ಜಗದಷ್ಟಮಿಯಾಗಿ ಆಚರಿಸಲ್ಪಡುವ ಶ್ರೀಕೃಷ್ಣನ ಜನ್ಮಾಷ್ಟಮಿ!

Team Udayavani, Aug 23, 2019, 7:00 AM IST

ಕೃಷ್ಣಂ ವಂದೇ ಜಗದ್ಗುರುಂ. ಜಗದ್ಗುರು ಕೃಷ್ಣನ, ಜನ್ಮಾಷ್ಟಮಿಯೂ, ಈಗ ಜಗದ್ವ್ಯಾಪಿಯಾಗಿದೆ. ಕೃಷ್ಣಾವತಾರದ ಆ ದಿನವನ್ನು ದೇಶದ ವಿವಿಧೆಡೆ ವಿವಿಧ ಹೆಸರುಗಳಾದ ಕೃಷ್ಣ ಜನ್ಮಾಷ್ಟಮಿ, ಕೃಷ್ಣಾಷ್ಟಮಿ, ಗೋಕುಲಾಷ್ಟಮಿ, ಅಷ್ಟಮಿ ರೋಹಿಣಿ, ಶ್ರೀಕೃಷ್ಣ ಜಯಂತಿ, ಶ್ರೀಜಯಂತಿ, ಜನ್ಮಾಷ್ಟಮಿ ಇತ್ಯಾದಿಗಳಿಂದ ಕರೆಯುವುದಲ್ಲದೆ, ಆಚರಣೆಗಳಲ್ಲೂ ವೈವಿಧ್ಯತೆಯಿದೆ. ಅಷ್ಟಮದವತಾರಾದಷ್ಟಮಗರ್ಭದೊಳುದುಸಿದ ಕೃಷ್ಣನ ಅವತಾರ, ಕ್ರಿ.ಪೂ. 3228ರ ಜು. 18ರಂದು. ಆತನ ಅವತಾರಾವಧಿ ಕ್ರಿ.ಪೂ. 3102 ಫೆ. 18ರ ವರೆಗೆ. ಇಂದು ಶ್ರೀ ಕೃಷ್ಣನ 5247ನೇ ಹುಟ್ಟಿದ ಹಬ್ಬ.

ಮಹಾರಾಷ್ಟ್ರದ ಪುಣೆ, ಮುಂಬೈನಲ್ಲಿ ಜನ್ಮಾಷ್ಟಮಿ ದಹಿಹಂಡಿ ಎಂದೇ ಜನಪ್ರಿಯ. ದಹಿ (ಮೊಸರು) ಹಂಡಿ (ಮಣ್ಣೆನ ಮಡಕೆ) ಉಡುಪಿಯ ಮೊಸರುಕುಡಿಕೆಯ ಆಚರಣೆಯಂತಿದೆ. ಉತ್ಸವದಲ್ಲಿ ಭಾಗವಹಿಸುವವರನ್ನು ಗೋವಿಂದ, ಗೋವಿಂದ ಪಥಕ ಎನ್ನುತ್ತಾರೆ. ಗೋವಾದಲ್ಲಿ ಅಹಷ್ಟಂ ಎಂದು ಕರೆಯಲ್ಪಡುವ ಯಾದವರು ಕುಟುಂಬ ಸ್ತರ ಮತ್ತು ಸಮುದಾಯ ಸ್ತರದಲ್ಲಿ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಅಂದು ದೇವಕೀ ಕೃಷ್ಣ (ದೇವಕೀ ದೇವಾಲಯ ದೇಶದಲ್ಲಿ ಇದೊಂದೆ), ನರೋವಾ (ಕದಂಬರ ಪ್ರಾಚೀನ ನಗರಗಳು)ಪಟ್ಟಣಗಳಲ್ಲಿ ವಿಶೇಷವಾಗಿ ಆಚರಿಸಲ್ಪಡುತ್ತದೆ.

ಉತ್ತರ ಪೂರ್ವ ಭಾರತ:
ಉತ್ತರಪ್ರದೇಶದ ಮಥುರಾ, ಗೋಕುಲ, ವೃಂದಾವನಕ್ಕೆ ದೇಶದ ಎಲ್ಲ ಭಾಗಗಳಿಂದ ಯಾತ್ರಿಕರು ಬಂದು ಕೃಷ್ಣಜನ್ಮಾಷ್ಟಮಿಯಲ್ಲಿ ಪಾಲ್ಗೊಳ್ಳುತ್ತಾರೆ. ಗುಜರಾತಿನ ದ್ವಾರಕಾದಲ್ಲಿ ದ್ವಾರಕಾಧೀಶ ದೇವಸ್ಥಾನವನ್ನು ಅಂದು ಪ್ರವಾಸಿಗರು ಸಂದರ್ಶಿಸುತ್ತಾರೆ. ಜಮ್ಮುವಿನಲ್ಲಿ ಗಾಳಿಪಟದ ಉತ್ಸವ ಗೋಕುಲಾಷ್ಟಮಿಯ ವಿಶೇಷ.

ಪೂರ್ವದ ಒರಿಸ್ಸಾದ ಪುರಿ, ನಬದ್ವೀಪದಲ್ಲಿ ಪ.ಬಂಗಾಳದ ಭಕ್ತರು, ಮಧ್ಯರಾತ್ರಿ ತನಕ ಉಪವಾಸ-ಪೂಜೆಯಲ್ಲಿ ತೊಡಗುತ್ತಾರೆ. ಭಾಗವತದ 10ನೇ ಸ್ಕಂದದಿಂದ ಪ್ರವಚನಗಳು ನಡೆಯುತ್ತವೆ. ಮರುದಿನ ನಂದಉತ್ಸವ ಸಂಪನ್ನಗೊಳ್ಳುತ್ತದೆ. ಅಸ್ಸಾಮಿನಲ್ಲಿ ಮನೆಗಳಲ್ಲೇ ಹೆಚ್ಚಾಗಿ ಆಚರಿಸುತ್ತಾರೆ. ಮಣಿಪುರದಲ್ಲಿ ಜನ್ಮಾಷ್ಟಮಿ, ಕೃಷ್ಣಜನ್ಮವೆಂದೇ ಪ್ರಸಿದ್ಧ. ಇಂಪಾಲದ 2 ದೇಗುಲಗಳಲ್ಲಿ ಆಚರಿಸಲ್ಪಡುತ್ತದೆ.

ತ.ನಾಡಿನಲ್ಲಿ ಅಂದು ಜನರು ನೆಲವನ್ನು ಕೋಲಂನಿಂದ ಅಲಂಕರಿಸಿ, ಗೀತಗೋವಿಂದವನ್ನು ಹಾಡುತ್ತಾರೆ. ಮನೆಯಿಂದ ದೇಗುಲದವರೆಗೆ ಕೃಷ್ಣನ ಪಾದದಚ್ಚನ್ನು ಬಿಡಿಸುತ್ತಾರೆ. ಕೃಷ್ಣನು ಮನೆಗೆ ಆಗಮಿಸಿದ ಎಂದು ನಂಬಿಕೆ. ಭಗವದ್ಗೀತೆಯನ್ನು ಪಠಿಸಲಾಗುತ್ತದೆ. ಸೀದೈ, ವೆರ್ಕಡಲೈ ಉರುಂಡೈ, ಹಾಲುಮೊಸರಿನ ಸಿಹಿತಿಂಡಿ ಮುಂತಾದ ಪದಾರ್ಥಗಳನ್ನು ತಯಾರಿಸುತ್ತಾರೆ. ಅಂದು ಉಪವಾಸದೊಂದಿಗೆ ಮಧ್ಯರಾತ್ರಿ ಪೂಜೆ ನಡೆಯುತ್ತದೆ. ಮನೆಯ ಗಂಡುಮಕ್ಕಳಿಗೆ ಕೃಷ್ಣನ ವೇಷಹಾಕಿ ಉಯ್ನಾಲೆಯಲ್ಲಿ (ಊಂಜಲ್‌) ತೂಗುತ್ತಾರೆ. ಪ್ರಸಾದ ವಿತರಿಸಲಾಗುತ್ತದೆ. ಮನ್ನಾರ್‌ಗುಡಿಯ ರಾಜಗೋಪಾಲಸ್ವಾಮಿ ದೇವಳ, ಕಾಂಚೀವರದ ಪಾಂಡವದೂತರ್‌ ದೇವಳ, ಗುರುವಾಯೂರಿನ ಕೃಷ್ಣ ದೇಗುಲ ಪ್ರಮುಖವಾಗಿವೆ. ದ್ವಾರಕಾ ಸಮುದ್ರ ಪಾಲಾದ ಬಳಿಕ ಗುರುವಾಯೂರಿನಲ್ಲಿ ಕೃಷ್ಣನ ವಿಗ್ರಹ ಪ್ರತಿಷ್ಠೆಯಾಯಿತೆಂದು ಪ್ರತೀತಿ.

ಅಂದು ಶ್ಲೋಕ, ಭಕ್ತಿಗೀತೆಗಳನ್ನು ಹಾಡುವುದು ಆಂಧ್ರಪ್ರದೇಶದ ವೈಶಿಷ್ಟéತೆ. ಕೃಷ್ಣವೇಷಧಾರಿಗಳು ನೆರೆಮನೆಗಳಿಗೆ ಭೇಟಿ ನೀಡುತ್ತಾರೆ. ವಿವಿಧ ಹಣ್ಣು, ಸಿಹಿತಿನಿಸುಗಳನ್ನು ಕೃಷ್ಣ ದೇವರಿಗೆ ಸಮರ್ಪಿಸುತ್ತಾರೆ.

ನೇಪಾಳ:
ಬೌದ್ಧ ಸಂಪ್ರದಾಯಸ್ಥರಾದ ನೇಪಾಳೀ ಜನಸಂಖ್ಯೆಯ ಶೇ. 80 ತಮ್ಮನ್ನು ಹಿಂದುಗಳೆಂದು ಗುರುತಿಸಲ್ಪಡುತ್ತಾರೆ. ನೇಪಾಳದಲ್ಲಿ ಕೃಷ್ಣಜನ್ಮಾಷ್ಟಮಿಯನ್ನು ನಡುರಾತ್ರಿ ಉಪವಾಸದೊಂದಿಗೆ ಆಚರಿಸುತ್ತಾರೆ. ಗೀತೆಯ ಶ್ಲೋಕ, ಕೀರ್ತನೆ, ಭಜನೆಯನ್ನು ಹಾಡುತ್ತಾರೆ. ಪಠಾಣ್‌ ದರ್ಬಾರ್‌ ಚೌಕದ ಕೃಷ್ಣಮಂದಿರ, ನಾರಾಯಣಹಿತಿ ಕೃಷ್ಣಮಂದಿರ ಆಚರಣೆಯ ಕೇಂದ್ರಗಳು. ನಾರಾಯಣ ನಾರಾಯಣ…, ಗೋಪಾಲ ಗೋಪಾಲ…ನಾಮಸ್ಮರಣೆಯು ನಡೆಯುತ್ತದೆ.

ಬಾಂಗ್ಲಾದೇಶ:
ಬಾಂಗ್ಲಾದಲ್ಲಿ ಜನ್ಮಾಷ್ಟಮಿಯಂದು ರಾಷ್ಟ್ರೀಯ ರಜೆ! ಅಂದು ಢಾಕಾದ ಢಾಕೇಶ್ವರಿ ದೇಗುಲದಿಂದ (ಬಾಂಗ್ಲಾದ ರಾಷ್ಟ್ರೀಯ ದೇವಾಲಯ) ಮೆರವಣಿಗೆ ಹಳೆಢಾಕಾದ ಬೀದಿಯಲ್ಲಿ ಸಾಗುತ್ತದೆ. ಈ ಮೆರವಣಿಗೆ 1902ರಿಂದ ನಡೆಯುತ್ತಿತ್ತು. ಪಾಕಿಸ್ತಾನದ ಸ್ಥಾಪನೆಯೊಂದಿಗೆ 1948ರಲ್ಲಿ ಸ್ಥಗಿತಗೊಂಡಿತ್ತು. 1989ರಿಂದ ಪುನರಾರಂಭಗೊಂಡಿದೆ.

ಪಾಕಿಸ್ತಾನ:
ಪಾಕಿಸ್ತಾನಿ ಹಿಂದುಗಳಿಂದ ಕರಾಚಿಯ ಶ್ರೀಸ್ವಾಮಿನಾರಾಯಣ ದೇಗುಲದಲ್ಲಿ ಕೃಷ್ಣಜನ್ಮಾಷ್ಟಮಿ ನಡೆಯುತ್ತದೆ. ಜನ್ಮಾಷ್ಟಮಿಯನ್ನು ಆಚರಿಸಬೇಕೆಂದು ಘೋಷಿಸಿದ, ಜಗತ್ತಿನಲ್ಲೇ ಚುನಾಯಿತ ಸರಕಾರಗಳ ಪ್ರಪ್ರಥಮ ಅಧಿಕಾರಿ ಜನೆತ್‌ ನೆಪೊಲಿತಾನೊ, ಅರಿಜೋನಾದ ಗವರ್ನರ್‌ ಆಗಿದ್ದವಳು. ಕೆರಿಬಿಯಾ, ಗಯಾನ, ಟಿನಿಡಾಡ್‌, ಟೊಬಾಗೋ, ಜಮೈಕಾ, ಫಿಜಿ, ಹಿಂದೆ ಡಚ್‌ ವಾಸಾಹತಿಯಾಗಿದ್ದ ಸುರಿನೆಮ್‌ನ ಹಿಂದುಗಳು ಆಚರಿಸುತ್ತಾರೆ. ಇಲ್ಲಿನ ಹಿಂದುಗಳು, ತ.ನಾ., ಉ.ಪ್ರ., ಬಿಹಾರ್‌, ಬಂಗಾಳ, ಒರಿಸ್ಸಾದಿಂದ ವಲಸೆ ಹೋದವರು.

ಅಮೆರಿಕ:
ಸ್ವಾಮಿ ಪ್ರಭುಪಾದ (ಭಕ್ತಿ ವೇದಾಂತಸ್ವಾಮಿ, ಇಸ್ಕಾನಿನ ಸ್ಥಾಪಕ)ರ ಪ್ರಭಾವದಿಂದಾಗಿ ಅಮೆರಿಕದಲ್ಲಿ ಹರೇಕೃಷ್ಣ ಚಳುವಳಿ, ಕೃಷ್ಣಾರಾಧನೆಯನ್ನು ವ್ಯಾಪಕವಾಗಿ ಆರಂಭಿಸಿತು. ಅನೇಕ ಅಮೆರಿಕನ್ನರು ಹಿಂದು ಧರ್ಮವನ್ನು ಅನುಸರಿಸಿದರು. ಕೆಲಿಫೋರ್ನಿಯಾ, ಒರ್ಲಾಂಡೋ, ಮಸ್ಸಾಚುಸೆಟ್ಸ್‌ನಿಂದ ನ್ಯೂಯಾರ್ಕ್‌ವರೆಗೆ ಅದ್ದೂರಿಯಿಂದ ಆಚರಿಸುತ್ತಾರೆ.

ಕೆನಡಾ ಟೊರೆಂಟೋ:
ಭಾರತೀಯರೇ ಹೆಚ್ಚಾಗಿ ಆಚರಿಸುವ ಜನ್ಮಾಷ್ಟಮಿಯಂದು ಭಕ್ತರು ರಾಧಾಕೃಷ್ಣ ದೇಗುಲವನ್ನು ಸಂದರ್ಶಿಸಿ ಭಜನೆ-ಪೂಜಾದಿಗಳಲ್ಲಿ ಭಾಗವಹಿಸುತ್ತಾರೆ. ರಿಚ¾ಂಡ್‌ ಹಿಲ್‌ ಹಿಂದು ದೇಗುಲದಲ್ಲೂ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಕೃಷ್ಣಜನ್ಮದ ಘಳಿಗೆಯನ್ನು ಶಂಖವಾದನದ ಮೂಲಕ ಆಚರಿಸುತ್ತಾರೆ.

ಮಾಂಟ್ರೀಯಲ್‌:
ಇಸ್ಕಾನ್‌ ಚಳುವಳಿಯಿಂದಾಗಿ ಇಲ್ಲಿ ಜನ್ಮಾಷ್ಟಮಿ ದೊಡ್ಡ ಮಟ್ಟದಲ್ಲಿ ಜರಗುತ್ತದೆ. ಸ್ವಾಮಿ ಪ್ರಭುಪಾದ, ಭಕ್ತಿ ವಿನೋದ ಥಾಕೂರ್‌ರ ಬೋಧನೆಯ ಪ್ರಭಾವದಿಂದ ಜನ್ಮಾಷ್ಟಮಿ ಜನಪ್ರಿಯವಾಗಿದೆ. ಇಲ್ಲಿನ ಶ್ರೀರಾಧಾ ದಾಮೋದರ ಇಸ್ಕಾನ್‌ ದೇಗುಲಕ್ಕೆ ಭಕ್ತರು ಸಂದರ್ಶಿಸುತ್ತಾರೆ.

ಸಿಂಗಾಪುರ:
ಮಿನಿಭಾರತವನ್ನು ಜನ್ಮಾಷ್ಟಮಿಯಂದು ಕಾಣಬಹುದು. ಕೃಷ್ಣನಾಮ ಪಠಣೆಯ ಸ್ಪರ್ಧೆ ಅಂದಿನ ಆಕರ್ಷಣೆ. ಚಂದರ್‌ ರೋಡಿನ ಶ್ರೀ ಲಕ್ಷ್ಮೀನಾರಾಯಣ ದೇಗುಲದಲ್ಲಿ ಪೂಜಾದಿ ಕಾರ್ಯಕ್ರಮಗಳು ನಡೆಯುತ್ತವೆ.

ಮಲೇಶಿಯಾ:
ಮುಸ್ಲಿಂ ಪ್ರಧಾನ ದೇಶವಾದರೂ ಜನ್ಮಾಷ್ಟಮಿಯ ಸಂಭ್ರಮಕ್ಕೆ ಕೊರತೆಯಿಲ್ಲ. ಅಲ್ಲಿ ನೆಲೆಸಿರುವ ಸುಮಾರು 2 ಮಿಲಿಯ ದ. ಭಾರತೀಯರೆಲ್ಲರೂ ಕೃಷ್ಣ ಭಕ್ತರೇ. ಸುಮಾರು 5,000ಕ್ಕೂ ಮಿಕ್ಕಿ ಭಕ್ತರು ಕೌಲಾಲಂಪುರದ ಕೃಷ್ಣ ದೇಗುಲದಲ್ಲಿ ಸಾಲಾಗಿ ನಿಂತು ದರ್ಶನಗೈಯುತ್ತಾರೆ.

ನ್ಯೂಜಿಲೇಂಡ್‌:
ಆಕ್ಲೆಂಡಿನ ಶ್ರೀ ರಾಧಾಗಿರಿಧಾರಿ ಮಂದಿರ(ಇಸ್ಕಾನ್‌ ದೇಗುಲಗಳಲ್ಲೇ ಅತ್ಯಂತ ಸುಂದರ), ಸ್ವಾಮಿನಾರಾಯಣ ಮಂದಿರದಲ್ಲಿ ಜನ್ಮಾಷ್ಟಮಿಯನ್ನು ಅದ್ದೂರಿಯಿಂದ
ಆಚರಿಸಲಾಗುತ್ತದೆ.

-ಜಲಂಚಾರು ರಘುಪತಿ ತಂತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ