ನೇತ್ರಾವತಿಯ ಮರಳು ಮನೆ ಬಾಗಿಲಿಗೆ

ಆ್ಯಪ್‌ ಮೂಲಕ ಯಶಸ್ವಿ ವಿತರಣೆ ಮಿತ ದರ, ಪಾರದರ್ಶಕ

Team Udayavani, Jul 12, 2019, 10:39 AM IST

ಬಂಟ್ವಾಳ: ನೇತ್ರಾವತಿ ನದಿಯಿಂದ ತುಂಬೆ ಡ್ಯಾಂ ಸಮೀಪ ಡ್ರೆಜ್ಜಿಂಗ್‌ ಮೂಲಕ ಮೇಲೆತ್ತಲಾದ ಮರಳನ್ನು ಸ್ಯಾಂಡ್‌ ಬಝಾರ್‌ ಆ್ಯಪ್‌ ಮೂಲಕ ಸಾರ್ವ ಜನಿಕರಿಗೆ ವಿತರಿಸುವ ಕಾರ್ಯ ಆರಂಭ ಗೊಂಡಿದ್ದು, ದಿನವೊಂದಕ್ಕೆ 500ಕ್ಕೂ ಮಿಕ್ಕಿ ಲೋಡ್‌ ಸಾಗಣೆ ಆಗುತ್ತಿದೆ. ಮರಳು ಸಂಗ್ರಹಿಸಲಾದ ತಲಪಾಡಿ ಪ್ರದೇಶವು ಮಾರಾಟ ಕೇಂದ್ರವಾಗಿದೆ.

ಜಿಲ್ಲಾಧಿಕಾರಿಗಳ ಅನುಮತಿಯ ಬಳಿಕ ಡ್ಯಾಂನಿಂದ ಸುಮಾರು 500 ಮೀ. ದೂರ ದಲ್ಲಿ ತಲಪಾಡಿ ಬಳಿ ಡ್ರೆಜ್ಜಿಂಗ್‌ ಮೂಲಕ ಹೂಳೆತ್ತುವ ಕಾರ್ಯ ತಿಂಗಳ ಹಿಂದೆ ಆರಂಭವಾಗಿತ್ತು. ಮೇಲೆತ್ತಿದ ಮರಳನ್ನು ಪಕ್ಕದ ವಿಶಾಲವಾದ ಎರಡು ಯಾರ್ಡ್‌ ಗಳಲ್ಲಿ ಸಂಗ್ರಹಿಸಲಾಗಿತ್ತು.

ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರ ಚಿಂತನೆಯಂತೆ ಮರಳು ವಿತರಣೆ ಆಗುತ್ತಿದೆ. ದಿಲ್ಲಿಯ ನೆಲ್ಕೊ ಕಂಪೆನಿ ಹೊಳೆತ್ತುವ ಗುತ್ತಿಗೆ ಪಡೆದಿದ್ದು, ಉಪಗುತ್ತಿಗೆ ಯನ್ನು ಮಂಗಳೂರಿನ ಖಾಸಗಿ ಕಂಪೆನಿಗೆ ನೀಡಲಾಗಿದೆ. ಇದಕ್ಕೆ ಸಿಸಿಟಿವಿ ಕಣ್ಗಾವಲು ಕಲ್ಪಿಸಲಾಗಿದೆ.

ಮಿತ ದರ; ಮಧ್ಯವರ್ತಿಗಳಿಲ್ಲ
ನ್ಯಾಯಯುತ ದರದಲ್ಲಿ ಮತ್ತು ಮಧ್ಯವರ್ತಿಗಳ ಹಾವಳಿ ಇಲ್ಲದೆ ಮನೆ ಬಾಗಿಲಿಗೆ ಮರಳು ತಲುಪಿಸುವ ಕಾರ್ಯ ಕೈಗೊಳ್ಳಲಾಗಿದೆ. ಸಾರ್ವಜನಿಕರು ಆ್ಯಪ್‌ ಮೂಲಕ ಆನ್‌ಲೈನ್‌ನಲ್ಲಿ ದರ ವೀಕ್ಷಿಸಿ ಆನ್‌ಲೈನ್‌ ಮೂಲಕವೇ ಹಣ ಪಾವತಿಸಿದಲ್ಲಿ ಮನೆ ಬಾಗಿಲಿಗೆ ಮರಳು ಕ್ಲಪ್ತ ಕಾಲದಲ್ಲಿ ತಲುಪಲಿದೆ. ನಿರ್ದಿಷ್ಟ ದಿನ, ಕ್ಲಪ್ತ ಕಾಲದಲ್ಲಿ ಮರಳು ಸರಬರಾಜು ಮಾಡದೆ ಇದ್ದಲ್ಲಿ ಲಾರಿ ಮತ್ತು ಗುತ್ತಿಗೆಯವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ.

ವಾಹನ ಬಾಡಿಗೆ ಇಲ್ಲ
ಪ್ರತ್ಯೇಕ ವಾಹನ ಬಾಡಿಗೆ ಪಾವತಿಸ ಬೇಕಿಲ್ಲ. ಅಲ್ಲದೆ ಮರಳು ಬುಕ್‌ ಮಾಡಿದ ಬಳಿಕ ಲೋಡ್‌ ಆದ ಬಗ್ಗೆ, ಯಾವ ವಾಹನ ದಲ್ಲಿ ಬರುತ್ತಿದೆ ಎನ್ನುವ ಬಗ್ಗೆಯೂ ಸಂದೇಶ ಗ್ರಾಹಕರ ಮೊಬೈಲ್‌ಗೆ ಕಳಿಸಲಾಗುತ್ತದೆ.
ಶೋರ್‌ ಟು ಎವರಿ ಡೋರ್‌ (ನದಿ ದಡದಿಂದ ಮನೆ ಬಾಗಿಲಿಗೆ) ಎಂಬ ಸ್ಲೋಗನ್‌ನಲ್ಲಿ ಸ್ಯಾಂಡ್‌ ಬಝಾರ್‌ ಆ್ಯಪ್‌ ತಯಾರಿಸಲಾಗಿದ್ದು, ಜಿಲ್ಲಾಡಳಿತ ಮರಳಿಗೆ ದರ ನಿಗದಿ ಮಾಡುತ್ತದೆ. ಅದರ ಆಧಾರದಂತೆ ಮರಳು ಪೂರೈಕೆಯಾಗಲಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯೋಗ ವಾಗಿದ್ದು, ಭೂವಿಜ್ಞಾನ ಮತ್ತು ಗಣಿ ಇಲಾಖೆ ನಿರ್ವಹಿಸುತ್ತಿದೆ.

ಒಂದು ಟನ್‌ ಮರಳಿಗೆ 480 ರೂ. ಬೆಲೆ ನಿಗದಿ ಪಡಿಸಿದ್ದು, ಬುಕ್ಕಿಂಗ್‌ನಿಂದ ತೊಡಗಿ ಹಣ ಪಾವತಿ ಸಹಿತ ಎಲ್ಲವೂ ಆನ್‌ಲೈನ್‌ ಮೂಲಕ ಪಾರದರ್ಶಕವಾಗಿ ನಡೆಯುತ್ತದೆ. ಸದ್ಯ ತಲಪಾಡಿ ದಕ್ಕೆಯಲ್ಲಿ ಮಾತ್ರ ಮರಳು ಲಭ್ಯವಾಗುತ್ತಿದೆ, ಮುಂದಿನ ದಿನಗಳಲ್ಲಿ ಇತರ ಕಡೆಗಳಲ್ಲಿ ಆರಂಭವಾಗಲಿದೆ.

ಮರಳು ಬುಕಿಂಗ್‌ನಿಂದ ಹಿಡಿದು ಹಣ ಪಾವತಿ, ವಾಹನ ಬುಕಿಂಗ್‌, ಮರಳು ಲಾರಿ ಸಾಗುವ ಟ್ರಾಕಿಂಗ್‌ ಸ್ಟೇಟಸ್‌ ಸ್ಯಾಂಡ್‌ ಬಝಾರ್‌ ಆ್ಯಪ್‌ನಲ್ಲಿ ದೊರೆಯುತ್ತಿದ್ದು, ಇದು ಗ್ರಾಹಕರಿಗೆ ಅನುಕೂಲಕರ. ಜತೆಗೆ ಬುಕ್ಕಿಂಗ್‌ ಮಾಹಿತಿ, ಗ್ರಾಹಕರ ಮಾಹಿತಿ, ಗೂಗಲ್‌ ಮ್ಯಾಪ್‌ ವ್ಯೂ ಮೂಲಕ ಮರಳು ದಕ್ಕೆಯ ವಿವರವೂ ಸಿಗಲಿದೆ.
ನವೀನ್‌ ಆ್ಯಪ್‌ ಡೆವಲಪ್‌ಮೆಂಟ್‌ ಎಂಜಿನಿಯರ್‌

ಜಿಲ್ಲೆಯ ಮರಳು ಗಾರಿಕೆಯಲ್ಲಿ ಪಾರ ದರ್ಶಕತೆ ತರಲು ಮತ್ತು ಸುಲಭ ನಿರ್ವಹಣೆಗೆ ಈ ಆ್ಯಪ್‌ ತಯಾರಿಸಲಾಗಿದೆ. ಯಾವುದೇ ಪ್ರಚಾರ ಮಾಡದೇ ಆ್ಯಪ್‌ನ್ನು ಪ್ರಾಯೋಗಿಕವಾಗಿ ಲೋಕಾರ್ಪಣೆ ಮಾಡಲಾಗಿದೆ. ಗುತ್ತಿಗೆದಾರರು, ಟ್ರಾನ್ಸ್‌ಪೊರ್ಟ್‌ ಮತ್ತು ನಾಗರಿಕರು- ಹೀಗೆ ಮೂರು ವಿಭಾಗದಲ್ಲಿ ಆ್ಯಪ್‌ ಕಾರ್ಯ ನಿರ್ವಹಿಸಲಿದೆ.
ಶಶಿಕಾಂತ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ