ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಚಾಲನೆ

ರಾಜ್ಯ ಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Team Udayavani, Nov 23, 2019, 4:24 AM IST

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಕಾರ್ತಿಕ ಲಕ್ಷದೀಪೋತ್ಸವ ಶುಕ್ರವಾರ ಆರಂಭಗೊಂಡಿದ್ದು, ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ 42ನೇ ವಸ್ತುಪ್ರದರ್ಶನವನ್ನು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿ ಶುಭ ಹಾರೈಸಿದರು. ಹೇಮಾವತಿ ವೀ. ಹೆಗ್ಗಡೆ ಜತೆಗಿದ್ದರು.

ಎಸ್‌‍ಡಿಎಂ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಪ್ರೊ| ಎಸ್‌. ಪ್ರಭಾಕರ್‌ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ, ಗೋಪಾಲ್‌ ಮೆನನ್‌, ಕೃಷ್ಣ ಶೆಟ್ಟಿ, ಎಂ.ಬಿ. ಶೆಟ್ಟಿ ಉಪಸ್ಥಿತರಿದ್ದರು. ಲಕ್ಷ ದೀಪೋತ್ಸವದ ಮೊದಲ ದಿನ ಶ್ರೀ ಮಂಜುನಾಥಸ್ವಾಮಿ ಹೊಸಕಟ್ಟೆ ಉತ್ಸವ ಡಾ| ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನೆರವೇರಿತು. ಶನಿವಾರ ರಾತ್ರಿ 9ರ ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಕೆರೆಕಟ್ಟೆ ಉತ್ಸವ ಜರಗಲಿದೆ.

197 ಮಳಿಗೆಗಳು
ವಿವಿಧ ಇಲಾಖೆಗಳ ಮಳಿಗೆಗಳು, ಜೀವ ವಿಮೆ, ಶಿಕ್ಷಣ ಸಂಸ್ಥೆಗಳು, ಅಂಚೆ ಇಲಾಖೆ, ಎಲೆಕ್ಟ್ರಾನಿಕ್‌ ವಸ್ತುಗಳು, ಪುಸ್ತಕ ಮಳಿಗೆ, ಸಿರಿ ಉತ್ಪನ್ನಗಳು, ರುಡ್‌ಸೆಟ್‌, ಎಸ್‌ಕೆಡಿಆರ್‌ಡಿಪಿ ಪರಿಚಯ ಮಳಿಗೆ, ಕೃಷಿ ಯಂತ್ರೋಪಕರಣಗಳು ಒಳಗೊಂಡಂತೆ ವಿವಿಧ ಪ್ರಕಾರಗಳ 197 ಮಳಿಗೆಗಳು ವಸ್ತುಪ್ರದರ್ಶನದಲ್ಲಿ ಆಕರ್ಷಿಸಲಿವೆ. ಪ್ರತಿ ದಿನ ಬೆಳಗ್ಗೆ ಗಂಟೆ 9ರಿಂದ ರಾತ್ರಿ 9ರ ವರೆಗೆ ಉಚಿತ ಪ್ರವೇಶಾವಕಾಶವಿದೆ.

ಜಗತ್ತೇ ಧರ್ಮಸ್ಥಳವಾಗಲಿ: ಡಾ| ಹೆಗ್ಗಡೆ ಆಶಯ
ಬೆಳ್ತಂಗಡಿ: ಧರ್ಮದ ಮೂಲ ಉದ್ದೇಶವೇ ಬದುಕನ್ನು
ಸುಖ-ಶಾಂತಿಯಿಂದ, ಪ್ರೀತಿ-ವಿಶ್ವಾಸದಿಂದ ಅನುಭವಿ
ಸಲು ಪ್ರೇರಣೆ ನೀಡುವುದು. ದೇಶವೇ ರಾಮರಾಜ್ಯ ವಾಗಬೇಕೆಂಬ ಕಲ್ಪನೆ ಇದ್ದಂತೆ ಪ್ರಪಂಚವೇ ಧರ್ಮದ ನೆಲೆವೀಡಾಗುವ ಮೂಲಕ ಧರ್ಮಸ್ಥಳವಾಗಬೇಕು ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಆಶಿಸಿದರು.

ಶುಕ್ರವಾರ ಅಮೃತವರ್ಷಿಣಿ ಸಭಾಭವನದಲ್ಲಿ ಲಕ್ಷದೀಪೋತ್ಸವ ಸಂದರ್ಭ ಉಜಿರೆಯಿಂದ ಪಾದಯಾತ್ರೆ ಯಲ್ಲಿ ಬಂದ 10 ಸಾವಿರಕ್ಕೂ ಅಧಿಕ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಷ್ಟ ಬಂದಾಗ ಬದುಕು ಭಾರವಾಗುತ್ತದೆ. ಅವರವರ ವೃತ್ತಿ, ಪ್ರವೃತ್ತಿಯನ್ನು ಪ್ರೀತಿಸಿ, ಗೌರವಿಸಿದಾಗ ಬದುಕು ಪ್ರಿಯವಾಗುತ್ತದೆ. ಧರ್ಮದ ಮೂಲ ಉದ್ದೇಶವೇ ಬದುಕನ್ನು ಸುಖ-ಶಾಂತಿಯಿಂದ, ಪ್ರೀತಿ-ವಿಶ್ವಾಸದಿಂದ ಅನುಭವಿಸಲು ಪ್ರೇರಣೆ ನೀಡುವುದಾಗಿದೆ ಎಂದರು.

ನಾವು ಶುದ್ಧ ಚಾರಿತ್ರ್ಯ, ಆತ್ಮವಿಶ್ವಾಸ, ಪ್ರೀತಿ-ವಿಶ್ವಾಸ, ಸೇವಾ ಮನೋಭಾವ ಮೈಗೂಡಿಸಿಕೊಂಡಾಗ ದೇವರು ಸದಾ ಅಭಯ ನೀಡುತ್ತಾನೆ. ನಿರಂತರ ಪರಿವರ್ತನಾ ಶೀಲವಾದ ಜಗತ್ತಿನಲ್ಲಿ ನಾವು ಕಾಲಕ್ಕೆ ಸರಿಯಾಗಿ ಹೊಂದಿಕೊಂಡು ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಜನರ ಪ್ರೀತಿ – ವಿಶ್ವಾಸ ನನ್ನ ಮನಮುಟ್ಟಿದೆ. ಇನ್ನಷ್ಟು ಸೇವಾಕಾರ್ಯಗಳ ಮೂಲಕ ಬೆಳ್ತಂಗಡಿ ತಾಲೂಕನ್ನು ಮಾದರಿ ತಾಲೂಕಾಗಿ ಅಭಿವೃದ್ಧಿಪಡಿಸಲು ಶ್ರಮಿಸುತ್ತೇನೆ ಎಂದು ಹೆಗ್ಗಡೆ ಭರವಸೆ ನೀಡಿದರು.

ಶಾಸಕ ಹರೀಶ್‌ ಪೂಂಜ, ವಿಧಾನಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌, ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಪ್ರೊ| ಎಸ್‌. ಪ್ರಭಾಕರ್‌, ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ಡಾ| ಬಿ. ಯಶೋವರ್ಮ ಉಪಸ್ಥಿತರಿದ್ದರು. ಕೆ. ಪ್ರತಾಪಸಿಂಹ ನಾಯಕ್‌ ಪ್ರಸ್ತಾವನೆಗೈದು ಸ್ವಾಗತಿಸಿದರು. ಶ್ರೀನಿವಾಸ ರಾವ್‌ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ