ಸುಬ್ರಹ್ಮಣ್ಯ: ಮುಳುಗಡೆ ಭೀತಿಯಲ್ಲಿ ನದಿ ಪಾತ್ರದ ಮನೆಗಳು

ಕಲ್ಮಕಾರದಲ್ಲಿ ಬರೆ ಕುಸಿತ; ಕುಮಾರಧಾರಾದಲ್ಲಿ ತಗ್ಗದ ಪ್ರವಾಹ; ಕೃಷಿ ಭೂಮಿ ಜಲಾವೃತ

Team Udayavani, Aug 10, 2019, 12:55 PM IST

ಕೆಂಬಣ್ಣಕ್ಕೆ ತಿರುಗಿ ತುಂಬಿ ಹರಿಯುತ್ತಿರುವ ಕಲ್ಮಕಾರು ಹೊಳೆ.

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಹಾಗೂ ಘಟ್ಟದ ಮೇಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ನದಿ ತೀರದ ಹಲವು ಮನೆಗಳು ಮುಳುಗುವ ಸ್ಥಿತಿಯಲ್ಲಿವೆ. ಕಲ್ಮಕಾರು ಭಾಗದಲ್ಲಿ ಬರೆ ಜರಿದು ಮನೆಗೆ ಹಾನಿಯಾಗಿದೆ.

ಪ್ರವಾಹಕ್ಕೆ ಕುಮಾರಧಾರಾ ಸ್ನಾನಘಟ್ಟ ಶುಕ್ರವಾರವೂ ಸಂಪೂರ್ಣ ಮುಳುಗಡೆಗೊಂಡಿತ್ತು. ಗುರುವಾರ ಮುಳುಗಡೆಗೊಂಡಿದ್ದ ಪಕ್ಕದ ದರ್ಪಣ ತೀರ್ಥ ನದಿಯ ಸುಬ್ರಹ್ಮಣ್ಯ-ಮಂಜೇಶ್ವರ ಸಂಪರ್ಕ ಸೇತುವೆ ರಾತ್ರಿ ಸಂಚಾರಕ್ಕೆ ಮುಕ್ತವಾಗಿತ್ತು. ಶುಕ್ರವಾರ ಬೆಳಗ್ಗೆ ಮತ್ತೆ ಮುಳುಗಡೆಗೊಂಡಿದೆ. ಪಕ್ಕದಲ್ಲಿ ನದಿಯ ನೆರೆ ನೀರು ರಸ್ತೆಗೆ ಹರಿದು ಸಂಚಾರ ವ್ಯತ್ಯಯಗೊಂಡಿತು. ಸುಬ್ರಹ್ಮಣ್ಯ-ಕಾಣಿಯೂರು-ಪುತ್ತೂರು ಮಾರ್ಗದಲ್ಲಿ ಸಂಚರಿಸುವವರು ತೊಂದರೆಗೆ ಒಳಗಾದರೂ ಸಂಜೆ ತನಕವೂ ನೀರು ಇಳಿಯದ ಕಾರಣ ಸುಬ್ರಹ್ಮಣ್ಯ ನಗರಕ್ಕೆ ಕೆಲಸಕ್ಕೆ ಆಗಮಿಸಿದ ಹಲವು ಸಂಸ್ಥೆಗಳ ಉದ್ಯೋಗಿಗಳು ಗುತ್ತಿಗಾರು ಮಾರ್ಗವಾಗಿ ಸುತ್ತು ಬಳಸಿ ತೆರಳಿದರು.

ಕುಟುಂಬಗಳ ಸ್ಥಳಾಂತರ
ಭಾರೀ ಪ್ರವಾಹಕ್ಕೆ ಗುರುವಾರ ಮುಳುಗಡೆಗೊಂಡ ಕುಮಾರಧಾರಾ ನದಿ ದಂಡೆಯ ಕುಲ್ಕುಂದ, ನೂಚಿಲ, ಕುಮಾರಧಾರಾ ಪಕ್ಕದ ಹತ್ತಕ್ಕೂ ಅಧಿಕ ಮನೆಗಳು ಮುಳುಗಡೆ ಸ್ಥಿತಿಯಲ್ಲೇ ಇವೆ. ಈ ಕುಟುಂಬಗಳು ಸ್ಥಳಾಂತರಗೊಂಡು ದೇವಸ್ಥಾನದಿಂದ ಒದಗಿಸಿದ ವಸತಿಗೃಹಗಳಲ್ಲಿ ಆಶ್ರಯ ಪಡಕೊಂಡಿವೆ.

ಮನೆ ಮೇಲೆ ಬಿದ್ದ ಮರ
ಕುಲ್ಕುಂದದಲ್ಲಿ ಗುರುವಾರ ಶಿವಲೀಲಾ ಅವರ ಮನೆ ಮೇಲೆ ಮರ ಬಿದ್ದಿತ್ತು. ಘಟನೆ ನಡೆದ ತತ್‌ಕ್ಷಣ ಪಿಡಿಒ ಮುತ್ತಪ್ಪ, ಗ್ರಾ.ಪಂ. ಉಪಾಧ್ಯಕ್ಷ ರಾಜೇಶ್‌ ಎನ್‌.ಎಸ್‌., ಸದಸ್ಯ ಪ್ರಶಾಂತ್‌ ಭಟ್ ಮಾಣಿಲ, ಎನ್‌ಡಿಆರ್‌ಎಫ್ ತಂಡ ತೆರಳಿ ಮನೆಗೆ ಬಿದ್ದ ಮರ ತೆರವುಗೊಳಿಸಿದರು.

ನೂಚಿಲದಲ್ಲಿ ಶಿವಾನಂದ ಅವರು ಜಮೀನಿನಲ್ಲಿ ಕಾಮಗಾರಿ ನಡೆಸಿದ ಕಾರಣ ನೀರು ಹರಿದು ಹೋಗದೆ ಕೃಷಿ ತೋಟಗಳಲ್ಲಿ ನೀರು ಸಂಗ್ರಹಗೊಂಡಿತ್ತು.

ಅದನ್ನು ಸುಬ್ರಹ್ಮಣ್ಯ ಗ್ರಾ.ಪಂ. ವತಿಯಿಂದ ಪೊಲೀಸ್‌ ರಕ್ಷಣೆ ಯೊಂದಿಗೆ ಜೆಸಿಬಿ ಮೂಲಕ ತೆರವು ಗೊಳಿಸಲಾಯಿತು.

ಎನ್‌ಡಿಆರ್‌ಎಪ್‌ ಹಾಗೂ ಫೈಯರ್‌ ಫೋರ್ಸ್‌ ತಂಡ ಸುಬ್ರಹ್ಮಣ್ಯದಲ್ಲೇ ಬೀಡು ಬಿಟ್ಟಿದೆ. ಎರಡು ಬೋಟ್ತರಿಸಲಾಗಿದೆ. ಸುಳ್ಯ ತಾ.ಪಂ. ಇ.ಒ. ಭವಾನಿ ಶಂಕರ್‌ ಗುರುವಾರ ರಾತ್ರಿ ಸುಬ್ರ ಹ್ಮಣ್ಯದಲ್ಲಿ ವಾಸ್ತವ್ಯವಿದ್ದು, ಸಂತ್ರಸ್ತರಿಗೆ ತೊಂದರೆ ಯಾಗದಂತೆ ನೋಡಿ ಕೊಂಡರು.

ಬರೆ ಕುಸಿದು ಹಾನಿ

ಕಲ್ಮಕಾರು ಶೆಕ್‌ ಪೆರ್ನಾಜದಲ್ಲಿ ಗುರುವಾರ ರಾತ್ರಿ ಹುಕ್ರಪ್ಪ ಗೌಡ ಅವರ ಮನೆ ಮೇಲೆ ಬರೆ ಕುಸಿದು ಬಿದ್ದಿದೆ. ಮನೆಯ ಹಿಂಭಾಗದ ಬರೆ ಜರಿದು ರಬ್ಬರ್‌ ತೋಟದ ಇಪ್ಪತ್ತಕ್ಕೂ ಅಧಿಕ ಮರಗಳು ಬಿದ್ದಿವೆ. ಈ ಭಾಗದಲ್ಲಿ ಮತ್ತಷ್ಟೂ ಕುಸಿತಗಳಾಗುವ ಭೀತಿ ಇದೆ. ಕಲ್ಮಕಾರಿನ ಬಿಎಸ್ಸೆನ್ನೆಲ್ ಮೊಬೈಲ್ ಟವರ್‌ ಡೀಸೆಲ್ ಕೊರತೆಯಿಂದ ಕಾರ್ಯಾಚರಿಸದೆ ಸಂಪರ್ಕ ಸಾಧ್ಯವಾಗಲಿಲ್ಲ. ಅನಂತರದಲ್ಲಿ ಡೀಸೆಲ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ.

ಪ್ರವಾಹಕ್ಕೆ ತತ್ತರ
ಯೇನೆಕಲ್ಲು, ಹರಿಹರ, ಕೊಲ್ಲಮೊಗ್ರು, ಮಡಪ್ಪಾಡಿ, ಬಾಳುಗೋಡು, ಪಂಜ, ಗುತ್ತಿಗಾರು ಮೊದಲಾದೆಡೆಗಳಲ್ಲಿ ಶುಕ್ರವಾರ ಭಾರೀ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಅನೇಕ ಕಡೆಗಳಲ್ಲಿ ಕೃಷಿ ಭೂಮಿ ಜಲಾವೃತಗೊಂಡಿದೆ. ಮಳೆಗೆ ನೆರೆಯ ಜತೆ ಮರಗಳು ತೇಲಿ ಬಂದು ಸೇತುವೆಗಳಲ್ಲಿ ಸಿಕ್ಕಿಹಾಕಿಕೊಂಡು ರಸ್ತೆಗೆ ಹರಿದು ಅಲ್ಲಲ್ಲಿ ಸಂಚಾರದಲ್ಲಿ ವ್ಯತ್ಯಯಗಳು ಆಗಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ