ಮೈತ್ರಿ ಮಾತಿಂದ ನೋವು:ಎಚ್‌ಡಿಡಿ

Team Udayavani, Jun 30, 2019, 6:00 AM IST

ಬೆಂಗಳೂರು: ಜೆಡಿಎಸ್‌ ಜತೆ ಮೈತ್ರಿಯಿಂದ ಹೀನಾಯವಾಗಿ ಸೋಲಬೇಕಾಯಿತು ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆಗೆ ಮತ್ತೆ ಬೇಸರ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಇಂತಹ ಮಾತುಗಳಿಂದ ನನಗೆ ಅತೀವ ನೋವಾಗಿದೆ ಎಂದು ಹೇಳಿದ್ದಾರೆ.


ಪಕ್ಷದ ಯುವ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಸೋಲಲು ಒಕ್ಕಲಿಗರು ಕಾರಣಾನಾ? ಅಂತ ಪ್ರಶ್ನಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಹೋಗಿದ್ದೇ ಸೋಲಿಗೆ ಕಾರಣ ಅಂತ ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಈ ಕ್ಷೇತ್ರಗಳಲ್ಲಿ ಒಕ್ಕಲಿಗರು ಎಷ್ಟಿದ್ದಾರೆ ಎಂದು ಪ್ರಶ್ನಿಸಿದರು.

ಕೆಲವು ನಾಯಕರು ಇತ್ತೀಚೆಗಷ್ಟೇ ಕಾಂಗ್ರೆಸ್‌ ಹೈಕಮಾಂಡ್‌ಗೆ ಜೆಡಿಎಸ್‌ ಸಹವಾಸ ಮಾಡಿ ತಪ್ಪಾಯ್ತು ಅಂತ ಚಾಡಿ ಹೇಳಿದ್ದಾರೆ. ಬೆನ್ನಿಗೆ ಚೂರಿ ಹಾಕಿದ್ದಾರೆ ಎನ್ನುವ ಮಾತೂ ಆಡಿದ್ದಾರೆ. ಈ ಎಲ್ಲ ವಿದ್ಯಮಾನಗಳು ನೋವು ತಂದಿದೆ ಎಂದು ಹೇಳಿದರು. ನಮ್ಮದು ಕುಟುಂಬ ರಾಜಕಾರಣ ಎಂದು ಆರೋಪಿಸುತ್ತಾರೆ. ನಾನು ಇದುವರೆಗೂ ಹಿಂದುಳಿದ ಅಲ್ಪಸಂಖ್ಯಾತರ ನಾಯಕರನ್ನು ಬೆಳೆಸಿಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದೇನೆ.

ನಿಖೀಲ್ ರಾಜಕಾರಣಕ್ಕೆ ಬರುತ್ತಾನೆ ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಆದರೆ, ಶಕ್ತಿ ಮೀರಿ ರಾಜಕಾರಣದಲ್ಲಿ ಬೆಳೆಯಲು ಪ್ರಯತ್ನಿಸುತ್ತಿದ್ದಾನೆ ಎಂದು ಶ್ಲಾಘಿಸಿದರು.

ಇನ್ನು ಚುನಾವಣೆಗೆ ನಿಲ್ಲಲ್ಲ: ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದು ಆಕಸ್ಮಿಕ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಮೂವರು ಸ್ಪರ್ಧೆ ಮಾಡಬೇಕಾಯಿತು. ಕುಟುಂಬ ರಾಜಕಾರಣ ಎಂಬ ಆರೋಪವೂ ಬಂತು, ಅದಕ್ಕೆ ತಕ್ಕ ಶಿಕ್ಷೆಯೂ ದೊರೆಯಿತು. ಇನ್ಮುಂದೆ ನಾನು ಚುನಾವಣೆಗೆ ನಿಲ್ಲುವುದಿಲ್ಲ. ನಾನು ಡೆಲ್ಲಿಗೆ ಹೋಗೋ ಸನ್ನಿವೇಶ ಇಲ್ಲ, ಪಕ್ಷದ ಕಚೇರಿಯಲ್ಲೇ ಇದ್ದು ಎಲ್ಲವನ್ನೂ ಗಮನಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.

1500 ಕಿ.ಮೀ. ಪಾದಯಾತ್ರೆ
ಪಕ್ಷ ಸಂಘಟನೆ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಸೇರಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸಲು ರಾಜ್ಯಾದ್ಯಂತ 1500 ಕಿ.ಮೀ. ಪಾದಯಾತ್ರೆ ಕೈಗೊಳ್ಳಲು ಜೆಡಿಎಸ್‌ ನಾಯಕರು ತೀರ್ಮಾನಿಸಿದ್ದು, ಎರಡು ಹಂತಗಳಲ್ಲಿ ಪಾದಯಾತ್ರೆ ನಡೆಯಲಿದೆ. ಮೊದಲಿಗೆ ನಂಜನಗೂಡಿನಿಂದ ಹರಿಹರದವರೆಗೆ ನಡೆಯಲಿದೆ. ಜೆಡಿಎಸ್‌ ರಾಜ್ಯಾಧ್ಯಕ್ಷರ ನೇಮಕ ನಂತರ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಆಗಸ್ಟ್‌ 20 ರಿಂದ ಪಾದಾಯತ್ರೆಗೆ ಮಾಜಿ ಪ್ರಧಾನಿ ದೇವೇಗೌಡರೇ ಚಾಲನೆ ನೀಡಲಿದ್ದು, ಆದಷ್ಟು ಬೇಗ ಪ್ರಾರಂಭಿಸಿ ಎಂದೂ ಮುಖಂಡರಿಗೆ ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ