ಮಹಿಳಾ ಮತದಾರರ ಗಮನ ಸೆಳೆಯುತ್ತಿರುವ ಸಖೀ ಮತಗಟ್ಟೆಗಳು

Team Udayavani, Apr 18, 2019, 6:30 AM IST

ಕಾಪು : ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 121ನೇ ಕಾಪು ವಿಧಾನಸಭಾ ಕ್ಷೇತ್ರವು ಲೋಕಸಭಾ ಚುನಾವಣೆಗೆ ಸನ್ನದ್ಧವಾಗಿದ್ದು, ಕಾಪು ಕ್ಷೇತ್ರದಲ್ಲಿ ಮಹಿಳಾ ಮತದಾರರನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಲು 5 ಸಖೀ ಮತಗಟ್ಟೆಗಳು ಸಿದ್ಧವಾಗಿ ನಿಂತಿವೆ.

208 ಮತಗಟ್ಟೆಗಳನ್ನು ಹೊಂದಿರುವ ಕಾಪು ವಿಧಾನಸಭಾ ಕ್ಷೇತ್ರದ 1,84,246 ಮತದಾರರಲ್ಲಿ 96,486 ಮಹಿಳಾ ಮತದಾರರಿದ್ದಾರೆ. ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿರುವ ಕಾಪು ಕ್ಷೇತ್ರದ 5 ಕಡೆಗಳಲ್ಲಿ ಸಖೀ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಇಲ್ಲಿ ಸಂಪೂರ್ಣವಾಗಿ ಮಹಿಳಾ ಅಧಿಕಾರಿಗಳು ಮತ್ತು ಸಿಬಂದಿಗಳೇ ಕಾರ್ಯನಿರ್ವಹಿಸಲಿದ್ದಾರೆ.

ಎಲ್ಲೆಲ್ಲಿ ಸಖೀ ಮತಗಟ್ಟೆಗಳು
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು, ಉದ್ಯಾವರ ಸೈಂಟ್‌ ಫ್ರಾನ್ಸಿಸ್‌ ಸ್ಕೂಲ್‌, ಸೈಂಟ್‌ ಜೋನ್ಸ್‌ ಶಂಕರಪುರ – 1, ಸೈಂಟ್‌ ಜೋನ್ಸ್‌ ಶಂಕರಪುರ – 2 ಮತ್ತು ಕುರ್ಕಾಲು ಗ್ರಾಮ ಪಂಚಾಯತ್‌ನಲ್ಲಿ ಸಖೀ ಮತಗಟ್ಟೆಗಳಿವೆ.

ಪ್ರತೀ ಸಖೀ ಮತಗಟ್ಟೆಗಳಲ್ಲಿ ನಾಲ್ಕು ಮಂದಿ ಮಹಿಳಾ ಮತಗಟ್ಟೆ ಅಧಿಕಾರಿಗಳು ಇರಲಿದ್ದು, ಅವರೊಂದಿಗೆ ಮಹಿಳಾ ಪೊಲೀಸ್‌ ಸಿಬಂದಿಗಳು ಕೂಡಾ ಕಾರ್ಯನಿರ್ವಹಿಸಲಿದ್ದಾರೆ. ಹಿಂದಿನ ಚುನಾವಣೆಯ ಸಂದರ್ಭ ಅತೀ ಹೆಚ್ಚು ಮಹಿಳಾ ಮತದಾರರು ಮತದಾನ ಮಾಡಿರುವ ಮತಗಟ್ಟೆಗಳು ಮತ್ತು ಮಹಿಳಾ ಮತದಾರೇ ಹೆಚ್ಚಾಗಿರುವ ಮತಗಟ್ಟೆಗಳನ್ನು ಸಖೀ ಮತಗಟ್ಟೆಗಳೆಂದು ವಿಂಗಡಿಸಲಾಗುತ್ತದೆ.

ಸಖೀ ಮತಗಟ್ಟೆಗಳಲ್ಲಿ ಮಹಿಳೆಯರನ್ನು ಆಕರ್ಷಿಸಲು ವಿವಿಧ ರೀತಿಯ ಸೌಕರ್ಯಗಳನ್ನು ಜೋಡಿಸಲಾಗುತ್ತದೆ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳು, ಮೂಲಭೂತ ಅವಶ್ಯಕತೆಗಳ ಜೋಡಣೆ, ಕಿಡ್ಸ್‌ ಪಾರ್ಕ್‌ಗಳ ಸಹಿತ ವಿಶೇಷ ಆಕರ್ಷಣೀಯ ಕೇಂದ್ರವನ್ನಾಗಿ ಪರಿವರ್ತಿಸಿಡಲಾಗಿದೆ.

ಕಾಪು ಸಖೀ ಮತಗಟ್ಟೆ ಬಗ್ಗೆ ಮೆಚ್ಚುಗೆ
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಖೀ ಮತಗಟ್ಟೆಯನ್ನು ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಅವರ ಮುತುವರ್ಜಿಯಲ್ಲಿ ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿದೆ. ಇಲ್ಲಿನ ವ್ಯವಸ್ಥೆಯನ್ನು ವೀಕ್ಷಿಸಿದ ಉಡುಪಿ ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ರೂಪೇಶ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ