“ನಂಬಿಕೆಯೇ ನನ್ನ ಆತ್ಮವಿಶ್ವಾಸ, ಸರ್ಕಾರ ಉಳಿಯುತ್ತದೆ’

Team Udayavani, Jul 13, 2019, 5:45 AM IST

ಬೆಂಗಳೂರು: “ನನ್ನ ರಾಜಕೀಯ ಜೀವನದಲ್ಲಿ ಮತ್ತೂಮ್ಮೆ ಅಗ್ನಿಪರೀಕ್ಷೆ ಎದುರಾಗಿದೆ. ನನ್ನ ನಂಬಿಕೆಯೇ ನನ್ನ ಆತ್ಮವಿಶ್ವಾಸ. ನಾನು ಈ ಬಾರಿಯೂ ಯಶಸ್ವಿಯಾಗಲಿದ್ದೇನೆ’ಬದಲಾದ ರಾಜಕೀಯ ಸನ್ನಿವೇಶದಲ್ಲಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಸ್ವಯಂ ಮುಂದಾಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಮಾತುಗಳಿವು.

ರಾಜಕೀಯ ಸಂದಿಗ್ಧತೆ, ವಿಧಾನಮಂಡಲ ಅಧಿವೇಶನದ ನಡುವೆಯೇ “ಉದಯವಾಣಿ’ಗೆ ಸಂದರ್ಶನ ನೀಡಿದ ಅವರು, ಪ್ರಸಕ್ತ ರಾಜಕೀಯ ವಿದ್ಯಮಾನಗಳು ನನಗೆ ಅನಿರೀಕ್ಷಿತ ಹೌದು, ಆದರೆ, ಪರಿಸ್ಥಿತಿ ಕೈ ಮೀರಿಲ್ಲ ಎಂಬುದು ನನ್ನ ಅಚಲವಾದ ನಂಬಿಕೆ ಎಂದು ಪ್ರತಿಪಾದಿಸಿದರು.

* ಈ ಹೊತ್ತಿನಲ್ಲೂ ನಿಮ್ಮಲ್ಲಿನ ಆತ್ಮವಿಶ್ವಾಸಕ್ಕೆ ಕಾರಣವಾದರೂ ಏನು?
ನನ್ನ ನಂಬಿಕೆಯೇ ನನ್ನ ಆತ್ಮವಿಶ್ವಾಸ. ಖಂಡಿತವಾಗಿಯೂ ನಾನು ವಿಶ್ವಾಸಮತದಲ್ಲಿ ಗೆಲ್ಲುತ್ತೇನೆ. ಅದು ಹೇಗೆ ಎಂದು ನಿಮಗೆ ಗೊತ್ತಾಗಲಿದೆ.

* ಪರಿಸ್ಥಿತಿ ಕೈ ಮೀರಿಲ್ಲವೇ?
ಮೇಲ್ನೋಟಕ್ಕೆ ಹಾಗೆ ಕಾಣಿಸುತ್ತದೆಯಷ್ಟೇ. ನಿಜಕ್ಕೂ ಪರಿಸ್ಥಿತಿ ಕೈ ಮೀರಿದ್ದರೆ ನಾನು ಇಷ್ಟು ಆತ್ಮವಿಶ್ವಾಸದಲ್ಲಿರುತ್ತಿದ್ದೆನಾ? ಸ್ವಲ್ಪ ವ್ಯತ್ಯಾಸ ಆಗಿದೆ, ಸರಿ ಹೋಗಲಿದೆ.

* ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಯಾರು ಕಾರಣ?
ಕೆಲವೊಂದು ತಪ್ಪುಗಳು ಆಗಿರಬಹುದು ನಿಜ. ಆದರೆ, ಈ ಹಂತದಲ್ಲಿ ಅದರ ಬಗ್ಗೆ ಯೋಚಿಸುವುದು ಅಥವಾ ಮಾತನಾಡುವುದಕ್ಕಿಂತ ಮುಂದೆ ತಪ್ಪುಗಳಾಗದಂತೆ ನೋಡಿಕೊಳ್ಳುವುದು ಮುಖ್ಯ. ಆ ಬಗ್ಗೆ ನಾನು ಹೆಚ್ಚು ಗಮನಹರಿಸಿದ್ದೇನೆ.

* ಮಿತ್ರ ಪಕ್ಷ ಕಾಂಗ್ರೆಸ್‌ ಈ ಸಂದರ್ಭದಲ್ಲಿ ನಿಮಗೆ ಸಾಥ್‌ ನೀಡುತ್ತಿದೆಯಾ?
ಖಂಡಿತವಾಗಿಯೂ, ಅದರಲ್ಲಿ ಎರಡು ಮಾತೇ ಇಲ್ಲ. ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್‌ ನಾಯಕರ ಪ್ರಯತ್ನವೂ ನನ್ನಲ್ಲಿ ಹೊಸ ಭರವಸೆ ಮೂಡಲು ಕಾರಣ. ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಕೆ.ಸಿ.ವೇಣುಗೋಪಾಲ್‌, ಗುಲಾಂ ನಬಿ ಆಜಾದ್‌, ಸಿದ್ದರಾಮಯ್ಯ, ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌, ಡಿ.ಕೆ.ಶಿವಕುಮಾರ್‌ ಸಹಿತ ಎಲ್ಲ ನಾಯಕರ ಜತೆಗೂಡಿಯೇ ನಾನು ಸರ್ಕಾರ ಉಳಿಸಿಕೊಳ್ಳುವ ಧೈರ್ಯದಲ್ಲಿದ್ದೇನೆ.

* ಈ ಹಂತದಲ್ಲಿ ಬಿಜೆಪಿ ನಾಯಕರ ಜತೆ ಸಾ.ರಾ.ಮಹೇಶ್‌ ಮಾತು ಬೇಕಿತ್ತಾ?
ನಾನು ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಸಾ.ರಾ.ಮಹೇಶ್‌ ಬಿಜೆಪಿ ನಾಯಕರ ಜತೆ ಮಾತನಾಡಿದ್ದು ವೈಯಕ್ತಿಕ ಸಂಬಂಧದ ನೆಲೆಗಟ್ಟಿನಲ್ಲಿ. ಪಕ್ಷಕ್ಕೂ ಅವರ ಮಾತುಕತೆಗೂ ಸಂಬಂಧವಿಲ್ಲ. ಅವರು ನನ್ನ ಸಂಪುಟ ಸಹೋದ್ಯೋಗಿ. ಜೆಡಿಎಸ್‌ ಪಕ್ಷದಲ್ಲಿ ರಾಜಕೀಯ ನಿರ್ಣಯ ಕೈಗೊಳ್ಳುವ ಸ್ಥಾನದಲ್ಲಿ ಅವರು ಇಲ್ಲ.

* ಹಾಗಾದರೆ ಬಿಜೆಪಿ ಜತೆ ಮತ್ತೂಮ್ಮೆ ಸೇರುವ ಪ್ರಸ್ತಾಪ ಇಲ್ಲವಾ?
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸರ್ಕಾರ ಮುಂದುವರಿಯಲಿದೆ. ನಮ್ಮ ಮೈತ್ರಿಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಹೀಗಿರುವಾಗ ಬಿಜೆಪಿ ಜತೆ ಸೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

* ಕಾಂಗ್ರೆಸ್‌ನ ಅತೃಪ್ತ ಶಾಸಕರು ನಿರ್ಧಾರದಲ್ಲಿ ಬದಲಾವಣೆಯೇ ಇಲ್ಲ ಎಂದು ಹೇಳಿದ್ದಾರಲ್ಲಾ?
ಮಾಧ್ಯಮಗಳಿಗೆ ಹಾಗೆ ಹೇಳಿರಬಹುದು. ನಾನು ಅವರ ಸಂಪರ್ಕದಲ್ಲಿದ್ದೇನೆ. ರಾಮಲಿಂಗಾರೆಡ್ಡಿ, ರೋಷನ್‌ಬೇಗ್‌ ಅವರೂ ನನ್ನ ಜತೆ ಮಾತನಾಡಿದ್ದಾರೆ. ಅವರಿಗೂ ಸರ್ಕಾರ ಉಳಿಯಬೇಕು ಎಂಬ ಮನಸ್ಸು ಇದೆ.

* ಅಧಿಕಾರಕ್ಕೆ ಬಂದಾಗಿನಿಂದಲೂ ಈ ರೀತಿಯಲ್ಲಿ ಅಧಿಕಾರಕ್ಕಾಗಿ ಕಚ್ಚಾಟ ನಡೆದಿರುವುದು ಸರಿಯಾ?
ತಪ್ಪು. ನಡೆಯಬಾರದಿತ್ತು, ಇದಕ್ಕಾಗಿ ನನಗೂ ಬೇಸರವಿದೆ. ಇದರಲ್ಲಿ ಕಾಂಗ್ರೆಸ್‌-ಜೆಡಿಎಸ್‌ನ ಶಾಸಕರ ತಪ್ಪು ಇದೆ. ಆದೇ ರೀತಿ ಪ್ರತಿಪಕ್ಷ ಬಿಜೆಪಿಯವರ ತಪ್ಪು ನಮಗಿಂತ ಡಬಲ್‌ ಇದೆ. ಕಾಂಗ್ರೆಸ್‌-ಜೆಡಿಎಸ್‌ನ ಕೆಲವು ಶಾಸಕರಲ್ಲಿನ ಅಸಮಾಧಾನ, ಗೊಂದಲವನ್ನೇ ಲಾಭ ಮಾಡಿಕೊಂಡು ಆಮಿಷ, ಬೆದರಿಕೆಯೊಡ್ಡಿ ಸೆಳೆಯುವ ಕೆಲಸ ನನ್ನ ಸರ್ಕಾರ ಬಂದ ಮೊದಲ ದಿನದಿಂದ ಆಗುತ್ತಿದೆ. ಇದು ರಾಜ್ಯದ ಜನರಿಗೂ ಗೊತ್ತಿದೆ.

* ಅತೃಪ್ತರಲ್ಲಿ ಕಾಂಗ್ರೆಸ್‌ನವರಷ್ಟೇ ಅಲ್ಲ ಜೆಡಿಎಸ್‌ ಶಾಸಕರು ಸೇರಿಕೊಂಡಿದ್ದಾರಲ್ಲಾ?
ಹೌದು, ಆ ಬಗ್ಗೆ ನನಗೆ ತೀವ್ರ ನೋವು ಇದೆ. ನಾನು ನನ್ನ ಪಕ್ಷದ ಶಾಸಕರನ್ನು ನನ್ನ ಕುಟುಂಬ ಸದಸ್ಯರಂತೆ ನೋಡುವವನು. ಕೆಲವು ವಿಚಾರಗಳಲ್ಲಿ ಗೊಂದಲ, ವ್ಯತ್ಯಾಸ ಆಗಿರಬಹುದು. ಆದರೆ, ನನ್ನ ಗಮನಕ್ಕೆ ತಂದಿದ್ದರೆ ಸರಿಪಡಿಸುತ್ತಿದೆ. ಈಗಲೂ ಕಾಲ ಮಿಂಚಿಲ್ಲ, ನಮ್ಮ ಶಾಸಕರು ವಾಪಸ್‌ ಬಂದು ಏನಾದರೂ ತೊಂದರೆಯಾಗಿದ್ದರೆ ಹೇಳಲಿ, ಸರಿಪಡಿಸುತ್ತೇನೆ. ಇಲಾಖೆಗಳಲ್ಲಿ ಹಸ್ತಕ್ಷೇಪ, ವರ್ಗಾವಣೆಯಲ್ಲಿನ ವ್ಯತ್ಯಾಸ ಎಲ್ಲ ಆರೋಪಗಳ ಬಗ್ಗೆಯೂ ಗಮನದಲ್ಲಿಟ್ಟುಕೊಂಡಿದ್ದೇನೆ.

ಊಹೆಗೆ ಮೀರಿದ ಬೆಳವಣಿಗೆ: ವಿಧಾನಸಭೆ ಚುನಾವಣೆ ನಂತರ ಯಾರಿಗೂ ಬಹುಮತ ಬರದಿದ್ದಾಗ ಕಾಂಗ್ರೆಸ್‌ ನಾಯಕರು ನನಗೆ ನಿರೀಕ್ಷೆಯೇ ಇರಲಿಲ್ಲವಾದರೂ ನನ್ನ ಮೆಲೆ ವಿಶ್ವಾಸವಿಟ್ಟು ಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳಲು ಒಪ್ಪಿಸಿದರು. ನಾನು ಎರಡೂ ಪಕ್ಷದವರನ್ನು ವಿಶ್ವಾಸಕ್ಕೆ ತೆಗದುಕೊಂಡು ಆದಷ್ಟೂ ಸಮನ್ವಯತೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ಆಮೆರಿಕ ಪ್ರವಾಸದಲ್ಲಿದ್ದಾಗ ದಿಢೀರ್‌ನೆ ಇಲ್ಲಿ ಕೆಲವೊಂದು ಬೆಳವಣಿಗೆ ನನ್ನ ಊಹೆಗೆ ಮೀರಿ ನಡೆದಿವೆ. ವ್ಯತ್ಯಾಸ ಸರಿಪಡಿಸುವ ಹಾದಿಯಲ್ಲಿದ್ದೇನೆ. ಮುಂಬೈನಲ್ಲಿರುವ ಎಲ್ಲ ಶಾಸಕರೂ ನನ್ನ ಸಂಪರ್ಕದಲ್ಲಿದ್ದಾರೆ. ಅವರ ನೋವುಗಳನ್ನೂ ನನಗೆ ಹೇಳಿದ್ದಾರೆ. ಅಂತಿಮವಾಗಿ ನಾನು ಅವರ ಮನವೊಲಿಸುವ ವಿಶ್ವಾಸವಿದೆ.

* ಎಸ್. ಲಕ್ಷ್ಮೀನಾರಾಯಣ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ