ತಾ.ಪಂ. ನಿವೇಶನದ ಆರ್‌ಟಿಸಿ ಸರಿಪಡಿಸಲು ತೀರ್ಮಾನ

ಬಂಟ್ವಾಳ ತಾಲೂಕು ಪಂಚಾಯತ್‌ ಸಾಮಾನ್ಯ ಸಭೆ

Team Udayavani, Nov 7, 2019, 4:40 AM IST

ಬಂಟ್ವಾಳ: ಬಂಟ್ವಾಳ ತಾ.ಪಂ. ಆಸ್ತಿಯ ಕುರಿತಂತೆ ಈಗಾಗಲೇ ಸರ್ವೆ ಕಾರ್ಯ-ಗಡಿ ಗುರುತು ನಡೆದಿದ್ದು, ಹಾಲಿ ಕಂಪೌಂಡಿನ ಹೊರಗಡೆಯೂ ತಾ.ಪಂ.ಜಾಗ ಇರುವುದು ಕಂಡುಬಂದಿದೆ. ಪ್ರಸ್ತುತ ಅತಿಕ್ರಮಣ ತೆರವಿಗಿಂತಲೂ ಮೊದಲು ತಾ.ಪಂ. ನಿವೇಶನದ ಆರ್‌ಟಿಸಿಯಲ್ಲಿ ಸರಕಾರಿ ಎಂದಿದ್ದು, ಅದನ್ನು ಸರಿಪಡಿಸುವ ಕುರಿತು ಸಭೆ ತೀರ್ಮಾನಿಸಿತು.

ಬಿ.ಸಿ. ರೋಡ್‌ನ‌ಲ್ಲಿರುವ ತಾ.ಪಂ.ನ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ತಾ.ಪಂ. ಆಸ್ತಿ ಅತಿಕ್ರಮಣದ ಕುರಿತು ಸಾಕಷ್ಟು ಚರ್ಚೆ ನಡೆಯಿತು.

ತಾ.ಪಂ. ಇಒ ರಾಜಣ್ಣ ಅವರು ಸ್ಥಾಯೀ ಸಮಿತಿ ಅಧ್ಯಕ್ಷರ ಆಯ್ಕೆಯ ಕುರಿತು ವಿಷಯ ಪ್ರಸ್ತಾವಿಸುತ್ತಿದ್ದಂತೆ ಅತಿಕ್ರಮಣದ ವಿಚಾರ ಏನಾಯಿತು ಎಂದು ಸದಸ್ಯರಾದ ಉಸ್ಮಾನ್‌ ಕರೋಪಾಡಿ ಹಾಗೂ ಸಂಜೀವ ಪೂಜಾರಿ ಅವರು ಪ್ರಶ್ನಿಸಿದರು.

ಅದನ್ನು ಮುಂದೆ ಚರ್ಚೆ ಮಾಡೋಣ ಎಂದು ಇಒ ತಿಳಿಸುತ್ತಿದ್ದಂತೆ, ಜಿ.ಪಂ.ಸದಸ್ಯ ಎಂ.ಎಸ್‌. ಮಹಮ್ಮದ್‌ ಅವರು ಇಒ ಅವರನ್ನು ತರಾಟೆಗೆ ತೆಗೆದುಕೊಂಡು ನಿಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲ ರಾಗಿದ್ದೀರಿ ಎಂದು ಆರೋಪಿಸಿದರು.

ಮಧ್ಯ ಪ್ರವೇಶಿಸಿದ ಸದಸ್ಯ ಪ್ರಭಾಕರ ಪ್ರಭು ಅವರು, ಜಿ.ಪಂ. ಸದಸ್ಯರು ಸಲಹೆ ಮಾತ್ರ ನೀಡಬಹುದು ಎಂದರು. ಈ ಸಂದರ್ಭ ಜಿ.ಪಂ. ಸದಸ್ಯರು, ತಾನು ಸಲಹೆಯನ್ನೇ ನೀಡುತ್ತಿದ್ದೇನೆ ಎಂದರು.

ತಾ.ಪಂ. ಆಸ್ತಿಯ ಕುರಿತು ಈಗಾಗಲೇ ಸರ್ವೆ ಹಾಗೂ ಗಡಿ ಗುರುತು ಕಾರ್ಯ ಮುಗಿದಿದೆ. ಮಳೆಯಿಂದ ಸರ್ವೆ ವಿಳಂಬ ವಾಯಿತು ಎಂದು ಅಧ್ಯಕ್ಷರು ಸಭೆಯ ಗಮನಕ್ಕೆ ತಂದರು. ಅತಿಕ್ರಮಣ ತೆರವಿ ಗಿಂತಲೂ ಮೊದಲು ತಾ.ಪಂ.ನ 2 ಎಕ್ರೆ ಜಾಗದ ಆರ್‌ಟಿಸಿಯಲ್ಲಿ 30 ಸೆಂಟ್ಸ್‌ ಮಾತ್ರ ಕ್ವಾಟ್ರಸ್ಸಿಗೆ ಕಾದಿರಿಸಿದೆ. ಉಳಿದ ಜಾಗವು ಸರಿಕಾರಿ ಎಂದಿದೆ. ಹೀಗಾಗಿ ಅದನ್ನು ಸರಿಪಡಿಸಬೇಕಿದೆ ಎಂದು ಇಒ ತಿಳಿಸಿದರು.

ಪಡಿತರ ವಿತರಣೆ ಸಂದರ್ಭ ಸರ್ವರ್‌ ಸಮಸ್ಯೆಯ ಕುರಿತು ಸದಸ್ಯ ಉಸ್ಮಾನ್‌ ಕರೋಪಾಡಿ ಸಭೆಯ ಗಮನಕ್ಕೆ ತಂದರು. ಈ ವಿಚಾರವು ಹಿಂದೆ ಎಂಪಿಯವರ ಸಭೆಯಲ್ಲೂ ಚರ್ಚೆಯಾಗಿದೆ. ಅದು ಸರಕಾರದ ಮಟ್ಟದಲ್ಲಿ ಸರಿಯಾಗಬೇಕಿದೆ ಎಂದು ಇಒ ತಿಳಿಸಿದಾಗ, ಕಳೆದ ಮೂರು ವರ್ಷಗಳಿಂದ ಇದನ್ನೇ ಹೇಳಲಾಗುತ್ತಿದೆ. ಆದರೆ ಜನರು ಮಾತ್ರ ಸಂಕಷ್ಟ ಅನುಭವಿಸು ತ್ತಲೇ ಇದ್ದಾರೆ ಎಂದು ಉಸ್ಮಾನ್‌ ಅವರು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸದಸ್ಯ ಯಶವಂತ ಪೊಳಲಿ, ಸರ್ವರ್‌ನ ವೇಗ ಹೆಚ್ಚಿಸಲು ಉಪಕರಣವೊಂದಿದ್ದು, ಅದನ್ನು ಎಲ್ಲ ಕಡೆಗಳಲ್ಲೂ ಅಳವಡಿಸುವ ಕುರಿತು ಸಲಹೆ ನೀಡಿದರು.

ಪಟ್ಟಿ ಕಳುಹಿಸಲಾಗಿದೆ
ಕಳೆದ ವರ್ಷದ ಅಡಿಕೆ ಕೊಳೆರೋಗದ ಕುರಿತು ಸದಸ್ಯ ಆದಂ ಕುಂಞಿ ಪ್ರಶ್ನಿಸಿ ದಾಗ, ಗ್ರಾ.ಪಂ.ಗಳಿಗೆ ಪಟ್ಟಿ ಕಳುಹಿಸಲಾಗಿದೆ. ಅರ್ಜಿಯಲ್ಲಿ ತೊಂದರೆ ಕಂಡುಬಂದಿದ್ದಲ್ಲಿ ತಡೆ ಹಿಡಿಯಲಾಗಿದೆ. ಅದಕ್ಕಾಗಿ ಡಿಸಿ ಕಚೇರಿಯ ಸಿಬಂದಿ ಗಣೇಶ್‌ ಸರಿಪಡಿಸುತ್ತಾರೆ ಎಂದು ತೋಟಗಾರಿಕೆ ಇಲಾಖಾಧಿಕಾರಿ ತಿಳಿಸಿದರು.

4 ಕೋ. ರೂ.ಗಳ ಸಿಆರ್‌ಎಫ್‌ ನಿಧಿಯ ಸೊರ್ನಾಡು-ಬಂಟ್ವಾಳ ರಸ್ತೆ ಕಾಮಗಾರಿಯನ್ನು ರಾ.ಹೆ. ಇಲಾಖೆ ಮಾಡುತ್ತಿದ್ದು, ಅದರಲ್ಲಿ ಲೋಪಗಳು ಕಂಡುಬಂದಿದೆ. ಈ ಕುರಿತು ರಾ.ಹೆ. ಇಲಾಖೆಯ ಗಮನಕ್ಕೆ ತರಬೇಕು ಎಂದು ಸದಸ್ಯ ಪ್ರಭಾಕರ ಪ್ರಭು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಲ್ಲಿ ಆಗ್ರಹಿಸಿದರು.

ಗ್ರಾ.ಪಂ.ನಲ್ಲಿ ತಿದ್ದುಪಡಿಗೆ ಅವಕಾಶ
ಹಿಂದೆ ಗ್ರಾ.ಪಂ.ಗಳಲ್ಲಿ ಆಧಾರ್‌ ಕಾರ್ಡ್‌ ತಿದ್ದುಪಡಿ ಕಾರ್ಯ ನಡೆಯುತ್ತಿದ್ದು, ಅದನ್ನು ಈಗ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ತಿದ್ದುಪಡಿಗೆ ಗ್ರಾ.ಪಂ.ಗಳಲ್ಲೂ ಅವಕಾಶ ನೀಡಲು ಸಂಬಂಧ ಪಟ್ಟರಿಗೆ ಬರೆಯಲು ಶಾಸಕ ಖಾದರ್‌ ಅವರು ಕಂದಾಯ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಮಾಣಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಸ್‌ತಂಗುದಾಣ ನಿರ್ಮಿಸಲು ಅರಣ್ಯ ಇಲಾಖೆ ಅಡ್ಡಿ ಯಾಗಿದ್ದು, ಪುತ್ತೂರು ವಲಯ ಅರಣ್ಯಾಧಿಕಾರಿ ಸಭೆಗೆ ಬರುತ್ತಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷ ರಾಜೇಶ್‌ ಕುಮಾರ್‌ ಗಮನಕ್ಕೆ ತಂದರು. ಈ ಕುರಿತು ಅರಣ್ಯ ಸಚಿವರು ಹಾಗೂ ಡಿಎಫ್‌ಒಗೆ ಬರೆಯಲು ಶಾಸಕ ಖಾದರ್‌ ಸೂಚಿಸಿದರು. ತನ್ನ ಕ್ಷೇತ್ರ ವ್ಯಾಪ್ತಿಯ 94ಸಿ ಹಕ್ಕುಪತ್ರ ವಿತರಣೆಗೆ ವಿಳಂಬವಾಗಿರುವ ಕುರಿತು ಶಾಸಕರು ಕಂದಾಯ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ನ. 12ರೊಳಗೆ ತಾ.ಪಂ. ಹಾಗೂ ಜಿ.ಪಂ. ಜನಪ್ರತಿನಿಧಿಗಳು ತಮ್ಮ ಆಸ್ತಿಯ ವಿವರಗಳನ್ನು ಲೋಕಾಯುಕ್ತಕ್ಕೆ ಒಪ್ಪಿಸುವ ಆದೇಶವನ್ನು ಇಒ ಸಭೆಯ ಗಮನಕ್ಕೆ ತಂದರು. ಶಿಥಿಲಗೊಂಡಿರುವ ಕಪೆì ಅಂಗನವಾಡಿ ಕೇಂದ್ರವನ್ನು ಕೆಡವಲು ಅನುಮತಿಗಾಗಿ ಎಂಜಿನಿಯರಿಂಗ್‌ ವಿಭಾಗಕ್ಕೆ ಕಳಹಿಸಲಾಗಿದೆ ಎಂದು ಸಿಡಿಪಿಒ ತಿಳಿಸಿದರು.

ಜತೆಗೆ ಮೆಲ್‌ಬೆತ್ತರ ಅಂಗನವಾಡಿ ಕೇಂದ್ರವೂ ಶಿಥಿಲಾವಸ್ಥೆಯಲ್ಲಿದೆ ಎಂದು ಸದಸ್ಯ ರಮೇಶ್‌ ಕುಡುಮೇರು ತಿಳಿಸಿದರು. ಸಣ್ಣ ಹೈನುಗಾರರಿಗೂ ಹಾಲು ಕರೆಯುವ ಯಂತ್ರಕ್ಕೆ ಸಬ್ಸಡಿ ನೀಡುವ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಬರೆಯಲಾಗಿದೆ ಎಂದು ಪಶು ಇಲಾಖೆಯ ಅಧಿಕಾರಿ ಸದಸ್ಯ ರಮೇಶ್‌ ಅವರ ಪ್ರಶ್ನೆಗೆ ಉತ್ತರಿಸಿದರು. ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಆಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು.

ಜಗತ್ತಿನಲ್ಲೇ ಮೊದಲು: ಖಾದರ್‌
ಬಿಪಿಎಲ್‌ ಅನರ್ಹ ಪಡಿತರ ಚೀಟಿಯ ದಂಡ ವಸೂಲಿ ಕುರಿತು ತಾ.ಪಂ. ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದಿದ್ದು, ಹಾಲಿ ದಂಡ ವಸೂಲಿ ನಿಲ್ಲಿಸಿದರೂ ಮುಂದೆ ಬೇರೆ ರೂಪದಲ್ಲಿ ಜನರನ್ನು ಹೆದರಿ ಸುವ ಆತಂಕ ಇದ್ದೇ ಇರುತ್ತದೆ. ಸರಕಾರ ಉಚಿತವಾಗಿ ಕೊಟ್ಟ ಅಕ್ಕಿ ಯನ್ನು ಅಳೆದು ದಂಡ ವಸೂಲಿ ಮಾಡುತ್ತಿರುವುದು ಜಗತ್ತಿನಲ್ಲೇ ಮೊದಲು ಎಂದು ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಯು.ಟಿ. ಖಾದರ್‌ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ದಂಡ ವಸೂಲಿ ಕೈ ಬಿಡುವ ಜತೆಗೆ ಬೇನಾಮಿ ಬಿಪಿಎಲ್‌ ಪಡಿತರ ಚೀಟಿ ಯನ್ನೂ ರದ್ದುಪಡಿಸಬೇಕೆಂದು ಸದಸ್ಯ ಪ್ರಭಾಕರ ಪ್ರಭು ಆಗ್ರಹಿಸಿದರು.

ಸ್ಥಾಯೀ ಸಮಿತಿ ಅಧ್ಯಕ್ಷೆಯಾಗಿ ಮಲ್ಲಿಕಾ ಶೆಟ್ಟಿ ಆಯ್ಕೆ
ತಾ.ಪಂ.ನ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷೆಯಾಗಿ ಅಮಾrಡಿ ಕ್ಷೇತ್ರದ ಸದಸ್ಯೆ ಮಲ್ಲಿಕಾ ವಿ. ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಥಾಯೀ ಸಮಿತಿ ಅಧ್ಯಕ್ಷೆಯಾಗಿದ್ದ ಧನಲಕ್ಷ್ಮೀ ಸಿ. ಬಂಗೇರ ಅವರ ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ತಾ.ಪಂ. ಸಾಮಾನ್ಯ ಸಭೆ ಸಂದರ್ಭ ಇಒ ರಾಜಣ್ಣ ಸ್ಥಾಯೀ ಸಮಿತಿ ಅಧ್ಯಕ್ಷರ ಆಯ್ಕೆಯ ವಿಚಾರವನ್ನು ಪ್ರಸ್ತಾವಿಸಿದರು.

ಹಾಲಿ ತಾ.ಪಂ.ನಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದ್ದು, ಸ್ಥಾಯೀ ಸಮಿತಿಯ ಆಯ್ಕೆ ಅವಿರೋಧವಾಗಿ ನಡೆಯಿತು. ಸದಸ್ಯ ಉಸ್ಮಾನ್‌ ಕರೋಪಾಡಿಯವರು ಮಲ್ಲಿಕಾ ಶೆಟ್ಟಿ ಅವರ ಹೆಸರನ್ನು ಸೂಚಿಸಿ, ಸದಸ್ಯ ಆದಂ ಕುಂಞಿ ಅನುಮೋದಿಸಿದರು. ಸದಸ್ಯ ಪ್ರಭಾಕರ ಪ್ರಭು ಅಭಿನಂದಿಸಿದ್ದು, ಅವರನ್ನು ಚಂದ್ರಹಾಸ ಕರ್ಕೇರ ಹೂನೀಡಿ ಸ್ವಾಗತಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ