ಮಹಿಳೆ ಜೊತೆ ಅಕ್ರಮ ಸಂಬಂಧ, ಕೊಲೆ ಬೆದರಿಕೆ : ವಿವಾಹಿತ ವ್ಯಕ್ತಿಗೆ 6 ತಿಂಗಳು ಜೈಲು ಶಿಕ್ಷೆ
Team Udayavani, Mar 23, 2022, 12:35 PM IST
ಚಾಮರಾಜನಗರ: ವಿವಾಹಿತ ದಿವ್ಯಾಂಗ ವ್ಯಕ್ತಿಯೊಬ್ಬ ಇನ್ನೋರ್ವ ದಿವ್ಯಾಂಗ ಮಹಿಳೆಯೊಂದಿಗೆ ಅಕ್ರಮ ಸಂಪರ್ಕ ಬೆಳೆಸಿ ಆಕೆಗೆ ಮಗುವಾದಾಗ ಕೊಲೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಪಿಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯ ಆರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
ತಾಲೂಕಿನ ಕುಲಗಾಣ ಗ್ರಾಮದ ಗುರುಸ್ವಾಮಿ ಶಿಕ್ಷೆಗೆ ಗುರಿಯಾದ ಅಪರಾಧಿ. 2012ರಲ್ಲಿ ಈ ಘಟನೆ ನಡೆದಿತ್ತು. ಅಪರಾಧಿ ಗುರುಸ್ವಾಮಿ, ದಿವ್ಯಾಂಗ ಮಹಿಳೆ ಜೊತೆ ಅಕ್ರಮ ಸಂಪರ್ಕ ಹೊಂದಿದ್ದು, ಆಕೆ 3 ತಿಂಗಳ ಗರ್ಭಿಣಿ ಆಗಿದ್ದಾಗ, ಮಗು ಹಾಗೂ ನಿನ್ನನ್ನು ನಾನೇ ನೋಡಿಕೊಳ್ಳುತ್ತೇನೆ. ಈ ವಿಷಯ ಯಾರಿಗೂ ಹೇಳಬೇಡ ಎಂದು ತಿಳಿಸಿದ್ದ. ಆಕೆಗೆ 2012ರ ಜುಲೈ 2 ರಂದು ಹೆಣ್ಣು ಮಗು ಜನಿಸಿತ್ತು. ಈ ವಿಚಾರ ಊರಿನವರಿಗೆ ತಿಳಿದಾಗ, ಅಪರಾಧಿ ಗುರುಸ್ವಾಮಿ, ದಿವ್ಯಾಂಗ ಮಹಿಳೆಗೆ ಬೆದರಿಕೆ ಹಾಕಿ, ನನ್ನ ಹೆಸರನ್ನು ಹೇಳಿದ್ದೇಕೆ? ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ವಿಷಯವಾಗಿ ಮಹಿಳೆ ಚಾ.ನಗರ ಗ್ರಾಮಾಂತರ ಠಾಣೆಯಲ್ಲಿ ಆತನ ವಿರುದ್ಧ ದೂರು ಸಲ್ಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆದು, ಮಂಗಳವಾರ ನ್ಯಾಯಾಧೀಶ ಮಹಮದ್ ರೋಷನ್ ಷಾ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಎಪಿಪಿ ಮಹೇಶ್ ವಾದಿಸಿದ್ದರು.
ಮಹಿಳೆ ಮತ್ತು ಅಪರಾಧಿ ಇಬ್ಬರೂ ಮಗುವನ್ನು ಸಾಕಲು ನಿರಾಕರಿಸಿದ್ದರಿಂದ ಆ ಮಗವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಕಾನೂನಾತ್ಮಕವಾಗಿ ದತ್ತು ನೀಡಿದ್ದಾರೆ.
ಇದನ್ನೂ ಓದಿ : ಬಿರ್ಭೂಮ್ ಹಿಂಸಾಚಾರದಲ್ಲಿ ಪುಟ್ಟ ಮಕ್ಕಳೂ ಬಲಿ : ಟಿಎಂಸಿ ಉಗ್ರವಾದ ಎಂದ ಬಿಜೆಪಿ