“ಭಾಗ್ಯಾ’ ಹೊಳೆಗೆ ಕೊನೆಗೂ ಸಿಗಲಿದೆ ಸೇತುವೆ

 ಉದ್ಮಯದಲ್ಲಿ "ಶಾಲಾ ಸಂಪರ್ಕ ಸೇತು' ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆ

Team Udayavani, Nov 10, 2019, 4:50 AM IST

ಬಿಳಿನೆಲೆಯಲ್ಲಿ ಸ್ಥಳೀಯರು ಹೊಳೆ ದಾಟಲು ಉಪಯೋಗಿಸುತ್ತಿರುವ ಅಡಿಕೆ ಮರದ ಕಾಲು ಸಂಕ.

ಕಡಬ: ಕೊನೆಗೂ ಬಿಳಿನೆಲೆಯ ಭಾಗ್ಯಾ ಹೊಳೆಗೆ ಸೇತುವೆಯ ಭಾಗ್ಯ ಲಭಿಸಲಿದೆ. ಸ್ಥಳೀಯರ ನಿರಂತರ ಮನವಿಗೆ ಸ್ಪಂದಿಸಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಸ್ತುತ ಜನರೇ ನಿರ್ಮಿಸಿದ ಅಡಿಕೆ ಮರದ ತೂಗು ಸೇತುವೆ ಇರುವ ಉದ್ಮಯ ಎಂಬಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯಡಿ 40 ಲಕ್ಷ ರೂ. ವೆಚ್ಚದಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಮಳೆಗಾಲದಲ್ಲಿ ನಡುಕ
ಮಳೆಗಾಲ ಆರಂಭವಾಗುವ ಮೊದಲೇ ಬಿಳಿನೆಲೆ ಗ್ರಾಮದ ಕಾಡಂಚಿನ ಪುತ್ತಿಲ, ಬೈಲಡ್ಕ ಭಾಗದ ಜನರ ಎದೆಯಲ್ಲಿ ನಡುಕ ಶುರುವಾಗುತ್ತದೆ. ಸೇತುವೆ ಇಲ್ಲದ ಇಲ್ಲಿನ ಭಾಗ್ಯಾ ಹೊಳೆಯನ್ನು ಮಳೆಗಾಲದಲ್ಲಿ ದಾಟುವುದೇ ಸಾಹಸದ ಕೆಲಸ. ಮಳೆಗಾಲದಲ್ಲಿ ಉಕ್ಕಿ ಹರಿಯುವ ಈ ಹೊಳೆಯನ್ನು ದಾಟಲು ಸ್ಥಳೀಯರೇ ನಿರ್ಮಿಸುವ ಅಡಿಕೆ ಮರದ ಕಾಲು ಸಂಕವೇ ಸಂಪರ್ಕ ಸೇತು. ಭಾಗ್ಯಾ ಹೊಳೆಗೆ ಉದ್ಮಯ ಎಂಬಲ್ಲಿ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಇಂದು ನಿನ್ನೆಯದಲ್ಲ. ಸುಮಾರು 30ಕ್ಕೂ ಹೆಚ್ಚು ಮನೆಗಳ ಜನರು, ಶಾಲಾ ವಿದ್ಯಾರ್ಥಿಗಳು ಸೇತುವೆಯಿಲ್ಲದೆ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಹೊಳೆ ದಾಟಬೇಕಿದೆ. ವರ್ಷದ ಬೇಸಗೆಯ 3 ತಿಂಗಳು ಹೊರತುಪಡಿಸಿ ಉಳಿದ ದಿನಗಳಲ್ಲಿ ಜನತೆ ಹೊರ ಜಗತ್ತಿನ ಸಂಪರ್ಕಕ್ಕಾಗಿ ತಾವೇ ನಿರ್ಮಿಸುವ ಅಡಿಕೆ ಮರದ ತೂಗುಸೇತುವೆ ಮಾದರಿಯ ಕಾಲು ಸಂಕವನ್ನೇ ಆಶ್ರಯಿಸಬೇಕಿದೆ.

ಅಡಿಕೆ ಮರದ ಕಾಲು ಸಂಕ
ಇಲ್ಲಿನ ಅರ್ಗಿನಿ, ಅಮೈ, ಬೈಲು ಪ್ರದೇಶದ ಜನರು ಬಿಳಿನೆಲೆ ಮುಖಾಂತರ ಕಡಬ, ಸುಬ್ರಹ್ಮಣ್ಯ ಮೊದಲಾದ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸಬೇಕಾದರೆ ಭಾಗ್ಯಾ ಹೊಳೆಯನ್ನು ದಾಟಿ ಮುಂದುವರಿಯಬೇಕಾಗಿದೆ. ಪ್ರತಿ ವರ್ಷ ಇಲ್ಲಿನ ಜನರು ಹಣ ಹೊಂದಿಸಿ 20 ಸಾವಿರ ರೂ. ವೆಚ್ಚದಲ್ಲಿ ಅಡಿಕೆ ಮರದ ಕಾಲುಸಂಕ ನಿರ್ಮಿಸುತ್ತಾರೆ. ಹೊಳೆಯ ಎರಡೂ ಬದಿಗಳಲ್ಲಿರುವ ದೊಡ್ಡ ಮರಗಳಿಗೆ ಕಬ್ಬಿಣದ ರೋಪ್‌ ಆಳವಡಿಸಿ ಅಡಿಕೆ ಮರದಿಂದ ಪಾಲ ನಿರ್ಮಿಸಿದರೆ ಅದು ಒಂದು ವರ್ಷ ಮಾತ್ರ ಪ್ರಯೋಜನಕ್ಕೆ ಸಿಗುತ್ತದೆ. ಮಳೆಗಾಲ ಕಳೆದಾಗ ಕಬ್ಬಿಣದ ರೋಪ್‌ ತುಕ್ಕು ಹಿಡಿದು ಅಡಿಕೆ ಮರ ಶಿಥಿಲಗೊಂಡು ಮತ್ತೆ ಹೊಸದಾಗಿ ಸೇತುವೆ ನಿರ್ಮಿಸಬೇಕಾದ ಅನಿವಾರ್ಯ ಇಲ್ಲಿದೆ.

ಶೀಘ್ರದಲ್ಲೇ ಕಾಮಗಾರಿ
ಹಲವು ವರ್ಷಗಳಿಂದ ಭಾಗ್ಯಾ ಹೊಳೆಗೆ ಸರ್ವಋತು ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಆದರೆ ದೊಡ್ಡ ಮೊತ್ತದ ಅನುದಾನ ಅಗತ್ಯವಿರುವುದರಿಂದ ಅದು ಸಾಧ್ಯವಾಗಿರಲಿಲ್ಲ. ಅಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯಡಿ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಲೋಕೋಪಯೋಗಿ ಇಲಾಖೆ ಉನ್ನತಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಥಳದ ಸರ್ವೆ ಕೂಡ ಆಗಿದೆ. ಸೇತುವೆ ನಿರ್ಮಾಣಕ್ಕೆ ಅಂದಾಜು 40 ಲಕ್ಷ ರೂ. ಅನು ದಾನ ಅಗತ್ಯವಿದೆ. ಶೀಘ್ರ ಸೇತುವೆ ನಿರ್ಮಾಣ ನಡೆಯಲಿದೆ.
– ಎಸ್‌. ಅಂಗಾರ, ಸುಳ್ಯ ಶಾಸಕ

ಪ್ರಗತಿಯಲ್ಲಿ ಪ್ರಕ್ರಿಯೆ
ಬಿಳಿನೆಲೆಯಲ್ಲಿ ಭಾಗ್ಯಾ ಹೊಳೆಗೆ ಉದ್ಮಯ ಎಂಬಲ್ಲಿ ಲಘು ವಾಹನಗಳು ಸಂಚರಿಸುವ ರೀತಿಯಲ್ಲಿ 2.5 ಮೀ. ಅಗಲದ ಕಿರು ಸೇತುವೆ ನಿರ್ಮಿಸುವ ಉದ್ದೇಶದಿಂದ ಸರ್ವೆ ನಡೆಸಿದ್ದು, ತಾಂತ್ರಿಕ ಪ್ರಕ್ರಿಯೆಗಳು ಪ್ರಗತಿಯಲ್ಲಿದೆ. ಮುಂದಿನ 2 ತಿಂಗಳೊಳಗೆ ಕಾಮಗಾರಿ ಆರಂಭಿಸುವ ಗುರಿ ಇರಿಸಿಕೊಳ್ಳಲಾಗಿದೆ.
– ಬಿ. ರಾಜಾರಾಮ್‌ , ಎಇಇ, ಲೋಕೋಪಯೋಗಿ ಇಲಾಖೆ‌

ನಾಗರಾಜ್‌ ಎನ್‌.ಕೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ