ಕಲ್ಮಕಾರು ಶೆಟ್ಟಿಕಟ್ಟ: ಬಿದಿರು ಸಂಕವೇ ಆಧಾರ

ಮಳೆಗಾಲದಲ್ಲಿ ಮಕ್ಕಳು ಅಪಾಯಕಾರಿಯಾಗಿ ಹೊಳೆ ದಾಟಬೇಕು

Team Udayavani, Jun 20, 2019, 5:00 AM IST

ಸುಬ್ರಹ್ಮಣ್ಯ: ಮಳೆಗಾಲ ಆರಂಭವಾಯಿತೆಂದರೆ ಇಲ್ಲಿಯವರಿಗೆ ಸಂಕಷ್ಟದ ಸರಮಾಲೆ ಶುರುವಿಟ್ಟು ಕೊಳ್ಳುತ್ತದೆ. ಮಕ್ಕಳಿಗೆ ಹೊಳೆ ದಾಟುವ ಚಿಂತೆ. ಹೆತ್ತವರಿಗೆ ಮಕ್ಕಳ ಪ್ರಾಣದ ಭೀತಿ. ಅಲುಗಾಡುತ್ತಿರುವ ಬಿದಿರಿನ ತೂಗು ಸೇತುವೆಯ ಮೇಲೆ ಸರ್ಕಸ್‌ ಮಾಡುತ್ತ ತೆರಳಬೇಕಾದ ಸ್ಥಿತಿ ಕಲ್ಮಕಾರು ಗ್ರಾಮದ ಶೆಟ್ಟಿಕಟ್ಟ ನಿವಾಸಿಗಳದು.

ಕಲ್ಮಕಾರು ಗ್ರಾಮದಿಂದ ಅಂಜನಕಜೆ ಕೊಪ್ಪಡ್ಕ ಗುಳಿಕಾನ ಗುಡ್ಡೆಕಾನ ಪೆರ್ಮುಕಜೆ ಪ್ರದೇಶಗಳನ್ನು ತಲುಪಲು ಶೆಟ್ಟಿಕಜೆ ಎನ್ನುವಲ್ಲಿ ಹರಿಯುವ ಹೊಳೆಗೆ ಸೇತುವೆ ನಿರ್ಮಿಸಬೇಕಿದೆ. ಮಳೆಗಾಲದಲ್ಲಿ ಈ ಹೊಳೆ ನೆರೆಯಿಂದ ತುಂಬಿ ಹರಿದು ಸ್ಥಳೀಯರ ಸಂಚಾರಕ್ಕೆ ಅಡಚಣೆ ಯಾಗುತ್ತಿದೆ. ಕಲ್ಮಕಾರು ಅಂಗನವಾಡಿ, ಪ್ರಾಥಮಿಕ ಶಾಲೆ, ಇತರೆಡೆಯ ಶಾಲೆ, ಕಾಲೇಜುಗಳಿಗೆ ತೆರಳುವ ಮಕ್ಕಳು ಹೊಳೆ ದಾಟಿಯೇ ಬರಬೇಕು.

ಬಿದಿರಿನ ತೂಗು ಸೇತುವೆ
ಮಳೆಗಾಲದ ವೇಳೆ ಸ್ಥಳೀಯರು ತಾತ್ಕಾಲಿಕ ಬಿದಿರಿನ ತೂಗುಸೇತುವೆ ನಿರ್ಮಿಸಿಕೊಳ್ಳುತ್ತಾರೆ. ಈ ಬಾರಿ ಮರದ ಸೇತುವೆ ನಿರ್ಮಿಸಲು ನಿವಾಸಿಗಳು ಸಿದ್ಧರಾಗುತ್ತಿದ್ದಾರೆ. ಪ್ರತಿ ಮಳೆಗಾಲದಲ್ಲೂ ತುಂಬಿ ಹರಿಯುವ ಹೊಳೆಯನ್ನು ಅಲುಗಾಡುವ ತೂಗು ಸೇತುವೆಯಲ್ಲಿ ಪುಟ್ಟ ಮಕ್ಕಳು ದಾಟುವಾಗ ಭಯವಾಗುತ್ತದೆ.

ಹೆತ್ತವರು ಪ್ರತಿದಿನ ತಮ್ಮ ಮಕ್ಕಳನ್ನು ಬೆಳಗ್ಗೆ ಸೇತುವೆ ದಾಟಿಸಿ ಕಳುಹಿಸುತ್ತಾರೆ. ಸಂಜೆ ಶಾಲೆ ಬಿಡುವ ಹೊತ್ತಿಗೆ ಮತ್ತೆ ಹೊಳೆ ಬದಿಯಲ್ಲಿ ಬಂದು ನಿಲ್ಲುತ್ತಾರೆ. ಅವರ ಛತ್ರಿ, ಚೀಲಗಳನ್ನು ಪಡೆದು, ಕೈಹಿಡಿದು ಸಂಕವನ್ನು ದಾಟಿಸುತ್ತಾರೆ. ಕಲ್ಮಕಾರು ಶಾಲೆಗೆ ಇರುವಷ್ಟೇ ಇತಿಹಾಸ ಈ ಸಂಕಕ್ಕೂ ಇದೆ. ಇಲ್ಲಿ ತಾತ್ಕಾಲಿಕ ತೂಗುಸೇತುವೆ ನಿರ್ಮಾಣಕ್ಕೂ ಮೊದಲು ಮಕ್ಕಳು ನೆರೆ ನೀರಿನ ಪ್ರಮಾಣದ ಅಂದಾಜಿಲ್ಲದೆ ದಾಟುವ ಪ್ರಯತ್ನ ನಡೆಸಿ ಅಪಾಯಕ್ಕೆ ಸಿಲುಕಿದ ಘಟನೆಗಳು ಸಂಭವಿಸಿದ್ದುಂಟು.

ಹಲವು ಕುಟುಂಬಗಳು ಇಲ್ಲಿವೆ
ಕಲ್ಮಕಾರು – ಅಂಜನಕಜೆ, ಕೊಪ್ಪಡ್ಕ, ಗುಳಿಕಾನ, ಗುಡ್ಡೆಕಾನ, ಪೆರ್ಮುಕಜೆ ಮಧ್ಯೆ ಸಂಪರ್ಕ ಸಾಧಿಸುವ ಈ ಪ್ರದೇಶದಲ್ಲಿ 40ಕ್ಕೂ ಅಧಿಕ ಮನೆಗಳಿವೆ. ಪರಿಶಿಷ್ಟ ಜಾತಿ, ಪಂಗಡಗಳ ಕುಟುಂಬಗಳು ಇಲ್ಲಿವೆ. ಮಲೆಕುಡಿಯ ನಿವಾಸಿಗಳು ಇಲ್ಲಿದ್ದಾರೆ.

ಪಡಿತರ, ಆಹಾರ ಸಾಮಗ್ರಿ, ಅನಾರೋಗ್ಯ ಸಂದರ್ಭದಲ್ಲಿ ಚಿಕಿತ್ಸೆ ಇತ್ಯಾದಿಗಳಿಗೆ ಸೇತುವೆ ಆಶ್ರಯಿಸಿ ತೆರಳಬೇಕು. ಅನಾರೋಗ್ಯ ಪೀಡಿತರನ್ನು ಈ ಸೇತುವೆ ಮೇಲೆ ಕಂಬಳಿಯಲ್ಲಿ ಹೊತ್ತೂಯ್ಯಬೇಕು.
ಪರ್ಯಾಯ ರಸ್ತೆಯಿದ್ದರೂ ಅದಕ್ಕಾಗಿ ಸುತ್ತು ಬಳಸಿ ತೆರಳಬೇಕು. ಅಲ್ಲಿಯೂ ಹೊಳೆ ಸಿಗುತ್ತದೆ. ಅದು ನೆರೆಗೆ ತುಂಬಿ ಹರಿಯುವುದರಿಂದ ಆ ರಸ್ತೆಯೂ ಮಳೆಗಾಲದಲ್ಲಿ ಪ್ರಯೋಜನಕ್ಕೆ ಬರುವು ದಿಲ್ಲ. ಕುಟುಂಬಗಳು ವಾಸವಿರುವ ಈ ಪ್ರದೇಶದ ಸುತ್ತ ಹೊಳೆ ಹರಿಯುತ್ತಿ ರುವುದರಿಂದ ಈ ಊರು ದ್ವೀಪದಂತಿದೆ.

ಸಮಸ್ಯೆ ಪರಿಹಾರವಾಗಿಲ್ಲ
ಜ್ವಲಂತ ಸಮಸ್ಯೆ ಕುರಿತು ಸ್ಥಳೀಯರು ಸಚಿವರು, ಸಂಸದರು, ಶಾಸಕರು ಸಹಿತ ಸ್ಥಳೀಯ ಜನಪ್ರತಿನಿಧಿ ಹಾಗೂ ಅಧಿಕಾರಿ ಹೀಗೆ ಎಲ್ಲರ ಗಮನಕ್ಕೆ ತಂದಿದ್ದರೂ ಪ್ರಯೋಜನ ಶೂನ್ಯ. ಗ್ರಾಮ ಸಭೆಗಳಲ್ಲೂ ಚರ್ಚೆ ನಡೆದರೂ ಪರಿಹಾರ ಕಂಡಿಲ್ಲ. ಇಲ್ಲಿರುವ ತಾತ್ಕಾಲಿಕ ಸೇತುವೆಯೂ ಕೈ ಕೊಟ್ಟರೆ ತ್ರಿಶಂಕು ಸ್ಥಿತಿ. ಮಕ್ಕಳಿಗೆ ಶಾಲೆಗೆ ತೆರಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೆಲವು ಹೆತ್ತವರು ಈ ಸಂಕಷ್ಟ ಬೇಡಪ್ಪ ಅಂತ ತಮ್ಮ ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ, ಹಾಸ್ಟೆಲ್‌ಗ‌ಳಲ್ಲಿ ಬಿಡುತ್ತಿದ್ದಾರೆ.

ತಹಶೀಲ್ದಾರ್‌ ಪ್ರಯತ್ನ
ಇಲ್ಲಿ ಶಾಶ್ವತವಾಗಿ ಸೇತುವೆ ಯೊಂದನ್ನು ನಿರ್ಮಿಸುವಂತೆ 40 ವರ್ಷ ಗಳಿಂದ ಬೇಡಿಕೆ ಇದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಈ ಭಾಗದ ನಾಗರಿಕರು ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದರು. ಈ ವೇಳೆ ಸುಳ್ಯ ತಹಶೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿ, ನಿವಾಸಿಗಳ ಸಮಸ್ಯೆ ಅರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆಗೆ ನಾಗರಿಕರ ಸಮ್ಮುಖ ಸಭೆ ನಡೆಸಿದ್ದರು. ಆದರೆ ಇಲ್ಲಿ ಸೇತುವೆ ನಿರ್ಮಿಸಲು ಬೃಹತ್‌ ಮೊತ್ತದ ಅನುದಾನದ ಆವಶ್ಯಕತೆ ಇರುವುದನ್ನು ಅಧಿಕಾರಿಗಳು ತಿಳಿಸಿದ್ದರು.

ನಿಯೋಗ ತೆರಳುತ್ತೇವೆ
ಮಳೆಗಾಲದಲ್ಲಿ ತಾತ್ಕಾಲಿಕ ಬಿದಿರು ಸೇತುವೆ ನಿರ್ಮಿಸಲು ಪಂಚಾಯತ್‌ ವತಿಯಿಂದ ಹಣ ಒದಗಿಸುತ್ತಿದ್ದೇವೆ. ಶಾಶ್ವತ ಪರಿಹಾರದ ಆವಶ್ಯಕತೆ ಇದೆ. ಇದಕ್ಕೆ ಹೆಚ್ಚಿನ ಅನುದಾನ ಬೇಕಿದೆ. ಶೀಘ್ರ ನಿಯೋಗದ ಮೂಲಕ ಶಾಸಕ, ಸಂಸದರನ್ನು ಭೇಟಿಯಾಗಿ ಸೇತುವೆ ನಿರ್ಮಾಣಕ್ಕೆ ಅನುದಾನ ತರುವ ಪ್ರಯತ್ನ ನಡೆಸುತ್ತೇವೆ.
– ವೀಣಾನಂದ , ಅಧ್ಯಕ್ಷರು, ಕೊಲ್ಲಮೊಗ್ರು ಗ್ರಾ.ಪಂ.

ಬಾಲಕೃಷ್ಣ ಭೀಮಗುಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ