ಬಾಂಗ್ಲಾದಲ್ಲಿ ಕಾಳಿ ಮಂದಿರ ಉದ್ಘಾಟಿಸಿದ ರಾಷ್ಟ್ರಪತಿ ಕೋವಿಂದ್
Team Udayavani, Dec 17, 2021, 11:15 PM IST
ಢಾಕಾ: ಬಾಂಗ್ಲಾದೇಶದ ಢಾಕಾದಲ್ಲಿ ಪುನರ್‌ನಿರ್ಮಾಣ ಮಾಡಲಾಗಿರುವ ರಮಣ ಕಾಳಿ ಮಂದಿರವನ್ನು ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಶುಕ್ರವಾರ ಉದ್ಘಾಟಿಸಿದರು. ಪತ್ನಿ ಸವಿತಾ ಕೋವಿಂದ್ ಮತ್ತು ಪುತ್ರಿ ಸ್ವಾತಿಯೊಂದಿಗೆ ಕಾಳಿ ದೇವಿಯ ದರ್ಶನವನ್ನೂ ಪಡೆದರು.
50 ವರ್ಷಗಳ ಹಿಂದೆ ಪಾಕಿಸ್ತಾನಿ ಪಡೆ ಈ ಮಂದಿರವನ್ನು ಧ್ವಂಸ ಮಾಡಿತ್ತು. ಆ ದೇಗುಲವನ್ನು ಭಾರತ ಸರ್ಕಾರ ಮತ್ತು ಬಾಂಗ್ಲಾ ಸರ್ಕಾರ ಒಟ್ಟಾಗಿ ಪುನರ್ ನಿರ್ಮಾಣ ಮಾಡಿದೆ. “ಈ ದೇಗುಲವು ಬಾಂಗ್ಲಾ ಮತ್ತು ಭಾರತೀಯರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧದ ಸಂಕೇತವಾಗಿದೆ’ ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿಗೆ ಭೂತಾನ್‌ನ ಅತ್ಯುನ್ನತ ಪ್ರಶಸ್ತಿ
ನಮ್ಮದು ವಿಶೇಷ ಸಂಬಂಧ:
3 ದಿನಗಳ ಬಾಂಗ್ಲಾ ಪ್ರವಾಸ ಕೈಗೊಂಡಿದ್ದ ಕೋವಿಂದ್ ಅವರು, ಶುಕ್ರವಾರ ತಮ್ಮ ಪ್ರವಾಸ ಮುಗಿಸಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ಅದಕ್ಕೂ ಮುನ್ನ ಬಾಂಗ್ಲಾದಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, “ಭಾರತೀಯರ ಹೃದಯದಲ್ಲಿ ಬಾಂಗ್ಲಾಕ್ಕೆ ವಿಶೇಷ ಸ್ಥಾನವಿದೆ. ಭಾಷೆ, ಸಂಸ್ಕೃತಿ ಆಧರಿಸಿ ನಮ್ಮಲ್ಲಿ ತೀರಾ ಹಳೆಯ ಮತ್ತು ವಿಶೇಷ ಸಂಬಂಧವಿದೆ. ಬಾಂಗ್ಲಾವನ್ನು ಆರ್ಥಿಕವಾಗಿ ಹಾಗೂ ಎಲ್ಲಾ ನಿಟ್ಟಿನಲ್ಲಿ ಸದೃಢ ಮಾಡಲು ಭಾರತ ಬದ್ಧವಾಗಿರುತ್ತದೆ’ ಎಂದು ಹೇಳಿದ್ದಾರೆ.