ಬ್ಯಾಟಿಂಗ್ ರ್ಯಾಂಕಿಂಗ್: ಅಗ್ರಸ್ಥಾನದಲ್ಲಿ ಭಾರತದ ಮಿಥಾಲಿ ರಾಜ್
Team Udayavani, Jul 6, 2021, 11:53 PM IST
ದುಬಾೖ : ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ವನಿತಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.
22 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಮಿಥಾಲಿ ರಾಜ್ ಅಗ್ರಸ್ಥಾನಕ್ಕೆ ನೆಗೆದದ್ದು ಇದು 8ನೇ ಸಲ. 2018ರಲ್ಲಿ ಮಿಥಾಲಿ ರಾಜ್ ಕೊನೆಯ ಬಾರಿಗೆ ಈ ಎತ್ತರ ತಲುಪಿದ್ದರು.
ಎಂಟರಿಂದ ಒಂದಕ್ಕೆ!
ಮಿಥಾಲಿ ರಾಜ್ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ರ್ಯಾಂಕಿಂಗ್ ಯಾದಿಯಲ್ಲಿ 8ನೇ ಸ್ಥಾನದಲ್ಲಿದ್ದರು. ಸತತ 3 ಅರ್ಧ ಶತಕ ಬಾರಿಸಿ ಒಮ್ಮೆಲೇ ಅಗ್ರಸ್ಥಾನಕ್ಕೆ ಜಿಗಿದದ್ದು ವಿಶೇಷ.
ಭರವಸೆಯ ಯುವ ಆಟಗಾರ್ತಿ ಶಫಾಲಿ ವರ್ಮ 49 ಸ್ಥಾನಗಳ ಏರಿಕೆ ಕಂಡಿದ್ದು, 71ನೇ ಸ್ಥಾನಕ್ಕೇರಿದ್ದಾರೆ. ಸ್ಮತಿ ಮಂಧನಾ ಟಾಪ್-10ನಲ್ಲಿರುವ ಭಾರತದ ಮತ್ತೋರ್ವ ಆಟಗಾರ್ತಿಯಾಗಿದ್ದು, 9ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಜೂಲನ್ ಗೋಸ್ವಾಮಿ ಬೌಲಿಂಗ್ ಯಾದಿಯಲ್ಲಿ 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.