ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ

ಕಳತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

Team Udayavani, Dec 11, 2019, 4:06 AM IST

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

1914 ಶಾಲೆ ಸ್ಥಾಪನೆ
ಏಕೋಪಾಧ್ಯಾಯ ಶಾಲೆಯಾಗಿ ಆರಂಭ

ಕಾಪು: ಉಡುಪಿ ತಾಲೂಕಿನ 108ನೇ ಕಳತ್ತೂರು ಗ್ರಾಮದಲ್ಲಿ 1914ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆೆಯು ಆರಂಭವಾಗಿತ್ತು. ಊರಿನ ಹಿರಿಯರ ಅರ್ಜಿಗೆ ಮನ್ನಣೆ ನೀಡಿದ ಬ್ರಿಟಿಷ್‌ ಸರಕಾರ ಒಬ್ಬ ಶಿಕ್ಷಕರ ಸಹಿತವಾಗಿ ಶಾಲೆ ಪ್ರಾರಂಭಿಸಲು 1914ರಲ್ಲಿ ಅನುಮತಿ ನೀಡಿತ್ತು.ಗ್ರಾಮದ ನಡಿಗುತ್ತು ದಿ| ಅಣ್ಣು ಶೆಟ್ಟಿಯವರ ಮನೆಯ ಕೊಠಡಿಯಲ್ಲಿ ಶಾಲೆಯನ್ನು ತೆರೆದರು. ಅಂದಿನಿಂದ ಗ್ರಾಮದ ಜನರು ಸಂತೋಷವನ್ನು ವ್ಯಕ್ತಪಡಿಸಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲಾರಂಭಿಸಿದ್ದರು. ಅದಾದ ಕೆಲವು ವರ್ಷಗಳಲ್ಲಿ ದಿ| ಕೆ.ವಿ. ಕೃಷ್ಣಯ್ಯ ಅವರು ಕಳತ್ತೂರು ಶಾಲೆಯ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡು, ಹಂಚಿನ ಛಾವಣಿಯ ಕಟ್ಟಡವೊಂದನ್ನು ನಿರ್ಮಿಸಿಕೊಂಡರು. ಆಗಿನ ಕಾಲದ ಪ್ರಸಿದ್ಧ ರಥ ಶಿಲ್ಪಿ ದುಗ್ಗಪ್ಪ ಆಚಾರ್ಯ ಕಳತ್ತೂರು ಇವರು ವಾಸ್ತು ಶಾಸ್ತಾನುಸಾರವಾಗಿ ಶಾಲೆಯ ಕಟ್ಟಡವನ್ನು ನಿರ್ಮಿಸಿ ಕೊಟ್ಟಿದ್ದು ವಿಶೇಷತೆಯಾಗಿದೆ.

ಶಾಲೆಯ ಇತಿಹಾಸ
ಏಕೋಪಾಧ್ಯಾಯ ಶಾಲೆಯಾಗಿದ್ದ ಕಳತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮುಂದೆ ನಾಲ್ಕು ಮಂದಿ ಶಿಕ್ಷಕರು ಮತ್ತು 100 ರಷ್ಟು ವಿದ್ಯಾರ್ಥಿಗಳೊಂದಿಗೆ ಬೆಳೆಯುತ್ತಾ ಬಂದಿದೆ. ಮುಂದೆ ದಿ| ವಿಠ್ಠಪ್ಪ ಪೈ ಅವರು 23 ಸೆಂಟ್ಸ್‌ ಸ್ಥಳವನ್ನು ಶಾಲೆಗೆ ದಾನವಾಗಿ ನೀಡಿ ಶಾಲೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಿದರು. 1967ರ ಅವಧಿಯಲ್ಲಿ ಉಡುಪಿ ತಾಲೂಕು ಬೋರ್ಡಿಗೆ ಇನ್ನೊಂದು ಕಟ್ಟಡವನ್ನು ಕಟ್ಟಿಸಲು ಅರ್ಜಿ ಕಳುಹಿಸಿ ಹೆಚ್ಚುವರಿ ಕಟ್ಟಡವನ್ನು ನಿರ್ಮಿಸಿಕೊಳ್ಳಲಾಯಿತು.

ಸರಕಾರದ ಹಣ ಹಾಗೂ ಊರವರ ಸಹಕಾರದಿಂದ ಅಗತ್ಯವಿದ್ದ ಕಟ್ಟಡವನ್ನು ನಿರ್ಮಿಸಲಾಯಿತು. ಇದಕ್ಕೆ ಗೋಪಾಲಕೃಷ್ಣ ಪೈ ಹೆಚ್ಚಿನ ರೀತಿಯ ಸಹಕಾರವನ್ನು ನೀಡಿದ್ದರು.1976ರಲ್ಲಿ 6ನೇ ತರಗತಿ, 1977ರಲ್ಲಿ 7ನೇ ತರಗತಿಯನ್ನು ತೆರೆಯಲು ಅನುಮತಿ ದೊರಕಿತ್ತು.

ಮುಖ್ಯೋಪಾಧ್ಯಾಯರು ಏಕೋಪಾಧ್ಯಾಯರ ಶಾಲೆ ಎಂಬ ಹೆಸರಿನೊಂದಿಗೆ ಪ್ರಾರಂಭಗೊಂಡಿದ್ದ ಶಾಲೆಯಲ್ಲಿ ಇಂದು ವಿದ್ಯಾರ್ಥಿಗಳ ಸಂಖ್ಯೆ 14ಕ್ಕೆ ಕುಸಿದಿದ್ದು, ಮತ್ತೆ ಏಕೋಪಾಧ್ಯಾಯಿನಿ ಶಾಲೆ ಎಂಬ ಹಣೆಪಟ್ಟಿ ಹೊತ್ತುಕೊಂಡು ಮುಚ್ಚುವ ಭೀತಿ ಎದುರಿಸುತ್ತಿದೆ. ಶಾಲೆಯಲ್ಲಿ ಸೇವೆ ಸಲ್ಲಿಸಿರುವ ದಿ| ಕೆ.ವಿ. ಕೃಷ್ಣಯ್ಯ ಕಳತ್ತೂರು, ದಿ| ಕೃಷ್ಣ ಶೆಟ್ಟಿ ಕೊಲ್ಲಬೆಟ್ಟು, ದಿ| ರಾಮಕೃಷ್ಣ ಆಚಾರ್ಯ ಕಳತ್ತೂರು, ಸಂಜೀವಿ ಭಂಡಾರ್ತಿ (ಪ್ರಭಾರ) ಕಳತ್ತೂರು, ದಿ| ಜೆರೊಂ ನೊರೊನ್ಹ ಬಂಟಕಲ್ಲು, ಕೆ. ಶ್ರೀಕರಯ್ಯ ಕಳತ್ತೂರು, ಶ್ರೀಧರ ಭಟ್‌ ಕಾಪು, ಮೋಹಿನಿ ಕೆ. ಮೂಳೂರು.

ಹೆಮ್ಮೆಯ ಹಳೆ ವಿದ್ಯಾರ್ಥಿಗಳು
ಅನಿವಾಸಿ ಭಾರತೀಯ ಉದ್ಯಮಿ ಕಳತ್ತೂರು ಶೇಖರ ಬಿ. ಶೆಟ್ಟಿ, ಖ್ಯಾತ ನ್ಯಾಯವಾದಿ ಉಮೇಶ್‌ ಶೆಟ್ಟಿ ಕಳತ್ತೂರು, ಕಳತ್ತೂರು ದೇಗುಲದ ಆಡಳಿತ ಮೊಕ್ತೇಸರ ರಂಗನಾಥ್‌ ಭಟ್‌, ಪ್ರಸಿದ್ಧ ವೈದ್ಯರಾದ ಡಾ| ರಾಜಗೋಪಾಲ ಭಂಡಾರಿ ಕಳತ್ತೂರು, ಡಾ| ಗುರುರಾಜ್‌ ಆಚಾರ್‌, ಕರುಣಾಕರ ತಂತ್ರಿ, ಉದಯ ತಂತ್ರಿ, ರಾಘವೇಂದ್ರ ಭಟ್‌, ಕೆ. ಶ್ರೀಕರಯ್ಯ, ಪರಿಮಳಾ ಟೀಚರ್‌, ಗ್ರಾ.ಪಂ. ಸದಸ್ಯ ಅಶೋಕ್‌ ರಾವ್‌, ಉದ್ಯಮಿ ರಂಗನಾಥ ಶೆಟ್ಟಿ ಮೊದಲಾದವರು ಸಂಸ್ಥೆಯ ಹೆಮ್ಮೆಯ ಹಳೆ ವಿದ್ಯಾರ್ಥಿಗಳು.

ಶಾಲೆಯಲ್ಲಿ ಮಕ್ಕಳ ಸಂಖ್ಯೆಯ ಕೊರತೆಯಿದೆ. ಶಾಲೆಯ ಬೆಳವಣಿಗೆಗೆ ದಾನಿಗಳು ಮತ್ತು ಹಳೆ ವಿದ್ಯಾರ್ಥಿಗಳು ನಿರಂತರವಾಗಿ ಕೊಡುಗೆ ಗಳನ್ನು ನೀಡುತ್ತಾ ಬರುತ್ತಿದ್ದಾರೆ. ಶಾಲೆ ಉಳಿವಿಗಾಗಿ ಇನ್ನಷ್ಟು ಪ್ರಯತ್ನ ಅಗತ್ಯ
-ಉಷಾ, ಮುಖ್ಯೋಪಾಧ್ಯಾಯಿನಿ, ಕಳತ್ತೂರು ಶಾಲೆ

ನಮ್ಮ ತಂದೆಯವರ ಕಾಲದ ಶಾಲೆ ಇದಾಗಿದೆ. ಗ್ರಾಮೀಣ ಜನರ ಆಂಗ್ಲ ಮಾಧ್ಯಮ ಶಿಕ್ಷಣದ ವ್ಯಾಮೋಹದಿಂದಾಗಿ ಶಾಲೆಯು ಮುಚ್ಚುವ ಹಂತಕ್ಕೆ ಬಂದಿದ್ದು, ಇದನ್ನು ಉಳಿಸುವ ನಿಟ್ಟಿನಲ್ಲಿ ಊರವರು, ಹಳೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಯತ್ನಶೀಲರಾಗುವ ಅಗತ್ಯವಿದೆ.
-ಕೆ. ಶ್ರೀಕರಯ್ಯ ಕಳತ್ತೂರು, ಹಳೆ ವಿದ್ಯಾರ್ಥಿ

-  ರಾಕೇಶ್‌ ಕುಂಜೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ