ಸಿದ್ದರಾಮಯ್ಯಗೆ ಹಿರಿಯರ ಗುದ್ದು; ಏಕಪಕ್ಷೀಯ ನಡೆ ಖಂಡಿಸಿ ಸಭಾತ್ಯಾಗ

Team Udayavani, Nov 12, 2019, 5:45 AM IST

ಬೆಂಗಳೂರು: ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತು ಕಾಂಗ್ರೆಸ್‌ ನಾಯ ಕರ ನಡುವಿನ ತಿಕ್ಕಾಟ ಮುಂದುವರಿದಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ನಡೆ ಖಂಡಿಸಿ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್‌, ಕೆ.ಎಚ್‌. ಮುನಿಯಪ್ಪ ಸಭೆಯಿಂದ ಹೊರನಡೆದಿದ್ದಾರೆ.

ಮೊದಲ ಹಂತದಲ್ಲಿ 8 ಅಭ್ಯರ್ಥಿಗಳನ್ನು ಅಂತಿಮಗೊಳಿಸುವಾಗ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲಿ ಸೋಮ ವಾರ ನಡೆದ ಹಿರಿಯ ನಾಯಕರ ಸಭೆಯಲ್ಲಿ ಈ ಇಬ್ಬರು ನಾಯಕರು ಆಕ್ಷೇಪಿಸಿದರು. ಜತೆಗೆ ಸಭೆಯಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಮತ್ತು ಮಾಜಿ ಸಚಿವ ನಜೀರ್‌ ಅಹಮದ್‌ ಉಪಸ್ಥಿತಿ ಬಗ್ಗೆ ಮಾಜಿ ಸಚಿವ ಮುನಿಯಪ್ಪ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಮೇಶ್‌ ಕುಮಾರ್‌ ಮತ್ತು ನಜೀರ್‌ ಅಹಮದ್‌ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಬಗ್ಗೆ ದೂರು ನೀಡಲಾಗಿದೆ. ಇವರಿಬ್ಬರು ಸಭೆಯಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ಹರಿಪ್ರಸಾದ್‌, ಮುನಿಯಪ್ಪ ಪಟ್ಟು ಹಿಡಿದರು. ಕೋಲಾರ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂದರ್ಭ ದಲ್ಲಿಯೂ ತಮ್ಮನ್ನು ಪರಿಗಣಿಸಿಲ್ಲ ಎಂದು ಮುನಿಯಪ್ಪ ಆಕ್ಷೇಪಿಸಿದ್ದು, ಬಿ.ಕೆ. ಹರಿಪ್ರಸಾದ್‌ ಧ್ವನಿಗೂಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇವರಿಬ್ಬರ ಆಕ್ಷೇಪಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಈಗ ಆದದ್ದು ಆಗಿದೆ. ಮುಂದೆ ಏನಾಗಬೇಕು ಎನ್ನುವ ಕಡೆಗೆ ಗಮನಹರಿಸೋಣ. ಉಪ ಚುನಾವಣೆಯಲ್ಲಿ ಬಾಕಿ ಉಳಿದಿರುವ 7 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ನೀವು ಸೂಚಿಸಿದವರಿಗೆ ಟಿಕೆಟ್‌ ನೀಡುತ್ತೇವೆ. ಗೆಲ್ಲಿಸುವ ಜವಾಬ್ದಾರಿ ನೀವು ವಹಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಸಿದ್ದು ಹೇಳಿಕೆಗೆ ಆಕ್ರೋಶ
ಈ ಹೇಳಿಕೆಯಿಂದ ಆಕ್ರೋಶಗೊಂಡ ಬಿ.ಕೆ. ಹರಿಪ್ರಸಾದ್‌, ಎಲ್ಲವೂ ನಿಮ್ಮ ಅಜೆಂಡಾದಂತೆ ನಡೆ ಯಲು ಸಾಧ್ಯವಿಲ್ಲ. ಮೊದಲು 8 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದಾಗ ಯಾರ ಅಭಿಪ್ರಾಯವನ್ನೂ ಕೇಳಿಲ್ಲ. ದುಡ್ಡಿರುವವರು ಮಾತ್ರ ನಿಮಗೆ ಬೇಕಾ, ಪಕ್ಷದ ಕಾರ್ಯಕರ್ತರ ಸಲಹೆಗಳು ನಿಮಗೆ ಬೇಡವೇ ಎಂದು ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಗಳಿಂದ ಸತೀಶ್‌ ದೂರ
ಗೋಕಾಕ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿ ಲಖನ್‌ ಜಾರಕಿಹೊಳಿಗೆ ಟಿಕೆಟ್‌ ನೀಡಬೇಕು ಎಂಬುದು ಸತೀಶ್‌ ಜಾರಕಿಹೊಳಿ ಮನವಿ. ಆದರೆ ಇಲ್ಲಿಗೆ ಬಿಜೆಪಿಯ ಪರಾಜಿತ ಅಭ್ಯರ್ಥಿ ಅಶೋಕ್‌ ಪೂಜಾರಿ ಅವರನ್ನು ಕರೆತರಲು ಡಿಕೆಶಿ ಯತ್ನಿಸುತ್ತಿರುವುದೇ ಅಸಮಾಧಾನಕ್ಕೆ ಕಾರಣವಾಗಿದೆ.

ಡಿಕೆಶಿ ಪ್ರಾಬಲ್ಯಕ್ಕೆ ಜಾರಕಿಹೊಳಿ ಅಸಮಾಧಾನ?
ಗೋಕಾಕ ಮತ್ತು ಕಾಗವಾಡದಲ್ಲಿ ಬಿಜೆಪಿಯ ಪರಾಜಿತ ಅಭ್ಯರ್ಥಿಗಳನ್ನು ಕರೆ ತರಲು ಡಿಕೆಶಿ ಮುಂದಾಗಿರುವುದು ಜಾರಕಿ ಹೊಳಿ ಸಹೋದರರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಕ್ಷೇತ್ರಗಳಲ್ಲಿ ಇವರಿಬ್ಬರಿಗೆ ಟಿಕೆಟ್‌ ದೊರೆತರೆ ಡಿಕೆಶಿ ಅವರೇ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಡಿಕೆಶಿ ಬೆಳಗಾವಿ ಜಿಲ್ಲೆಯಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಜಾರಕಿಹೊಳಿ ಸಹೋದರರು ಅಸಮಾಧಾನ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಸುಪ್ರೀಂ ಕೋರ್ಟ್‌ ತೀರ್ಪು ಬಂದ ಬಳಿಕ ಅಭ್ಯರ್ಥಿಗಳ ಆಯ್ಕೆ, ರಾಜು ಕಾಗೆ ಪಕ್ಷ ಸೇರ್ಪಡೆ ಬಗ್ಗೆ ತೀರ್ಮಾನಿಸಲಾಗುವುದು. ಮುನಿಯಪ್ಪ ಮತ್ತು ಹರಿಪ್ರಸಾದ್‌ ಸಭೆ ಮುಗಿಸಿಯೇ ತೆರಳಿದ್ದಾರೆ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಎಲ್ಲರೂ ಒಗ್ಗಟ್ಟಾಗಿ ಉಪ ಚುನಾವಣೆ ಎದುರಿಸುವ ತೀರ್ಮಾನ ಮಾಡಿದ್ದೇವೆ. ನಗರಸಭೆ ಚುನಾವಣೆ ಸಿದ್ಧತೆ ಮಾಡಿಕೊಳ್ಳ ಬೇಕಿ ರುವುದರಿಂದ ಅಧ್ಯಕ್ಷರಿಗೆ ಹೇಳಿ ಸಭೆಯಿಂದ ಹೊರಟಿದ್ದೇನೆ. ಗೊಂದಲ ಇಲ್ಲ.
-ಕೆ.ಎಚ್‌. ಮುನಿಯಪ್ಪ, ಮಾಜಿ ಕೇಂದ್ರ ಸಚಿವ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ