ವಿದ್ಯುತ್‌ ಅವಘಡ ಇರಲಿ ಜಾಗೃತಿ

ಮಳೆಗಾಲಕ್ಕೆ ಮೆಸ್ಕಾಂ ಸಿದ್ಧತೆ; ಅಪಾಯದ ಸಂದರ್ಭದಲ್ಲಿ ಸಂಪರ್ಕಿಸಲು ಸೂಚನೆ

Team Udayavani, Jun 15, 2019, 5:00 AM IST

ಪುತ್ತೂರು: ಮಳೆಗಾಲದಲ್ಲಿ ಗಾಳಿ ಮಳೆ, ಸಿಡಿಲು, ಮಿಂಚು ಬಂದಾಗ ವಿದ್ಯುತ್‌ ಅವಘಡಗಳು, ಅತಿ ಹೆಚ್ಚು ಹಾನಿಗಳು ಉಂಟಾಗುತ್ತವೆ. ನಿಗಮದ ಭಾಗದಿಂದ ಮುನ್ನೆಚ್ಚರಿಕೆಯ ಸಿದ್ಧತೆಗಳನ್ನು ನಡೆಸಿದ್ದರೂ ಸಾರ್ವಜನಿಕರೂ ಸ್ವಯಂ ಜಾಗೃತಿ ವಹಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಬೇಸಗೆ ಅಥವಾ ಚಳಿಗಾಲದಲ್ಲಿ ಇರುವ ವಿದ್ಯುತ್‌ ಸರಬರಾಜು ವ್ಯವಸ್ಥೆಗೂ ಮಳೆಗಾಲದ ಸರಬರಾಜು ವ್ಯವಸ್ಥೆಗೂ ವ್ಯತ್ಯಾಸವಿರುತ್ತದೆ. ಮಳೆಗಾಲದಲ್ಲಿ ಸಿಡಿಲು, ಮಳೆ ಬರುವಾಗ ಅಥವಾ ವಿದ್ಯುತ್‌ ತಂತಿಗಳಲ್ಲಿ ತಾಂತ್ರಿಕ ತೊಂದರೆಗಳು ಉಂಟಾದಾಗ ಸಾರ್ವಜನಿಕರೇ ಅದನ್ನು ಸರಿಪಡಿಸಲು, ಮುಟ್ಟಲು ಹೋಗಬಾರದು. ಇಂತಹ ಸಂದರ್ಭದಲ್ಲಿ ಸ್ಥಳೀಯ ಮೆಸ್ಕಾಂ ಕಚೇರಿಗೆ ಮಾಹಿತಿ ನೀಡಿ ಅವರ ಉಪಸ್ಥಿತಿಯಲ್ಲಿ ಕೆಲಸ ಮಾಡಬೇಕು ಎನ್ನುವುದು ಮೆಸ್ಕಾಂ ಅಧಿಕಾರಿಗಳ ವಿನಂತಿ.

ಅಪಾಯದಿಂದ ದೂರವಿರಿ
· ತುಂಡಾಗಿ ಬಿದ್ದಿರುವ ವಿದ್ಯುತ್‌ ಲೈನುಗಳನ್ನು ಮುಟ್ಟಬೇಡಿ.
· ಒದ್ದೆಯಾಗಿರುವ ವಿದ್ಯುತ್‌ ಕಂಬಗಳನ್ನು ಹಾಗೂ ಇತರೆ ವಿದ್ಯುತ್‌ ಉಪಕರಣಗಳನ್ನು ಮುಟ್ಟಬೇಡಿ.
· ಜಾನುವಾರುಗಳನ್ನು ವಿದ್ಯುತ್‌ ಕಂಬಗಳಿಗೆ ಕಟ್ಟಬಾರದು.
· ಬಟ್ಟೆ ಒಣಗಲು ವಿದ್ಯುತ್‌ ಕಂಬ, ತಂತಿಗಳನ್ನು ಬಳಸಬಾರದು.
· ಸಿಡಿಲು, ಮಿಂಚು ಇದ್ದ ಸಂದರ್ಭದಲ್ಲಿ ಮೈನ್‌ ಸ್ವಿಚ್ ಅಥವಾ ಸ್ವಿಚ್ ಬೋರ್ಡ್‌ ಬಳಿ, ವಿದ್ಯುತ್‌ ಲೈನ್‌ ಕೆಳಗೆ ನಿಲ್ಲಬಾರದು,

ಎಚ್ಚರಿಕೆ ವಹಿಸಿ
ಮಳೆಗಾಲದಲ್ಲಿ ವಿದ್ಯುತ್‌ ವ್ಯವಸ್ಥೆಯನ್ನು ಬಳಕೆ ಮಾಡುವಾಗ ಸ್ವಯಂ ಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಮೆಸ್ಕಾಂ ಸಿಬಂದಿಗೂ ತಿಳಿಸಲಾಗಿದೆ. ಸಾರ್ವಜನಿಕರೂ ವಿದ್ಯುತ್‌ ವ್ಯವಸ್ಥೆಯಲ್ಲಿ ಯಾವುದಾದರೂ ತೊಂದರೆ ಕಂಡುಬಂದರೆ ಮೆಸ್ಕಾಂಗೆ ತಿಳಿಸಬೇಕು. ಸಾರ್ವಜನಿಕರಿಂದ ದೂರುಗಳು ಬಂದಾಗ ತತ್‌ಕ್ಷಣ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡುವಂತೆ ಇಲಾಖೆಯ ಸಿಬಂದಿಗೆ ಸೂಚನೆ ನೀಡಲಾಗಿದೆ. ಸಿಬಂದಿಗೂ ರಕ್ಷಣಾ ಸಾಮಗ್ರಿಗಳನ್ನು ಒದಗಿಸಲಾಗಿದೆ.
-ನರಸಿಂಹ ಕಾರ್ಯನಿರ್ವಾಹಕ ಎಂಜಿನಿಯರ್‌ ಮೆಸ್ಕಾಂ, ಪುತ್ತೂರು ವಿಭಾಗ

ರಾಜೇಶ್‌ ಪಟ್ಟೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ