ಮಂಗಳೂರು ಮಹಿಳೆಯ ಭೀಕರ ಹತ್ಯೆ; ಹಂತಕ ಜೋಡಿ ಬಲೆಗೆ

ಮಹಿಳೆಯನ್ನು ತುಂಡು ತುಂಡಾಗಿ ಎಸೆದಿದ್ದ ಹಂತಕರು

Team Udayavani, May 15, 2019, 12:10 PM IST

ಮಂಗಳೂರು: ನಗರವನ್ನು ಬೆಚ್ಚಿ ಬೀಳಿಸಿದ್ದ ಶ್ರೀಮತಿ ಶೆಟ್ಟಿ(35) ಹತ್ಯೆ ಪ್ರಕರಣವನ್ನು ಮೂರು ದಿವಸಗಳ ಒಳಗೆ ಪೊಲೀಸರು ಬೇಧಿಸಿದ್ದು, ಹತ್ಯೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ತನಿಖೆಗೆ ಇಳಿದಿದ್ದ 30 ಪೊಲೀಸ್ ಅಧಿಕಾರಿಗಳ ಮೂರು ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಜಾನ್ಸನ್ ಮತ್ತು ಪತ್ನಿ ವಿಕ್ಟೋರಿಯಾ ಎನ್ನುವವರನ್ನು ಬಂಧಿಸಿದ್ದಾರೆ.

ಶ್ರೀಮತಿ ಶೆಟ್ಟಿ ಬಳಿ ಸಾಲದ ರೂಪದಲ್ಲಿ ಹಣವನ್ನು ಹಂತಕ ಜಾನ್ಸನ್‌ ಪಡೆದಿದ್ದ. ಹಣವನ್ನು ವಾಪಾಸು ನೀಡುವಂತೆ ಶ್ರೀಮತಿ ಶೆಟ್ಟಿ ಗಲಾಟೆ ಮಾಡುತ್ತಿದ್ದರು. ಶನಿವಾರ ಬೆಳಗ್ಗೆ ಜಾನ್ಸನ್‌ ಮನೆಗೆ ಶ್ರೀಮತಿ ಶೆಟ್ಟಿ ಹಣ ವಾಪಾಸ್‌ ಕೇಳಲು ಬಂದಿದ್ದು, ಈ ವೇಳೆ ಶ್ರೀಮತಿ ಶೆಟ್ಟಿ ಯನ್ನು ದಂಪತಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಬಳಿಕ ದೇಹವನ್ನು ಪೈಶಾಚಿಕವಾಗಿ ತುಂಡು ತುಂಡಾಗಿ ಕತ್ತರಿಸಿ ರಾತ್ರಿ ನಗರದ ಮೂರು ಕಡೆ  ಎಸೆದಿದ್ದರು.

ವೈಯುಕ್ತಿಕ ದ್ವೇಷದಿಂದ ಶ್ರೀಮತಿ ಶೆಟ್ಟಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನ ಕಾರ್ಯಾಚರಣೆ ವೇಳೆ ಆರೋಪಿ ಜಾನ್ಸನ್ ಆತ್ಮಹತ್ಯೆ ಗೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳೂರು ನಗರ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅವರು ಈ ಮಾಹಿತಿ ನೀಡಿದ್ದಾರೆ.

ಕೊಲೆಯಾದ ಶ್ರೀಮತಿ ಶೆಟ್ಟಿ ಅವರ ಸ್ಕೂಟರ್‌ ಸೋಮವಾರ ರಾತ್ರಿ ನಾಗುರಿ ಬಳಿ ರಸ್ತೆ ಬದಿ ಅನಾಥವಾಗಿ ಪತ್ತೆಯಾಗಿತ್ತು. ಸ್ಕೂಟರ್‌ನಲ್ಲಿದ್ದ ಕೆಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶ್ರೀಮತಿ ಶೆಟ್ಟಿ ಅವರನ್ನು ಭೀಭತ್ಸ ರೀತಿಯಲ್ಲಿ ಕೊಲೆ ಮಾಡಿ ದೇಹವನ್ನು ಕತ್ತರಿಸಿ ಎಸೆಯಲಾದ ತಲೆಭಾಗ ಕದ್ರಿ ಪಾರ್ಕ್‌ ಬಳಿ ಚೀಲದಲ್ಲಿ ಪತ್ತೆಯಾಗಿತ್ತು. ದೇಹದ ಭಾಗ ನಂದಿಗುಡ್ಡೆಯಲ್ಲಿ ಪತ್ತೆಯಾಗಿತ್ತು. ಕಾಲಿನ ಭಾಗಗಳು ಬುಧವಾರ ಬೆಳಗ್ಗೆ ನಂತೂರಿನ ಪಾರ್ಕ್‌ ಬಳಿ ಪತ್ತೆಯಾಗಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ