ರಾಜ್ಯಮಟ್ಟದ ತನಿಖೆ: ತಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ

Team Udayavani, Aug 22, 2019, 5:00 AM IST

ಬೆಳ್ತಂಗಡಿ: ತಾ| ಸಾರ್ವಜನಿಕ ಆಸ್ಪತ್ರೆ ಲೆಕ್ಕಪತ್ರದಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದು, ಜತೆಗೆ ಆಸ್ಪತ್ರೆಯಲ್ಲಿ ಔಷಧ ಸ್ಟಾಕ್‌ ಇದ್ದರೂ ರೋಗಿಗಳನ್ನು ಔಷಧಕ್ಕಾಗಿ ಹೊರಗಡೆ ಕಳುಹಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕುರಿತು ರಾಜ್ಯ ಮಟ್ಟದಲ್ಲಿ ತನಿಖೆ ನಡೆಸಲು ಬೆಳ್ತಂಗಡಿ ತಾ.ಪಂ. ನಿರ್ಣಯಿಸಿದೆ.

ಬುಧವಾರ ಇಲ್ಲಿನ ತಾ.ಪಂ.ಸಭಾಂಗಣ ದಲ್ಲಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆ ಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮೇಲಿನ ನಿರ್ಣಯ ಕೈಗೊಳ್ಳಲಾಯಿತು. ಲೆಕ್ಕಪತ್ರದ ಅವ್ಯವಹಾರ ಹಾಗೂ ಔಷಧಗಳನ್ನು ಹೊರಗಿನಿಂದ ಖರೀದಿಸುವ ಕುರಿತು ಸದಸ್ಯ ಸುಧಾಕರ್‌ ಸಭೆಯ ಗಮನಕ್ಕೆ ತಂದರು. ಈ ಕುರಿತು ತನ್ನ ಬಳಿ ದಾಖಲೆ ಇದೆ, ಜತೆಗೆ ತಪ್ಪು ಮಾಡಿದವರು ತಪ್ಪಿಸಿಕೊಳ್ಳುವ ರೀತಿಯಲ್ಲಿ ದಾಖಲೆಯನ್ನೂ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.

ಆಸ್ಪತ್ರೆಯಲ್ಲಿ ಔಷಧಗಳು ಸ್ಟಾಕ್‌ ಇದ್ದರೂ ಇಲ್ಲ ಎಂದು ರೋಗಿಗಳನ್ನು ಹೊರಗಡೆ ಕಳುಹಿಸಲಾಗುತ್ತಿದೆ. ಇರುವ ಔಷಧಗಳನ್ನು ಎಕ್ಸ್‌ಫೈರಿ ಮಾಡಿ ಸ್ಟಾಕ್‌ ಇಟ್ಟು ಕೊಂಡಿ ದ್ದಾರೆ. ಅದನ್ನು ರಿಟರ್ನ್ ಮಾಡಿದರೆ ಇವರ ಅವ್ಯವಹಾರ ಬಯಲಿಗೆ ಬರುತ್ತದೆ. ಜೆನೆರಿಕ್‌ ಕೇಂದ್ರದಿಂದ ಔಷಧ ಖರೀದಿಗೆ ಅವಕಾಶವಿದ್ದರೂ ಅದನ್ನು ಮಾಡುತ್ತಿಲ್ಲ ಎಂದು ಹೆಚ್ಚಿನ ಸದಸ್ಯರು ಆರೋಪಿಸಿದರು.

ನನಗೂ ಅನುಭವವಾಗಿದೆ
ಆಸ್ಪತ್ರೆಯ ಕಾರ್ಯವೈಖರಿ ಬಗ್ಗೆ ಪರಿಶೀಲನೆ ಮಾಡಲು ಆಸ್ಪತ್ರೆಗೆ ಹೋಗಿ ಔಷಧ ಕೇಳಿದಾಗ, ನನ್ನನ್ನೂ ಹೊರಗಡೆ ಕಳುಹಿಸಿದ್ದಾರೆ ಎಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕೆ.ಇ. ಜಯರಾಮ್‌ ಸಭೆಗೆ ತಿಳಿಸಿದರು. ಜತೆಗೆ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸದೇ ಇರುವ ಕುರಿತು ಆಸ್ಪತ್ರೆ ಸಿಬಂದಿ ಯನ್ನು ತರಾಟೆಗೆ ತೆಗೆದುಕೊಂಡು, ಬಳಿಕ ಈ ಕುರಿತು ತನಿಖೆ ನಡೆಸಲು ರಾಜ್ಯಮಟ್ಟಕ್ಕೆ ಬರೆಯಲು ತೀರ್ಮಾನ ಕೈಗೊಳ್ಳಲಾಯಿತು. ಆ. 8ರಿಂದ 21ರ ವರೆಗೆ ರಜೆ ಹಾಕಿರುವ ಸರಕಾರಿ ವೈದ್ಯರ ಕುರಿತು ಮಾಹಿತಿ ನೀಡುವಂತೆ ಅಧ್ಯಕ್ಷೆ ದಿವ್ಯಜ್ಯೋತಿ ತಿಳಿಸಿದರು.

ಕೊಕ್ಕಡ ಆಸ್ಪತ್ರೆಗೆ ವಾರಕ್ಕೆ 2 ದಿನ ಮಾತ್ರ ವೈದ್ಯರು ಆಗಮಿಸುತ್ತಿದ್ದು, ಅವರು ವಾರಕ್ಕೆ 4 ದಿನ ಬರಬೇಕು ಎಂದು ಸದಸ್ಯ ಲಕ್ಷ್ಮೀನಾರಾಯಣ ಆಗ್ರಹಿಸಿದಾಗ, ಈ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಹೆಲ್ತ್‌ ಇನ್‌ಸ್ಪೆಕ್ಟರ್‌ ಗಿರೀಶ್‌ ತಿಳಿಸಿದರು. ಗೊಕಳ್ಳತನ ಪ್ರಕರಣ ದಲ್ಲಿ ಗೋವುಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಸರಕಾರಿ ಯೋಜನೆಯಲ್ಲಿ ಗೋವುಗಳನ್ನು ನೀಡುವ ಕುರಿತು ಸದಸ್ಯ ಸುಧೀರ್‌ ಸುವರ್ಣ ಅವರು ಸಭೆಯಲ್ಲಿ ಮನವಿ ಮಾಡಿದರು.

ಹೆಚ್ಚುವರಿ ಸಹಾಯಕಿಗೆ ಬೇಡಿಕೆ
ಬರೆಂಗಾಯ ಅಂಗನವಾಡಿ ಕೇಂದ್ರ ದಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿದ್ದು, ಹೆಚ್ಚುವರಿ ಸಹಾಯಕಿಯನ್ನು ನೀಡಲು ಅವಕಾಶ ಇದೆಯೇ ಎಂದು ಸದಸ್ಯೆ ಸುಶೀಲಾ ಪ್ರಶ್ನಿಸಿದಾಗ, ಅದಕ್ಕೆ ಅವಕಾಶವಿಲ್ಲ ಎಂದು ಸಿಡಿಪಿಒ ಪ್ರೀಯಾ ಆ್ಯಗ್ನೇಸ್‌ ತಿಳಿಸಿದರು.

ಬಸವ ವಸತಿ ಯೋಜನೆ ಅನುದಾನದ ಕುರಿತು ಸದಸ್ಯೆ ವಸಂತಿ ಮಾಹಿತಿ ಕೇಳಿದಾಗ, ಆಧಾರ್‌ ಕಾರ್ಡ್‌ ಸಮರ್ಪಕವಾಗಿರುವ ಫಲಾನುಭವಿಗಳಿಗೆ ಹಣ ಬಿಡುಗಡೆ ಗೊಂಡಿದೆ ಎಂದು ಶ್ರೀಧರ್‌ ತಿಳಿಸಿದರು.

ಮಚ್ಚಿನ ಆರೋಗ್ಯ ಕೇಂದ್ರದ ಜಾಗ ಒತ್ತು ವರಿ ಹಿನ್ನೆಲೆಯಲ್ಲಿ ಬೇಲಿ ಹಾಕಲು ಖಾತರಿ ಯೋಜನೆಯಲ್ಲಿ ಅವಕಾಶವಿದೆಯೇ ಎಂದು ಸದಸ್ಯೆ ವಸಂತಿ ಪ್ರಶ್ನಿಸಿದಾಗ, ಅವಕಾಶ ಇಲ್ಲ ಎಂದು ಇಒ ತಿಳಿಸಿ ದರು. ತಾ.ಪಂ.ನ ಹಳೆ ಕಟ್ಟಡದ ಗುಜರಿ ಸಾಮಗ್ರಿಗಳ ಮಾರಾಟಕ್ಕೆ ಶೀಘ್ರ ಏಲಂ ಪ್ರಕಟನೆ ನೀಡಲಾಗುವುದು ಎಂದು ತಿಳಿಸಲಾಯಿತು.
ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್‌, ಸದಸ್ಯರು ಉಪಸ್ಥಿತರಿದ್ದರು. ಜಯಾನಂದ ಲಾೖಲ ಸ್ವಾಗತಿಸಿ, ಗಣೇಶ್‌ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಮೇಲೆಯೇ ಎಫ್‌ಐಆರ್‌ !
ಶಿರ್ಲಾಲು ಭಾಗದ ಅಪಾಯಕಾರಿ ಮರವನ್ನು ಪೂರ್ಣ ತೆರವು ಗೊಳಿಸದೇ ಇರುವ ವಿಚಾರವನ್ನು ಸದಸ್ಯೆ ಜಯಶೀಲಾ ಪ್ರಸ್ತಾವಿಸಿ ದಾಗ, ಮೆಸ್ಕಾಂ ಎಇಇ ಶಿವಶಂಕರ್‌, ಮರವನ್ನು ತೆರವುಗೊಳಿಸುವುದಾದರೆ ನಾವು ಲೈನ್‌ ಕ್ಲೀಯರ್‌ ಮಾಡಿ ಕೊಡುತ್ತೇವೆ. ಆದರೆ ಮರವನ್ನು ತೆರವುಗೊಳಿಸುವ ಗೋಜಿಗೆ ಹೋಗುವುದಿಲ್ಲ. ಇತ್ತೀಚೆಗೆ ಮರದ ರೆಂಬೆಯೊಂದನ್ನು ತೆರವು ಗೊಳಿಸಿದರ ವಿರುದ್ಧ ಅರಣ್ಯ ಇಲಾಖೆಯವರು ಮೆಸ್ಕಾಂ ಸಿಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ ಎಂದರು.

ಈ ಕುರಿತು ವೇಣೂರು ಆರ್‌ಎಫ್‌ಒ ಬಳಿ ಪ್ರಶ್ನಿಸಿದಾಗ, ಗುರುತಿಸಿರುವ ರೆಂಬೆ ಬಿಟ್ಟು ಬೇರೆ ರೆಂಬೆ ಕಡಿದರೆ ಅದರ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಸಿಎಫ್‌ ಅವರಿಂದ ನಮಗೆ ನಿರ್ದೇಶನ ಬಂದಿದೆ ಎಂದು ತಿಳಿಸಿದರು. ಎಫ್‌ಐಆರ್‌ ಕಾಪಿ ತನಗೆ ಮುಟ್ಟಿಸುವಂತೆ ಇಒ ಅವರು ಮೆಸ್ಕಾಂ ಎಇಇಗೆ ತಿಳಿಸಿದರು.

ಹೆಚ್ಚಿನ ಅನುದಾನ ನೀಡಿ
ಕಳೆದ ಕೆಲವು ದಿನಗಳ ಹಿಂದೆ ಭೀಕರ ಮಳೆಗೆ ಚಾರ್ಮಾಡಿ ಗ್ರಾಮ ತತ್ತರಿಸಿ ಹೋಗಿದ್ದು, ಅದಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸದಸ್ಯ ಕೊರಗಪ್ಪ ಗೌಡ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಜಯರಾಮ್‌ ಆಲಂಗಾಯಿ, ತಮ್ಮ ವ್ಯಾಪ್ತಿಯಲ್ಲೂ ಹೆಚ್ಚಿನ ಅನಾಹುತ ಸಂಭವಿಸಿದ್ದು, ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದರು. ಕೃಷಿ ಪಂಪ್‌ಸೆಟ್‌ ಸಹಿ ಎಲ್ಲ ರೀತಿಯ ಹಾನಿಗೂ ಹೆಚ್ಚಿನ ಅನುದಾನಕ್ಕೆ ಸರಕಾರಕ್ಕೆ ಬರೆಯಲು ತೀರ್ಮಾನ ಕೈಗೊಳ್ಳಲು ಸದಸ್ಯ ಶಶಿಧರ್‌ ಆಗ್ರಹಿಸಿದರು.

ಆಹಾರ ನಿರೀಕ್ಷಕರ ವಿರುದ್ಧ ಇಒ ಗರಂ
ನ್ಯಾಯ ಬೆಲೆ ಅಂಗಡಿಗಳಿಗೆ ಪಡಿತರ ವಿತರಣೆ ಮಾಡುವ ಕುರಿತು ಗ್ರಾ.ಪಂ. ಮಟ್ಟ ಹಾಗೂ ತಾ| ಮಟ್ಟದಲ್ಲಿ ಸಭೆ ಮಾಡಬೇಕು ಎಂಬ ನಿಯಮವಿದೆ. ಆದರೆ ತಾವು ಎಷ್ಟು ಸಭೆ ಮಾಡಿದ್ದೀರಿ ಎಂಬುದರ ಕುರಿತು ದಾಖಲೆ ನೀಡಿ ಎಂದು ಇಒ ಅವರು ಆಹಾರ ನಿರೀಕ್ಷಕರನ್ನು ಪ್ರಶ್ನಿಸಿದರು. ಈ ಸಂದರ್ಭ ಆಹಾರ ನಿರೀಕ್ಷಕರ ಉತ್ತರಕ್ಕೆ ಗರಂ ಆದ ಇಒ, ಜವಾಬ್ದಾರಿಯಿಂದ ನುಣುಚಿ ಕೊಳ್ಳುವ ಉತ್ತರ ನಮಗೆ ಬೇಡ ಎಂದರು. ಸದಸ್ಯರಾದ ಶಶಿಧರ್‌ ಕಲ್ಮಂಜ,ವಿಜಯ ಗೌಡ ಅವರು ಗ್ರಾ.ಪಂ.ಮಟ್ಟದಲ್ಲಿ ಸಭೆಯೇ ನಡೆದಿಲ್ಲ ಎಂದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ