ಮನೆ ಕಳೆದುಕೊಂಡವರಿಗೆ ತಲಾ 1 ಲಕ್ಷ ರೂ. ಪರಿಹಾರ

ನೆರೆ ಸಂತ್ರಸ್ತರಿಗೆ ದಿನಬಳಕೆ ಸಾಮಗ್ರಿ ವಿತರಿಸಿ ಸಹಾಯಕ ಆಯುಕ್ತರ ಹೇಳಿಕೆ

Team Udayavani, Aug 14, 2019, 5:00 AM IST

ಉಪ್ಪಿನಂಗಡಿ: ಎರಡು ದಿನಗಳ ಹಿಂದೆ ನೇತ್ರಾವತಿ ನದಿಯಲ್ಲಿನ ಪ್ರವಾಹದಿಂದ ಮನೆಗೆ ನೀರು ನುಗ್ಗಿ ಸಂತ್ರಸ್ತರಾದ ಬಜತ್ತೂರಿನ 16 ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಆ. 12ರಂದು ಬಜತ್ತೂರು ಗ್ರಾ.ಪಂ. ಸಭಾಭವನದಲ್ಲಿ ದಿನ ಬಳಕೆ ಸಾಮಗ್ರಿಗಳ ವಿತರಣೆ ಮಾಡಲಾಯಿತು.

ಪುತ್ತೂರು ರೋಟರಿ ಯುವ, ಮಂಗಳೂರು ಶಾರದಾ ವಿದ್ಯಾಲಯ ಹಾಗೂ ಮಂಗಳೂರಿನ ಪತಂಜಲಿ ಯೋಗ ಶಿಕ್ಷಣ ಕೇಂದ್ರದ ವತಿಯಿಂದ ನೀಡಲಾದ ದಿನ ಬಳಕೆ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅವರು, ಮಳೆ ಹಾಗೂ ನೆರೆಯಿಂದಾಗಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಾಣಕ್ಕೆ ತುರ್ತಾಗಿ ಒಂದೆರೆಡು ದಿನದಲ್ಲಿ ತಲಾ 1 ಲಕ್ಷ ರೂ. ನೀಡಲಾಗುವುದು. ಭಾಗಶಃ ಮನೆ ಹಾನಿಗೊಂಡವರಿಗೆ 42 ಸಾವಿರ ರೂ. ತುರ್ತು ಪರಿಹಾರ ನೀಡಲಾಗುವುದು ಎಂದರು.

ನೆರೆ ನೀರಿನಿಂದಾಗಿ ಮನೆಯಲ್ಲಿದ್ದ ಟಿ.ವಿ., ಫ್ರಿಡ್ಜ್ ಸಹಿತ ಇತರ ಉಪಕರಣಗಳು ಹಾನಿಗೊಂಡಿದ್ದಲ್ಲಿ ಪರಿಹಾರ ನೀಡಲಾಗುವುದು. ಮಳೆ ಸಂಪೂರ್ಣ ನಿಂತ ಮೇಲೆ ಕೃಷಿ ಹಾನಿಯ ಬಗ್ಗೆ ಸರ್ವೆ ನಡೆಸುತ್ತೇವೆ. ಶೇ. 33ಕ್ಕಿಂತ ಹೆಚ್ಚು ಕೃಷಿ ಹಾನಿಗೊಂಡಲ್ಲಿ ಸಂಪೂರ್ಣ ಹಾನಿ ಎಂದು ಪರಿಗಣಿಸಿ ಪರಿಹಾರ ನೀಡಲಾಗುವುದು ಎಂದು ಕೃಷ್ಣಮೂರ್ತಿ ಹೇಳಿದರು.

ಪರಿಹಾರ ಶೀಘ್ರ ವಿತರಣೆ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬೆಳ್ತಂಗಡಿಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕೆ ಹಾಗೂ ಭಾಗಶಃ ಮನೆ ಹಾನಿಗೊಂಡವರಿಗೆ ದುರಸ್ತಿಗೆ ಸರಕಾರದ ವತಿಯಿಂದ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಸೊತ್ತು ಕಳೆದುಕೊಂಡವರಿಗೂ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಈ ಪರಿಹಾರ ಮೊತ್ತ ಸರಕಾರದಿಂದ ಬಿಡುಗಡೆಗೊಂಡ ಕೂಡಲೇ ಸಂತ್ರಸ್ತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷ್ಣಮೂರ್ತಿ ಹೇಳಿದರು.

ಆಯುಕ್ತರ ಮನೆ ಜಲಾವೃತ
ತಾ.ಪಂ. ಸದಸ್ಯ ಮುಕುಂದ ಬಜತ್ತೂರು ಮಾತನಾಡಿ, ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅವರ ಊರಿನಲ್ಲಿಯೂ ಮಳೆಯಿಂದಾಗಿ ವ್ಯಾಪಕ ಹಾನಿ ಸಂಭವಿಸಿದೆ. ಅವರ ಮನೆಯೂ ಜಲಾವೃತಗೊಂಡಿದೆ. ಆದರೂ ಅವರು ಕರ್ತವ್ಯ ನಿರ್ವಹಿಸುವ ಊರಿನ ಜನರ ಕ್ಷೇಮಕ್ಕಾಗಿ ಹಗಲುರಾತ್ರಿ ಕೆಲಸ ಮಾಡಿದ್ದಾರೆ. ನಿಜವಾಗಿಯೂ ಅವರ ಕಾರ್ಯವನ್ನು ಮೆಚ್ಚಲೇಬೇಕಾಗಿದೆ. ತಹಶೀಲ್ದಾರ್‌ ಅನಂತ ಶಂಕರ, ಗ್ರಾಮಕರಣಿಕರು, ಪಿಡಿಒ, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ನೆರೆ ಸಂತ್ರಸ್ತರ ಜತೆಗಿದ್ದು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಎಂದರು.

ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಸಂತೋಷ್‌ ಕುಮಾರ್‌ ಪಂರ್ದಾಜೆ, ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ, ತಹಶೀಲ್ದಾರ್‌ ಅನಂತ ಶಂಕರ, ತಾ.ಪಂ. ಇಒ ನವೀನ್‌ ಭಂಡಾರಿ, ಪಿಡಿಒ ಪ್ರವೀಣ್‌ ಕುಮಾರ್‌ ಉಪಸ್ಥಿತರಿದ್ದರು.

ಗ್ರಾಮಕರಣಿಕ ಸುನೀಲ್ ಕುಮಾರ್‌ ಸ್ವಾಗತಿಸಿದರು. ಗ್ರಾಮಸಹಾಯಕ ವಸಂತ ಸಹಕರಿಸಿದರು. ಗ್ರಾ.ಪಂ. ಸದಸ್ಯ ಮಾಧವ ಪೂಜಾರಿ ಓರುಂಬೋಡಿ, ಮಾಜಿ ಅಧ್ಯಕ್ಷ ಧನಂಜಯ ಬೆದ್ರೋಡಿ, ಮಾಜಿ ಉಪಾಧ್ಯಕ್ಷ ಗಣೇಶ್‌ಕುಲಾಲ್, ಅಹಮದ್‌ ಬಾವಾ ನೀರಕಟ್ಟೆ, ಮೋನಪ್ಪ ಗೌಡ ಬೆದ್ರೋಡಿ, ಕೃಷ್ಣಪ್ಪ ಗೌಡ ಬೆದ್ರೋಡಿ ಮತ್ತಿತರರು ಮಳೆ ಹಾನಿಯ ಕುರಿತಂತೆ ಸಹಾಯಕ ಆಯುಕ್ತರಿಗೆ ವಿವರಣೆ ನೀಡಿದರು.

16 ಮಂದಿಗೆ ಪರಿಹಾರ
ಲೋಕಯ್ಯ ಗೌಡ ಪಡ್ಪು, ಓಡಿಯಪ್ಪ ಗೌಡ ಬಾರಿಕೆ, ವಿಮಲಾ ಬಾರಿಕೆ, ಪ್ರೇಮಲತಾ ಬಾರಿಕೆ, ಶೋಭಾ ಬಾರಿಕೆ, ಪೂವಕ್ಕ ಬಾರಿಕೆ, ಪದ್ಮಾವತಿ ಬಾರಿಕೆ, ಸುಂದರಿ ಪಾಣಿಹಿತ್ತಿಲು, ಬಾಲಕ್ಕ ಪಾಣಿಹಿತ್ತಿಲು, ಸೂರಪ್ಪ ಗೌಡ ಪಾಣಿಹಿತ್ತಿಲು, ಮಾಧವಿ ಬಾರಿಕೆ, ವನಿತಾ ಬಾರಿಕೆ, ವಸಂತ ಬಾರಿಕೆ, ದೇವಮ್ಮ ಏರಿಂಜ, ಹೊನ್ನಪ್ಪ ಗೌಡ ಬಾರಿಕೆ, ಸಂಜೀವಿ ಬಾರಿಕೆಯವರಿಗೆ ಪರಿಹಾರ ಸಾಮಗ್ರಿ ವಿತರಿಸಲಾಯಿತು.

ರೋಟರಿ ಕ್ಲಬ್‌ ಸಹಾಯಹಸ್ತ
ಉಪ್ಪಿನಂಗಡಿ ಆ. 13:
ನೆರೆ ಸಂತ್ರಸ್ತರಾದ ಬಜತ್ತೂರು ಗ್ರಾಮದ 16 ಕುಟುಂಬಗಳಿಗೆ ಪುತ್ತೂರಿನ ಸಚಿನ್‌ ಟ್ರೇಡರ್ನ ಮಾಲಕರಾದ ಮಂಜುನಾಥ ನಾಯಕ್‌, ಸಚಿನ್‌ ನಾಯಕ್‌ ಹಾಗೂ ಉಪ್ಪಿನಂಗಡಿ ಪ್ರಸಾದ್‌ ಟಯರ್ನ ಮಾಲಕ ಪ್ರದೀಪ್‌ ನಾಯಕ್‌ ಅವರು ನೀಡಿದ ತಲಾ 25 ಕೆ.ಜಿ. ಅಕ್ಕಿ ಹಾಗೂ ರೋಟರಿ ಕ್ಲಬ್‌ ಪುತ್ತೂರು ಯುವ ವತಿಯಿಂದ ನೀಡಿದ ದಿನಬಳಕೆ ವಸ್ತುಗಳ ಕಿಟ್‌ಗಳನ್ನು ಆ. 12ರಂದು ಬಜತ್ತೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು.

ಸಮಾಜಕ್ಕೆ ಅರ್ಪಿಸಿದಾಗ ತೃಪ್ತಿ
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅವರು ದಿನಬಳಕೆ ಸಾಮಗ್ರಿ ವಿತರಿಸಿ ಮಾತನಾಡಿ, ದಾನ, ಧರ್ಮ ಮಾಡುವಾಗ ಸಿಗುವ ಸಂತೋಷ ಬೇರೆಲ್ಲಿಯೂ ಇಲ್ಲ. ದಾನ ಮಾಡುವುದರಿಂದ ಮನಸ್ಸು ಸಂತೋಷಗೊಳ್ಳುತ್ತದೆ. ನಾವು ಗಳಿಸಿದಲ್ಲಿ ಕಿಂಚಿತ್ತನ್ನು ಸಮಾಜಕ್ಕೂ ಅರ್ಪಣೆ ಮಾಡಿದಾಗ ತೃಪ್ತಿ ಸಿಗುತ್ತದೆ. ಇನ್ನೊಬ್ಬರ ಕಷ್ಟಕ್ಕೆ ನೆರವಾದಾಗ ದೇವರ ದರ್ಶನವಾಗುತ್ತದೆ. ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಾಕಷ್ಟು ಮಂದಿ ಅಸಹಾಯಕರಾಗಿದ್ದಾರೆ. ಅವರಿಗೆ ನೆರವು ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ತಹಶೀಲ್ದಾರ್‌ ಅನಂತ ಶಂಕರ್‌, ತಾ.ಪಂ. ಇಒ ನವೀನ್‌ ಭಂಡಾರಿ, ತಾ.ಪಂ. ಸದಸ್ಯರಾದ ಮುಕುಂದ ಗೌಡ ಬಜತ್ತೂರು, ಸುಜಾತಾ ಕೃಷ್ಣ ಆಚಾರ್ಯ, ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್‌ ಕುಮಾರ್‌ ಪಂರ್ದಾಜೆ, ಪಿಡಿಒ ಪ್ರವೀಣ್‌ ಕುಮಾರ್‌, ರೋಟರಿ ಕ್ಲಬ್‌ ಪುತ್ತೂರು ಯುವದ ಸ್ಥಾಪಕಾಧ್ಯಕ್ಷ ರತ್ನಾಕರ ರೈ ತಿಂಗಳಾಡಿ, ಅಧ್ಯಕ್ಷ ಚೇತನ್‌ ಪ್ರಕಾಶ್‌, ಸದಸ್ಯರಾದ ಸಚಿನ್‌ ನಾಯಕ್‌, ಕುಸುಮಾರಾಜ್‌, ಸುದರ್ಶನ್‌ ರೈ, ಅನಿಲ್ ಮುಂಡೋಡಿ, ಅಭೀಷ್‌, ಪ್ರದೀಪ್‌ ನಾಯಕ್‌ ಉಪಸ್ಥಿತರಿದ್ದರು. ಗ್ರಾಮಕರಣಿಕ ಸುನಿಲ್ ಕುಮಾರ್‌ ಸಹಕರಿಸಿದರು.

ದಾನಿಗಳು ಹಾಗೂ ರೋಟರಿ ವತಿಯಿಂದ ಬೆಳ್ತಿಗೆ ಅಕ್ಕಿ, ಸಕ್ಕರೆ, ಉಪ್ಪು, ಅವಲಕ್ಕಿ, ತೊಗರಿಬೇಳೆ ಸಹಿತ 16 ದಿನಬಳಕೆ ಸಾಮಗ್ರಿಗಳ ಕಿಟ್‌ಗಳನ್ನು ಉಪ್ಪಿನಂಗಡಿ, ಬಜತ್ತೂರಿನ ನೆರೆ ಸಂತ್ರಸ್ತರಿಗೆ ನೀಡಲಾಗಿದೆ.

ಅಧಿಕಾರಿಗಳಿಗೆ ಮೆಚ್ಚುಗೆ
ಪ್ರವಾಹದ ಸಂದರ್ಭ ತಾಲೂಕಿನ ಎಲ್ಲ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ ಎಂದು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು. ತಾ.ಪಂ. ಇಒ ನವೀನ್‌ ಭಂಡಾರಿ ಅವರನ್ನು ಕಾಳಜಿ ಕೇಂದ್ರದ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಅವರು ಕೇಂದ್ರದಲ್ಲಿದ್ದ ನೆರೆ ಸಂತ್ರಸ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡು ಧೈರ್ಯ ತುಂಬಿದ್ದಾರೆ. ತಹಶೀಲ್ದಾರ್‌, ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು, ಪಿಡಿಒ, ಸಿಬಂದಿ ನೆರೆ ಪೀಡಿತ ಗ್ರಾಮಗಳಲ್ಲಿದ್ದು ಅವರ ಸಂಕಷ್ಟಕ್ಕೆ ಸ್ಪಂದಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ ಎಂದು ಕೃಷ್ಣಮೂರ್ತಿ ಶ್ಲಾಘಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ