ಮಾಡಾವು ಸಬ್‌ಸ್ಟೇಶನ್‌: ಮುಂದುವರಿಕೆಗೆ “ಹೈ’ ಆದೇಶ

ಕಾಮಗಾರಿ ಆರಂಭವಾಗಿ ಬರೋಬ್ಬರಿ 12 ವರ್ಷ; 115 ಟವರ್‌ ಪೈಕಿ 114 ಪೂರ್ಣ

Team Udayavani, Nov 10, 2019, 4:44 AM IST

ಮಾಡಾವು ವಿದ್ಯುತ್‌ ಸಬ್‌ಸ್ಟೇಶನ್‌ ಕಾಮಗಾರಿ ಪ್ರಗತಿಯಲ್ಲಿದೆ.

ಸವಣೂರು: ಮಾಡಾವು ವಿದ್ಯುತ್‌ ಸಬ್‌ಸ್ಟೇಶನ್‌ ಕಾಮಗಾರಿ ಆರಂಭವಾಗಿ 12 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಶೇ. 90ರಷ್ಟು ಕಾಮಗಾರಿ ಆಗಿದೆ. ಈ ಯೋಜನೆಯಡಿ 25 ಕಿ.ಮೀ. ವ್ಯಾಪ್ತಿಯಲ್ಲಿ 115 ಟವರ್‌ ನಿರ್ಮಿಸಬೇಕಾಗಿದ್ದು, 114 ಟವರ್‌ ನಿರ್ಮಾಣವಾಗಿದೆ.

ಹೈಕೋರ್ಟ್‌ನಲ್ಲಿ ಪ್ರಕರಣ ವಿದ್ದುದರಿಂದ 1 ಟವರ್‌ ನಿರ್ಮಾಣ ಕಾಮಗಾರಿ ಬಾಕಿ ಆಗಿತ್ತು. ಈಗ ಕಾಮಗಾರಿ ಮುಂದುವರಿಸಲು ಕೊರ್ಟ್‌ ಆದೇಶ ಹೊರಡಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಆಶಾಭಾವ ಜನತೆಯಲ್ಲಿದೆ.

ಸ್ಟೇಶನ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಲೈನ್‌ ಎಳೆಯುವಲ್ಲಿ ಟವರ್‌ ನಿರ್ಮಾಣವಾಗಿದೆ. ಆದರೆ ಒಂದೇ ಒಂದು ಟವರ್‌ ನಿರ್ಮಾಣಕ್ಕೆ ಜಾಗದ ಮಾಲಕರ ತಕರಾರು ಇದ್ದ ಕಾರಣ ಸಬ್‌ಸ್ಟೇಶನ್‌ ಉದ್ಘಾಟನೆಗೂ ಅಡ್ಡಿಯಾಗಿತ್ತು.

25 ಕಿ.ಮೀ. ವ್ಯಾಪ್ತಿ 115 ಟವರ್‌
ಬಂಟ್ವಾಳ ನೆಟ್ಟಣಿಗೆ ಮುಟ್ನೂರಿನಿಂದ 110 ಕೆ.ವಿ. ವಿದ್ಯುತ್‌ ಲೈನ್‌ ಎಳೆಯುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 25 ಕಿ.ಮೀ.ಗೆ 114 ಬೃಹತ್‌ ಗಾತ್ರದ ಟವರ್‌ಗಳ ನಿರ್ಮಾಣ ಮಾಡಲಾಗಿದೆ. ಒಂದೊಂದು ಟವರ್‌ ಕನಿಷ್ಠ 5 ಸೆಂಟ್ಸ್‌ ಭೂಮಿಯ ವಿಸ್ತಾರವನ್ನು ಹೊಂದಿದೆ. 12 ವರ್ಷಗಳ ಹಿಂದೆ ಕಾಮಗಾರಿ ಆರಂಭಗೊಂಡಿದ್ದು, ಪ್ರಾರಂಭದಲ್ಲಿ ಕೃಷಿಕರಿಂದ ಮತ್ತು ಖಾಸಗಿ ಜಾಗದ ಮಾಲಕರಿಂದ ಟವರ್‌ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿತ್ತು.

ಪರಿಹಾರ ಪಾವತಿ
ಪರಿಹಾರ ಕೊಡದೆ ಜಾಗ ಬಿಟ್ಟು ಕೊಡಲು ಒಪ್ಪದ ಕಾರಣ ಟವರ್‌ ಹಾಗೂ ಲೈನ್‌ ಎಳೆಯುವಲ್ಲಿ ಭೂಮಿ ಕಳೆದುಕೊಂಡವರಿಗೆ ಕೆಪಿಟಿಸಿಎಲ್‌ನಿಂದ ಪರಿಹಾರವನ್ನು ಪಾವತಿಸಿದ ಬಳಿಕ ಕಾಮಗಾರಿ ಚುರುಕುಗೊಂಡಿತ್ತು. ನೆಟ್ಟಣಿಗೆ ಮುಟ್ನೂರಿನಿಂದ ಮಾಡಾವು ತನಕ ಟವರ್‌ ಮತ್ತು ಲೈನ್‌ ಎಳೆಯುವ ಕಾಮಗಾರಿ ನಡೆಸಲಾಗಿದೆ.

ಸಮಸ್ಯೆಯಾದ ಏಕೈಕ ಟವರ್‌
ಆರ್ಯಾಪು ಗ್ರಾಮದ ಕೈಕಾರ ಬಳಿ ತನ್ನ ಜಾಗದಲ್ಲಿ ಟವರ್‌ ನಿರ್ಮಾಣಕ್ಕೆ ಖಾಸಗಿ ವ್ಯಕ್ತಿಯೋರ್ವರು ಅಡ್ಡಿಪಡಿಸಿದ ಕಾರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುವಂತಾಗಿದೆ. ಸರಕಾರದಿಂದ ಪರಿಹಾರ ನೀಡಿದರೂ, ಜಾಗದ ಮಾಲಕರು ಟವರ್‌ ನಿರ್ಮಾಣಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಅಲ್ಲದೆ ಈ ಕುರಿತು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಅಲ್ಲಿಯೂ ಭೂಸ್ವಾಧೀನ ಪರ ಆದೇಶ ಬಂದಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್‌ ಕೆಪಿಟಿಸಿಎಲ್‌ ಪರವಾಗಿ ತೀರ್ಪು ನೀಡಿದ್ದು, ಜಮೀನುದಾರರಿಗೆ ಪರಿಹಾರ ನೀಡಿ ಕೆಲಸ ಮುಂದುವರಿಸಲು ಸೂಚಿಸಿದೆ.

ಟವರ್‌ ನಿರ್ಮಾಣದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವ ಖಾಸಗಿ ವ್ಯಕ್ತಿ ಯಾವುದೇ ಕಾರಣಕ್ಕೂ ಟವರ್‌ ನಿರ್ಮಾಣ ಮಾಡಲು ಒಪ್ಪಿಗೆ ನೀಡದಿರುವ ಕಾರಣ ಇಡೀ ಯೋಜನೆಯೇ ಅರ್ಧಕ್ಕೆ ನಿಲ್ಲುವ ಆತಂಕ ಉಂಟಾಗಿತ್ತು. ಈಗ ಹೈಕೋರ್ಟ್‌ ಆದೇಶದಿಂದ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ಮೂಡಿದೆ.

ಇನ್ನು 20 ದಿನಗಳಲ್ಲಿ ಕಾಮಗಾರಿ ಪೂರ್ಣ?
ಮಾಡಾವಿನಲ್ಲಿ ಸ್ಟೇಶನ್‌ ಕಾಮಗಾರಿ ಮುಂದಿನ 20 ದಿನಗಳಲ್ಲಿ ಪೂರ್ಣ ಗೊಳ್ಳಲಿದೆ. ಸ್ಟೇಶನ್‌ ಕಾಮಗಾರಿ ಪೂರ್ಣ ಗೊಂಡ ಮಾತ್ರಕ್ಕೆ ವಿದ್ಯುತ್‌ ಸರಬ ರಾಜು ಮಾಡಲು ಸಾಧ್ಯವಿರಲಿಲ್ಲ. ಕೈಕಾರದಲ್ಲಿ ಟವರ್‌ ನಿರ್ಮಾಣವಾಗದೆ ಸ್ಟೇಶನ್‌ ಲೋಕಾರ್ಪಣೆಯೂ ಮಾಡು ವಂತಿಲ್ಲ. ಕೈಕಾರದಲ್ಲಿ ಇಲಾಖೆಯ ಪರವಾಗಿ ನ್ಯಾಯಾಲಯ ತೀರ್ಪು ನೀಡಿ ಟವರ್‌ ನಿರ್ಮಾಣಕ್ಕೆ ಹಸುರು ನಿಶಾನೆ ತೋರಿ ರುವುದರಿಂದ ಡಿಸೆಂಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣವಾಗುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಸುಳ್ಯ ತಾಲೂಕಿಗೆ ಸರಬರಾಜು
ಮಾಡಾವು ಸಬ್‌ ಸ್ಟೇಶನ್‌ ನಿರ್ಮಾಣವಾದಲ್ಲಿ ಸುಳ್ಯ ತಾಲೂಕಿನ ಜನತೆಗೆ ಅದರ ಪ್ರಯೋಜನ ಸಿಗಲಿದೆ. ವಿದ್ಯುತ್‌ ಇದ್ದರೂ ಅದನ್ನು ಕೊಡಲಾಗದ ಸ್ಥಿತಿಯಲ್ಲಿ ಮೆಸ್ಕಾಂ ಇದ್ದು, ಮಾಡಾವು ಕೇಂದ್ರ ಲೋಕಾರ್ಪಣೆಗೊಂಡಲ್ಲಿ ಕುಂಬ್ರದಲ್ಲಿರುವ ಸಬ್‌ ಸ್ಟೇಶನ್‌ ಮೂಲಕ ಸ್ಥಳೀಯವಾಗಿ ವಿದ್ಯುತ್‌ ವಿತರಣೆ ಮಾಡುವಲ್ಲಿ ಸಹಕಾರಿಯಾಗಲಿದೆ. ಇದರಿಂದ ದಿನದ 24 ಗಂಟೆಯೂ ವಿದ್ಯುತ್‌ ಸರಬರಾಜಿಗೆ ಸಹಕಾರಿಯಾಗಲಿದೆ. ಮಾಡಾವು ಬಳಿಕ ಅಲ್ಲಿಂದ ಕಡಬ ತಾಲೂಕಿನ ಆಲಂಕಾರಿಗೂ ಲೈನ್‌ ಎಳೆಯುವ ಮತ್ತು ಟವರ್‌ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದು ಸುಳ್ಯ ಶಾಸಕ ಅಂಗಾರ ಅವರು ಕೆಲವು ತಿಂಗಳ ಹಿಂದೆಯೇ ಮಾಹಿತಿ ನೀಡಿದ್ದರು.

ಜನಸಂಪರ್ಕ ಸಭೆಯಲ್ಲೂ ಪ್ರತಿಧ್ವನಿ
ಮಾಡಾವು ಸಬ್‌ ಸ್ಟೇಶನ್‌ ಕಾಮಗಾರಿ ವಿಳಂಬದ ಕುರಿತು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಉಪಸ್ಥಿತಿಯಲ್ಲಿ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ವಿಷಯ ಪ್ರಸ್ತಾವಿಸಿದ್ದರು.

 ಅಡ್ಡಿ ನಿವಾರಣೆ
ಒಂದು ಟವರ್‌ ನಿರ್ಮಾಣದ ಕಾಮಗಾರಿಯ ಕುರಿತಾಗಿ ನ್ಯಾಯಾಲಯದಲ್ಲಿ ಪ್ರಕರಣ ವಿದ್ದರಿಂದ ಬಾಕಿ ಆಗಿತ್ತು. ಈಗ ಹೈಕೋರ್ಟ್‌ ಕಾಮಗಾರಿ ಮುಂದುವರಿಸಲು ಆದೇಶ ನೀಡಿದ್ದು, ಅಡ್ಡಿ ನಿರಾಣೆಯಾಗಿದ್ದರಿಂದ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು.
– ಗಂಗಾಧರ್‌, ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಕೆಪಿಟಿಸಿಎಲ್‌

ಅಧಿಕಾರಿಗಳಿಗೆ ಸೂಚಿಸಿರುವೆ
ಮಾಡಾವು ಸಬ್‌ಸ್ಟೇಶನ್‌ ಕಾಮಗಾರಿಗೆ ಸಂಬಂಧಿಸಿದಂತೆ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು ಯೋಜನೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
– ಸಂಜೀವ ಮಠಂದೂರು ಪುತ್ತೂರು ಶಾಸಕರು

ಪ್ರವೀಣ್‌ ಚೆನ್ನಾವರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ