ಬೆಟ್ಟಂಪಾಡಿ ಕಾಲೇಜು: ವಿದ್ಯಾರ್ಥಿಗಳಿಗೆ ಬಯಲು ಶೌಚವೇ ಗತಿ!

Team Udayavani, Jun 8, 2019, 6:00 AM IST

ಅರ್ಧಕ್ಕೆ ಸ್ಥಗಿತ ಗೊಂಡ ಕಾಲೇಜು ಕೊಠಡಿ ಕಾಮಗಾರಿ,ಅಪೂರ್ಣಗೊಂಡ ಶೌಚಾಲಯದ ಕಾಮಗಾರಿ.

ಈಶ್ವರಮಂಗಲ: ಕೇರಳ ಕರ್ನಾಟಕ ಗಡಿಭಾಗದ ಸಮೀಪದಲ್ಲಿರುವ ಬೆಟ್ಟಂಪಾಡಿ ಸರಕಾರಿ ಪ.ಪೂ. ಕಾಲೇಜಿನಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ದಾಖಲಾತಿಯಲ್ಲಿ ದಾಖಲೆಯನ್ನು ಹೊಂದಿರುವ ಕಾಲೇಜು 90+ ಫಲಿತಾಂಶ ಪಡೆದುಕೊಂಡು ಬರುತ್ತಿದೆ. ಆದರೂ ಮೂಲಸೌಕರ್ಯದ ಕೊರತೆ ಎದುರಿಸುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಕುಂಬ್ರ, ಬೆಳಯೂರು ಕಟ್ಟೆ ಅನಂತರ ಸರಕಾರಿ ಕಾಲೇಜು ಇರುವುದು ಬೆಟ್ಟಂಪಾಡಿಯಲ್ಲಿ ಮಾತ್ರ. ವಾಣಿಜ್ಯ, ವಿಜ್ಞಾನ, ಕಲೆ ವಿಭಾಗವನ್ನು ಹೊಂದಿದೆ. ದಾಖಲಾತಿ ಉತ್ತಮವಾಗಿದೆ.

ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರಕ್ಕೆ ಉಪನ್ಯಾಸಕರ ಹುದ್ದೆ ಖಾಲಿ ಇದೆ. ಅತಿಥಿ ಉಪನ್ಯಾಸಕರ ಮೂಲಕ ತರಗತಿಗಳನ್ನು ನಡೆಸಲಾಗುತ್ತ್ತಿದೆ. ಸರಕಾರಿ ಕಾಲೇಜು ಆಗಿರುವುದರಿಂದ ಬಾಲಕಿಯರಿಗೆ ಶುಲ್ಕದಲ್ಲಿ ವಿನಾಯಿತಿ ಇದೆ. ಇಲ್ಲಿಯ ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯದ ಜತೆ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಹಾಗಾಗಿ ಇಲ್ಲಿಗೆ ಮೂಲ ಸೌಕರ್ಯ ಒದಗಿಸುವುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮುಖ್ಯ ಕರ್ತವ್ಯವಾಗಿದೆ.

ಅರ್ಧಕ್ಕೆ ನಿಂತ ಕಾಮಗಾರಿಗಳು
ಕಾಲೇಜಿನ ಪಕ್ಕದಲ್ಲಿಯೇ ನೂತನ ವಾಗಿ ಕೊಠಡಿ ನಿರ್ಮಾಣ ವಾಗುತ್ತಿದ್ದು, ಕೆಆರ್‌ಐಡಿಸಿಎಲ್ ಟೆಂಡರ್‌ ಕಾರ್ಯ ವಹಿಸಿಕೊಂಡು ಎರಡು ವರ್ಷ ಹಿಂದೆ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದೆ. ನೂತನ ಶೌಚಾಲಯಕ್ಕೂ ಕಾಮಗಾರಿ ನಡೆಯುತ್ತಿದ್ದು, ಅದನ್ನು ಕೂಡ ಅರ್ಧದಲ್ಲಿಯೇ ನಿಲ್ಲಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಹಲವು ಸಂಶಯಗಳಿಗೆ ಕಾರಣವಾಗಿದೆ. ಅರ್ಧಕ್ಕೆ ಸ್ಥಗಿತಗೊಂಡ ಕಾಮಗಾರಿಯ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ.

ಸಂಪರ್ಕ ರಸ್ತೆ ನಾದುರಸ್ತಿ
ಕೌಡಿಚ್ಚಾರು-ರೆಂಜ ಲೋಕೋಪ ಯೋಗಿ ಇಲಾಖೆಯ ರಸ್ತೆಯಿಂದ ಕಾಲೇಜ ನ್ನು ಸಂಪರ್ಕಿಸುವ ರಸ್ತೆ ತುಂಬಾ ಹದಗೆಟ್ಟಿದೆ. ತೀರಾ ಕಚ್ಚಾ ರಸ್ತೆಯಾಗಿದ್ದು, ವಾಹನ ಸಂಚಾರಕ್ಕೆ ದುಸ್ತರವಾಗಿದೆ. ಈ ರಸ್ತೆಯ ಮೂಲಕ ಸರಕಾರಿ ಮತ್ತು ನವೋದಯ ಪ್ರೌಢಶಾಲೆ ಮತ್ತು ಕಾಲೇಜಿಗೆ ಹಾಗೂ ಇತರ ಮನೆಗಳಿಗೆ ಸಂಪರ್ಕವಿದೆ. ಡಾಮರು ರಸ್ತೆ ಅಥವಾ ಕಾಂಕ್ರೀಟ್ ರಸ್ತೆಯಾಗಿ ಮಾಡಿದರೆ ಎಲ್ಲರಿಗೂ ಉತ್ತಮ.

ಬಸ್‌ಗಾಗಿ ಪ್ರಾಂಶುಪಾಲರಿಂದ ಪತ್ರ
ಸಂಜೆ ಸಮಯದಲ್ಲಿ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಗಳಿಗೆ ಅನುಕೂಲವಾಗುವಂತೆ ಕಾಲೇಜಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ವಿದ್ಯಾರ್ಥಿ ಗಳಿಗೆ ಅನುಕೂಲವಾಗುವಂತೆ ಸಮಯಕ್ಕೆ ಸರಿಯಾಗಿ ಸಂಜೆ 4 ಗಂಟೆಗೆ ಬೆಟ್ಟಂಪಾಡಿ ರೆಂಜ- ಸಂಟ್ಯಾರು ಪುತ್ತೂರು ಮಾರ್ಗ ವಾಗಿ ಹಾಗೂ ಬೆಟ್ಟಂಪಾಡಿ ಮುಡಿಪನಡ್ಕ ಸುಳ್ಯಪದವು ಮಾರ್ಗವಾಗಿ ಬಸ್‌ ಸೌಲಭ್ಯವನ್ನು ಒದಗಿಸುವಂತೆ ಕೆಎಸ್‌ಆರ್‌ಟಿಸಿಗೆ ವಿನಂತಿಸ ಲಾಗಿದ್ದು,ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.

ಸುಸಜ್ಜಿತ ಪ್ರಯೋಗಾಲಯದ ಬೇಡಿಕೆ
ಈ ಕಾಲೇಜಿನಲ್ಲಿ ಸುಸಜ್ಜಿತ ಪ್ರಯೋಗಾಲಯ ಇಲ್ಲದೇ ವಿದ್ಯಾರ್ಥಿ ಗಳಿಗೆ ತೊಂದರೆ ಯಾಗುತ್ತಿದೆ. ಸುಸಜ್ಜಿತ ಪ್ರಯೋಗಾಲಯ ನಿರ್ಮಾಣವಾದರೆ ಹೆಚ್ಚು ಪ್ರಯೋಜನ ವಿದ್ಯಾರ್ಥಿಗಳಿಗೆ ಆಗಲಿದೆ. ಇಲ್ಲಿ ಸಭಾಭವನ, ರಂಗ ಮಂದಿರ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆ ಗಳಿಗೆ ತೊಂದರೆ ಯಾಗುತ್ತಿದೆ. ಈ ಸಮಸ್ಯೆಗಳನ್ನು ಕೂಡ ಜನಪ್ರತಿನಿಧಿ ಗಳು, ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳ ಪೋಷಕರು ಒತ್ತಾಯಿಸಿದ್ದಾರೆ.

ಬಯಲು ಶೌಚಾಯಲ
ಕಾಲೇಜಿನಲ್ಲಿ ಹುಡುಗಿಯರಿಗೆ ಕೇವಲ ಎರಡು ಶೌಚಾಲಯ ಇದೆ. ಕ್ಯೂ ನಿಲ್ಲುವ ಪರಿಸ್ಥಿತಿ ಇದ್ದರೆ ಹುಡುಗರು ಮಾತ್ರ ಬಯಲು ಶೌಚಾಲಯವನ್ನು ಮಾಡುವ ಪರಿಸ್ಥಿತಿ ಇದೆ. ಇದರಿಂದ ಪರಿಸರದ ಜನರಿಗೆ, ವಿದ್ಯಾರ್ಥಿಗಳಿಗೆ ಮುಜುಗರ ಆಗುತ್ತಿದೆ. ತುರ್ತು ಶೌಚಾಲಯ ಅಗತ್ಯ ಇದೆ.

ಚರ್ಚಿಸಿ ಸೂಕ್ತ ಕ್ರಮ
ಸರಕಾರ ಸರಕಾರಿ ಕಾಲೇಜ್‌ಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ. ಹಲವು ಬಾರಿ ಮನವಿ ಮಾಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ನಾಗೇಶ್‌ ಗೌಡ, ಕಾರ್ಯಾಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ

ಅನುದಾನ ಬಂದರೆ ಕಾಮಗಾರಿ
ಕಾಲೇಜಿನ ಕೊಠಡಿ ಮತ್ತು ಶೌಚಾಲಯ ಕಾಮಗಾರಿಗೆ ಅನುದಾನ ಬಂದಿಲ್ಲ. ಕೆಲ ಕಡೆ ಅನುದಾನ ಬಂದು ಕಾಮಗಾರಿ ಪ್ರಾರಂಭವಾಗಿದೆ. ಅನುದಾನ ಮಂಜೂರಾದ ತತ್‌ಕ್ಷಣ ಅರ್ಧಕ್ಕೆ ನಿಂತ ಕಾಮಗಾರಿ ಪೂರ್ಣಗೊಳಿಸಲಾಗುವುದು
– ರಮೇಶ್‌, ಸಹಾಯಕ ಅಧಿಕಾರಿ, ಕೆಆರ್‌ಐಡಿಎಲ್

ಮಾಧವ ನಾಯಕ್‌ ಕೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ