ಮನೆಯೊಳಗೆ ಯಕ್ಷಮಾತೆಯ ಗೆಜ್ಜೆ ನಿನಾದ

ಕಲಾ ಸೇವೆಯಲ್ಲಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಚಿಕ್ಕಮೇಳ

Team Udayavani, Jul 19, 2019, 5:00 AM IST

ಮನೆ ಮನೆ ಯಕ್ಷಗಾನ ಪ್ರದರ್ಶನದಲ್ಲಿ ನಿರತರಾಗಿರುವ ಚಿಕ್ಕಮೇಳ ತಂಡ.

ಸುಬ್ರಹ್ಮಣ್ಯ: ಕರಾವಳಿಯ ಹೆಮ್ಮೆಯ ಜಾನಪದ ಕಲೆ ಯಕ್ಷಗಾನಕ್ಕೆ ಶತಮಾನಗಳ ಇತಿಹಾಸವಿದೆ. ಆರಾಧನ ಕಲೆಯಾದ ಯಕ್ಷಗಾನ ಆಧುನಿಕ ದಿನಗಳಲ್ಲಿಯೂ ಜೀವಂತಿಕೆ ಉಳಿಸಿಕೊಂಡಿದೆ ಎಂದರೆ ಹಲವಾರು ಯಕ್ಷಗಾನ ಸಂಘಗಳು ಹಾಗೂ ಕಲಾವಿದರು ನಮ್ಮ ನಡುವೆ ಇರುವುದೇ ಕಾರಣ.

ಇಂತಹ ಒಂದು ಪ್ರಯತ್ನದಲ್ಲಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಚಿಕ್ಕಮೇಳ ನಿರತವಾಗಿದೆ. ಯಕ್ಷಗಾನವನ್ನು ಉಳಿಸಿ, ಬೆಳೆಸಿ, ಯಕ್ಷಗಾನವನ್ನು ಪ್ರತಿ ಮನೆಗೆ ತಲುಪಿಸುವ ದಿಶೆಯಲ್ಲಿ ಮನೆಬಾಗಿಲಿಗೆ ತಿರುಗಾಟವನ್ನು ಜೂ. 24ರಿಂದ ಆರಂಭಿಸಿದೆ. ಬಿಳಿನೆಲೆ, ಸುಬ್ರಹ್ಮಣ್ಯ ಪರಿಸರದಲ್ಲಿ ಮನೆ ಮನೆಗಳಿಗೆ ತೆರಳಿ ಪ್ರದರ್ಶನದ ಮೂಲಕ ಯಕ್ಷಗಾನ ಕಂಪನ್ನು ಪಸರಿಸಿ. ಕಲೆಯನ್ನು ಉಳಿಸುವ ಶ್ರೇಷ್ಠ ಕಾರ್ಯದಲ್ಲಿ ಈ ಮೇಳ ತೊಡಗಿದೆ.

ಜು. 17ರಂದು ಸುಬ್ರಹ್ಮಣ್ಯ ಪರಿ ಸರದ ಕುಲ್ಕುಂದ ಭಾಗದಲ್ಲಿ ಮನೆ ಮನೆ ತೆರಳಿ ಯಕ್ಷಗಾನ ಪ್ರದರ್ಶಿಸಿ ದರು. ಸ್ವಸ್ತಿಕವಿರಿಸಿ, ದೀಪ ಪ್ರಜ್ವಲಿಸಿ ದೇವತಾ ಪ್ರಾರ್ಥನೆ ಮೂಲಕ ಈಶ್ವರ ಮತ್ತು ಪಾರ್ವತಿ ದೇವಿಯ ಪಾತ್ರಧಾರಿಗಳು ಕಥಾ ಪ್ರಸಂಗದ ಒಂದು ಆಯ್ದ ಭಾಗದ ಪ್ರದರ್ಶನ ನಡೆಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಧನಂಜಯ ಸುಬ್ರಹ್ಮಣ್ಯ, ಮದ್ದಳೆ ವಾದಕರಾಗಿ ಮೋಹನ್‌, ಈಶ್ವರ ಪಾತ್ರಧಾರಿಯಾಗಿ ಧನುಷ್‌ ಸವಣೂರು, ಪಾರ್ವತಿ ದೇವಿ ಪಾತ್ರದಲ್ಲಿ ಮುರಳೀಧರ ಅಭಿನಯಿಸಿದರು. ಸಂಚಾಲಕ ಬಾಲಕೃಷ್ಣ ಕಲ್ಲಾಜೆ, ಸುಜಿತ್‌, ರಾಜೇಶ್‌ ಸುಬ್ರಹ್ಮಣ್ಯ ಸಹಕರಿಸುತ್ತಿದ್ದಾರೆ.

ಚಿಕ್ಕ ಮೇಳೆ ತೆರಳುವ ಮುಂಚಿತ ಭೇಟಿ ನೀಡುವ ಮನೆಗಳಿಗೆ ತೆರಳಿ, ಮೇಳ ಬರುವ ಸಮಯವನ್ನು ತಿಳಿಸಲಾಗುತ್ತದೆ. ದಿನದಲ್ಲಿ ಸಂಜೆ 7ರಿಂದ ರಾತ್ರಿ 10ರ ತನಕ ಚಿಕ್ಕ ಮೇಳ ತಿರುಗಾಟ ನಡೆಸಿ, ಪ್ರದರ್ಶನ ನೀಡುತ್ತದೆ.

ಹವ್ಯಾಸಿ ಕಲಾವಿದರು
ಯಕ್ಷಗಾನ ಪ್ರದರ್ಶನಕ್ಕೆ ಮಳೆಗಾಲ ಸೂಕ್ತ ಸಮಯವಲ್ಲ. ನವೆಂಬರ್‌ ತಿಂಗಳಿಂದ ಮೇ ತನಕ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಮಳೆಗಾಲದಲ್ಲಿ ಚಿಕ್ಕಮೇಳಗಳು ತಿರುಗಾಟವನ್ನು ನಡೆಸು ತ್ತವೆ. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘವೂ ಕಲಾ ಮಾತೆಯ ಸೇವೆಗಾಗಿ ಈ ತಿರುಗಾಟವನ್ನು ಹಮ್ಮಿಕೊಂಡಿದೆ.

ಇಬ್ಬರನ್ನು ಹೊರತುಪಡಿಸಿ ಉಳಿದವರು ಹವ್ಯಾಸಿ ಕಲಾವಿದರೇ ಆಗಿರುವುದು ಈ ಚಿಕ್ಕಮೇಳದ ವಿಶೇಷತೆ.
ಕರಾವಳಿ ಭಾಗದಲ್ಲಿ ಪ್ರತಿ ಮನೆಯಲ್ಲಿ ಯಕ್ಷಗಾನ ಅಭಿಮಾನಿಗಳು ಇರುತ್ತಾರೆ. ಮನೆಗೆ ಬಂದ ಕಲಾ ತಂಡವನ್ನು ಮನೆ ಮಂದಿ ಸ್ವಾಗತಿಸುತ್ತಾರೆ. ಹೂವು, ಹಣ್ಣು, ಅಕ್ಕಿ, ತೆಂಗಿನಕಾಯಿ ಮತ್ತು ದೀಪ ಇಟ್ಟು, ಪ್ರಾರ್ಥನೆ ಸಲ್ಲಿಸಿ ಯಾವುದಾದರೂ ಪ್ರಸಂಗದ ಒಂದು ಭಾಗವನ್ನು ಆಡುತ್ತಾರೆ. ಪ್ರದರ್ಶನ ಬಳಿಕ ಪೂಜೆಯ ಪ್ರಸಾದವನ್ನು ಅಲ್ಲಿದ್ದವರಿಗೆ ವಿತರಿಸಲಾಗುತ್ತದೆ.

ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 40ಕ್ಕೂ ಅಧಿಕ ಮೇಳಗಳು ತಿರುಗಾಟ ನಡೆಸುತ್ತವೆ. ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ಈ ಕಲೆ ಆಶ್ರಯದಾತವಾಗಿದೆ. ಮಳೆಗಾಲದಲ್ಲಿ ಯಕ್ಷಗಾನ ಕಲಾವಿದರ ಜೀವನ ನಿರ್ವಹಣೆ ಕಷ್ಟ. ಹೀಗಾಗಿ, ಚಿಕ್ಕಮೇಳಗಳು ತಿರುಗಾಟ ನಡೆಸುತ್ತವೆ. ಯಕ್ಷಗಾನ ಮೇಳದ ಕಿರು ರೂಪವೇ ಚಿಕ್ಕ ಮೇಳ. ಅನೇಕ ಚಿಕ್ಕ ಮೇಳಗಳು ಇಂತಹ ತಿರುಗಾಟವನ್ನು ಮಳೆಗಾಲದ ಈ ಅವಧಿಯಲ್ಲಿ ಅಲ್ಲಲ್ಲಿ ನಡೆಸುತ್ತಿವೆ ನಾಲ್ಕು-ಐದು ಕಲಾವಿದರು ಮಾತ್ರ ಇಂಥ ಯಕ್ಷಗಾನ ತಂಡದಲ್ಲಿ ಇರುತ್ತಾರೆ.

ಶುಭ ಸೂಚನೆ: ಯಕ್ಷಮಾತೆಯ ಗೆಜ್ಜೆಯ ನಿನಾದ ಮನೆಯೊಳಗೆ ಕೇಳಿಸಿದರೆ ಮನೆಗೆ ಶುಭಪ್ರದ ಎನ್ನುವ ನಂಬಿಕೆ ಕರಾವಳಿಯಲ್ಲಿ ಇರುವುದರಿಂದ ಚಿಕ್ಕ ಮೇಳ ಮನೆಗೆ ಆಗಮಿಸಿದಾಗ ಮನೆ ಸದಸ್ಯರು ಬಹಳ ಸಂಭ್ರಮ ಪಡುತ್ತಾರೆ. ಚಿಕ್ಕ ಮೇಳಗಳು ಮನೆ ಮನೆಗೆ ತೆರಳಿ ಪ್ರದರ್ಶನ ನೀಡುವುದರಿಂದ ಎಳೆಯರಲ್ಲೂ ಈ ಕಲೆಯ ಕುರಿತಾಗಿ ಆಸಕ್ತಿ ಬೆಳೆಯಲು ಸಾಧ್ಯವಾಗುತ್ತದೆ. ಅವರೂ ಯಕ್ಷಗಾನ ಕಲಿಯಲು ಮುಂದಾಗುತ್ತಾರೆ.

ಕಲೆ ಉಳಿಸುವ ಪ್ರಯತ್ನ
ಯಕ್ಷಗಾನ ಕಲೆಗೆ ಪ್ರೋತ್ಸಾಹ ಮತ್ತು ಕಲೆ ಉಳಿವಿಗೆ ಇಂತಹ ಪ್ರಯತ್ನಗಳು ಆವಶ್ಯಕ. ಹೀಗಾಗಿ ಚಿಕ್ಕಮೇಳಗಳು ಯಶಸ್ವಿಯಾಗಿ ನಡೆಯುತ್ತಿವೆ. ಎಲ್ಲರ ಸಹಕಾರ, ಸಹಭಾಗಿತ್ವ ಇದರಲ್ಲಿ ಇರಬೇಕಿದೆ.
– ಕೃಷ್ಣಶರ್ಮ, ಹಿರಿಯ ಯಕ್ಷಗಾನ ಕಲಾವಿದ, ಸುಬ್ರಹ್ಮಣ್ಯ

ಬಾಲಕೃಷ್ಣ ಭೀಮಗುಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ