ಶಿಲ್ಪಕಲಾ ಸಾಧಕರಿಗೆ ಜಕಣಾಚಾರಿ ಪ್ರಶಸ್ತಿ

ವಿಶ್ವಕರ್ಮ ಜಯಂತಿ ಆಚರಣೆಯಲ್ಲಿ ಶಾಸಕ ಸಂಜೀವ ಮಠಂದೂರು ಆಶಯ

Team Udayavani, Sep 18, 2019, 5:00 AM IST

ಪುತ್ತೂರು: ಪಂಚ ವಿಧದ ಕಾಯಕದ ಮೂಲಕ ಬದುಕು ಕಟ್ಟಿಕೊಂಡಿರುವ ವಿಶ್ವಕರ್ಮ ಸಮಾಜದ ನುರಿತ ಕುಶಲಕರ್ಮಿಗಳು ಮತ್ತು ಶಿಲ್ಪಕಲಾ ಸಾಧಕರಿಗೆ ಜಕಣಾಚಾರಿ ಪ್ರಶಸ್ತಿ ನೀಡುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಪುತ್ತೂರು ತಾ.ಪಂ. ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಮತ್ತು ತಾಲೂಕು ವಿಶ್ವಕರ್ಮ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ನಡೆದ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸಂಸ್ಮರಣ ಜ್ಯೋತಿ ಪ್ರಜ್ವಲನೆ ಮಾಡಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೃಷ್ಟಿ, ಸ್ಥಿತಿ, ಲಯದ ಸಕಲ ಕರ್ಮ ಮಾಡುವುದು ಪರಬ್ರಹ್ಮ. ಆ ಪರಬ್ರಹ್ಮನೇ ವಿಶ್ವಕರ್ಮ ಎಂಬ ಉಲ್ಲೇಖವಿದೆ. ಈ ಜಗತ್ತು ಸಮೃದ್ಧವಾಗಿ ಇರಬೇಕಾದರೆ ವಿಶ್ವಕರ್ಮರ ಕೈಚಳಕ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದ ಆರ್ಟ್‌ ಮತ್ತು ಆರ್ಕಿಟೆಕ್ಚರ್‌ ಸಾಧನೆಯ ಹಿಂದೆ ವಿಶ್ವಕರ್ಮರ ಸಾಧನೆ ಇದೆ. ವಿದೇಶೀಯರು ಭಾರತದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಬರುತ್ತಾರೆ ಎಂದರೆ ಅದು ವಿಶ್ವಕರ್ಮರ ಕೈಚಳಕದ ಸೌಂದರ್ಯದ ಕಾರಣಕ್ಕೆ ಎಂದರು.

ಗಂಭೀರ ಚಿಂತನೆ ಅಗತ್ಯ
ಚರಿತ್ರೆ ನಿರ್ಮಾಣ ಮಾಡಿ ಸಮಾಜಕ್ಕೆ ಸಂದೇಶ ನೀಡಿದ ವ್ಯಕ್ತಿ ಅಥವಾ ಶಕ್ತಿಯನ್ನು ಜಗತ್ತೇ ಸ್ಮರಿಸಿಕೊಂಡು ಗೌರವಿಸುತ್ತದೆ. ಅಂಥವರು ಮತ್ತೆ ಹುಟ್ಟಿ ಚರಿತ್ರೆ ನಿರ್ಮಾಣ ಮಾಡಬೇಕು. ಜನತೆಯ ಜೀವನದ ಜತೆ ಅವಿನಾಭಾವ ಸಂಬಂಧ ಹೊಂದಿರುವ ವಿಶ್ವಕರ್ಮ ಸಮಾಜ ಪ್ರಸ್ತುತ ಸಮಸ್ಯೆಗಳ ಸರಮಾಲೆಯಲ್ಲಿದೆ. ಈ ಕುರಿತು ಗಂಭೀರವಾದ ಚಿಂತನೆ ನಡೆಸುವುದು ಅಗತ್ಯವಾಗಿದೆ ಎಂದು ಶಾಸಕರು ಹೇಳಿದರು.

ಮೇಲ್ಮಟ್ಟದ ಸ್ಥಾನ
ಸಂಸ್ಮರಣ ಉಪನ್ಯಾಸ ನೀಡಿದ ಮೂಡುಬಿದಿರೆ ಪ್ರಾಂತ ಸರಕಾರಿ ಪ್ರೌಢಶಾಲಾ ಅಧ್ಯಾಪಕ ಕುಂಜೂರು ಗಣೇಶ್‌ ಆಚಾರ್ಯ, ವೇದಗಳಲ್ಲಿ ದೇವಶಿಲ್ಪಿ ವಿಶ್ವಕರ್ಮ ವಿಶ್ವದ ಸಕಲ ಕರ್ಮಗಳಿಗೇ ವಿಶ್ವಕರ್ಮ. ಮನುಷ್ಯನಿಗೆ ಸ್ವಾವಲಂಬನೆಯ ಆರ್ಥಿಕ ನೆಲೆಗಟ್ಟು ನೀಡಿದ, ಸಾಮಾಜಿಕ ನೆಲೆಗಟ್ಟಿನಲ್ಲಿ ಶಿಲ್ಪ ಮೇಲ್ಮಟ್ಟದ ಸ್ಥಾನ ಹೊಂದಿದೆ. ಶೈಕ್ಷಣಿಕವಾಗಿ ಟೆಕ್ನಾಲಜಿಯ ಬೆಳವಣಿಗೆ ಪ್ರಾಕೃತವಾಗಿ ಶಿಲ್ಪಗಳ ಮೂಲಕವೇ ಆರಂಭವಾಗಿದೆ. ಸಾಂಸ್ಕೃತಿಕವಾಗಿ ನಮ್ಮ ಸಂಸ್ಕೃತಿಯನ್ನು ಶಿಲ್ಪ ಕಲೆ ಹೆಚ್ಚಿಸಿದೆ ಎಂದು ಹೇಳಿದರು.

ತಾಲೂಕು ಪಂಚಾಯತ್‌ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಉಪಾಧ್ಯಕ್ಷೆ ಲಲಿತಾ ಈಶ್ವರ್‌, ಸದಸ್ಯೆ ಸುಜಾತಾ ಆಚಾರ್ಯ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್‌ ಭಂಡಾರಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್‌ ಉಪಸ್ಥಿತರಿದ್ದರು.

ತಾಲೂಕು ಪಂಚಾಯತ್‌ ಸದಸ್ಯರು, ವಿಶ್ವಕರ್ಮ ಸಮಾಜ ಬಾಂಧವರು ಹಾಗೂ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪತಹಶೀಲ್ದಾರ್‌ ರಾಮಣ್ಣ ನಾಯ್ಕ ಸ್ವಾಗತಿಸಿ, ಗ್ರಾಮಕರಣಿಕೆ ಚೈತ್ರಾ ಪ್ರಾರ್ಥಿಸಿದರು. ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ದಯಾನಂದ ಹೆಗ್ಡೆ ವಂದಿಸಿದರು. ಕಂದಾಯ ಇಲಾಖಾ ಸಿಬಂದಿ ನಾಗೇಶ್‌ ಕಾರ್ಯಕ್ರಮ ನಿರ್ವಹಿಸಿದರು.

ವಿವಿಗಳು ಡಾಕ್ಟರೇಟ್‌ ನೀಡಲಿ
ಜಾಗತೀಕರಣ ಫಲವೆಂಬಂತೆ ವಿಶ್ವಕರ್ಮ ಕುಶಲ ಕಸುಬಿನವರಿಗೂ ಹೊಡೆತ ನೀಡಿದೆ. ವೈವಿಧ್ಯ ಮತ್ತು ನಾವೀನ್ಯ ಇಲ್ಲದ ಯಾಂತ್ರೀಕೃತ ಆಭರಣಗಳ ತಯಾರಿಯಿಂದ ಶಿಲ್ಪ ಮತ್ತು ಶಿಲ್ಪಿ ನಡುವಣ ಬಾಂಧವ್ಯವೂ ಕಡಿದುಹೋಗಿದೆ ಎಂದ ಮಠಂದೂರು ಅವರು, ಹಳ್ಳಿಯಲ್ಲಿರುವ ಕಮ್ಮಾರ, ಬಡಗಿ, ನೇಕಾರ, ಕಲ್ಲುಕುಟ್ಟಿಗ ಇಂತಹ ಕುಶಲಕರ್ಮಿ ಶಿಲ್ಪಿಗಳ ಸಾಧಕರನ್ನು ಗುರುತಿಸಿ ಅಂಥ‌ವರಿಗೆ ವಿಶ್ವವಿದ್ಯಾಲಯಗಳು ಡಾಕ್ಟರೇಟ್‌ ಗೌರವ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ವಿವಿಗಳು ಹಳ್ಳಿಗಳಿಗೆ ಹೋಗಬೇಕು. ಇದು ಸಮಾಜದಲ್ಲಿ ಈ ವೃತ್ತಿಯ ಜನತೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ