ಸರಳ ಮಳೆಕೊಯ್ಲು: ಮಡಂತ್ಯಾರು ಗ್ರಾ.ಪಂ. ಮಾದರಿ

ಆರಂಭದ 100 ಮನೆಗಳಿಗೆ ಅಳವಡಿಕೆ

Team Udayavani, Jul 23, 2019, 5:00 AM IST

ಬೆಳ್ತಂಗಡಿ: ಜಲಕ್ಷಾಮ ಎಲ್ಲೆಡೆ ಗಂಭೀರ ಸ್ವರೂಪ ಪಡೆಯುತ್ತಿರುವ ನಡುವೆಯೇ ಮಳೆ ಪ್ರಮಾಣ ತೀವ್ರ ಕ್ಷೀಣಿಸಿರುವುದು ಮುಂದಿನ ಬೇಸಗೆ ಪರಿಣಾಮವನ್ನು ಇಂದೇ ಚಿತ್ರಿಸಿದಂತಿದೆ. ಈ ನಡುವೆ ಮಡಂತ್ಯಾರು ಗ್ರಾಮ ಪಂಚಾಯತ್‌ ಅತೀ ಸರಳ ಮಳೆಕೊಯ್ಲು ವಿಧಾನ ಅನುಸರಿಸುವ ಮೂಲಕ ಜಿಲ್ಲೆಗೆ ಮಾದರಿ ಗ್ರಾಮವಾಗಿ ವಿಭಿನ್ನತೆ ಸಂದೇಶ ಸಾರಿದೆ.

ಗ್ರಾಮ ಪಂಚಾಯತ್‌ ಅನುದಾನ
ಆಡಳಿತ ಮಂಡಳಿ ಸಭೆಯಲ್ಲಿ ಮೊದಲ 100 ಮನೆಗಳನ್ನು ಆಯ್ಕೆ ಮಾಡಿದ್ದು, ಪ್ರತಿ ಮನೆಗೆ ರೂ. 1 ಸಾವಿರದಂತೆ 100 ಮನೆಗೆ 1 ಲಕ್ಷ ರೂ. ಮೀಸಲಿಟ್ಟಿದೆ. ಮನೆಮಂದಿ ಆಸಕ್ತಿಯಿಂದ ಮುಂದೆ ಬಂದಲ್ಲಿ ಗ್ರಾಮ ಪಂಚಾಯತ್‌ ಪ್ರಾತ್ಯಕ್ಷಿಕೆ ಮೂಲಕ ಸ್ಥಳೀಯರಿಗೂ ಮಾಹಿತಿ ನೀಡಿ ಅಳವಡಿಸುವ ಮುಖೇನ ಈಗಾಗಲೇ 20 ಮನೆಗಳನ್ನು ಪೂರ್ಣಗೊಳಿಸಿದೆ.

ಶ್ರೀಕ್ಷೇತ್ರ ಧ.ಗ್ರಾ. ಸಹಕಾರ
ಮಡಂತ್ಯಾರು ಗ್ರಾಮ ಪಂಚಾಯತ್‌ ಮಳೆ ಕೊಯ್ಲು ಅನುಷ್ಠಾನಗೊಳ್ಳುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯೂ ಪ್ರಮುಖ ಪಾತ್ರ ವಹಿಸಿದೆ. ಈಗಾಗಲೇ ಹಲವು ಆಯಾಮಗಳಲ್ಲಿ ಸಮಾಜ ಕಾರ್ಯದಲ್ಲಿ ತೊಡಿಕೊಂಡಿರುವ ಸಂಸ್ಥೆ ಮಡಂತ್ಯಾರು ಗ್ರಾಮ ಪಂಚಾಯತ್‌ ಜತೆಗೂಡಿ ಮೊದಲ 20 ಮನೆಗಳಿಗೆ 500 ರೂ. ನಂತೆ ಸಹಾಯಧನ ಒದಗಿಸುವ ಮೂಲಕ ಅಭಿಯಾನ ಯಶಸ್ಸಿಗೆ ಕೈಜೋಡಿಸಿದೆ. ಇದು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲು ಮತ್ತೂಂದು ಹೆಜ್ಜೆಯಾಗಿದೆ.

2 ಸಾವಿರ ರೂ. ವೆಚ್ಚ
200 ಲೀ. ಸಾಮರ್ಥ್ಯದ ಡ್ರಮ್‌, 5 ಚಟ್ಟಿ 40 ಎಂ.ಎಂ. ಗಾತ್ರದ ಜಲ್ಲಿ, 2 ಬುಟ್ಟಿ ಮರಳು, ನೈಲಾನ್‌ ನೆಟ್‌, 5 ಕೆ.ಜಿ. ಇದ್ದಿಲು, ಬಟ್ಟೆ ಬಳಸಿ ಮನೆ ಆವರಣದ ನೀರನ್ನು ಬಾವಿ ಅಥವಾ ಬೋರ್‌ವೆಲ್‌ಗೆ ಶುದ್ಧೀಕರಿಸಿ ಮರುಪೂರಣ ಮಾಡಲು ತಗಲುವ ವೆಚ್ಚ 2 ಸಾವಿರ ರೂ. ಆರಂಭದಲ್ಲಿ 200 ಲೀ.ನ ಡ್ರಮ್‌ಗೆ ಜಲ್ಲಿ, ನೆಟ್‌, ಜಲ್ಲಿ, ಇದ್ದಿಲು, ನೆಟ್‌, ಮರಳು, ಬಳಿಕ ಬಿಳಿ ನೈಲಾನ್‌ ಬಟ್ಟೆ ಹಂತ ಹಂತವಾಗಿ ಜೋಡಿಸಲಾಗುತ್ತದೆ. ಮನೆ ಛಾವಣೆಗೆ ಬಿದ್ದ ಮಳೆ ನೀರು ಪೈಪ್‌ ಮೂಲಕ ಡ್ರಮ್‌ ಸೇರಿ ಶುದ್ಧಗೊಂಡು ಬೋರ್‌ವೆಲ್‌ ಅಥವಾ ಬಾವಿಗೆ ಸೇರುವ ಮೂಲಕ ಸರಳ ವಿಧಾನದಲ್ಲಿ ಕಡಿಮೆ ಖರ್ಚಿನಲ್ಲಿ ಮರುಪೂರಣ ಮಾಡಿರುವುದು ವಿಶೇಷತೆಯಾಗಿದೆ.

 ಜಲ ಸಂರಕ್ಷಣೆ
ನೀರಿನ ಅಭಾವ ಭವಿಷ್ಯದಲ್ಲಿ ಬಾರದಿರುವ ಉದ್ದೇಶದಿಂದ ಆಡಳಿತ ಮಂಡಳಿ, ಸದಸ್ಯರು ಗಮನಾರ್ಹ ಚಿಂತನೆ ಕೈಗೊಂಡಿದ್ದೇವೆ. ಎಲ್ಲರ ಒಮ್ಮತದಿಂದ ಅಭಿಯಾನ ರೀತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ 2,500ಕ್ಕೂ ಹೆಚ್ಚು ಮನೆಗಳಿದ್ದು, ಮೊದಲ ಹಂತವಾಗಿ 100 ಮನೆಗಳಿಗೆ ಅನುದಾನ ನೀಡಲಾಗಿದೆ. ಸರಳ ವಿಧಾನವಾದ್ದರಿಂದ ಪ್ರತಿಯೊಂದು ಮನೆಯಲ್ಲೂ ಅಳವಡಿಸಿ ಜಲ ಸಂರಕ್ಷಣೆ, ಅಂತರ್ಜಲ ಹೆಚ್ಚಿಸಬೇಕಾಗಿದೆ.
 -ಗೋಪಾಲಕೃಷ್ಣ ಕೆ., ಅಧ್ಯಕ್ಷರು, ಮಡಂತ್ಯಾರು ಗ್ರಾ.ಪಂ.

ಅತೀ ಕಡಿಮೆ ವೆಚ್ಚ
ನೀರಿನ ಸಮಸ್ಯೆ ಮನಗಂಡು ಮನೆಮಂದಿ ಈ ಸರಳವಿಧಾನ ಅಳವಡಿಸಲು ಮುಂದಾಗಿದ್ದೆವು. ಅತೀ ಕಡಿಮೆ ವೆಚ್ಚದಲ್ಲಿ ಜಲ ಮರುಪೂರಣ ಮಾಡಲಾಗಿದೆ. ಈ ವಿಧಾನವನ್ನು ಪ್ರತಿಯೊಬ್ಬರು ಅಳವಡಿಸಿದಲ್ಲಿ ನೀರಿನ ಸಮಸ್ಯೆ ಭವಿಷ್ಯದಲ್ಲಿ ಆಪತ್ತು ಬರದಂತೆ ಕಾಪಾಡಲಿದೆ.
– ಹರಿಣಾಕ್ಷಿ, ಸೇವಾನಿರತೆ, ಪಾರೆಂಕಿ

 ಪ್ರಾತ್ಯಕ್ಷಿಕೆ
ಶ್ರೀಕ್ಷೇತ್ರ ಧ.ಗ್ರಾ. ಸಂಸ್ಥೆ ಈಗಾಗಲೇ ರಾಜ್ಯಾದ್ಯಂತ ಕೆರೆ ಪುನಶ್ಚೇತನ, ಇಂಗುಗುಂಡಿ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದೆ. ಮಡಂತ್ಯಾರು ಗ್ರಾ.ಪಂ. ಚಿಂತನೆಗೆ ಪೂರಕವಾಗಿ ಮೊದಲ 20 ಮನೆಗಳಿಗೆ ಅನುದಾನ ನೀಡಿ ಪ್ರಾತ್ಯಕ್ಷಿಕೆ ಮೂಲಕವೂ ಮಾಹಿತಿ ಒದಗಿಸಿದ್ದೇವೆ.
-ಸಚಿನ್‌, ವಲಯ ಮೇಲ್ವಿಚಾರಕರು, ಎಸ್‌.ಕೆ.ಡಿ.ಆರ್‌.ಡಿ.ಪಿ.

-  ಚೈತ್ರೇಶ್‌ ಇಳಂತಿಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ