ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸದುದ್ದೇಶದಲ್ಲಿ ಆರಂಭ

ಶತಮಾನ ಕಂಡ ಪ್ರಶಸ್ತಿ ಪುರಸ್ಕೃತ ಕೊಯಿಲ ಸರಕಾರಿ ಹಿ.ಪ್ರಾ. ಶಾಲೆ

Team Udayavani, Nov 9, 2019, 5:01 AM IST

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

1990 ಶಾಲೆ ಆರಂಭ
ದೇವಸ್ಥಾನದಲ್ಲಿ ಆರಂಭ, ಉತ್ತಮ ಶಾಲೆ ರಾಜ್ಯ ಪ್ರಶಸ್ತಿ ಪುರಸ್ಕಾರದ ಗರಿ

ಪುಂಜಾಲಕಟ್ಟೆ: ಬಂಟ್ವಾಳ- ಮೂಡುಬಿದಿರೆ ಹೆದ್ದಾರಿ, ಬಂಟ್ವಾಳ ತಾಲೂಕಿನ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಸಮೀಪವಿರುವ ಕೊçಲ ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಆಚರಿಸಿಕೊಂಡಿದೆ.

ಸಾಮಾಜಿಕ ಕಳಕಳಿಯ, ದೂರದೃಷ್ಟಿಯ ಕೋಟಿ ಶೆಟ್ಟಿ ಮಾವಂತೂರು ಅವರು ಊರ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸದುದ್ದೇಶದಿಂದ ಈ ಶಾಲೆಯನ್ನು ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಆರಂಭಗೊಳಿಸಿದ್ದರು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ ಅವರು ತಮ್ಮ ಮಾವಂತೂರು ಮನೆತನದ ಕೊಯಿಲದ 1.07 ಎಕ್ರೆ ಸ್ಥಳವನ್ನು ದಾನಪತ್ರದ ಮೂಲಕ ನೀಡಿ, ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಿ ಶಾಲೆಯನ್ನು ಮುನ್ನಡೆಸಿದರು. ಅನಂತರ 1912ರ ಅ. 4ರಂದು ಸರಕಾರಕ್ಕೆ ಹಸ್ತಾಂತರಿಸಲ್ಪಟ್ಟಿತು.

ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ
ಆರಂಭದಲ್ಲಿ ಏಕೋಪಾಧ್ಯಾಯರು ಹಾಗೂ 1ನೇ ತರಗತಿ ಇದ್ದ ಶಾಲೆಯಲ್ಲಿ ಬಳಿಕ ವಿದ್ಯಾರ್ಥಿಗಳ, ತರಗತಿಗಳ, ಅಧ್ಯಾಪಕರ ಸಂಖ್ಯೆ ಏರಿಕೆಯಾಯಿತು. 1958-59ರಲ್ಲಿ ಹಿರಿಯ ಪ್ರಾಥಮಿಕ, 1968ರಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತ್ತು. ಕೊಯಿಲ, ರಾಯಿ, ಪಂಜಿಕಲ್ಲು, ಅರಳ ಗ್ರಾಮಗಳ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಹಿಂದೆ 700ಕ್ಕೂ ಮೀರಿ ವಿದ್ಯಾರ್ಥಿಗಳಿದ್ದದ್ದು ದಾಖಲೆಯಾಗಿದೆ. ಸಾಹಿತಿ ದಿ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರು ಇಲ್ಲಿಯ ಹಳೆ ವಿದ್ಯಾರ್ಥಿ.

ಸಾಧನೆಗಳು-ಪ್ರಶಸ್ತಿಗಳು
7ನೇ ತರಗತಿಯ ಪಬ್ಲಿಕ್‌ ಪರೀಕ್ಷೆಯಲ್ಲಿ 1964ರಿಂದ 1981ರವರೆಗೆ ಶೇ. 100 ಫಲಿತಾಂಶ ಪಡೆದಿದೆ. ನೂರಾರು ಸಾಧಕರನ್ನು, ಕಲಾವಿದರನ್ನು, ಸಂಸ್ಕಾರ ಸಂಪನ್ನರನ್ನೂ ಸೃಷ್ಟಿಸಿದ ಈ ಜ್ಞಾನದೇಗುಲ ಪಠ್ಯೇತರ ಚಟುವಟಿಕೆಗಳಲ್ಲಿ ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದು, ರಾಜ್ಯದಲ್ಲೇ ಉತ್ತಮ ಶಾಲೆ ಪ್ರಶಸ್ತಿ ಪಡೆದುಕೊಂಡಿತ್ತು. ಈ ಶಾಲೆಯ ಉನ್ನತಿಗಾಗಿ ಶ್ರಮಿಸಿದ ಮುಖ್ಯಶಿಕ್ಷಕ ದಿ| ಜಿ. ರಾಮಚಂದ್ರ ಗೌಡರಿಗೆ ತಾಲೂಕು, ಜಿಲ್ಲಾ ಪ್ರಶಸ್ತಿ ಮತ್ತು 1986ರಲ್ಲಿ ರಾಜ್ಯ ಪ್ರಶಸ್ತಿ ದೊರೆತಿದೆ. ವಿದ್ಯಾರ್ಥಿನಿ ಸುಚೇತಾ ಯೋಗಾಸನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ, ಆ್ಯಸ್ಟನ್‌ ಲೋಬೋ ಕರಾಟೆಯಲ್ಲಿ ರಾಜ್ಯಮಟ್ಟದ ಸಾಧಕರು.

ದತ್ತು ಸ್ವೀಕಾರ
ಜನಸೇವಾ ಚಾರಿಟೆಬಲ್‌ ಟ್ರಸ್ಟ್‌ ಶಾಲೆಯನ್ನು ದತ್ತು ಪಡೆದು ಸೌಲಭ್ಯಗಳನ್ನು ಒದಗಿಸುತ್ತಿದೆ. ಶಾಲಾ ವಾಹನ, ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಿದ್ದು, ರಸ್ತೆಗೆ ಇಂಟರ್‌ಲಾಕ್‌, ಹೂತೋಟ, ತೆಂಗಿನ ತೋಟ ನಿರ್ಮಿಸಿದೆ. ಎಂಆರ್‌ಪಿಎಲ್‌ನಿಂದ ಶೌಚಾಲಯ ನಿರ್ಮಾಣವಾಗಲಿದೆ. ಶತಮಾನೋತ್ಸವ ಸಂಭ್ರಮಾಚರಣೆ ಪ್ರಯುಕ್ತ ರಂಗಮಂದಿರ, ಆವರಣಗೋಡೆ ಇನ್ನಿತರ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಪ್ರಸಕ್ತ ಮೇಬುಲ್‌ ಅವರು ಪ್ರಭಾರ ಮುಖ್ಯ ಶಿಕ್ಷಕಿಯಾಗಿದ್ದು, 6 ಮಂದಿ ಶಿಕ್ಷಕರು, 111 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಟ್ರಸ್ಟ್‌ ಸಂಚಾಲಕ ಜಗದೀಶ ಕೊçಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದಾರೆ.

ಶಾಲೆಗೆ ಕಂಪ್ಯೂಟರ್‌, ವಿಜ್ಞಾನ ಪ್ರಯೋಗಾಲಯ, ಸೋಲಾರ್‌, ಕ್ರೀಡಾ ಸಾಮಗ್ರಿಗಳ ಬೇಡಿಕೆ ಇದೆ. ಟ್ರಸ್ಟ್‌, ಜನಪ್ರತಿನಿಧಿಗಳ, ಊರವರ ಸಹಕಾರದಲ್ಲಿ ವ್ಯವಸ್ಥೆಯ ಭರವಸೆ ಇದೆ.
-ಮೇಬುಲ್‌ ಫೆರ್ನಾಂಡಿಸ್‌, ಪ್ರಭಾರ ಮುಖ್ಯ ಶಿಕ್ಷಕಿ

ನಮ್ಮ ಮನೆತನದಿಂದ ಸ್ಥಾಪನೆಗೊಂಡ, ನಾನು ಕಲಿತ ಶಾಲೆಯನ್ನು ಜನಸೇವಾ ಚಾರಿಟೆಬಲ್‌ ಟ್ರಸ್ಟ್‌ ಮೂಲಕ ದತ್ತು ಪಡೆದು ಅಭಿವೃದ್ಧಿಪಡಿಸುತ್ತಿದ್ದೇವೆ. ಸರಕಾರಿ ಶಾಲೆ ಪರಿಸರದ ವಿದ್ಯಾರ್ಥಿಗಳಿಗೆ ವರದಾನವಾಗಿದೆ.
-ಪದ್ಮರಾಜ್‌ ಬಲ್ಲಾಳ್‌ ಮಾವಂತೂರು, ಹಳೆ ವಿದ್ಯಾರ್ಥಿ, ಟ್ರಸ್ಟ್‌ ಅಧ್ಯಕ್ಷರು.

-  ರತ್ನದೇವ್‌ ಪುಂಜಾಲಕಟ್ಟೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ