ಪೊಲೀಸರು ಅವಕಾಶ ನೀಡಿದರೆ ಶೀರೂರು ಶ್ರೀ ಆರಾಧನೆ

Team Udayavani, Jul 28, 2018, 10:25 AM IST

ಉಡುಪಿ: ತನಿಖೆಯ ಉದ್ದೇಶದಿಂದ ಶೀರೂರು ಮೂಲ ಮಠ ಈಗ ಪೊಲೀಸ್‌ ಸುಪರ್ದಿಯಲ್ಲಿದೆ. ಪೊಲೀಸರು ಅವಕಾಶ ನೀಡಿದರೆ ಶೀರೂರು ಶ್ರೀಗಳ ಆರಾಧನೆಯನ್ನು ನಿಗದಿತ ದಿನಾಂಕದಂದೇ ನಡೆಸಲಾಗುವುದು ಎಂದು ಶೀರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಶುಕ್ರವಾರ ತಮ್ಮನ್ನು ಭೇಟಿಯಾದ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶ್ರೀಗಳು, ಶೀರೂರು ಶ್ರೀಗಳು ಅಸ್ತಂಗತ ರಾದ 13ನೇ ದಿನಕ್ಕೆ ಅಂದರೆ ಜು. 31ರಂದು ಆರಾಧನೆಯ ವಿಧಿವಿಧಾನಗಳು ನಡೆಯಬೇಕಾಗಿವೆ. ಆದರೆ ಪ್ರಸ್ತುತ ತನಿಖೆಯ ಉದ್ದೇಶದಿಂದ ಪೊಲೀಸರು ಮಠದೊಳಗೆ ಸಾರ್ವಜನಿಕರಿಗೆ ಪ್ರವೇಶ ನೀಡುತ್ತಿಲ್ಲ. ಈ ಕುರಿತು ಎಸ್‌ಪಿ ಜತೆಗೆ ಮಾತನಾಡಿದ್ದೇವೆ. ಅವರು ಈ ಕುರಿತು ಶೀಘ್ರ ತಿಳಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಜು. 31 ರೊಳಗೆ ಪೊಲೀಸ್‌ ಸುಪರ್ದಿಯಿಂದ ಮುಕ್ತ ವಾದರೆ ಇಲ್ಲವೇ ಆರಾಧನೆಗೆ ಅವಕಾಶ ನೀಡಿದರೆ ಅಂದೇ ನಡೆಯಲಿದೆ.

ಇಲ್ಲವಾದಲ್ಲಿ ಅನಿವಾರ್ಯವಾಗಿ ಮುಂದೆ ಬೇರೊಂದು ದಿನ ಸಂಪ್ರದಾಯ ಪ್ರಕಾರ ನಡೆಸಲಾಗುವುದು. ನಮ್ಮ ವಿಧಿವಿಧಾನಗಳಿಂದ ಪೊಲೀಸ್‌ ತನಿಖೆಗೆ ಅಡ್ಡಿಯಾಗಬಾರದು. ವೃಂದಾವನ ನಿರ್ಮಾಣ ಶಾಸ್ತ್ರದಂತೆ ಒಂದು ವರ್ಷದ ಬಳಿಕವೇ ನಡೆಯುತ್ತದೆ. ಮೂಲಮಠದಲ್ಲಿ ನಿತ್ಯಪೂಜೆ, ಪ್ರತಿ ಶನಿವಾರ ರಂಗಪೂಜೆ ನಡೆಯುತ್ತಿದೆ. ಆದರೆ ಭಕ್ತರು ಪಾಲ್ಗೊಳ್ಳಲು ಅವಕಾಶವಿಲ್ಲ ಎಂದರು.

ಬೇಸರ ವ್ಯಕ್ತಪಡಿಸಿದ ಶ್ರೀಗಳು
ಕೆಲವು ಮಾಧ್ಯಮಗಳ ವರದಿಯಿಂದ ತುಂಬಾ ಬೇಸರವಾಗಿದೆ. ಅರಗಿಸಿಕೊಳ್ಳಲು ಆಗದಂತಹ ವರದಿಗಳು ಬಂದಿವೆ. ಅನ್ಯಾಯ ಮಾಡಿದವರು ಸಹಿಸಿಕೊಳ್ಳಬಹುದು. ಆದರೆ ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ನಾವು ಮನುಷ್ಯರಲ್ಲವೆ? ಪೊಲೀಸರಿಗೆ ಸಹಕಾರ ನೀಡುತ್ತಿದ್ದೇವೆ. ಪೊಲೀಸರು ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಇಲ್ಲ. ಚಿನ್ನಾಭರಣಗಳು ಕೂಡ ಪೊಲೀಸರ ಸುಪರ್ದಿಯಲ್ಲಿಯೇ ಇವೆ ಎಂದು ಶ್ರೀಗಳು ಹೇಳಿದರು.

ಯೋಗ್ಯ ವಟುವಿನ ಆಯ್ಕೆ
ಶೀರೂರು ಮಠದ ಉತ್ತರಾಧಿಕಾರಿಯನ್ನಾಗಿ ಯೋಗ್ಯ ವಟುವನ್ನೇ ಆಯ್ಕೆ ಮಾಡಲಾಗುವುದು. ಯೋಗ್ಯರು ಸಿಕ್ಕಿದ ಕೂಡಲೇ ಶಿಷ್ಯ ಸ್ವೀಕಾರ ನಡೆಯಲಿದೆ. ಅದುವರೆಗೆ ಮಠದ ಆಸ್ತಿಗಳ ಉಸ್ತುವಾರಿ ನೋಡಿಕೊಳ್ಳುವ ಉದ್ದೇಶದಿಂದ ಐವರು ಸದಸ್ಯರನ್ನೊಳಗೊಂಡ ಉಸ್ತುವಾರಿ ಸಮಿತಿ ರಚಿಸುವ ಪ್ರಕ್ರಿಯೆ ನಡೆಯುತ್ತಿದೆ. ಶೀರೂರು ಮಠ ಅನಾಥವಾಗುತ್ತಿದೆ ಎಂಬ ವರದಿಗಳಿಗೆ ಅರ್ಥವಿಲ್ಲ. ದ್ವಂದ್ವ ಮಠ ಇರುವಾಗ ಆ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಹಿಂದೆ ಶೀರೂರು ಮಠದಲ್ಲಿದ್ದವರನ್ನೇ ಈಗ ವ್ಯವಸ್ಥಾಪಕರನ್ನಾಗಿ ನಿಯೋಜಿಸಲಾಗಿದೆ. ಮಠಕ್ಕೆ ಇರುವ ಸಾಲದ ವಿಚಾರ ಗೊತ್ತಾಗಿಲ್ಲ. ಅವೆಲ್ಲವೂ ಇನ್ನಷ್ಟೇ ತಿಳಿಯಬೇಕಿದೆ. ಮಠದ ದಾಖಲೆಗಳು ಸೇರಿದಂತೆ ಯಾವುದೇ ವಸ್ತು ಗಳನ್ನು ಮುಟ್ಟಲು ಹೋಗಿಲ್ಲ. ಎಲ್ಲ ಮಠಗಳು ಸಹಕಾರ ನೀಡುತ್ತಿವೆ ಎಂದು ಸೋದೆ ಶ್ರೀಗಳು ಪ್ರತಿಕ್ರಿಯಿಸಿದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ