ಅರಣ್ಯದೊಳಗೆ ನೀರಿಂಗಿಸುತ್ತಿವೆ 790.5 ಕ್ಯೂ.ಮೀ. ಗಲ್ಲಿ ಚೆಕ್‌!

Team Udayavani, Jun 15, 2019, 5:00 AM IST

ಸುಳ್ಯ: ಮಳೆಗಾಲದಲ್ಲಿ ಅರಣ್ಯ ಪ್ರದೇಶದೊಳಗೆ ಹರಿಯುವ ನೀರನ್ನು ಅಲ್ಲಲ್ಲಿ ತಡೆ ಹಿಡಿದು ಇಂಗಿಸುವ ನಿಟ್ಟಿನಲ್ಲಿ ಸುಳ್ಯ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಬಾರಿ ಐದು ಗಲ್ಲಿ ಚೆಕ್‌ ನಿರ್ಮಿಸಲಾಗಿದೆ. ಸಂಪಾಜೆ ಅರಣ್ಯದಲ್ಲಿ ಮಳೆಗಾಲದ ಮೊದಲೇ ಈ ಗಲ್ಲಿಚೆಕ್‌ ನೀರು ಇಂಗಲು ಸಿದ್ಧವಾಗಿದೆ. ಕಾಡಿನೊಳಗೆ ಸಣ್ಣ ಝರಿ ರೂಪದಲ್ಲಿ ಹರಿದು ತೊರೆ ಸೇರುವ ನೀರನ್ನು ಅಲ್ಲಲ್ಲಿ ಹಿಡಿದಿಟ್ಟು ಪ್ರಾಣಿ-ಪಕ್ಷಿಗಳ ಜಲದಾಹ ನೀಗಿಸುವ ಜತೆಗೆ ಅಂತರ್ಜಲ ವೃದ್ಧಿಸುವ ವಿಶೇಷ ಪ್ರಯತ್ನ ಇದಾಗಿದೆ.

ಈ ಬಾರಿ 99.50 ಕ್ಯೂ.ಮೀ..!
ಈ ವರ್ಷ ನಿರ್ಮಿಸಲಾದ ಗಲ್ಲಿಚೆಕ್‌ ವಿಸ್ತಾರ 99.50 ಕ್ಯೂಬಿಕ್‌ ಮೀಟರ್‌ನಷ್ಟಿದೆ. ಒಟ್ಟು ಐದು ಗಲ್ಲಿಚೆಕ್‌. ಪ್ರತಿ ಗಲ್ಲಿಚೆಕ್‌ 20ರಿಂದ 30 ಕ್ಯೂಬಿಕ್‌ ಮೀಟರ್‌ನಷ್ಟು ವಿಸ್ತೀರ್ಣ ಹೊಂದಿರಬಹುದು. ನೀರಿನ ಹರಿವಿನ ಪ್ರಮಾಣ, ವಿಸ್ತಾರ ಪರಿಗಣಿಸಿ ಅದಕ್ಕೆ ತಕ್ಕಂತೆ ಗಲ್ಲಿ ಚೆಕ್‌ ರಚಿಸಲಾಗಿದೆ. ಇದಕ್ಕಾಗಿ ಈ ವರ್ಷ 50 ಸಾವಿರ ರೂ. ವ್ಯಯಿಸಲಾಗಿದೆ. ಪ್ರತಿ ಕ್ಯೂಬಿಕ್‌ ಮೀಟರ್‌ಗೆ 350 ರೂ.ಗಳಷ್ಟು ವೆಚ್ಚ ತಗಲುತ್ತದೆ ಅನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಪ್ರತಿ ವರ್ಷವು ಮಳೆಗಾಲಕ್ಕೆ ಮೊದಲೇ ಅಂದರೆ ಮಾರ್ಚ್‌ನಲ್ಲೇ ಈ ಗಲ್ಲಿಚೆಕ್‌ ಅನ್ನು ನಿರ್ಮಿಸಲಾಗುತ್ತದೆ.

790.5 ಕ್ಯೂಬಿಕ್‌ ಮೀಟರ್‌
ಆರು ವರ್ಷಗಳ ಅಂಕಿ-ಅಂಶ ಗಮನಿಸಿದರೆ 2014ರಿಂದ 2019ರ ವರಗೆ ಅರಣ್ಯದಲ್ಲಿ 790.5 ಕ್ಯೂಬಿಕ್‌ ಮೀಟರ್‌ ಗಲ್ಲಿ ಚೆಕ್‌ ನಿರ್ಮಿಸಲಾಗಿದೆ. 2014-15ರಲ್ಲಿ 536 ಕ್ಯೂ.ಮೀ., 2016-17ರಲ್ಲಿ 155 ಕ್ಯೂ.ಮೀ., 2018-19ರಲ್ಲಿ 99.50 ಕ್ಯೂ.ಮೀ. ಗಲ್ಲಿಚೆಕ್‌ ಸ್ಥಾಪಿಸಲಾಗಿದೆ. ಇದಕ್ಕಾಗಿ 2.76 ಲಕ್ಷ ರೂ. ಖರ್ಚು ತಗಲಿದೆ. ಪ್ರತಿ ಮಳೆಗಾಲದಲ್ಲಿಯೂ ಈ ಎಲ್ಲ ಗಲ್ಲಿ ಚೆಕ್‌ಗಳು ನೀರಂಗಿಸಲು ಸಮರ್ಥವಾಗಿವೆ. ರ್ಷದಿಂದ ವರ್ಷಕ್ಕೆ ಗಲ್ಲಿ ಚೆಕ್‌ ವಿಸ್ತಾರ ಪ್ರಮಾಣ ಏರಿಕೆ ಕಾಣುತ್ತಿದೆ.

ಏನಿದು ಗಲ್ಲಿ ಚೆಕ್‌?
ಕಾಡಿನಲ್ಲಿ ಸಣ್ಣ-ಸಣ್ಣ ಮಳೆ ನೀರು ಹರಿವಿನ ಝರಿಗಳಿವೆ. ಅವುಗಳನ್ನು ಗುರುತಿಸಿ ನೀರಿಂಗಿಸುವ ನಿಟ್ಟಿನಲ್ಲಿ ಗಲ್ಲಿಚೆಕ್‌ ಸ್ಥಾಪಿಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ನೀರು ಕೆಳಭಾಗಕ್ಕೆ ಹರಿಯುವ ದಿಕ್ಕಿನಲ್ಲಿ ಸಣ್ಣ ಗಾತ್ರದ ಕಲ್ಲುಗಳನ್ನು ಜೋಡಿಸಿ ನೀರು ನಿಲ್ಲುವಂತೆ ಮಾಡಲಾಗುತ್ತದೆ. ಮಳೆ ನೀರು ನೇರವಾಗಿ ಹರಿದು ಹೋಗುವ ಬದಲು ಅಲ್ಲಲ್ಲಿ ನಿಂತರೆ ಮಣ್ಣಿನ ಸವಕಳಿಯೂ ತಪ್ಪುತ್ತದೆ. ನೀರು ಇಂಗಲು ಸಾಧ್ಯವಾಗುತ್ತದೆ. ಬೇಸಗೆ ತನಕ ನೀರು ಸಂಗ್ರಹ ಸಾಧ್ಯವಾಗಿ ಪ್ರಾಣಿ-ಪಕ್ಷಿಗಳ ದಾಹ ನೀಗಲು ಪ್ರಯೋಜನವಾಗುತ್ತದೆ.

 5 ಗಲ್ಲಿ ಚೆಕ್‌
ಈ ವರ್ಷ ಸಂಪಾಜೆ ಅರಣ್ಯ ಪ್ರದೇಶದಲ್ಲಿ ಐದು ಗಲ್ಲಿ ಚೆಕ್‌ ನಿರ್ಮಿಸಲಾಗಿದೆ. 99.500 ಕ್ಯೂ. ಮೀಟರ್‌ ಇದೆ. ಕಾಡಿನಲ್ಲೇ ದೊರೆಯವ ಸಣ್ಣ ಸಣ್ಣ ಕಲ್ಲುಗಳನ್ನು ಹರಿಯುವ ನೀರಿಗೆ ಅಡ್ಡಲಾಗಿ ಕಟ್ಟಿ ನೀರಿಂಗಿಸುವ ಯೋಜನೆ ಇದಾಗಿದೆ.
– ಮಂಜುನಾಥ ಎನ್‌. ವಲಯ ಅರಣ್ಯಧಿಕಾರಿ, ಸುಳ್ಯ

 ಕಿರಣ್‌ ಪ್ರಸಾದ್‌ ಕುಂಡಡ್ಕ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ