ಬೆಂಗಳೂರು ನೀರು ಅಯೋಗ್ಯ!

17 ರಾಜ್ಯ ರಾಜಧಾನಿಗಳ ನೀರು ಪರೀಕ್ಷೆ

Team Udayavani, Nov 17, 2019, 6:30 AM IST

ಹೊಸದಿಲ್ಲಿ: ಸಿಲಿಕಾನ್‌ ಸಿಟಿಯೆಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆಯಿಂದ ಸರಬರಾಜಾಗುವ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ ಎಂಬ ವಿಚಾರವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಸಮೀಕ್ಷೆ ಹೇಳಿದೆ.

ಬೆಂಗಳೂರು ಸೇರಿದಂತೆ ದೇಶದ 17 ರಾಜ್ಯಗಳ ರಾಜಧಾನಿಗಳಲ್ಲಿ ಸರಬರಾಜು ಆಗುವ ನೀರಿನ ಬಗ್ಗೆ ನಡೆಸಲಾಗಿರುವ ಸಮೀಕ್ಷೆಯಲ್ಲಿ ಈ ವಿಷಯ ಪತ್ತೆಯಾಗಿದ್ದು, ಮುಂಬಯಿ ಹೊರತುಪಡಿಸಿದಂತೆ ಉಳಿದ ರಾಜಧಾನಿಗಳಲ್ಲಿನ ಕೊಳಾಯಿ ನೀರು ಇಂಡಿಯನ್‌ ಸ್ಟಾಂಡರ್ಡ್‌ (ಐಎಸ್‌) – 10500: 2012 ಗುಣಮಟ್ಟವನ್ನು ಮುಟ್ಟಿಲ್ಲ ಎಂದು ಸಮೀಕ್ಷೆ ಹೇಳಿದೆ. ಮುಂಬಯಿಯ ನಲ್ಲಿ ನೀರನ್ನು ಯಾವುದೇ ಭೀತಿಯಿಲ್ಲದೆ ನೇರವಾಗಿ ಕುಡಿಯಬಹುದು ಎಂದೂ ಸಮೀಕ್ಷೆ ಹೇಳಿದೆ.

ಪರೀಕ್ಷೆ ಹೇಗೆ?
ದಿಲ್ಲಿ, ಹೈದರಾಬಾದ್‌, ಬೆಂಗಳೂರು, ಭುವನೇಶ್ವರ, ರಾಂಚಿ, ಕೋಲ್ಕತಾ, ರಾಯ್‌ಪುರ, ಅಮರಾವತಿ, ಶಿಮ್ಲಾ ಮತ್ತಿತರ ನಗರಗಳಲ್ಲಿ ತಲಾ 10 ನೀರಿನ ಸ್ಯಾಂಪಲ್‌ಗ‌ಳನ್ನು ಪಡೆದು, ಅವುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ನೀರಿನ ಬಣ್ಣ, ವಾಸನೆ, ಗಡಸುತನ, ಕ್ಲೋರೈಡ್‌, ಫ್ಲೋರೈಡ್‌, ಅಮೋನಿಯಾ, ಬೋರಾನ್‌, ಕೋಲಿಫಾಮ್‌ ಅಂಶಗಳ ಇರುವಿಕೆ ಸೇರಿ ಒಟ್ಟು 11 ಮಾನದಂಡಗಳನ್ನು ಇರಿಸಿಕೊಂಡು ಪರೀಕ್ಷೆ ಒಳಪಡಿಸಲಾಗಿತ್ತು. ಆದರೆ ಆ ನಗರಗಳ ನೀರಿನಲ್ಲಿ ಮೇಲಿನ ಅಂಶಗಳು ಕಾಣುವುದರ ಜತೆಗೆ ಫಿನಾಯಿಲ್‌ ಸಂಯುಕ್ತ ರೂಪಗಳು, ಕ್ಲೋರಾಮೈನ್‌ಗಳು, ಅಲ್ಯೂಮಿನಿಯಂ – ಕೋಲಿಫಾರ್ಮ್ನಂಥ ಅಪಾಯಕಾರಿ ರಾಸಾಯನಿಕ ಅಥವಾ ಲೋಹಗಳ ಅಂಶಗಳೂ ಪತ್ತೆಯಾಗಿವೆ ಎಂದು ಸಮೀಕ್ಷೆ ತಿಳಿಸಿದೆ.

ಮುಂಬಯಿ ನೀರು ಸುರಕ್ಷಿತ
ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಅಲ್ಲಿನ ಮಹಾನಗರ ಪಾಲಿಕೆಯಿಂದ ಸರಬರಾಜಾಗುವ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿದೆ ಎಂಬ ವಿಚಾರವನ್ನು ಸಮೀಕ್ಷೆ ಬಹಿರಂಗಗೊಳಿಸಿದೆ. ಪರೀಕ್ಷೆಗೆ ನಿಗದಿಪಡಿಸಲಾಗಿದ್ದ ಎಲ್ಲ 11 ಮಾನದಂಡಗಳಲ್ಲೂ ಅದು ತೇರ್ಗಡೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ