರಮದ ಬಗ್ಗೆ ಇಲಾಖೆಯಿಂದ ಯಾವುದೇ ಯಾವುದೇ ಸೂಚನೆ ಬಂದಿಲ್ಲ.
ಶಶಿಕಾಂತ್‌ ಸೆಂಥಿಲ್,
ದ.ಕ. ಜಿಲ್ಲಾಧಿಕಾರಿ 

ವಿಶೇಷ ವರದಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ