ಮನೆಗಳಲ್ಲಿ ಮಳೆಕೊಯ್ಲು, ಜಲ ಮರುಪೂರಣ

 ಕುಂತೂರು ಎರ್ಮಾಳದ ಶಿಕ್ಷಕ ಸುಬ್ರಹ್ಮಣ್ಯ ಅವರ ಮನೆಯಲ್ಲಿ ಅನುಷ್ಠಾನ

Team Udayavani, Jul 14, 2019, 5:00 AM IST

ಸವಣೂರು: ಕಳೆದ ಬೇಸಗೆಯ ಬಿಸಿಲಿನ ತಾಪ, ನೀರಿನ ಬವಣೆ ನಮ್ಮ ಕಣ್ಣ ಮುಂದೆ ಇರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಅಭಾವ ದೂರಮಾಡಲು ಈಗಿಂದಲೇ ಮನೆ ಮನೆಗಳಲ್ಲಿ ಮಳೆಕೊಯ್ಲು ಘಟಕ ಅಥವಾ ಜಲ ಮರುಪೂರಣ ಘಟಕ ನಿರ್ಮಾಣಕ್ಕೆ ಮುಂದಾಗಬೇಕಿದೆ.

ಹಲವು ವರ್ಷಗಳಿಂದ ಕುಂತೂರು ಗ್ರಾಮದ ಎರ್ಮಾಳದ ಶಿಕ್ಷಕ ಸುಬ್ರಹ್ಮಣ್ಯ ಅವರು ತಮ್ಮ ಮನೆಯಲ್ಲಿ ಮಳೆಕೊಯ್ಲು ಘಟಕವನ್ನು ನಿರ್ಮಿಸಿ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತನ್ನ ಮನೆಯ ಬಾವಿಗೆ ಇಂಗಿಸುತ್ತಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಭವಿಷ್ಯಕ್ಕೆ ಪ್ರಯೋಜನ
ಮಳೆ ಕೊಯ್ಲು, ಜಲ ಮರುಪೂರಣ ಘಟಕಗಳಿಂದ ಭೂಮಿಯೊಳಗೆ ಇಂಗಿದ ನೀರು ಬ್ಯಾಂಕಿನಲ್ಲಿಟ್ಟ ನಿರಖು ಠೇವಣಿಯಂತೆ ಎನ್ನುತ್ತಾರೆ ಹಿರಿಯರು. ಹಿಂದೆಲ್ಲ ಎಂತಹ ಬೇಸಗೆಯಲ್ಲೂ ಕುಡಿಯುವ ನೀರಿಗೆ, ಕೃಷಿಗೆ ಅಷ್ಟೊಂದು ತಾಪತ್ರಯ ಇರಲಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಮಳೆಗಾಲದಲ್ಲಿ ಸುರಿಯುವ ಮಳೆ ನೀರು ಕೆರೆ, ಬಾವಿ, ಮಣ್ಣಿನ ಕಟ್ಟಗಳಲ್ಲಿ ಶೇಖರಣೆಯಾಗುತ್ತಿತ್ತು.

ಆದರೆ ಈಗ ಹೆಚ್ಚಿನ ಕಡೆಗಳಲ್ಲಿ ಕೆರೆ, ಬಾವಿ, ಮಣ್ಣಿನ ಕಟ್ಟಗಳು ಕಾಣಸಿಗುವುದೇ ಅಪರೂಪ. ಮಳೆ ಕೊಯ್ಲು, ಜಲ ಮರುಪೂರಣ ಘಟಕಗಳಿಂದ ನಮ್ಮ ಅಂತರ್ಜಲ ಮಟ್ಟ ಹೆಚ್ಚಳಗೊಂಡು ಭವಿಷ್ಯದ ದಿನಗಳಿಗೆ ಪ್ರಯೋಜನವಾಗಲಿದೆ. ಸ್ವಯಂ ಪ್ರೇರಣೆಯಿಂದ ಅಳವಡಿಕೆ ಮನೆಯ ಮಳೆ ಕೊಯ್ಲು ಘಟಕದಿಂದ ಕೊಳವೆ ಬಾವಿಯಲ್ಲಿ ಬೇಸಗೆಯಲ್ಲೂ ನೀರಿನ ಮಟ್ಟ ಕುಸಿತವಾಗಿಲ್ಲ. ಮಳೆ ಕೊಯ್ಲಿನ ಮೂಲಕ ಮಳೆ ನೀರನ್ನು ಬಾವಿಗೆ ಇಂಗಿಸಿದ್ದರಿಂದ ಬಿರು ಬೇಸಗೆಯಲ್ಲೂ ನೀರು ಸಿಗುತ್ತದೆ. ನಾನು ಸ್ವಯಂ ಪ್ರೇರಣೆಯಿಂದ ಈ ಕಾರ್ಯ ಮಾಡಿದ್ದು, ಮುಂದಿನ ದಿನಗಳಲ್ಲಿ ನೀರಿಂಗಿಸುವಿಕೆ ಅನಿವಾರ್ಯವಾಗಲಿದೆ ಎನ್ನುತ್ತಾರೆ ಶಿಕ್ಷಕ ಸುಬ್ರಹ್ಮಣ್ಯ.

ನೀರಿಂಗಿಸುವಿಕೆ ಕಡ್ಡಾಯವಾಗಲಿ
ಮನೆ ಮನೆಗಳಲ್ಲಿ ನೀರಿಂಗಿಸುವಿಕೆಯನ್ನು ಸ್ಥಳೀಯಾಡಳಿತಗಳು ಕಡ್ಡಾಯ ಮಾಡ ಬೇಕಿದೆ. ಮಳೆ ಕೊಯ್ಲು ಅಳವಡಿಸುವವರಿಗೆ ಪ್ರೋತ್ಸಾಹ ನೀಡುವುದು ಆವಶ್ಯ. ಮನೆಗಳಲ್ಲಿ ಮಳೆ ಕೊಯ್ಲು ಘಟಕ ನಿರ್ಮಾಣಕ್ಕೆ 3ರಿಂದ 5 ಸಾವಿರ ರೂ.ಗಳ ವರೆಗೆ ವೆಚ್ಚವಾಗಬಹುದು. ಕೊಳವೆ ಬಾವಿಗಳಿಗೆ ಜಲ ಮರುಪೂರಣ ಘಟಕ ನಿರ್ಮಾಣಕ್ಕೆ ಕನಿಷ್ಠ 20 ಸಾವಿರ ರೂ. ವೆಚ್ಚವಾಗಬಹುದು. ಒಟ್ಟಿನಲ್ಲಿ ಮನೆ ಮನೆಯಲ್ಲಿ ಇಂತಹ ಯೋಜನೆಯನ್ನು ಅನುಷ್ಠಾನಕ್ಕೆ ತಂದರೆ ಗ್ರಾಮದಲ್ಲಿ ಜಲಸಮೃದ್ಧಿ ಸಾಧ್ಯ.

ಉದ್ಯೋಗ ಖಾತರಿಯಲ್ಲಿದೆ ಅವಕಾಶ
ಕೇಂದ್ರ ಸರಕಾರದ ಉದ್ಯೋಗ ಖಾತರಿ ಯೋಜನೆಯ ಮೂಲಕ ಕೊಳವೆ ಬಾವಿಗಳಿಗೆ ಜಲಮರುಪೂರಣ ಘಟಕ ನಿರ್ಮಾಣಕ್ಕೆ ಅವಕಾಶವಿದೆ. ಗ್ರಾ.ಪಂ.ನಲ್ಲಿ ಉದ್ಯೋಗ ಚೀಟಿ ಮಾಡಿಸಿಕೊಂಡು ಯೋಜನೆಯ ಕುರಿತಾದ ಕೆಲವು ದಾಖಲೆಗಳನ್ನು ನೀಡಿ ತಮ್ಮ ಮನೆಗಳಲ್ಲೂ ಈ ಘಟಕವನ್ನು ಆರಂಭಿಸಬಹುದು.

ಮನಸು ಬೇಕಷ್ಟೇ
ನೀರಿನ ಸಂರಕ್ಷಣೆಗೆ ಭಗೀರಥ ಪ್ರಯತ್ನವೇನೂ ಆಗಬೇಕೆಂದಿಲ್ಲ. ನೀರು ಸಂರಕ್ಷಣೆ ಮಾಡುವ ಮನಸ್ಸು ಇದ್ದರೆ ಸಾಕು. ಪೈಪ್‌ ಅಳವಡಿಸಿ ಸುಲಭ ವಿಧಾನದ ಮೂಲಕ ಛಾವಣಿ ನೀರನ್ನು ನೇರವಾಗಿ ಬಾವಿಗೆ ಇಳಿಸಬಹುದು. ತನ್ನ ಮನೆಯಲ್ಲಿ ಹಲವು ವರ್ಷ ಗಳಿಂದ ಮಳೆ ಕೊಯ್ಲು ಮಾಡುತ್ತಿದ್ದೇನೆ. ಇದರಿಂದ ಸಾಕಷ್ಟು ಪ್ರಯೋಜನವಾಗಿದೆ ಎಂದು ಕುಂತೂರು ಗ್ರಾಮದ ಎರ್ಮಾಳದಲ್ಲಿ ಶಿಕ್ಷಕ ಸುಬ್ರಹ್ಮಣ್ಯ ಅವರ ಅಭಿಮತ.

ಭವಿಷ್ಯದ ದೃಷ್ಟಿಯಿಂದ ಅನಿವಾರ್ಯ
ಭವಿಷ್ಯದ ಹಿತದೃಷ್ಟಿಯಿಂದ ಮನೆ ಮನೆಯಲ್ಲಿ ನೀರಿಂಗಿಸುವಿಕೆಯನ್ನು ಗ್ರಾ.ಪಂ. ಕಡ್ಡಾಯಗೊಳಿಸದಿದ್ದರೂ ನಾಗರಿಕರು ಸ್ವಯಂ ಪ್ರೇರಣೆಯಿಂದ ಮಳೆ ಕೊಯ್ಲು, ಜಲ ಮರುಪೂರಣ ಘಟಕಗಳನ್ನು ನಿರ್ಮಿಸಬೇಕು. ಇದರಿಂದ ಸಾಕಷ್ಟು ಪ್ರಯೋಜನವಾಗುತ್ತದೆ ಎಂಬುದನ್ನು ನಾನು ಕಂಡಿದ್ದೇನೆ. ಯುವಜನತೆ ಸಸ್ಯ ಸಂರಕ್ಷಣೆ ಹಾಗೂ ನೀರಿಂಗಿಸುವಿಕೆ ಕಾರ್ಯವನ್ನು ಮುುಂಚೂಣಿಯಲ್ಲಿ ನಿಂತು ಮಾಡಬೇಕಿದೆ ಎನ್ನುತ್ತಾರೆ ಸವಣೂರು ಗ್ರಾ.ಪಂ. ಸದಸ್ಯ ಗಿರಿಶಂಕರ ಸುಲಾಯ.

ಪ್ರವೀಣ್‌ ಚೆನ್ನಾವರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ