ರಾಜ್ಯರಾಜಕಾರಣದ ಗಮನಸೆಳೆದ ಮನಪಾ ಚುನಾವಣೆ

Team Udayavani, Nov 9, 2019, 4:00 AM IST

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯು ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಬಿಜೆಪಿ, ವಿಪಕ್ಷವಾಗಿರುವ ಕಾಂಗ್ರೆಸ್‌ಗೆ ನಿರ್ಣಾಯಕ ಹಾಗೂ ಪ್ರತಿಷ್ಠೆಯ ಕಣವಾಗಿದ್ದು, ಎರಡೂ ಪಕ್ಷಗಳಲ್ಲಿ ಆಗುವ ಸೋಲು-ಗೆಲುವು ರಾಜ್ಯ ರಾಜಕಾರಣದಲ್ಲಿ ಚರ್ಚೆ, ವಿಶ್ಲೇಷಣೆಗೆ ಗ್ರಾಸವಾಗಬಹುದು.

ಪಾಲಿಕೆಯಲ್ಲಿ ಈ ಹಿಂದಿನ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ ಅದನ್ನು ಮತ್ತೆ ಉಳಿಸಿಕೊಳ್ಳುವ ಅನಿವಾರ್ಯವಾದರೆ, ದೇಶ, ರಾಜ್ಯ ಮತ್ತು ಜಿಲ್ಲೆಯ ರಾಜಕೀಯ ಚಿತ್ರಣದ ಹಿನ್ನೆಲೆಯಲ್ಲಿ ಈ ಬಾರಿ ಹೇಗಾದರೂ ಮಹಾನಗರ ಪಾಲಿಕೆ ಗದ್ದುಗೆ ಏರಬೇಕು ಎನ್ನುವ ಪಣ ಮತ್ತು ಸವಾಲು ಬಿಜೆಪಿ ಮುಂದಿದೆ. ಈ ಹಿನ್ನೆಲೆಯಲ್ಲಿ ಎರಡೂ ರಾಜಕೀಯ ಪಕ್ಷಗಳೂ ಈ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿದ್ದು, ಈ ಕಾರಣದಿಂದಲೇ ರಾಜ್ಯ ನಾಯಕರು ಕೂಡ ಈಗ ಮಂಗಳೂರಿಗೆ ಬಂದು ಬಿರುಸಿನ ಚುನಾವಣ ಪ್ರಚಾರದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್‌ಗೆ ಆಡಳಿತ ಉಳಿಸಿಕೊಳ್ಳುವ ಅನಿವಾರ್ಯ
ಪಾಲಿಕೆಯಲ್ಲಿ ಆರು ಅವಧಿಗಳಲ್ಲಿ 2007ರ ಒಂದು ಅವಧಿಯನ್ನು ಹೊರತುಪಡಿಸಿ ಉಳಿದಂತೆ ನಿರಂತರವಾಗಿ ಕಾಂಗ್ರೆಸ್‌ ಆಡಳಿತ ನಡೆಸಿಕೊಂಡು ಬಂದಿದೆ. ಕಳೆದ ಅವಧಿಯಲ್ಲಿ 35 ಸ್ಥಾನ ಗಳಿಸಿ ನಿಚ್ಚಳ ಬಹುಮತದೊಂದಿಗೆ ಆಡಳಿತ ನಡೆಸಿತ್ತು. ಕಾಂಗ್ರೆಸ್‌ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ಹಿನ್ನಡೆಯ ಅನುಭವಿಸಿದ್ದ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಆಡಳಿತವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯದಲ್ಲಿದೆ. ಜಿಲ್ಲೆಯಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಲು ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ರಾಜ್ಯ, ಜಿಲ್ಲಾ ನಾಯಕತ್ವ ತನ್ನ ಸಂಪೂರ್ಣ ಗಮನವನ್ನು ಈ ಚುನಾವಣೆಗೆ ನೀಡಿದೆ.

ಪಕ್ಷದ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಸಹಿತ ಪ್ರಮುಖ ನಾಯಕರು, ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಸಹಿತ ಜಿಲ್ಲೆಯ ಎಲ್ಲ ನಾಯಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಅವರು 15 ದಿನಗಳ ಅವಧಿಯಲ್ಲಿ ಎರಡು ಬಾರಿ ಜಿಲ್ಲೆಗೆ ಆಗಮಿಸಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಇದರ ಜತೆಗೆ ರಾಷ್ಟ್ರೀಯ ಮಟ್ಟದಲ್ಲೂ ಎಐಸಿಸಿ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ನಿರ್ವಹಣೆಯ ಬಗ್ಗೆ ನಿಗಾ ಇರಿಸಿದೆ. ಪಕ್ಷದ ರಾಷ್ಟ್ರೀಯ ವಕ್ತಾರ ಜೈವೀರ್‌ ಶೆರ್ಗಿಲ್‌ ಅವರು ಮಂಗಳೂರಿಗೆ ಆಗಮಿಸಿ ಜಿಲ್ಲಾ, ರಾಜ್ಯ ನಾಯಕರ ಜತೆ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ.

ಬಿಜೆಪಿಗೆ ಸವಾಲು
ಪಾಲಿಕೆ ಚುನಾವಣೆ ಬಿಜೆಪಿ ಪಾಲಿಗೆ ಹಲವು ಆಯಾಮಗಳಿಂದ ಮಹತ್ವದ್ದಾಗಿದೆ. ಪಾಲಿಕೆಯಲ್ಲಿ ಮರಳಿ ಅಧಿಕಾರವನ್ನು ಗಳಿಸುವುದರ ಜತೆಗೆ ಕಳೆದ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಗಳಿಸಿರುವ ಬಹುಮತ ವನ್ನು ಉಳಿಸಿಕೊಳ್ಳುವ ಸವಾಲು ಒಂದೆಡೆ ಯಾದರೆ, ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು, ರಾಜಕೀಯ ವಾಗಿಯೂ ಪ್ರಾಮುಖ್ಯವನ್ನು ಪಡೆದಿದೆ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಪೂರ್ತಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುತ್ತಿದ್ದು ಒಟ್ಟು 38 ವಾರ್ಡ್‌ಗಳು ಇದರಲ್ಲಿವೆ. 2018ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ 16,075 ಮತಗಳ ಅಂತರದಿಂದ ಜಯಗಳಿಸಿತ್ತು. 2019 ಎಪ್ರಿಲ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣದಲ್ಲಿ 32,835 ಮತಗಳ ಮುನ್ನಡೆಯನ್ನು ಬಿಜೆಪಿಗೆ ಒದಗಿಸಿಕೊಟ್ಟಿತ್ತು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ 22 ವಾರ್ಡ್‌ಗಳು ಪಾಲಿಕೆಯ ವ್ಯಾಪ್ತಿಗೆ ಬರುತ್ತದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ 26,648 ಮತಗಳ ಭಾರಿ ಅಂತರದ ಜಯ ಸಾಧಿಸಿತ್ತು. ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿಗೆ ಅಧಿಕ ಲೀಡ್‌ ನೀಡಿದ ಎರಡನೇ ಕ್ಷೇತ್ರವಾಗಿದ್ದು , ಕಾಂಗ್ರೆಸ್‌ಗಿಂತ 46088 ಅಧಿಕ ಮತಗಳು ದೊರಕಿತ್ತು.

15 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಜೆಡಿಎಸ್‌ ಪಕ್ಷ ಮುಂದಿನ ಆಡಳಿತದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಗುರಿಯನ್ನು ಇರಿಸಿಕೊಂಡಿದ್ದು ಪಕ್ಷದ ರಾಷ್ಟ್ರೀಯಾಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರೇ ಸ್ವತಃ ಪ್ರಚಾರಕಣಕ್ಕಿಳಿದಿದ್ದಾರೆ. ಇವರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ, ವಿಧಾನ ಪರಿಷತ್‌ ಸದಸ್ಯರಾದ ಭೋಜೆಗೌಡ, ಬಿ.ಎಂ. ಫಾರೂಕ್‌ ಜತೆ ನೀಡುತ್ತಿದ್ದಾರೆ. ಇದರ ಜತೆಗೆ ಎಸ್‌ಡಿಪಿಐ, ಸಿಪಿಎಂ, ಸಿಪಿಐ, ಪಕ್ಷೇತರರು ಗಳಿಸುವ ಸ್ಥಾನ, ಮತಗಳು ಕೂಡ ಚುನಾವಣೆಯಲ್ಲಿ ಮಹತ್ವವನ್ನು ಪಡೆಯಲಿದೆ.

ನಳಿನ್‌ ಕುಮಾರ್‌ಗೆ ಅಗ್ನಿ ಪರೀಕ್ಷೆ
ನಳಿನ್‌ ಕುಮಾರ್‌ ಕಟೀಲು ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರಿಗೆ ಎದುರಾಗಿರುವ 2ನೇ ಚುನಾವಣೆ ಇದಾಗಿದ್ದು, ಸತ್ವ ಪರೀಕ್ಷೆಯಾಗಿದೆ. ಬೆಂಗಳೂರು ಬಿಬಿಎಂಪಿಯಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಮೇಯರ್‌, ಉಪಮೇಯರ್‌ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸುವ ಮೂಲಕ ನಾಲ್ಕು ಅವಧಿಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದಲ್ಲಿದ್ದ ಆಡಳಿತವನ್ನು ಬಿಜೆಪಿ ತೆಕ್ಕೆಗೆ ಪಡೆದುಕೊಂಡಿತ್ತು. ಇದೀಗ ತಮ್ಮ ಸ್ವಕ್ಷೇತ್ರ, ಹುಟ್ಟೂರು ಮಂಗಳೂರಿನಲ್ಲಿ ಪಾಲಿಕೆ ಚುನಾವಣೆ ಎದುರಾಗಿದ್ದು, ಇದರಲ್ಲಿ ಪಕ್ಷಕ್ಕೆ ಬರುವ ಫಲಿತಾಂಶವು ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುವುದರಲ್ಲಿ ಅನುಮಾನವಿಲ್ಲ. ಈ ಕಾರಣಕ್ಕೆ ನಳಿನ್‌ ಅವರಿಗೂ ಈ ಚುನಾವಣೆಯು ಒಂದು ಸವಾಲು, ಅಗ್ನಿಪರೀಕ್ಷೆಗೆ ಒಳಪಡಿಸುವಂತೆ ಮಾಡಿದೆ. ಹೀಗಾಗಿ, ನಳಿನ್‌ ಕುಮಾರ್‌ ಕಟೀಲು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ.

– ಕೇಶವ ಕುಂದರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ