ಶೀರೂರು ಶ್ರೀಗಳ ಆರಾಧನೆಗೆ ಮೂಲಮಠ ಸಜ್ಜು

Team Udayavani, Aug 31, 2018, 12:04 PM IST

ಉಡುಪಿ: ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥರು ನಿಧನ ಹೊಂದಿ ಒಂದೂವರೆ ಬಳಿಕ ಆರಾಧನೆಗೆ ಮೂಲಮಠ ಸಜ್ಜಾಗುತ್ತಿದೆ.
ಜು. 19ರಂದು ಸ್ವಾಮೀಜಿ ನಿಧನ ಹೊಂದಿದ ಬಳಿಕ ತನಿಖೆಗಾಗಿ ಮಠವನ್ನು ಸ್ವಾಧೀನಪಡಿಸಿಕೊಂಡಿದ್ದ ಪೊಲೀಸ್‌ ಇಲಾಖೆ ಆ. 27ರಂದು ಬಿಟ್ಟುಕೊಟ್ಟಿದೆ. ಮಠವು ಪೊಲೀಸರ ವಶದಲ್ಲಿದ್ದ ಕಾರಣ ಎರಡು ಬಾರಿ ಆರಾಧನೆಯನ್ನು ಮುಂದೂಡಲಾಗಿತ್ತು. ಇದೀಗ ಸೆ. 5ರಂದು ಆರಾಧನೆ ನಡೆಸಲು ಶೀರೂರು ಮಠದ ದ್ವಂದ್ವ ಮಠವಾದ ಶ್ರೀ ಸೋದೆ ಮಠ ಸಜ್ಜಾಗುತ್ತಿದೆ. ಸೋಂದಾ ಕ್ಷೇತ್ರದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಸೋದೆ ಮಠಾಧೀಶರು ಶೀರೂರು ಮಠದ ಮೇಲ್ವಿಚಾರಣೆಗೆ ನಿಗದಿಪಡಿಸಿರುವ ಐವರು ಸದಸ್ಯರ ಸಮಿತಿ ಆರಾಧನೆಗೆ ವ್ಯವಸ್ಥೆ ಮಾಡುತ್ತಿದೆ. ಅಂದೇ ಉಡುಪಿ ಶ್ರೀಕೃಷ್ಣ ಮಠದಲ್ಲಿಯೂ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.

ಸ್ವತ್ಛತಾ ಕಾರ್ಯ
ಶೀರೂರು ಮಠದಲ್ಲಿ ಒಂದು ತಿಂಗಳಿಂದ ಕೇವಲ ಪೂಜೆಗಷ್ಟೇ ಮಾತ್ರ ಅವಕಾಶ ನೀಡಲಾಗಿತ್ತು. ತನಿಖೆಯ ಉದ್ದೇಶದಿಂದ ಯಾವುದೇ ವಸ್ತುಗಳನ್ನೂ ಮುಟ್ಟುವಂತಿರಲಿಲ್ಲ. ಈಗ ಮಠವನ್ನು ಬಿಟ್ಟುಕೊಟ್ಟ ಅನಂತರ ಇಡೀ ಮಠವನ್ನು ಸ್ವತ್ಛಗೊಳಿಸಲಾಗುತ್ತಿದೆ. ಮಠದ ಹೊರಗಿನ ಪರಿಸರವನ್ನೂ ಸ್ವತ್ಛಗೊಳಿಸಲಾಗುತ್ತಿದೆ. 

ಸೆ. 5ರಂದು ನವಕ ಪ್ರಧಾನ ಕಲಶಾಭಿಷೇಕವನ್ನು ಮುಖ್ಯಪ್ರಾಣ ದೇವರಿಗೆ ಮಾಡಲಾಗು ವುದು. ವಿವಿಧ ಹೋಮ ಹವನಗಳನ್ನು ನಡೆಸಲಾಗುವುದು. ಪೂಜೆ ಮತ್ತು ಹೋಮದ ಪ್ರಸಾದವನ್ನು ಶ್ರೀ ಲಕ್ಷ್ಮೀವರತೀರ್ಥರ ವೃಂದಾವನಕ್ಕೆ ಸಮರ್ಪಿಸ ಲಾಗುತ್ತದೆ. ಇವೆಲ್ಲದರ ನೇತೃತ್ವವನ್ನು ಸೋದೆ ಮಠದ ದಿವಾನರೂ ಸ್ವತಃ ವೈದಿಕರೂ ಆಗಿರುವ ಪಾಡಿಗಾರು ಶ್ರೀನಿವಾಸ ತಂತ್ರಿಗಳು ವಹಿಸಲಿದ್ದಾರೆ. ಮುಂದೆ ಪ್ರತಿ ಶನಿವಾರ ಸಾರ್ವಜನಿಕರ ಪ್ರವೇಶದೊಂದಿಗೆ ಮುಖ್ಯಪ್ರಾಣ ದೇವರಿಗೆ ರಂಗಪೂಜೆ ನಡೆಯಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ