ವಿವೇಕಾನಂದ ಪದವಿ ಕಾಲೇಜು ತರಗತಿ ತಾತ್ಕಾಲಿಕ ಸ್ಥಗಿತ

ನಿಯಮಾವಳಿಗಳಿಗೆ ವಿದ್ಯಾರ್ಥಿಗಳು ಒಪ್ಪಿದ ಮೇಲೆ ತರಗತಿ ಆರಂಭ: ಪೈ

Team Udayavani, Jul 19, 2019, 5:00 AM IST

ನಗರ: ಇತ್ತೀಚಿನ ಅಹಿತಕರ ಘಟನೆಯ ಬಳಿಕ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದ ಅನಂತರದ ಬೆಳವಣಿಗೆಯಲ್ಲಿ ಗುರುವಾರ ಹಾಗೂ ಶುಕ್ರವಾರ ತರಗತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಆಡಳಿತ ಮಂಡಳಿಯು ಕಾಲೇಜು ಕ್ಯಾಂಪಸ್‌ಗೆ ಸಂಬಂಧಿಸಿದಂತೆ ಶಿಸ್ತಿನ ಅಸ್ತ್ರವನ್ನು ಬಿಗಿಗೊಳಿಸಿದ್ದು, ಪದವಿ ಕಾಲೇಜಿನಲ್ಲಿರುವ ಎಲ್ಲಾ 2,700 ವಿದ್ಯಾರ್ಥಿಗಳು ತಮ್ಮ ಹೆತ್ತವರೊಂದಿಗೆ ಖುದ್ದಾಗಿ ಬಂದು ತಮ್ಮ ವಿಭಾಗದ ಉಪನ್ಯಾಸಕರನ್ನು ಭೇಟಿ ಮಾಡಿ ನಿಯಮಾವಳಿಗಳನ್ನು ಅರ್ಥ ಮಾಡಿ ಕೊಂಡು ಒಪ್ಪಿಗೆ ನೀಡಿದ ಬಳಿಕವೇ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ ಸ್ಪಷ್ಟಪಡಿಸಿದ್ದಾರೆ.

ರಾಜಿ ಪ್ರಶ್ನೆಯೇ ಇಲ್ಲ
ಗುರುವಾರ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿ ವಿವರಣೆ ನೀಡಿದ ಆಡಳಿತ ಮಂಡಳಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವ ಹಾಗೂ ಅಭ್ಯುದಯದ ದೃಷ್ಟಿಯಿಂದ ನಿಯಮಗಳನ್ನು ಜಾರಿಗೆ ತಂದಿದ್ದೇವೆ. ಇದರಲ್ಲಿ ರಾಜಿ ಮಾಡಿ ಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಪೊಲೀಸ್‌ ತನಿಖೆ ನಡೆಯುತ್ತಿದೆ. ಪ್ರಸ್ತುತ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಸೂಚನೆ ಮೇರೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ನಮ್ಮ ಕಾಲೇಜಿನಲ್ಲೂ ಕೆಲವೊಂದು ಅನಿವಾರ್ಯ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ ಎಂದರು.

ಒಂದಷ್ಟು ನಿಯಮ
ಬೆಳಗ್ಗೆ 9ರಿಂದ ಸಂಜೆ 4 ಗಂಟೆಗೆ ತರಗತಿ ಗಳು ಮುಗಿಯುವ ವರೆಗೆ ವಿದ್ಯಾರ್ಥಿಗಳು ಕಾಲೇಜಿನ ಕ್ಯಾಂಪಸ್‌ನಲ್ಲೇ ಇರಬೇಕು ಎಂದು ಈ ಹಿಂದೆಯೇ ನಿಯಮವಿತ್ತು. ಈಗ ನಡುವೆ ವಿದ್ಯಾರ್ಥಿಗಳು ಕ್ಯಾಂಪಸ್‌ ಬಿಟ್ಟು ಹೋಗಬಾರದು ಎಂಬ ನಿಯಮ ತಂದಿದ್ದೇವೆ. ಸೋಮವಾರದಿಂದಲೇ ನಿಯಮ ಜಾರಿಗೊಳ್ಳಬೇಕಿತ್ತು. ಆದರೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ ಅನಂತರ ಬುಧವಾರ ಅನುಷ್ಠಾನಕ್ಕೆ ತಂದಿದ್ದೇವೆ. ಹೊಸ ನಿಯಮಗಳ ಕುರಿತು ಮನವರಿಕೆ ಮಾಡುವ ನಿಟ್ಟಿನಲ್ಲಿ ಜು. 22ರಂದು ಹೆತ್ತವರ ಸಭೆ ಕರೆಯಲು ನಿರ್ಧರಿಸಿದ್ದೆವು. ಈ ನಡುವೆ, ವಿದ್ಯಾರ್ಥಿಗಳ ತಂಡ ಮನವಿ ಸಲ್ಲಿಸಿ ನಿಯಮ ಸಡಿಲಿಸಲು ಕೋರಿತ್ತು. ಅದಕ್ಕೆ ಒಪ್ಪದ ಕಾರಣ ಬುಧವಾರ ಹಠಾತ್‌ ಪ್ರತಿಭಟನೆ ನಡೆಸಿದರು ಎಂದು ಶ್ರೀನಿವಾಸ ಪೈ ಹೇಳಿದರು.

ಭೋಜನಕ್ಕೆ ರಿಯಾಯಿತಿ ದರ
ಮಧ್ಯಾಹ್ನ ಭೋಜನ ವಿರಾಮದ ವೇಳೆಯಲ್ಲೂ ಹೊರಗೆ ಹೋಗಲು ಬಿಡದಿದ್ದರೆ ಊಟಕ್ಕೆ ಸಮಸ್ಯೆಯಾಗುತ್ತದೆ. ಪಿಜಿಗಳಲ್ಲಿ ಇರುವ ವಿದ್ಯಾರ್ಥಿಗಳು ಇಡೀ ವರ್ಷಕ್ಕೆ ಹಣ ಕಟ್ಟಿದ್ದಾರೆ. ಅವರು ಮತ್ತೆ ಕ್ಯಾಂಟೀನ್‌ಗೆ ಪಾವತಿ ಮಾಡುವ ಅನಿವಾರ್ಯ ಸೃಷ್ಟಿಯಾಗುತ್ತದೆ ಎಂಬ ಅಹವಾಲು ವಿದ್ಯಾರ್ಥಿಗಳಿಂದ ಬಂದಿದೆ. ಪಿ.ಜಿ.ಗಳಲ್ಲಿ ಇರುವವರು ಬುತ್ತಿ ತರುವಂತೆ ಸೂಚಿಸಿದ್ದೇವೆ. ಇತರರು ಕಾಲೇಜಿನ ಕ್ಯಾಂಟೀನ್‌ನಲ್ಲಿ ಊಟ ಮಾಡ ಬಹುದು. 2,700 ಮಕ್ಕಳು ನಿಗದಿತ ಸಮಯದಲ್ಲಿ ಕ್ಯಾಂಟೀನ್‌ನಲ್ಲಿ ಊಟ ಮಾಡಲಾಗದಿದ್ದರೆ ಬಾಯ್ಸ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಮಾಡಲಾಗುವುದು. ರಿಯಾಯಿತಿ ಊಟವನ್ನೂ ನೀಡಲಾಗುವುದು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್‌ ಹೇಳಿದರು.

ಪಿ.ಜಿ.ಗಳಲ್ಲಿ 200ರಿಂದ 300 ವಿದ್ಯಾರ್ಥಿಗಳು ಮಾತ್ರ ಇರಬಹುದು. ಅವರು ಟಿಫಿನ್‌ ಅಥವಾ ಕ್ಯಾಂಟೀನ್‌ನ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು. ಬೆಳಗ್ಗೆ 9ರಿಂದ ಸಂಜೆ 4ರ ನಡುವೆ ಅನಿವಾರ್ಯ ಸಂದರ್ಭ ಬಂದರೆ ಅನುಮತಿ ಪಡೆದು ಹೋಗ ಬಹುದು ಎಂದು ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಹೇಳಿದರು.

ಸಸ್ಪೆಂಡ್‌ ಮಾಡಿಲ್ಲ
ಬುಧವಾರದ ಪ್ರತಿಭಟನೆಗೆ ಸಂಬಂಧಿಸಿ ವಿದ್ಯಾರ್ಥಿಗಳನ್ನು ಸಸ್ಪೆಂಡ್‌ ಮಾಡಿದ್ದಾರೆ ಎಂಬ ಸುದ್ದಿ ಸುಳ್ಳು. ವಿದ್ಯಾರ್ಥಿಗಳು ಹೆತ್ತವರನ್ನು ಕರೆದುಕೊಂಡು ಬರಬೇಕೆಂಬ ಷರತ್ತಿನೊಂದಿಗೆ ತರಗತಿಗಳನ್ನು ತಾತ್ಕಾಲಿಕ ವಾಗಿ ರದ್ದು ಮಾಡಲಾಗಿದೆ ಎಂದು ತಿಳಿಸಲಾಗಿದೆ. ವಿದ್ಯಾರ್ಥಿ ಗಳನ್ನು ಅಮಾನತು ಮಾಡಿಲ್ಲ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದರು.

ವಾಹನಗಳಿಗೂ ನಿಯಮ
ಇತ್ತೀಚಿನ ವಿದ್ಯಮಾನದ ಬಳಿಕ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಇಲಾಖೆಯ ಸೂಚನೆಯಂತೆ ವಿದ್ಯಾರ್ಥಿ ನಿಯರ ಸುರಕ್ಷತಾ ಸಮಿತಿ ರಚಿಸಲಾಗಿದೆ. ನಗರ ಠಾಣೆಯ ಇನ್‌ಸ್ಪೆಕ್ಟರ್‌ ತಿಮ್ಮಪ್ಪ ನಾಯ್ಕ ಹಾಗೂ ಎಸ್‌ಐ ಓಮನಾ ಅವರು ಸಮಿತಿಯಲ್ಲಿರುತ್ತಾರೆ. ಕಾಲೇಜು ವಿದ್ಯಾರ್ಥಿನಿಯರ ವೈಯಕ್ತಿಕ ಸಮಸ್ಯೆ, ದೂರು ದಾಖಲಿಸಲು, ವಿದ್ಯಾರ್ಥಿಗಳ ದುಮ್ಮಾನಗಳನ್ನು ಆಲಿಸಲು, ಸಮಸ್ಯೆ ಬಗೆಹರಿಸಲು ಹಿಂದಿನಿಂದಲೂ ಪ್ರತ್ಯೇಕ ವಿಭಾಗಗಳಿವೆ. ಕಾಲೇಜಿಗೆ ವಿದ್ಯಾರ್ಥಿಗಳು ದ್ವಿಚಕ್ರ ವಾಹನ ಮಾತ್ರ ತರಬಹುದು ಮತ್ತು ಆ ವಾಹನದ ಪೂರ್ಣ ದಾಖಲೆಗಳನ್ನು ಕಾಲೇಜಿಗೆ ಸಲ್ಲಿಸಬೇಕು. ರಿಕ್ಷಾಗಳು ಗೇಟಿನ ತನಕ ಮಾತ್ರ ಬರಬಹುದು ಎಂದು ಶ್ರೀನಿವಾಸ ಪೈ ಹೇಳಿದರು.

ಪದವಿ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಜಯರಾಂ ಭಟ್‌, ಉಪಾಧ್ಯಕ್ಷ ಶಂಕರ ನಾರಾಯಣ ಭಟ್‌, ಸದಸ್ಯ ಕೃಷ್ಣ ನಾಯ್ಕ ಅಗರ್ತಬೈಲು ಉಪಸ್ಥಿತರಿದ್ದರು.

“ಹೆತ್ತವರಿಗೆ ಬರಲು ತಿಳಿಸಿದ್ದೇವೆ’
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಕಾರಣ ಎಲ್ಲ ಮಕ್ಕಳ ಹೆತ್ತವರನ್ನು ವೈಯಕ್ತಿಕವಾಗಿ ಬರಲು ತಿಳಿಸಿದ್ದೇವೆ. ಶುಕ್ರವಾರದಿಂದಲೇ ವಿದ್ಯಾರ್ಥಿಗಳು ಹೆತ್ತವರನ್ನು ಕರೆದುಕೊಂಡು ಬಂದು ಆಯಾ ವಿಭಾಗದ ಅಧ್ಯಾಪಕರನ್ನು ಭೇಟಿ ಮಾಡಲು ತಿಳಿಸಲಾಗಿದೆ. ಅನಂತರವೇ ವಿದ್ಯಾರ್ಥಿಗೆ ತರಗತಿ ನಡೆಸಲಾಗುವುದು. ಕಾಲೇಜಿಗೆ ರಜೆ ಕೊಟ್ಟಿಲ್ಲ. ತರಗತಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಹೆತ್ತವರು ಬಂದು ಹೋಗುವ ಪ್ರಕ್ರಿಯೆ ಒಂದೆರಡು ದಿನಗಳಲ್ಲಿ ಮುಗಿಯುತ್ತದೆ. ಅದರ ಬೆನ್ನಲ್ಲೇ ತರಗತಿಗಳು ಮತ್ತೆ ಆರಂಭವಾಗಲಿವೆ ಎಂದು ಶ್ರೀನಿವಾಸ ಪೈ ತಿಳಿಸಿದರು.

 ಶಿಸ್ತು ಅನಿವಾರ್ಯ
ಕಾಲೇಜಿನ ಶಿಸ್ತಿನ ವಿಚಾರದಲ್ಲಿ ರಾಜಿ ಇಲ್ಲ ಎಂಬ ನಿಲುವನ್ನು ಅಳವಡಿಸಿಕೊಳ್ಳಲಾಗಿದೆ. ಮಕ್ಕಳು ಇದಕ್ಕೆ ಒಗ್ಗಿಕೊಳ್ಳುವ ವಿಶ್ವಾಸವಿದೆ.
– ಡಾ| ಕೆ.ಎಂ. ಕೃಷ್ಣ ಭಟ್‌, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ