ಸುಬ್ರಹ್ಮಣ್ಯ: ಇಸ್ತ್ರಿ ಹಾಕಲು ಗ್ಯಾಸ್‌ ಸಿಲಿಂಡರ್‌ ಮೊರೆ

Team Udayavani, Nov 23, 2019, 5:46 AM IST

ಸುಬ್ರಹ್ಮಣ್ಯ: ಧಾರ್ಮಿಕ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಿತ್ಯವೂ ಜನಸಂದಣಿ ಹೆಚ್ಚುತ್ತದೆ. ಇಲ್ಲಿ ದಿನದ 24 ಗಂಟೆ ವಿದ್ಯುತ್‌, ಮೊಬೈಲ್‌ ಸಿಗ್ನಲ್‌ ಇರಬೇಕಿತ್ತು. ಆದರಿಲ್ಲಿ ಬಹುತೇಕ ಸಮಯ ವಿದ್ಯುತ್‌ ಇರುವುದಿಲ್ಲ. ಮೊಬೈಲ್‌ ಸಿಗ್ನಲ್‌ಗ‌ಳು ಇರುವುದಿಲ್ಲ. ವಿದ್ಯುತ್‌ ಸಮಸ್ಯೆ ನಿವಾರಿಸಲೆಂದೇ ಮೆಸ್ಕಾಂ ಉಪವಿಭಾಗ ಕೇಂದ್ರ ತೆರೆದಿದ್ದರೂ ಪ್ರಯೋಜನ ಶೂನ್ಯ. ವಿದ್ಯುತ್‌ ಸಮಸ್ಯೆಯಿಂದ ಜನ ಬಸವಳಿದು ಹೋಗಿದ್ದಾರೆ. ವಿದ್ಯುತ್‌ ಸಮಸ್ಯೆ ಎಷ್ಟು ಜಟಿಲಗೊಂಡಿದೆ ಎಂದರೆ ಬಟ್ಟೆಗಳಿಗೆ ಇಸ್ತ್ರಿ ಹಾಕುವ ಅಂಗಡಿಯವರು ವಿದ್ಯುತ್‌ನ ಬದಲಾಗಿ ಗ್ಯಾಸ್‌ ಸಿಲಿಂಡರ್‌ ಅನ್ನು ಇಸ್ತ್ರಿ ಪೆಟ್ಟಿಗೆಗೆ ಬಳಸತೊಡಗಿದ್ದಾರೆ. ಅಷ್ಟು ರೋಸಿ ಹೋಗಿದ್ದಾರೆ ಇಲ್ಲಿನ ಜನತೆ.

ಹಿಂದಿಗಿಂತಲೂ ಸಮಸ್ಯೆ ಉಲ್ಬಣ
ಕುಕ್ಕೆಯಲ್ಲಿ ವಾರದ ಬಹುತೇಕ ದಿನಗಳಲ್ಲಿ ವಿದ್ಯುತ್‌ ಇರುವುದಿಲ್ಲ. ಸುಬ್ರಹ್ಮಣ್ಯ ನಗರದಲ್ಲಿ ಹಿಂದೆಲ್ಲ ಅತೀವ ವಿದ್ಯುತ್‌ ಸಮಸ್ಯೆ ಇತ್ತು. ಈ ಬಗ್ಗೆ ಸ್ಥಳಿಯರೆಲ್ಲ ಹೋರಾಟ ನಡೆಸಿ ಸರಕಾರಕ್ಕೆ ಒತ್ತಡ ತಂದ ಪರಿಣಾಮ ಇಲ್ಲಿಗೆ ಉಪವಿಭಾಗ ಕೇಂದ್ರ ಮಂಜೂರುಗೊಂಡು ಕಾರ್ಯಾರಂಭಿಸಿದೆ. ಬಳಿಕವೂ ಸಮಸ್ಯೆ ಬಗೆಹರಿದಿಲ್ಲ. ಹಿಂದಿಗಿಂತಲೂ ಅಧಿಕ ಸಮಸ್ಯೆ ಈಗ ಇದೆ.

ವಾರವಿಡೀ ದುರಸ್ತಿ!
ವಾರದ ಮೂರು ದಿನ ವಿದ್ಯುತ್‌ ಮಾರ್ಗದ ದುರಸ್ತಿ, ಏಕಮುಖ ಮಾರ್ಗದ ದುರಸ್ತಿ ಇತ್ಯಾದಿ ನೆಪದಲ್ಲಿ ನಗರಕ್ಕೆ ಮೆಸ್ಕಾಂ ವಿದ್ಯುತ್‌ ಕಡಿತಗೊಳಿಸುತ್ತಿದೆ. ಇದರ ನಡುವೆ ವಿದ್ಯುತ್‌ ಮಾರ್ಗ ಹಾದು ಬಂದ ಮಾರ್ಗದ ತಂತಿಗಳಲ್ಲಿ ದೋಷಗಳು ಕಾಣಿಸಿಕೊಂಡು ಅದರ ಪತ್ತೆ ಹಾಗೂ ದುರಸ್ತಿ ವೇಳೆಯೂ ತಡೆಹಿಡಿಯಲಾಗುತ್ತದೆ. ತಡೆಹಿಡಿಯುವ ವೇಳೆ ತೋರುವ ಆಸಕ್ತಿ ಮರು ಸಂಪರ್ಕ ನೀಡಲು ತೋರುವುದಿಲ್ಲ. ಇತರ ದಿನಗಳಲ್ಲಿಯೂ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ.

ಅವೈಜ್ಞಾನಿಕ ಕಾಮಗಾರಿ
ಸುಬ್ರಹ್ಮಣ್ಯ ನಗರದಲ್ಲಿ ಮಾಸ್ಟರ್‌ ಪ್ಲಾನ್‌ ಯೋಜನೆ ಜಾರಿಯಲ್ಲಿದೆ. ಕುಮಾರಧಾರಾ-ಸುಬ್ರಹ್ಮಣ್ಯ ನಡುವೆ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ರಸ್ತೆ ಬದಿಯ ಕಂಬ ಹಾಗೂ ತಂತಿ ಬದಲಾವಣೆಗೆ ಗುತ್ತಿಗೆ ನೀಡಲಾಗಿದೆ. ಇದು ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದ್ದು, ಇದೀಗ 3ನೇ ಬಾರಿಗೆ ಕಂಬಗಳನ್ನು ತೆಗೆದು ಸ್ಥಳಾಂತರಿಸುವ ಪರಿಸ್ಥಿತಿಗೆ ತಲುಪಿದೆ. ಈ ವೇಳೆಯೂ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ನಗರಕ್ಕೆ ವಿದ್ಯುತ್‌ ಸರಬರಾಜು ಇಲ್ಲವೇ ಇಲ್ಲ ಎನ್ನುವ ಮಟ್ಟಿಗೆ ಸಮಸ್ಯೆ ಸೃಷ್ಟಿಯಾಗಿದೆ. ತಂತಿ ಮೇಲೆ ಮರ, ಮೈನ್‌ಲೈನ್‌ ದೋಷ, ಪುತ್ತೂರು ಫೀಡರ್‌ನಲ್ಲಿ ತಾಂತ್ರಿಕ ದೋಷ ಇನ್ನಿತರ ವಿಚಾರವಾಗಿ ಪವರ್‌ ಕಟ್‌ ಮಾಡಲಾಗುತ್ತಿದೆ. ಇದರಿಂದ ವ್ಯಾಪಾರಸ್ಥರು ಭಾರೀ ನಷ್ಟಕ್ಕೊಳಗಾಗುತ್ತಿದ್ದಾರೆ.

ನಿತ್ಯದ ಕಾರ್ಯಗಳಿಗೂ ಅಡ್ಡಿ
ಇಂಟರ್‌ನೆಟ್‌, ಬ್ರಾಡ್‌ಬ್ಯಾಂಡ್‌, ಎಫ್ಟಿಎಚ್‌ ಮೊದಲಾದ ಸೇವೆಗಳು ಸ್ಥಗಿತಗೊಳ್ಳುತ್ತಿವೆ. ದೇವಸ್ಥಾನ ಹಾಗೂ ಮಠ ಎರಡು ಸಂಸ್ಥೆಗಳಲ್ಲಿ ಹಲವಾರು ನಿತ್ಯದ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಸರಕಾರ ಸರಕಾರಿ ಕಚೇರಿಗಳಲ್ಲಿ ಸೇವೆ ದೊರಕುತ್ತಿಲ್ಲ. ಸುಬ್ರಹ್ಮಣ್ಯ ನಗರದ ವಸತಿಗೃಹಗಳ ಮಾಲಕರು ಜನರೇಟರನ್ನು ದಿನವಿಡೀ ಚಾಲನೆಯಲ್ಲಿಟ್ಟು ನಷ್ಟ ಅನಿಭವಿಸುತ್ತಿದ್ದಾರೆ.

ಮೆಸ್ಕಾಂ ಪೊಳ್ಳು ಭರವಸೆ
ಉಪವಿಭಾಗ ಆರಂಭದ ವೇಳೆ ಮೆಸ್ಕಾಂ ಸುಬ್ರಹ್ಮಣ್ಯಕ್ಕೆ 24 ತಾಸು ವಿದ್ಯುತ್‌ ಸರಬರಾಜು ಬಗ್ಗೆ ಭರವಸೆ ನೀಡಿತ್ತು. ಕಡಬ-ಸುಬ್ರಹ್ಮಣ್ಯ ಎಕ್ಸ್‌ಪ್ರೆಸ್‌ ಮಾರ್ಗದಲ್ಲಿ ದುರಸ್ತಿ ಇನ್ನಿತರ ಸಂದರ್ಭ ಪರ್ಯಾಯ ಸುಳ್ಯ ಮಾರ್ಗದಿಂದ ವಿದ್ಯುತ್‌ ಪೂರೈಸುವುದಾಗಿ ಹೇಳಿದ್ದರೂ, ಈ ಭರವಸೆಗಳು ಈವರೆಗೆ ಈಡೇರಿಲ್ಲ. ಗ್ರಾಮೀಣ ಭಾಗವಾದ ಕಲ್ಮಕಾರು, ಹರಿಹರ, ಕೊಲ್ಲಮೊಗ್ರು, ಐನಕಿದು, ಬಾಳುಗೋಡು, ದೇವಚಳ್ಳ, ಮಡಪ್ಪಾಡಿ, ಯೇನೆಕಲ್ಲು, ಬಳ್ಪ, ಪಂಜ ಮೊದಲಾದ ಭಾಗಗಳಲ್ಲಿ ಸಮಸ್ಯೆ ಜಟಿಲವಾಗಿದೆ.

ಇಸ್ತ್ರಿಗೆ ಗ್ಯಾಸ್‌
ವಿದ್ಯುತ್‌ ಸಮಸ್ಯೆ ಎಷ್ಟು ತೀವ್ರವಾಗಿದೆ ಎನ್ನುವುದಕ್ಕೆ ಇಲ್ಲೊಂದು ತಾಜಾ ನಿದರ್ಶನವಿದೆ. ಸುಬ್ರಹ್ಮಣ್ಯ ಮುಖ್ಯ ಪೇಟೆ ಬಳಿ ಇಸ್ತ್ರಿ ಹಾಕುವ ಅಂಗಡಿ ಹೊಂದಿರುವ ಸುಜಿತ್‌ ಇಸ್ತ್ರಿ ಪೆಟ್ಟಿಗೆಗೆ ಗ್ಯಾಸ್‌ ಸಿಲಿಂಡರ್‌ ಬಳಸುತ್ತಿದ್ದಾರೆ. ವಿದ್ಯುತ್‌ ಸಮಸ್ಯೆಯಿಂದ ರೋಸಿ ಹೋಗಿದ್ದು, ನಷ್ಟ ತಪ್ಪಿಸಲು ಈ ವ್ಯವಸ್ಥೆ ಅಳವಡಿಸಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.

2 ದಿನ ಮಾತ್ರ ಕಡಿತ
ವಿದ್ಯುತ್‌ ಮಾರ್ಗದ ಅಡೆ-ತಡೆ ನಿವಾರಿಸಲು ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ದುರಸ್ತಿಗಾಗಿ ಇದುವರೆಗೆ 3 ದಿನ ವಿದ್ಯುತ್‌ ಕಡಿತಗೊಳಿಸಲಾಗುತ್ತಿತ್ತು. ಇನ್ನು ಮುಂದೆ 2 ದಿನಕ್ಕೆ ಸೀಮಿತಗೊಳಿಸಲಾಗುವುದು. ಜಾತ್ರೆ ವೇಳೆ ವಿದ್ಯುತ್‌ ತಡೆಹಿಡಿಯದಂತೆ ಮತ್ತು ನಿರಂತರ ವಿದ್ಯುತ್‌ ಸರಬರಾಜಿಗೆ ಕ್ರಮ ವಹಿಸಲಾಗುವುದು.
– ನರಸಿಂಹ, ಇಇ, ಮೆಸ್ಕಾಂ ಪುತ್ತೂರು ಉಪವಿಭಾಗ

ಬಾಲಕೃಷ್ಣ ಭೀಮಗುಳಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ