ಸಿದ್ದಾಪುರ: ಮನೆಯೊಳಗೆ ಮಲಗಿದ್ದ ಮಗು ಅಪಹರಣ?

Team Udayavani, Jul 12, 2019, 10:34 AM IST

ಸಿದ್ದಾಪುರ : ಯಡಮೊಗೆ ಗ್ರಾಮದ ಕುಮಿಬೇರು ಎಂಬಲ್ಲಿ ಗುರುವಾರ ಬೆಳಗ್ಗಿನ ಜಾವ ಮನೆಯೊಂದಕ್ಕೆ ನುಗ್ಗಿದ ಮುಸುಕುಧಾರಿಯೊಬ್ಬ ತಾಯಿಯೊಂದಿಗೆ ಮಲಗಿದ್ದ ಎರಡು ಪುಟ್ಟ ಮಕ್ಕಳ ಪೈಕಿ ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗುವನ್ನು ಅಪಹರಿಸಿದ್ದಾನೆ ಎನ್ನಲಾಗಿದ್ದು, ಪೊಲೀಸರಿಂದ ಬಿರುಸಿನ ಶೋಧ ನಡೆಯುತ್ತಿದೆ.

ಯಡಮೊಗೆ ಗ್ರಾಮದ ಕುಮಿಬೇರು ಸಂತೋಷ್‌ ನಾಯ್ಕ ಮತ್ತು ರೇಖಾ ದಂಪತಿಯ ಕಿರಿಯ ಪುತ್ರಿ ಸಾನ್ವಿಕಾ ಅಪಹೃತ ಮಗು. ತಂದೆ ಸಂತೋಷ್‌ ನಾಯ್ಕ ಹೊಸಂಗಡಿ ಸಂಡೂರು ಪವರ್‌ ಪ್ರಾಜೆಕ್ಟ್‌ನಲ್ಲಿ ಭದ್ರತಾ ಸಿಬಂದಿಯಾಗಿದ್ದು, ಘಟನೆ ಸಂದರ್ಭ ಕರ್ತವ್ಯದಲ್ಲಿದ್ದರು. ರೇಖಾ 6 ವರ್ಷ ಪ್ರಾಯದ ಮಗ ಸಾತ್ವಿಕ್‌ ಮತ್ತು ಸಾನ್ವಿಕಾ ಜತೆಗೆ ಮನೆಯಲ್ಲಿದ್ದರು. ಬೆಳಗಿನ ಜಾವ 5ರಿಂದ 6ರ ನಡುವೆ ಮುಸುಕುಧಾರಿಯೊಬ್ಬ ಮಗುವನ್ನು ಅಪಹರಿಸಿದ್ದಾನೆ ಎಂದು ಆಕೆ ತಿಳಿಸಿದ್ದಾರೆ. ಬೆಳಗ್ಗಿನ ಜಾವ ಪಕ್ಕದ ಮನೆಯವರು ಸಂತೋಷ್‌ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ.

ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬಂದಿ ಮತ್ತು ಸ್ಥಳೀಯರು ನದಿ ಸೇರಿದಂತೆ ಪರಿಸರದಲ್ಲೆಲ್ಲ ಹುಡುಕಿದರೂ ಹೆಣ್ಣು ಮಗುವಾಗಲೀ ಅಪಹರಿಸಿದ್ದಾನೆನ್ನಲಾದ ವ್ಯಕ್ತಿಯಾಗಲಿ ಪತ್ತೆಯಾಗಿಲ್ಲ.

ಎಸ್‌ಪಿ ನಿಶಾ ಜೇಮ್ಸ್‌, ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ, ಕುಂದಾಪುರ ಡಿವೈಎಸ್‌ಪಿ ದಿನೇಶ್‌ ಕುಮಾರ್‌, ಸಿಪಿಐ ಮಂಜಪ್ಪ, ಶಂಕರ ನಾರಾಯಣ, ಅಮಾಸೆಬೈಲು, ಕಂಡೂರು ಹಾಗೂ ಕುಂದಾಪುರ ಪೊಲೀಸ್‌ ಠಾಣೆಯ ಠಾಣಾಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಶ್ವಾನದಳ ಕೂಡ ಆಗಮಿಸಿದ್ದು, ಮನೆಯಿಂದ ಹೊಳೆಯ ತನಕ ಹೋಗಿ ನಿಂತಿದೆ. ಪೊಲೀಸರು ಮನೆ ಮಂದಿಯನ್ನು ಹಾಗೂ ಅಕ್ಕ ಪಕ್ಕದ ಮನೆಯವರನ್ನು ತನಿಖೆಗೆ ಒಳಪಡಿಸಿದ್ದಾರೆ.

ಹೆಣ್ಣು ಮಗು ಅಪಹರಣ ಸುದ್ದಿಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಕುಂದಾಪುರ ತಾಲೂಕು ಆರೋಗ್ಯಾಧಿ ಕಾರಿ ಡಾ| ನಾಗಭೂಷಣ ಉಡುಪ, ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ, ಜಿ.ಪಂ. ಸದಸ್ಯ ರೋಹಿತ್‌ ಶೆಟ್ಟಿ ಸೇರಿದಂತೆ ನೂರಾರು ಗ್ರಾಮಸ್ಥರು ಘಟನ ಸ್ಥಳದಲ್ಲಿ ಹಾಜರಿದ್ದರು. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆಗೆ ವಿಶೇಷ ತಂಡ
ಸ್ಥಳಕ್ಕೆ ಎಸ್‌ಪಿ ನಿಶಾ ಜೇಮ್ಸ್‌ ಅವರು ಬೆಳಗ್ಗೆ 10 ಗಂಟೆಗೆ ಆಗಮಿಸಿದ್ದು, ಸಂಜೆಯ ವರೆಗೂ ಖುದ್ದು ಹಾಜರಿದ್ದು, ಮಾಹಿತಿ ಕಲೆಹಾಕಿದ್ದಲ್ಲದೆ ಹುಡುಕಾಟದಲ್ಲೂ ಭಾಗಿಯಾಗಿದ್ದರು. ಅನಂತರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು ಇದು ಗಂಭೀರ ಪ್ರಕರಣವಾಗಿದ್ದರಿಂದ ಡಿವೈಎಸ್‌ಪಿ ನೇತೃತ್ವದ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಗುವುದು ಎಂದರು.

ಬೆಚ್ಚಿ ಬಿದ್ದ ಜನತೆ; ಪೊಲೀಸರಿಂದ ಬಿರುಸಿನ ಶೋಧ
“ಬೆಳಗಿನ ಜಾವ ಇದ್ದಕ್ಕಿದ್ದಂತೆ ಮಗುವಿನ ಅಳು ಕೇಳಿ ನನಗೆ ಎಚ್ಚರವಾಯಿತು. ನಿದ್ದೆಗಣ್ಣಿನಲ್ಲಿ ನೋಡಿದಾಗ ಮುಸುಕುಧಾರಿಯೊಬ್ಬ ಅಳುತ್ತಿದ್ದ ಮಗುವನ್ನೆತ್ತಿಕೊಂಡು ಮನೆಯ ಬಲಭಾಗದ ಬಾಗಿಲಿನ ಮೂಲಕ ಪರಾರಿಯಾದ. ನಾನು ಮಗನನ್ನುಎತ್ತಿಕೊಂಡು ಹಿಂದೆಯೇ ಓಡಿದೆ. ಸಮೀಪದ ಕುಬಾ ನದಿಯನ್ನು ದಾಟಿ ಆತ ಪರಾರಿಯಾದ. ಆತನ ಹಿಂದೆಯೇ ಮಗನ ಸಹಿತ ನಾನೂ ನದಿಗಿಳಿದಿದ್ದು ನೀರಿನ ಸೆಳೆತಕ್ಕೆ ಸಿಲುಕಿದೆವು. ಅಷ್ಟರಲ್ಲಿ ಆತ ಪರಾರಿಯಾಗಿದ್ದ. ನಾನು ಹೇಗೋ ಸಾವರಿಸಿಕೊಂಡು ಮಗನ ಸಹಿತ ಮತ್ತೆ ದಡಕ್ಕೆ ಬಂದೆ’ ಎಂದು ತಾಯಿ ಹೇಳಿದ್ದಾರೆ.

ಮಗುವನ್ನೆತ್ತಿ ಓಡುತ್ತಿದ್ದ ಆಪರಿಚಿತ ವ್ಯಕ್ತಿಯ ಹಿಂದೆಯೇ ಮಗನನ್ನೆತ್ತಿ ಕೊಂಡು ಧಾವಿಸಿದ ತಾಯಿ ನದಿಗೆ ಜಿಗಿದಾಗ ನೀರಿನಲ್ಲಿ ಸುಮಾರು 150 ಮೀಟರ್‌ ದೂರ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಬೊಬ್ಬೆ ಕೇಳಿದ ನಾವು ನದಿಯ ಕಡೆಗೆ ಓಡಿ ಬಂದಾಗ ಗಂಡು ಮಗು ಮರದ ಬೇರೊಂದನ್ನು ಆಧರಿಸಿಕೊಂಡು ಅಳುತ್ತಿತ್ತು. ಸ್ವಲ್ಪ ದೂರದಲ್ಲಿ ತಾಯಿ ದಡದತ್ತ ಬರುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ