3,008 ಕಡತಗಳ ವಿಲೇವಾರಿಗೆ ಸಪ್ತಾಹ

Team Udayavani, Jun 25, 2019, 5:00 AM IST

ಪುತ್ತೂರು: ಪುತ್ತೂರಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿ 3,008 ಕಡತಗಳು ಬಾಕಿಯಾಗಿರುವ ಹಿನ್ನೆಲೆ ಯಲ್ಲಿ ಜೂ. 24ರಿಂದ ಕಡತ ವಿಲೇವಾರಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.

ಕಂದಾಯ ಇಲಾಖೆಯಲ್ಲಿ ಬಹಳಷ್ಟು ಕಡತಗಳು ನಿಗದಿತ ಅವಧಿಯೊಳಗೆ ವಿಲೇವಾರಿಯಾಗದೆ ಬಾಕಿ ಉಳಿದಿವೆ. ಈ ಕುರಿತು ಸಾರ್ವಜನಿಕರಿಂದ ದೂರು ಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆಯಲ್ಲಿ ಜೂ. 24ರಿಂದ 30ರ ವರೆಗೆ ಕಡತ ವಿಲೇವಾರಿ ಸಪ್ತಾಹವನ್ನು ಸರಕಾರದ ಸೂಚನೆಯಂತೆ ಹಮ್ಮಿಕೊಳ್ಳಲಾಗಿದೆ.

3,008 ಕಡತಗಳು ಬಾಕಿ
ಕಂದಾಯ ಇಲಾಖೆಯಲ್ಲಿ ಮೇ ತಿಂಗಳ ಅಂತ್ಯದವರೆಗೆ 3,008 ಕಡತಗಳು ಬಾಕಿಯಾಗಿವೆ. ಕಚೇರಿ ಕಡತಗಳು 1,720, ಮೇಲಧಿಕಾರಿಗಳ 90, ಅಧೀನ ಕಚೇರಿಗಳಲ್ಲಿ 1,190 ಹಾಗೂ ಇತರ 8 ಕಡತಗಳು ಬಾಕಿ ಉಳಿದಿವೆ. ಒಂದರಿಂದ ಮೂರು ತಿಂಗಳು ಹಳೆಯ 2,502, ಮೂರರಿಂದ ಆರು ತಿಂಗಳ ಹಳೆಯ 344, ಆರು ತಿಂಗಳಿಂದ 1 ವರ್ಷ ಹಳೆಯ 71 ಹಾಗೂ ಒಂದು ವರ್ಷ ಮೇಲ್ಪಟ್ಟ 91 ಕಡತಗಳು ಇದರಲ್ಲಿವೆ.

ರವಿವಾರವೂ ಕರ್ತವ್ಯ
ಸಪ್ತಾಹದ ಸಂದರ್ಭದಲ್ಲಿ ರವಿವಾರವೂ ಹಾಜರಾಗಿ ಕೆಲಸ ನಿರ್ವಹಿಸಲು ಮೇಲಧಿಕಾರಿಗಳು ಸೂಚಿಸಿದ್ದಾರೆ. ಕಂದಾಯ ಇಲಾಖೆ ಮುಂದಿನ ಒಂದು ವಾರ ನಿರಂತರ ಕೆಲಸ ನಿರ್ವಹಿಸಿ ಕಡತ ವಿಲೇವಾರಿ ಸಪ್ತಾಹವನ್ನು ಯಶಸ್ವಿಗೊಳಿಸಲಿದೆ ಎಂದು ಪ್ರಭಾರ ತಹಶೀಲ್ದಾರ್‌ ಅನಂತ್‌ ಶಂಕರ್‌ ತಿಳಿಸಿದ್ದಾರೆ.

150 ಕಡತ ವಿಲೇವಾರಿ
ಸುಳ್ಯ: ಕಂದಾಯ ಇಲಾಖೆಯಲ್ಲಿ ಕಡತ ವಿಲೇವಾರಿ ಸಪ್ತಾಹ ಸೋಮವಾರ ಆರಂಭಗೊಂಡಿದ್ದು, ಸುಳ್ಯ ತಾಲೂಕು ಕಚೇರಿಯಲ್ಲಿ ಮೊದಲ ದಿನ 150 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಸೋಮವಾರ 150 ಕಡತ ವಿಲೇ ಆಗಿದೆ. ಇನ್ನೂ 600 ಕಡತಗಳು ವಿಲೇವಾರಿಗೆ ಬಾಕಿ ಇವೆ. ಅದರ ಪರಿಶೀಲನೆ ಪ್ರಕ್ರಿಯೆ ನಡೆಸಿ ವಿಲೇಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ಅಹ್ಮದ್‌ ಕುಂಞಿ “ಉದಯವಾಣಿ’ಗೆ ತಿಳಿಸಿದ್ದಾರೆ.

ವಾರದಲ್ಲಿ ವಿಲೇವಾರಿ
ಮೇಲಧಿಕಾರಿಗಳ ಸೂಚನೆಯಂತೆ ಕಂದಾಯ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಕಡತಗಳನ್ನು ವಿಲೇವಾರಿ ಮಾಡಲು ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸಭೆ ನಡೆಸಿ ವಿಎ ಹಾಗೂ ಆರ್‌ಐಗಳಿಗೆ ಸೂಚಿಸಲಾಗಿದೆ. ಒಂದು ವಾರದಲ್ಲಿ ಕಡತಗಳು ವಿಲೇವಾರಿಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದೇವೆ.
– ಅನಂತ್‌ ಶಂಕರ್‌ , ಪ್ರಭಾರ ತಹಶೀಲ್ದಾರ್‌, ಪುತ್ತೂರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ