ವಿಶ್ವಾಸಮತ ಮರೀಚಿಕೆ, ರಾತ್ರಿಯವರೆಗೂ ಕಲಾಪ ನಡೆದರೂ ಪೂರ್ಣಗೊಳ್ಳದ ಚರ್ಚೆ

ಇಂದು 6 ಗಂಟೆಯೊಳಗೆ ಪ್ರಕ್ರಿಯೆ ಮುಗಿಸಲು ಸ್ಪೀಕರ್‌ ಸೂಚನೆ

Team Udayavani, Jul 23, 2019, 6:22 AM IST

ಬೆಂಗಳೂರು: ಸೋಮವಾರವೂ ವಿಶ್ವಾಸಮತ ಮಂಡನೆಯಾಗಲಿಲ್ಲ. ರಾಜ್ಯ ಸರಕಾರ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರು ನೀಡಿದ್ದ ಭರವಸೆಯೂ ಸುಳ್ಳಾಗಿದ್ದು, ಮಧ್ಯರಾತ್ರಿ ವೇಳೆಗೆ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಗಲಿದ್ದು, 6 ಗಂಟೆ ವೇಳೆಗೆ ವಿಶ್ವಾಸ ಮತ ಪ್ರಕ್ರಿಯೆ ಮುಗಿಯಬೇಕಿದೆ. ಸ್ಪೀಕರ್‌ ರಮೇಶ್‌ ಕುಮಾರ್‌ ಅವರು, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಸಚಿವ ಆರ್‌.ವಿ.ದೇಶಪಾಂಡೆ ಅವರ ಸಲಹೆ ಮೇರೆಗೆ ಕಲಾಪವನ್ನು ಮುಂದೂಡಿದರು.

ಈ ಹಂತದಲ್ಲಿ ಸಿದ್ದರಾಮಯ್ಯ ಅವರು, ಮಂಗಳವಾರ ರಾತ್ರಿ 8ರ ವೇಳೆಗೆ ಎಲ್ಲ ಮುಗಿಸಿಕೊಡುತ್ತೇವೆ ಎಂದು ಹೇಳಿದರಾದರೂ ಇದಕ್ಕೆ ಸ್ಪೀಕರ್‌ ಒಪ್ಪಿಗೆ ನೀಡಲಿಲ್ಲ. ಸಂಜೆ 4 ಗಂಟೆ ವೇಳೆಗೆ ಮುಕ್ತಾಯ ಮಾಡಲೇಬೇಕು ಎಂದರು. ಕಡೆಗೆ ಸಿದ್ದರಾಮಯ್ಯ ಚರ್ಚೆ, ಸಿಎಂ ಉತ್ತರ, ಮತದಾನವನ್ನು 6 ಗಂಟೆಯೊಳಗೆ ಮುಗಿಸಿಕೊಡುತ್ತೇವೆ ಎಂದು ಹೇಳಿದ್ದರಿಂದ ಸ್ಪೀಕರ್‌ ಒಪ್ಪಿಗೆ ಸೂಚಿಸಿ ಕಲಾಪ ಮುಂದೂಡಿದರು.

ಸಿಎಂ-ಡಿಸಿಎಂ ಗೈರು

ಸೋಮವಾರ ರಾತ್ರಿಯೊಳಗೆ ವಿಶ್ವಾಸಮತ ನಿರ್ಣಯ ಮತಕ್ಕೆ ಹಾಕಿ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಶುಕ್ರವಾರ ರಾತ್ರಿ ಹೇಳಿದ್ದರಾದರೂ ಸೋಮವಾರ ಸದನದಲ್ಲಿ ಗದ್ದಲ ಮುಂದುವರಿದ ಕಾರಣ ರಾತ್ರಿ 10ರ ವೇಳೆಗೆ ಸದನದಿಂದ ನಿರ್ಗಮಿಸಿದರು. ತದನಂತರ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಸಹ ನಿರ್ಗಮಿಸಿದರು. ಇವರಿಬ್ಬರೂ ಮತ್ತೆ ವಾಪಸ್‌ ಬರಲೇ ಇಲ್ಲ. ಸ್ಪೀಕರ್‌ ಸಹ ಈ ಇಬ್ಬರು ನಾಯಕರು ಗೈರಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿ, ದೇಶಪಾಂಡೆ ಸಲಹೆ ಕೇಳಿದರು. ಸಿದ್ದರಾಮಯ್ಯ ಅವರು ಮಾತ್ರ ರಾತ್ರಿ 11.45ರ ವರೆಗೆ ಸದನದಲ್ಲಿ ಹಾಜರಿದ್ದು ಅಂತಿಮವಾಗಿ ಮಂಗಳವಾರ ಸಂಜೆಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವ ಭರವಸೆ ನೀಡಿದರು.

ಬಿಜೆಪಿ ಶಾಸಕರ ಬೇಸರ

ಕಲಾಪವನ್ನು ಮಂಗಳವಾರಕ್ಕೆ ಮುಂದೂಡುವ ಸ್ಪೀಕರ್‌ ನಿರ್ಧಾರವನ್ನು ಬಿಜೆಪಿ ಸದಸ್ಯರು ವಿರೋಧಿಸಿದರು. ಶುಕ್ರವಾರವೂ ಕುಳಿತಿದ್ದೆವು, ಸೋಮವಾರವಿಡಿ ಕುಳಿತಿದ್ದೇವೆ. ಆದರೂ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

20 ಸದಸ್ಯರ ಗೈರು

ಸೋಮವಾರ ಸದನದಲ್ಲಿ ರಾಜೀನಾಮೆ ನೀಡಿದ್ದ ಕಾಂಗ್ರೆಸ್‌ ಹಾಗೂ ಜೆಡಿಸ್‌ನ ಹದಿನೈದು ಶಾಸಕರು, ಅನಾರೋಗ್ಯಕ್ಕೊಳಗಾಗಿರುವ ಬಿ.ನಾಗೇಂದ್ರ, ಶ್ರೀಮಂತ ಪಾಟೀಲ್, ಪಕ್ಷೇತರರಾದ ಶಂಕರ್‌, ನಾಗೇಶ್‌, ಬಿಎಸ್‌ಪಿ ಶಾಸಕ ಎನ್‌.ಮಹೇಶ್‌ ಗೈರು ಹಾಜರಾಗಿದ್ದರು. 204 ಸದಸ್ಯರ ಹಾಜರಿ 224 ಸಂಖ್ಯಾಬಲದ ವಿಧಾನಸಭೆಯಲ್ಲಿ 20 ಸದಸ್ಯರ ಗೈರು ಹಾಜರಿಯಿಂದಾಗಿ 204 ಸದನದಲ್ಲಿ ಹಾಜರಿದ್ದವರ ಸಂಖ್ಯೆ. ವಿಶ್ವಾಸಮತಕ್ಕೆ ಹಾಕಿದ್ದರೆ ಮ್ಯಾಜಿಕ್‌ ಸಂಖ್ಯೆ 103 ಆಗುತ್ತಿತ್ತು. ಬಿಜೆಪಿ 105, ಕಾಂಗ್ರೆಸ್‌-ಜೆಡಿಎಸ್‌ 99 ಇತ್ತು.
ಸಿಎಂ ರಾಜೀನಾಮೆ ನಕಲಿ ಪತ್ರ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸದನದಲ್ಲಿ ಮಾತನಾಡಿ ನಾನು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದಂತೆ ನಕಲಿ ಸಹಿ ಹಾಗೂ ಪತ್ರ ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಇಂತಹ ಕೃತ್ಯವೂ ನಡೆಯುತ್ತಿದೆ ಎಂದು ಸ್ಪೀಕರ್‌ ಗಮನಕ್ಕೆ ತಂದರು. ನಕಲಿ ಸಹಿ ಮಾಡಿದ್ದ ಹಾಗೂ ನಕಲಿ ಪತ್ರವನ್ನೂ ಸ್ಪೀಕರ್‌ ಅವರಿಗೆ ಸಲ್ಲಿಸಿದರು. ನಾನು ವಿಶ್ವಾಸಮತ ಸಾಬೀತುಮಾಡಲು ಸಿದ್ಧ, ಆದರೆ ಕಾಂಗ್ರೆಸ್‌-ಜೆಡಿಎಸ್‌ನ ಇನ್ನೂ ಕೆಲವು ಸದಸ್ಯರು ಮಾತನಾಡಲು ಅವಕಾಶ ಕೊಡಿ ಅನಂತರ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಹೇಳಿದರಾದರೂ ಅವಕಾಶ ಸಿಗಲಿಲ್ಲ.
ಸದನಕ್ಕೆ ಕಪ್ಪುಚುಕ್ಕೆಯಾದ ವರ್ತನೆ?
ಬೆಂಗಳೂರು: ವಿಧಾನಸಭೆ ಸುಸೂತ್ರವಾಗಿ ನಡೆಯುತ್ತಿದೆಯೇ? ಶಾಸಕರ, ಅದರಲ್ಲೂ ಮೈತ್ರಿ ಪಕ್ಷಗಳ ಶಾಸಕರ ನಡವಳಿಕೆಗಳು ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಘನತೆ ತರುತ್ತಿವೆಯೇ?
ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಸದನದ ಕಲಾಪಗಳನ್ನು ಗಮನಿಸಿದರೆ ಸೋಮವಾರದ ಕಲಾಪದಲ್ಲಿ ಆಡಳಿತ ಪಕ್ಷಗಳ ಶಾಸಕರ ವರ್ತನೆ ವಿಧಾನಸಭೆಯ ಇತಿಹಾಸಕ್ಕೆ ಕಪ್ಪುಚುಕ್ಕೆಯಂತಿತ್ತು.
ಕಳೆದ ವಾರ ಶುಕ್ರವಾರದಿಂದ ಸಭಾನಾಯಕರಾದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಚರ್ಚೆ ಮುಗಿಸಿ ವಿಶ್ವಾಸಮತ ಯಾಚನೆಗೆ ಅವಕಾಶ ಕೇಳಿದ್ದರು. ಅದರಂತೆ ಮುಂದೂಡಲ್ಪಟ್ಟ ವಿಧಾನಸಭೆ ವಿಶ್ವಾಸಮತ ಯಾಚನೆ ಸಂಬಂಧಿತ ಚರ್ಚೆಗಳಿಗೆ ದಿನಪೂರ್ತಿ ಸಾಕ್ಷಿಯಾಯಿತು.
ಸದನವನ್ನು ಮತ್ತೆ ಮುಂದೂಡಬೇಕೆಂದು ಕಾಂಗ್ರೆಸ್‌- ಜೆಡಿಎಸ್‌ ಶಾಸಕರು ಒತ್ತಾಯಿಸಿದ ಸಂದರ್ಭದಲ್ಲಿ ಕಲಾಪವನ್ನು ಕೆಲವು ಕಾಲ ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗ, ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ಎದ್ದು ನಿಂತು ತಮ್ಮ ಆಕ್ಷೇಪಣೆಯನ್ನು ವಿವರಿಸಿ ವಿಶ್ವಾಸಮತ ನಿರ್ಣಯ ಮಂಡಿಸಿ ಕಲಾಪ ಮುಂದುವರಿಸಲು ಒತ್ತಾಯಿಸಿದರು. ಆಗ ಜೆಡಿಎಸ್‌, ಕಾಂಗ್ರೆಸ್‌ ಶಾಸಕರು ಎದ್ದುನಿಂತು ಯಡಿಯೂರಪ್ಪ ಮಾತಿಗೆ ಅಡ್ಡಿಪಡಿಸಿ ಜೋರಾಗಿ “ಸಂವಿಧಾನ ಉಳಿಸಿ’, ನ್ಯಾಯ ಕೊಡಿ’, ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಆ ಸಂದರ್ಭದಲ್ಲಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಶಾಸಕರು ಸ್ವಸ್ಥಾನಕ್ಕೆ ಮರಳಲು ಹೇಳಿದ ಮಾತುಗಳನ್ನು ಲೆಕ್ಕಿಸದ ಮೈತ್ರಿ ಶಾಸಕರು ಜೋರಾಗಿ
ಘೋಷಣೆಗಳನ್ನು ಕೂಗುತ್ತಲೇ ಇದ್ದು, ಯಡಿಯೂರಪ್ಪ ಅವರು ಮಾತಾಡಲು ಅವಕಾಶ ನೀಡಲಿಲ್ಲ. ಆ ಸಂದರ್ಭದಲ್ಲಿ ರಮೇಶ್‌ ಕುಮಾರ್‌ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ನಿಮ್ಮ ಶಾಸಕರನ್ನು ನಿಯಂತ್ರಿಸಿ, ಪೀಠಕ್ಕೆ, ಸಂವಿಧಾನಕ್ಕೆ ಅಪಚಾರ ಮಾಡಬಾರದು ಎಂದು ತೀಕ್ಷ್ಣವಾಗಿ ಹೇಳಿದರು. ಆದರೆ ಸಿಎಂ ಮಾತಿಗೂ ಸದಸ್ಯರು ಜಗ್ಗಲಿಲ್ಲ. ಕೊನೆಗೆ ಸಿದ್ದರಾಮಯ್ಯ ಸದಸ್ಯರನ್ನು ಸಮಾಧಾನ ಮಾಡಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ