ಯಶವಂತಪುರ – ಕಾರವಾರ- ವಾಸ್ಕೋ ಮಾರ್ಗಕ್ಕೆ ಹೊಸ ಎಕ್ಸ್ ಪ್ರೆಸ್ ರೈಲು ಸೇವೆಗೆ ಚಾಲನೆ
Team Udayavani, Mar 7, 2020, 10:29 AM IST
ಬೆಂಗಳೂರು: ಯಶವಂತಪುರ – ಕಾರವಾರ- ವಾಸ್ಕೋ ಮಾರ್ಗಕ್ಕೆ ಹೊಸ ಎಕ್ಸ್ ಪ್ರೆಸ್ ರೈಲು ಸೇವೆಗೆ ಶನಿವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ಯಶವಂತಪುರ ರೈಲು ನಿಲ್ದಾಣದಲ್ಲಿ ಹೊಸ ರೈಲಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಯಶವಂತಪುರ-ಕಾರವಾರ-ವಾಸ್ಕೋ ಮಾರ್ಗದಲ್ಲಿ ಇವತ್ತು ಹೊಸ ರೈಲು ಚಾಲನೆ ಸಂತಸ ತಂದಿದೆ. ಬೆಂಗಳೂರಿಂದ ಸಂಜೆ ಹೊರಟು ಬೆಳಗ್ಗೆ ಕಾರವಾರಕ್ಕೆ ಈ ರೈಲು ತಲುಪಲಿದೆ. ಈ ಹೊಸ ರೈಲಿಂದ ಶಿರಾಡಿಘಾಟ್ ಮೇಲಿನ ವಾಹನ ಸಂಚಾರ ಒತ್ತಡ ಕಡಿಮೆಯಾಗಲಿದೆ. ನಾನು ಸಿಎಂ ಆದ ಹೊಸದರಲ್ಲಿ ರೈಲ್ವೆ ಯೋಜನೆಗಳಿಗೆ ಭೂಮಿ, ಅರ್ಧ ವೆಚ್ಚ ಕೊಡುವ ಭರವಸೆ ಕೊಟ್ಟಿದ್ದೆ ಎಂದರು. ಸರ್ಕಾರ ರೈಲ್ವೆ ಯೋಜನೆಗಳಿಗೆ ಸದಾ ಬೆಂಬಲ ಕೊಡಲಿದೆ. ಬರುವ ದಿನಗಳಲ್ಲಿ ಇನ್ನಷ್ಟು ಹೊಸ ರೈಲುಗಳ ಸೇವೆ ಸಿಗಲಿದೆ ಎಂದರು.
50 ಲಕ್ಷ ಕೋಟಿ ಹೂಡಿಕೆ
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ವಿವಿಧ ರೈಲು ಯೋಜನೆಗೆ 50 ಲಕ್ಷ ಕೋಟಿ ಹೊಡಿಕೆಯಾಗಲಿ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.
ಯಶವಂತಪುರ-ಕಾರವಾರ-ವಾಸ್ಕೋಗೆ ಹೊಸ ಟ್ರೈನ್ ಸೇವೆ ಆರಂಭಿಸಿದ್ದೇವೆ. ಇವತ್ತಿನ ಹೊಸ ರೈಲು ಚಾಲನೆ ಮಾಡೋರು ಇಬ್ಬರು ಮಹಿಳಾ ಲೋಕೊ ಪೈಲಟ್ ಗಳು. ಈ ಹೊಸ ರೈಲಿಗೆ ಒತ್ತಾಯ ಮಾಡಿದವರು ಸಂಸದೆ ಶೋಭಾ ಕರಂದ್ಲಾಜೆಯವರು. ಶೋಭಾ ಅವರು ರಾಣಿ ಚೆನ್ನಮ್ಮನ ಹಾಗೇ ಹೋರಾಡಿ ಈ ಹೊಸ ಟ್ರೈನ್ ಬರಲು ಕಾರಣರಾಗಿದ್ದಾರೆ. ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳಾ ಲೋಕೊಪೈಲಟ್ ಗಳಿಂದ ರೈಲು ಚಾಲನೆ ಅನ್ನೋದೇ ವಿಶೇಷ ಇದು ಪ್ರಧಾನಿ ಮೋದಿ ಆಡಳಿತದಲ್ಲಿ ಸಾಕಾರಗೊಂಡಿದೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದ ಇನ್ನೂ ಕೆಲವಷ್ಟು ಜಿಲ್ಲೆಗಳಿಗೆ ರೈಲು ಸೇವೆ ದೊರೆತಿಲ್ಲ. ನಾನು ಪ್ರತಿನಿಧಿಸುವ ಚಿಕ್ಕಮಗಳೂರಿಗೆ ರೈಲು ಬಂದಿದ್ದೇ ನಮ್ಮ ಸರ್ಕಾರ ಬಂದ ಮೇಲೆ. ನಮ್ಮ ಹಬ್ಬಗಳು ಬಂದರೆ ಕರಾವಳಿ ಜನರು ಟ್ಯಾಕ್ಸಿ, ಟಿಟಿ ಮಾಡ್ಕೊಂಡು ಊರಿಗೆ ಹೋಗ್ತಾರೆ. ಕರಾವಳಿ ಜನ ಬೆಂಗಳೂರಲ್ಲಿ ಸಾಕಷ್ಟು ಜನ ಇದ್ದಾರೆ. ಆದರೆ ನಮ್ಮ ಊರುಗಳಿಗೆ ಹೋಗಲು ರೈಲು ಸೇವೆ ಇರಲಿಲ್ಲ. ಇವತ್ತು ನಮ್ಮ ಭಾಗದ ಜನರ ನಿರೀಕ್ಷೆ ಈಡೇರಿದೆ. ಉಡುಪಿ, ಭಟ್ಕಳ, ಕಾರವಾರ ಮಾರ್ಗದಲ್ಲಿ ಈ ಹೊಸ ರೈಲು ಸಂಚರಿಸಲಿದೆ. ಇವತ್ತು ಹೊಸ ರೈಲು ಸೇವೆ ಸಿಕ್ಕಿದೆ. ಆದರೆ ಈ ಮಾರ್ಗದಲ್ಲಿ ಈಗಾಗಲೇ ಇರುವ ಹಳೆಯ ರೈಲು ನಿಲ್ಲಿಸಬೇಡಿ. ಹಳೆಯ ರೈಲು ಸಂಚಾರ ಮುಂದುವರೆಯಲಿ ಎಂದು ಮನವಿ ಮಾಡಿದರು.
ಇದೇ ವೇಳೆ ಯಶವಂತಪುರ-ವಿಜಯಪುರ–ಯಶವಂತಪುರ ರೈಲನ್ನು ಎಲ್.ಎಚ್.ಬಿ ಕೋಚ್ ಗಳಾಗಿ ಪರಿವರ್ತನೆ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು.