ವಾಲ್ಮೀಕಿಯ ದೆಸೆಯಿಂದ, ಕೇಡಿಯೊಬ್ಬ ಕಥಾನಾಯಕನಾದ!

Team Udayavani, Jan 5, 2020, 6:45 AM IST

ಇವನ ಹೆಸರು ವಿಕಿ. ಈತ ಕೋಲ್ಕತಾ ಮೂಲದವನು. ಮೀನು ಮಾರ್ಕೆಟ್‌ನಲ್ಲಿ ವ್ಯಾಪಾರಿಯಾಗಿದ್ದ ಅಪ್ಪ, ಗೃಹಿಣಿ ಅಮ್ಮ, ಜೊತೆಗಿದ್ದ ತಮ್ಮ -ಇದಿಷ್ಟೇ ವಿಕಿಯ ಪ್ರಪಂಚ. ಮಧ್ಯಮ ವರ್ಗದ ಎಲ್ಲ ಅಪ್ಪಂದಿರಂತೆಯೇ ವಿಕಿಯ ಅಪ್ಪ ಕೂಡ- “ಮುಂದೆ ನೀನು ಚೆನ್ನಾಗಿ ಓದಿ ಆಫೀಸರ್‌ ಆಗಬೇಕು’ ಎಂದು ಮೇಲಿಂದ ಮೇಲೆ ಹೇಳುತ್ತಿದ್ದರು. ಈತ ಪ್ರತಿಬಾರಿಯೂ- “ಖಂಡಿತ ಡ್ಯಾಡೀ, ನಾನು ಆಫೀಸರ್‌ ಆಗೇ ಆಗ್ತೀನೆ, ಪ್ರಾಮಿಸ್‌!’ ಅನ್ನುತ್ತಿದ್ದ. ಆನಂತರದಲ್ಲಿ ಈ ಹುಡುಗನ ಬದುಕಿನಲ್ಲಿ “ನಂಬಲು ಸಾಧ್ಯವಿಲ್ಲ, ನಂಬದೇ ವಿಧಿಯಿಲ್ಲ’ ಎಂಬಂಥ ಘಟನೆಗಳೆಲ್ಲ ನಡೆದುಹೋಗಿವೆ. ಆ ವಿವರಗಳೆಲ್ಲಾ ವಿಕಿಯ ಮಾತುಗಳಲ್ಲೇ ಇವೆ. ಓದಿಕೊಳ್ಳಿ.

“ನನಗೆ ಚೆನ್ನಾಗಿ ನೆನಪಿದೆ. ನಾನಾಗ 2ನೇ ತರಗತಿಯಲ್ಲಿದ್ದೆ. ಅವತ್ತೂಂದು ದಿನ, ರಸ್ತೆ ಅಪಘಾತದಲ್ಲಿ ನನ್ನ ತಂದೆ ತೀರಿಕೊಂಡರು. ಮರುದಿನದಿಂದಲೇ ನಮ್ಮ ಬದುಕಿಗೆ ಕಷ್ಟದ ದಿನಗಳು ಜೊತೆಯಾದವು. ಅವತ್ತಿನವರೆಗೂ, ತಂದೆಯ ಸಂಪಾದನೆಯಿಂದಲೇ ಮನೆ ನಡೆಯುತ್ತಿತ್ತು. ಈಗ, ಊಟಕ್ಕೂ ಗತಿಯಿಲ್ಲದೆ ಪರದಾಡು ವಂತಾಯಿತು. ಈ ಸಂದರ್ಭದಲ್ಲಿ ಅಮ್ಮ, ಅವರಿವರ ಮನೆಯಲ್ಲಿ ಕಸ ಗುಡಿಸುವ, ಮುಸುರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡಳು. ಮಗನನ್ನು ಚೆನ್ನಾಗಿ ಓದಿಸಿ ಆಫೀಸರ್‌ ಮಾಡಬೇಕು ಎಂದು ಅಪ್ಪ ಹೇಳುತ್ತಿದ್ದುದನ್ನು, ಅಮ್ಮ ಮರೆತಿರಲಿಲ್ಲ. ಫಾದರ್‌ಗಳನ್ನು ಕಾಡಿ ಬೇಡಿ ಕೋಲ್ಕತಾದ ಪ್ರತಿಷ್ಠಿತ ಕ್ಸೇವಿಯರ್‌ ವಿದ್ಯಾಸಂಸ್ಥೆಯಲ್ಲಿ ನನಗೆ ಸೀಟು ಕೊಡಿಸಿದಳು. ಓದು ಮತ್ತು ಕ್ರೀಡೆ -ಎರಡರಲ್ಲೂ ನಾನು ಸ್ಟ್ರಾಂಗ್‌ ಆಗಿದ್ದೆ. ಮುಂದೆ, ನ್ಪೋರ್ಟ್ಸ್ ಕೋಟಾದಲ್ಲಿ ಮಿಲಿಟರಿ ಸೇರಿ, ಆರ್ಮಿ ಆಫೀಸರ್‌ ಆಗಬೇಕು ಎಂಬುದು ನನ್ನ ಗುರಿಯಾಗಿತ್ತು.

ನನಗೆ 15 ವರ್ಷವಾಗಿದ್ದಾಗ, ನಾನು ಕನಸಿನಲ್ಲೂ ಊಹಿಸದಿದ್ದ ಘಟನೆಯೊಂದು ನಡೆದುಹೋಯಿತು. ಅವತ್ತು, ಮನೆಗೆ ಹತ್ತಿರವೇ ಇದ್ದ ಬಾರ್ಬರ್‌ ಶಾಪ್‌ಗೆ ಹೋಗಿದ್ದೆ. ಅಲ್ಲಿ, ಆಕಸ್ಮಿಕವಾಗಿ ಕಾಲು ತಾಗಿತು ಎಂಬ ಕಾರಣಕ್ಕೆ ಮತ್ತೂಬ್ಬ ಕ್ಯಾತೆ ತೆಗೆದ. ಅವನೇ ಮೊದಲು ಎರಡೇಟು ಹಾಕಿಯೂ ಬಿಟ್ಟ. ನನ್ನದು ಕುದಿಪ್ರಾಯ. ಕೇಳಬೇಕೆ? ನಾನೂ ಒಂದಕ್ಕೆರಡು ಕೊಟ್ಟೆ. ಅವತ್ತು ನನ್ನಿಂದ ಹೊಡೆತ ತಿಂದವನು, ಮನೆಗೆ ಹೋಗಿ ಕುಸಿದುಬಿದ್ದು ಸತ್ತೇ ಹೋದನೆಂದು ಸುದ್ದಿ ಬಂತು. ಪುಣ್ಯಕ್ಕೆ, ಇದು ಪೊಲೀಸ್‌ ಕೇಸ್‌ ಆಗಲಿಲ್ಲ.

ಮರುದಿನ, ವಿಸ್ಮಯವೊಂದು ಎದುರಾಗಿತ್ತು. ಏರಿಯಾದ ಜನ, ನನ್ನನ್ನು ಬೆರಗಿನಿಂದ ನೋಡುತ್ತಿದ್ದರು. ಅವರ ಕಣ್ಣುಗಳಲ್ಲಿ ಭಯವಿತ್ತು. ಕೆಲವರು- “ನಮಸ್ಕಾರ ಸಾರ್‌’ ಅನ್ನತೊಡಗಿದರು. ಆಗಲೇ ನನ್ನ ಒಳಮನಸ್ಸು ಪಿಸುಗುಟ್ಟಿತು: ತೋಳ್ಬಲವಿದ್ದರೆ ಜನರೆಲ್ಲ ಹೆದರುತ್ತಾರೆ. ಶಕ್ತಿವಂತರ ಟೀಂ ಕಟ್ಟಿಕೊಂಡು ಮಹಾರಾಜನಂತೆ ಬದುಕುವುದೇ ಸರಿ. ಹೇಳಿದಂತೆ ಕೇಳದವರಿಗೆ ಮೂಳೆ ಮುರಿದರೆ ಆಯ್ತು…

ಆನಂತರದಲ್ಲಿ ಎಲ್ಲವೂ ವೇಗವಾಗಿ ನಡೆಯತೊಡಗಿತು. ನನ್ನದೇ ವಯಸ್ಸಿನ ಖತರ್‌ನಾಕ್‌ ಹುಡುಗರ ತಂಡವೊಂದು ಜೊತೆಯಾಯಿತು. ಶ್ರೀಮಂತರ, ಉದ್ಯಮಿಗಳು ನನ್ನನ್ನು ಗುಟ್ಟಾಗಿ ಸಂಪರ್ಕಿಸಿ ಕಿಡ್ನಾಪ್‌, ದರೋಡೆ, ಹಲ್ಲೆ, ಕೊಲೆಯಂಥ ಕೃತ್ಯಗಳಿಗೆ ಸುಪಾರಿ ಕೊಡುತ್ತಿದ್ದರು. ಎಷ್ಟೋ ಸಂದರ್ಭಗಳಲ್ಲಿ, ಇವತ್ತು ಇಂತಿಂಥವರನ್ನು ಕಿಡ್ನಾಪ್‌ ಮಾಡಬೇಕು, ಇಂಥವರಿಗೆ ಹೊಡೀಬೇಕು ಎಂದು ಕೆಲಸ ಹಂಚಿ, ನಾನು ಕಾಲೇಜಿಗೆ ಹೋಗಿಬಿಡುತ್ತಿದ್ದೆ. ಸಂಜೆಯಾಗುವು ದರೊಳಗೆ, ನನ್ನ ಹುಡುಗರು ಹೇಳಿದ ಕೆಲಸವನ್ನೆಲ್ಲ ಮಾಡಿರುತ್ತಿದ್ದರು.

ಇಸವಿ 2000ದಲ್ಲಿ ಏನಾಯಿತೆಂದರೆ, ಒಂದು ಕೆಲಸ ಮಾಡಿಸಿಕೊಂಡ ಶ್ರೀಮಂತನೊಬ್ಬ, ಕೊಡಬೇಕಿದ್ದ ಹಣ ಕೊಡದೆ ಆಟವಾಡತೊಡಗಿದ. ನಾನು, ಹಿಂದೆಮುಂದೆ ಯೋಚಿಸದೆ ಅವನ ಅಂಗಡಿಗೇ ಹೋದೆ. ಕಂಗಾಲಾದ ಆತ, ಈಗ ಹಣ ತಂದುಕೊಡುವೆ ಎನ್ನುತ್ತಾ ಒಳಮನೆಗೆ ಹೋಗಿ, ಪೊಲೀಸರಿಗೆ ಕರೆ ಮಾಡಿಬಿಟ್ಟಿದ್ದ. “ಬೇಗ ದುಡ್ಡು ಕೊಡ್ತೀರೋ ಇಲ್ವೊ?’ ಎಂದು ನಾನು ಅಬ್ಬರಿಸಿದ ವೇಳೆಗೇ, ಅಂಗಡಿಯ ಮುಂದೆ ಪೊಲೀಸ್‌ ಜೀಪು ಬಂದು ನಿಂತಿತು.

ಪೊಲೀಸರ ಹಿಂಸೆ ತಡೆಯಲಾಗದೆ, ಅದುವರೆಗಿನ ನನ್ನ ಇತಿಹಾಸವನ್ನೆಲ್ಲ ಹೇಳಿಕೊಂಡೆ. ಪರಿಣಾಮ ಕಿಡ್ನ್ಯಾಪ್‌, ದರೋಡೆ, ಕೊಲೆಯತ್ನವೆಂದು 17 ಕೇಸ್‌ಗಳು ದಾಖಲಾದವು. 9 ವರ್ಷ ಜೈಲುಶಿಕ್ಷೆಯೆಂದು ನ್ಯಾಯಾಲಯ ಘೋಷಿಸಿತು. ಪರಿಣಾಮ, ಅವತ್ತಿನವರೆಗೂ ದೊರೆಯಂತೆ ಮೆರೆಯುತ್ತಿದ್ದವನು, ಸರಳುಗಳ ಹಿಂದೆ ನರಳುವಂತಾಯಿತು. ಹೀಗೆ ಜೈಲುಪಾಲಾದಾಗ, ನನಗೆ 22 ವರ್ಷ. ಆಗಷ್ಟೇ ನನ್ನ ಡಿಗ್ರಿ ಮುಗಿದಿತ್ತು. ಕುದಿಪ್ರಾಯದ ಆವೇಶ, ಆಗಲೂ ಜೊತೆಗೇ ಇತ್ತು. ಈ ಮೊದಲು ಹೊಡೆದಾಟಗಳಲ್ಲಿ ಪಾಲ್ಗೊಂಡು, ಪೊಲೀಸರಿಂದ ತಪ್ಪಿಸಿಕೊಂಡು ಅಭ್ಯಾಸವಾಗಿತ್ತಲ್ಲ; ಅದನ್ನೇ ರಿಪೀಟ್‌ ಮಾಡಿದರೆ ಹೇಗೆ ಅನ್ನಿಸಿತು. ಜೈಲಿನ ಗೋಡೆ ಹಾರಿ ತಪ್ಪಿಸಿಕೊಳ್ಳುವ, ಹುಚ್ಚುಸಾಹಸಕ್ಕೆ ಮುಂದಾದೆ. ಪರಿಣಾಮ: ಕಾಲಿನ ಮೂಳೆಗಳು ಮುರಿದುಹೋದವು. ಡೇಂಜರಸ್‌ ಕ್ರಿಮಿನಲ್‌ ಎಂಬ ಹಣೆಪಟ್ಟಿ ಜೊತೆಯಾಯಿತು!

ಹೀಗೇ ವರ್ಷಗಳು ಉರುಳುತ್ತಿದ್ದವು. ಆರ್ಮಿ ಆಫೀಸರ್‌ ಆಗಬೇಕಿದ್ದವನು, ಜೈಲಿನಲ್ಲಿ ಅಬ್ಬೇಪಾರಿಯಂತೆ ಬದುಕಬೇಕಾಯ್ತಲ್ಲ ಎಂದು ಚಿಂತಿಸುತ್ತ, ನನ್ನ ದುರಾದೃಷ್ಟಕ್ಕೆ ಮರುಗುತ್ತಾ ದಿನದೂಡುತ್ತಿದ್ದೆ. ಆಗಲೇ ಆಕಸ್ಮಿಕವೊಂದು ನಡೆಯಿತು. ಕೈದಿಗಳ ಮನಪರಿವರ್ತನೆಯ ಉದ್ದೇಶದಿಂದ ನಾಟಕ ಹಾಗೂ ನೃತ್ಯರೂಪಕ ನಡೆಸಲು ಹೆಸರಾಂತ ಒಡಿಸ್ಸೀ ನೃತ್ಯನಿರ್ದೇಶಕಿ ಅಲಕಾನಂದ ರಾಯ್‌, ನಾವಿದ್ದ ಜೈಲಿಗೆ ಬಂದರು. ಯಾವ ಪಾತ್ರಕ್ಕೆ ಯಾರು ಹೊಂದುತ್ತಾರೆ ಎಂದು ಪರೀಕ್ಷಿಸಲು ಎಲ್ಲ ಕೈದಿಗಳನ್ನೂ ಗಮನಿಸುತ್ತಾ ಬಂದವರು, ನನ್ನನ್ನು ಕಂಡಾಕ್ಷಣ- “ಇಷ್ಟೊಂದು ಮುದ್ದಾಗಿರುವ ಹುಡುಗ, ಕ್ರೈಂಗೆ ಯಾಕೆ ಬಂದ? ಮುಖ್ಯಪಾತ್ರಗಳಿಗೆ ಇವನೇ ಸರಿ. ಇವನ ನಿಲುವಿನಲ್ಲಿ, ಕಣ್ಣ ನೋಟದಲ್ಲಿ ಅದೇನೋ ಆಕರ್ಷಣೆಯಿದೆ’ ಅಂದರು.

ಈ ಮಾತು ಕೇಳಿ ಅಲ್ಲೇ ಇದ್ದ ಐಜಿಪಿಯವರು ಬೆಚ್ಚಿಬಿದ್ದು- “ಅಯ್ಯೋ, ನಿಮಗೆ ಗೊತ್ತಿಲ್ಲ. ಇವನು ದೊಡ್ಡ ಕೇಡಿ. ರೌಡಿಗ್ಯಾಂಗ್‌ನ ಲೀಡರ್‌. ಒಂದೆರಡಲ್ಲ; 17 ಕೇಸ್‌ಗಳಿವೆ ಇವನ ಮೇಲೆ. ಇವನನ್ನು ತರಬೇತಿಯ ನೆಪದಲ್ಲಿ ಹೊರಗೆ ಕಳಿಸಲು ಸಾಧ್ಯವೇ ಇಲ್ಲ’ ಅಂದರು. ಆದರೆ, ಅಲಕಾನಂದ ಮೇಡಂ ಬಿಡಲಿಲ್ಲ. ಆಕೆ ದೃಢವಾಗಿ ಹೇಳಿದರು: “ಇವತ್ತಿಂದ, ವಿಕಿ ನನ್ನ ಮಗ. ಆಕಸ್ಮಿಕವಾಗಿ ತಪ್ಪುದಾರೀಲಿ ಹೋಗಿದಾನೆ. ಅವನಿಂದ ನಾಟಕ ಮಾಡಿಸ್ತೀನಿ. ತಾಯಿಯೊಬ್ಬಳು ತಲೆತಗ್ಗಿಸುವಂಥ ಕೆಲಸವನ್ನು ನನ್ನ ಮಗ ಮಾಡಲಾರ…’

ಆನಂತರ ಶುರುವಾದದ್ದೇ ರವೀಂದ್ರನಾಥ ಟ್ಯಾಗೋರ್‌ ಅವರ “ವಾಲ್ಮೀಕಿ ಪ್ರತಿಭಾ’ ನೃತ್ಯರೂಪಕದ ತಾಲೀಮು. ಕೊಲೆ-ದರೋಡೆ, ಡಕಾಯಿತಿಯನ್ನೇ ಬದುಕಾಗಿಸಿಕೊಂಡಿದ್ದ ರತ್ನಾಕರ್‌ ಎಂಬ ಬೇಡರವನು, ವಾಲ್ಮೀಕಿ ಎಂಬ ಋಷಿಯಾಗಿ ಬದಲಾದ, ಆ ಮೂಲಕವೇ ಲೋಕವಿಖ್ಯಾತನಾದ ಕಥೆ ಅದು. ತರಬೇತಿಯ ಸಂದರ್ಭದಲ್ಲಿ, ಅಲಕಾನಂದ ಮೇಡಂ ಹೇಳಿದ್ದರು: “ನೋಡೂ, ರತ್ನಾಕರ್‌ ಎಂಬ ಕೇಡಿಯನ್ನು ಲೋಕ ನೆನೆಯುವುದಿಲ್ಲ. ವಾಲ್ಮೀಕಿ ಎಂಬ ಕರುಣಾಳುವನ್ನು ಮರೆಯುವುದಿಲ್ಲ. ನಿನ್ನೊಳಗೂ ಇರುವ ರತ್ನಾಕರ್‌ ಅಳಿಯಬೇಕು. ವಾಲ್ಮೀಕಿ ಅರಳಬೇಕು…’

ರಿಹರ್ಸಲ್‌ ಮಾಡುತ್ತಾ ಹೋದಂತೆ, ನನ್ನೊಳಗಿದ್ದ ಕೇಡಿಯ ಕ್ರೌರ್ಯ, ಅದು ಉಳಿದವರಿಗೆ ನೀಡಿದ್ದ ನೋವು, ಅದರಿಂದ ಸುತ್ತಿಕೊಳ್ಳುವ ಪಾಪ -ಇಷ್ಟಿಷ್ಟೇ ಅರ್ಥವಾಗುತ್ತಾ ಹೋಯಿತು. ಎಷ್ಟೋ ಬಾರಿ, ಇದು ನಾಟಕವಲ್ಲ; ನನ್ನದೇ ಬದುಕಿನ ಕಥೆ ಅನ್ನಿಸಿಬಿಡುತ್ತಿತ್ತು. ಕಡೆಗೊಮ್ಮೆ, 2008ರಲ್ಲಿ “ಜೈಲುಹಕ್ಕಿಗಳಿಂದ ನೃತ್ಯರೂಪಕ’ ಎಂಬ ಪ್ರಕಟಣೆಯೊಂದು ಹೊರಬಿತ್ತು. ಅಕಸ್ಮಾತ್‌, ಆ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೆ, ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಲಾಗುವುದು ಎಂದು ನಮಗೆಲ್ಲ ಎಚ್ಚರಿಕೆ ನೀಡಲಾಗಿತ್ತು. “ವಿಕಿ ನನ್ನ ಮಗ. ನಾನು ತಲೆತಗ್ಗಿಸುವಂಥ ಕೆಲಸವನ್ನು ಅವನು ಮಾಡಲಾರ’ ಎಂದಿದ್ದರಲ್ಲ ಅಲಕಾನಂದ ಮೇಡಂ… ಅದನ್ನು ನೆನಪಿಸಿಕೊಂಡೇ ರಂಗಕ್ಕಿಳಿದೆ. ಪ್ರದರ್ಶನ ಮುಗಿದಾಗ, ಹತ್ತು ನಿಮಿಷಗಳ ಕಾಲ ಸುದೀರ್ಘ‌ ಚಪ್ಪಾಳೆ…

ಅವತ್ತು, ಉಳಿದೆಲ್ಲರಿಗಿಂತ ಹೆಚ್ಚಿನ ಅಚ್ಚರಿ ಉಂಟುಮಾಡಿದ್ದು ಪೊಲೀಸ್‌ ಕಮೀಷನರ್‌ರ ಮಾತು. ಅದುವರೆಗೂ, ಬಾಲ ಬಿಚ್ಚಿದರೆ ಗುಂಡು ಹಾರಿಸ್ತೀವಿ ಹುಷಾರ್‌ ಅನ್ನುತ್ತಿದ್ದವರು, ಅವತ್ತು ನನ್ನ ಹೆಗಲು ತಟ್ಟಿ ಹೇಳಿದರು: “ನಿನ್ನೊಳಗೆ ಅದ್ಭುತ ಕಲಾವಿದನಿದ್ದಾನೆ ಎಂದು ಗೊತ್ತೇ ಇರಲಿಲ್ಲ. ಬಹಳ ಚೆನ್ನಾಗಿ ಅಭಿನಯಿಸಿದೆ. ಶಹಬ್ಟಾಷ್‌, ಮುಂದೆ, ಒಳ್ಳೆಯವನಾಗಿ ಬದುಕು…”

ಆನಂತರದಲ್ಲಿ ನನ್ನ ಬದುಕಿಗೆ ಒಳ್ಳೆಯ ದಿನಗಳು ಒಂದೊಂದಾಗಿ ಬಂದವು. ಮೊದಲಿಗೆ, ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಎಲ್ಲ ಕೇಸ್‌ಗಳಿಂದಲೂ ಮುಕ್ತಿ ದೊರೆಯಿತು. ಈ ವೇಳೆಗೆ, ಕೈದಿಯಾಗಿ ಒಂಬತ್ತು ವರ್ಷಗಳ ಶಿಕ್ಷೆ ಅನುಭವಿಸಿದ್ದೆ. ನೃತ್ಯರೂಪಕದ ಕಾರಣದಿಂದ ಬಂಗಾಳಿ ಸಿನಿಮಾಗಳಲ್ಲಿ ಛಾನ್ಸ್‌ ಸಿಕ್ಕಿತು. ಒಂದರ ಹಿಂದೊಂದು ಹಿಟ್‌ ಸಿನಿಮಾಗಳು ಜೊತೆಯಾದವು. ಬೆಸ್ಟ್‌ ಆಕ್ಟರ್‌ ಎಂಬ ಪ್ರಶಸ್ತಿ ಬಂತು. ಬಂಗಾಳಿ ಸಿನಿಮಾದಲ್ಲಿ ಮಾತ್ರವಲ್ಲ; ಮಲಯಾಳಂ ಸಿನಿಮಾದಲ್ಲಿ ಅಭಿನಯಿಸುವ ಅವಕಾಶವೂ ಸಿಕ್ಕಿತು. ಅದುವರೆದೂ, ಕೇಡಿಯೊಬ್ಬ ಕಥಾನಾಯಕನಾಗಲು ಸಿನಿಮಾದಲ್ಲಿ ಮಾತ್ರ ಸಾಧ್ಯ ಎನ್ನುತ್ತಿದ್ದ ನಾನೇ, ಈಗ ನನ್ನ ಬದುಕಲ್ಲೇ ನಡೀತಿದ್ದುದನ್ನು ನಂಬಲೂ ಆಗದೆ, ನಿರಾಕರಿಸಲೂ ಆಗದೆ ಉಳಿದುಬಿಟ್ಟಿದ್ದೆ. ಈ ಮಧ್ಯೆ ನನ್ನ ಒಳಮನಸ್ಸು ಎಚ್ಚರಿಸುತ್ತಲೇ ಇತ್ತು: “ಈ ಯಶಸ್ಸು ಶಾಶ್ವತವಲ್ಲ. ಹೊಟ್ಟೆಪಾಡಿಗೆ, ಒಂದು ಉದ್ಯೋಗ ಅಂತ ನೋಡಿಕೋ. ನಾಳೆ ಇನ್ನೊಬ್ಬ ಶ್ರೇಷ್ಠ ನಟ ಬಂದರೆ, ಚಿತ್ರೋದ್ಯಮ ನಿನ್ನನ್ನೂ ಮುಲಾಜಿಲ್ಲದೆ ಸೈಡ್‌ಗೆ ತಳ್ಳುತ್ತದೆ…’

ಡಿಗ್ರಿ ಸರ್ಟಿಫಿಕೇಟ್‌ ಜೊತೆಗಿತ್ತಲ್ಲ: ಅದೇ ಧೈರ್ಯದಲ್ಲಿ, ಮರುದಿನದಿಂದಲೇ ಕೆಲಸ ಹುಡುಕತೊಡಗಿದೆ. ಸಂದರ್ಶನಕ್ಕೆ ಕರೆದವರದ್ದೆಲ್ಲ ಒಂದೇ ಪ್ರಶ್ನೆ: “ಈ ಮೊದಲು ಎಲ್ಲಿ ಕೆಲಸ ಮಾಡ್ತಿದ್ದೆ? ಡಿಗ್ರಿ ಮುಗಿದು 9 ವರ್ಷ ಆದರೂ ಯಾಕೆ ಕೆಲಸ ಮಾಡಲಿಲ್ಲ?’ ಕೆಲವರು-ಕಸ ಗುಡಿಸುವ, ಸ್ಟೋರ್‌ ರೂಂ ಕ್ಲೀನ್‌ ಮಾಡುವ ಕೆಲಸ ಕೊಟ್ಟರು. ಮತ್ತೆ ಕೆಲವರು, ನನ್ನ ಹಳೆಯ ಇತಿಹಾಸ ನೆನೆದು- ನೀನು ಮತ್ತೆ ರೌಡಿಸಂ ಮಾಡಿದರೆ ಗತಿ ಏನು? ನಿನ್ನೊಂದಿಗೆ ನಾವೂ ಜೈಲು ಸೇರಬೇಕಾಗ್ತದೆ. ನಿನ್ನ ಸಹವಾಸವೇ ಬೇಡ’ ಎಂದು ಕೈ ಮುಗಿದರು.

ಇದನ್ನೆಲ್ಲ ಗಮನಿಸಿದ ಮೇಲೆ, ಯಾವುದೇ ಓದಿನ ವಿವರ ಕೇಳದೆ ಕೆಲಸ ನೀಡುವಂಥ ಸಂಸ್ಥೆಯೊಂದನ್ನು ನಾನೇ ಆರಂಭಿಸಬಾರದೇಕೆ? ಆ ಮೂಲಕ, ಬದಲಾಗಲು ರೆಡಿಯಾಗಿರುವ ಕೈದಿಗಳಿಗೆ ಹೊಸ ಬದುಕು ನೀಡಬಾರದೇಕೆ? ಅನ್ನಿಸಿತು. ಏನೂ ಓದಿಲ್ಲದವರೂ ಮಾಡಬಹುದಾದ ಕೆಲಸವೆಂದರೆ, ಹೌಸ್‌ ಕೀಪಿಂಗ್‌ ಎಂದೂ ಆಗಲೇ ಗೊತ್ತಾಯಿತು.ಹೀಗೆ ಶುರುವಾದದ್ದೇ- “ಕೋಲ್ಕತಾ ಫೆಸಿಲಿಟೀಸ್‌ ಮ್ಯಾನೇಜ್‌ಮೆಂಟ್‌’ ಸಂಸ್ಥೆ. ನನ್ನ ಕೆಲಸ-“ಹೌಸ್‌ಕೀಪಿಂಗ್‌ ಕೆಲಸಕ್ಕೆ, ಸೆಕ್ಯೂರಿಟಿ ಏಜೆನ್ಸಿಗಳಿಗೆ’ ಕೆಲಸಗಾರರನ್ನು ಒದಗಿಸುವುದು…

ನನ್ನದೇ ಸಂಸ್ಥೆ ಆರಂಭಿಸುವೆ ಅಂದಾಗ, ಈ ಊರಿನ ಸಹವಾಸ ಬೇಡ. ಹಳೆಯ ದ್ವೇಷದಿಂದ ಯಾರಾದರೂ ತೊಂದರೆ ಮಾಡಬಹುದು. ಬೇರೆ ಊರಿಗೆ ಹೋಗಿಬಿಡು ಅಂದಳು ಅಮ್ಮ. ಹಾಗೇನಾದರೂ ಮಾಡಿದರೆ, ಅಲ್ಲೆಲ್ಲೋ ಕ್ರೈಂ ಮಾಡಿ ಓಡಿಬಂದನಂತೆ ಎಂದು ಜನ ಆಡಿಕೊಳ್ಳುತ್ತಾರೆ. ಅಂಥ ಮಾತು ಕೇಳಲು ನನಗೆ ಇಷ್ಟವಿಲ್ಲ. ಹಳೆಯ ತಪ್ಪುಗಳಿಗೆ ಶಿಕ್ಷೆ ಅನುಭವಿಸಿದ್ದೇನೆ. ಹಾಗಾಗಿ, ಇಲ್ಲೇ ಇತೇìನೆ ಎಂದು ಅಮ್ಮನಿಗೂ ಹೇಳಿದೆ. ಇದೇ ಮಾತನ್ನೂ ನನ್ನ ಸಂಸ್ಥೆಯ ಕೆಲಸಗಾರರಿಗೂ ಹೇಳಿದೆ. “ಕೇಡಿಯನ್ನು ಜಗತ್ತು ನೆನೆಯೋದಿಲ್ಲ. ಕಷ್ಟ ಜೀವಿಗಳನ್ನು ಮರೆಯೋದಿಲ್ಲ…’ ಇದು ನಮ್ಮ ಸಂಸ್ಥೆಯ ಧ್ಯೇಯವಾಕ್ಯ. ನಂಬಿರಾ ಸಾರ್‌? ನನ್ನ ಸಂಸ್ಥೆಯ ಸೆಕ್ಯೂರಿಟಿ ಗಾರ್ಡ್‌ಗಳಿಗೆ “ಬೆಸ್ಟ್‌ ವರ್ಕರ್‌’ ಎಂಬ ಪ್ರಶಸ್ತಿ ಸಿಕ್ಕಿದೆ. ನನ್ನನ್ನು, “ಫ್ರೆಶ್‌ ಫೇಸ್‌’, “ಚೇಂಜ್‌ ಮೇಕರ್‌ ಆಫ್ ಇಂಡಿಯಾ’ ಎಂದು ಗುರುತಿಸಲಾಗಿದೆ.

ಕ್ರೈಂ ಲೋಕದಲ್ಲಿಯೇ ಇದ್ದಿದ್ದರೆ ಏನಾಗುತ್ತಿದ್ದೆನೋ ಕಾಣೆ: ಆದರೆ, ಅಲಕನಂದ ಎಂಬ ತಾಯಿಯ ಕೃಪೆಯಿಂದ, ನನ್ನೊಳಗಿನ ಕೇಡಿ ಸತ್ತುಹೋದ. ಕಲಾವಿದ ಉಳಿದುಕೊಂಡ. ವಾಲ್ಮೀಕಿಯ ದೆಸೆಯಿಂದ, ನಾನೂ ಒಬ್ಬ ಕಲಾವಿದನಾದೆ. ನಾಯಕ ನಟನಾದೆ. ಬೆಸ್ಟ್‌ ಆ್ಯಕ್ಟರ್‌ ಅನ್ನಿಸಿಕೊಂಡೆ. ಅದಕ್ಕೂ ಮುಖ್ಯವಾಗಿ ಒಬ್ಬ ಮನುಷ್ಯನಾದೆ. ಈ ಬದುಕಿಗೆ ಋಣಿ…ಹೀಗೆ ಮುಗಿಯುತ್ತದೆ ವಿಗಿ ನಿಗೇನ್‌ ಅರೇರಾನ ಕಥೆ…

– ಎ.ಆರ್‌.ಮಣಿಕಾಂತ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ