ಆರದ ಮುನಿಸು; ಬಿಜೆಪಿಯಲ್ಲಿ ಇನ್ನೂ ಮುಗಿಯದ ಬಂಡಾಯದ ಸದ್ದು

ರಾಣೆಬೆನ್ನೂರು, ಹೊಸಪೇಟೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ

Team Udayavani, Nov 18, 2019, 6:15 AM IST

ಬೆಂಗಳೂರು: ಹದಿನೈದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಬಂಡಾಯದ ಬಿಸಿ ಜೋರಾಗಿ ತಟ್ಟುತ್ತಿದೆ. ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನವಾಗಿದ್ದು ಹೊಸಪೇಟೆ, ರಾಣೆಬೆನ್ನೂರು ಹಾಗೂ ಗೋಕಾಕ್‌ನಲ್ಲಿ ಬಿಜೆಪಿಗೆ ಬಂಡಾಯವೇ ತಲೆನೋವಾಗಿ ಪರಿಣಮಿಸಿದೆ.

ಅನರ್ಹ ಶಾಸಕರಿಗೆ ಟಿಕೆಟ್‌ ನೀಡಿರುವುದನ್ನು ವಿರೋಧಿಸಿ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಬಿ.ಎನ್‌. ಬಚ್ಚೇಗೌಡ ಅವರ ಪುತ್ರ ಶರತ್‌ ಬಚ್ಚೇಗೌಡ ಈಗಾಗಲೇ ಬಂಡಾಯ ಅಭ್ಯರ್ಥಿ ಯಾಗಿ ಕಣಕ್ಕಿಳಿದಿದ್ದಾರೆ. ಅವರ ಮನವೊಲಿಸುವ ಪ್ರಯತ್ನ ಕೈಬಿಟ್ಟಿದ್ದು, ಪಕ್ಷದಿಂದ ಅವರನ್ನು ಉಚ್ಚಾಟಿಸಲು ನಿರ್ಧರಿಸಲಾಗಿದೆ.

ಅದೇ ರೀತಿ ಹೊಸಪೇಟೆ(ವಿಜಯನಗರ)ಯಲ್ಲಿ ಆನಂದ್‌ ಸಿಂಗ್‌ ಅವರಿಗೆ ಟಿಕೆಟ್‌ ನೀಡಿರುವುದನ್ನು ವಿರೋ ಧಿಸು ತ್ತಿರುವ ಕವಿರಾಜ್‌ ಅರಸ್‌ ಅವರು ಬಂಡಾಯ ಅಭ್ಯರ್ಥಿ ಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದು, ಸೋಮವಾರ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೆ, ಆನಂದ್‌ ಸಿಂಗ್‌ ಸಹೋದರಿ ರಾಣಿ ಸಂಯುಕ್ತ ಕೂಡ ಪಕ್ಷದ ನಾಯಕರ ವಿರುದ್ಧ ಬಂಡಾಯ ಸಾರುವ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಣೆಬೆನ್ನೂರಿನಲ್ಲಿ ಇನ್ನೂ ಬೇಗುದಿ
ರಾಣೆಬೆನ್ನೂರಿನಲ್ಲಿ ಅರುಣ್‌ ಕುಮಾರ್‌ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ಸ್ಥಳೀಯ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರವಿವಾರ ಬಸವರಾಜ್‌ ಕೆಲಗಾರ್‌ ಅವರ ಬೆಂಬಲಿಗರು ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವ ರನ್ನು ಭೇಟಿ ಮಾಡಿ ಅರುಣ್‌ ಕುಮಾರ್‌ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿದ್ದು, ವಂಚನೆ ಪ್ರಕರಣ  ದಲ್ಲಿ ಆರೋಪಿಯಾಗಿದ್ದಾರೆ. ಅವರಿಗೆ ಟಿಕೆಟ್‌ ನೀಡಿರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ. ಕೋಳಿ ವಾಡ್‌ ಅವರ ಗೆಲುವಿಗೆ ಅನುಕೂಲವಾಗುವ ಸಾಧ್ಯತೆ ಇದೆ. ಹೀಗಾಗಿ ಅರುಣ್‌ ಕುಮಾರ್‌ಗೆ ನೀಡಿರುವ ಟಿಕೆಟ್‌ ಬದಲಾಯಿಸಿ ಬಸವರಾಜ್‌ ಕೆಲಗಾರ್‌ ಅವರಿಗೆ ನೀಡುವಂತೆ ಆಗ್ರಹಿಸಿದರು.

ಯಡಿಯೂರಪ್ಪ ಅವರು ಕಾರ್ಯಕರ್ತರನ್ನು ಸಮಾ ಧಾನಪಡಿಸುವ ಪ್ರಯತ್ನ ನಡೆಸಿ, ಅರುಣ್‌ ಕುಮಾರ್‌ರನ್ನು ಗೆಲ್ಲಿಸಿಕೊಂಡು ಬರಲು ಪ್ರಯತ್ನಿಸು ವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಬಸವರಾಜ್‌ ಕೆಲಗಾರ ಬೆಂಬಲಿಗರು ಸಿಎಂ ಮನವೊಲಿಕೆಗೂ ಬಗ್ಗದೇ ತಾವ್ಯಾರೂ ಅರುಣ್‌ ಕುಮಾರ್‌ ಪರ ಕೆಲಸ ಮಾಡುವುದಿಲ್ಲ ಎಂದು ನೇರ ವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ. ಜತೆಗೆ ಪಕ್ಷದ ನಾಯಕರ ನಡೆಯನ್ನು ಖಂಡಿಸಿ ಮುಖ್ಯಮಂತ್ರಿ ಮನೆಯ ಎದುರೇ ಬಸವರಾಜ್‌ ಪರ ಘೋಷಣೆಗಳನ್ನು ಕೂಗಿದರು.

ಯಶವಂತಪುರಕ್ಕೆ ನಾಗರಾಜ್‌ ಕಾಂಗ್ರೆಸ್‌ ಅಭ್ಯರ್ಥಿ
ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಕಡೆಗೂ ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ ಮಾಡಿದ್ದು, ಪಿ. ನಾಗರಾಜ್‌ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಪ್ರಕಟಿಸಿದರು. ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ರಾಜಕುಮಾರ್‌ ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅಲ್ಲದೆ ಮಾಜಿ ಶಾಸಕ ಪ್ರಿಯಾ ಕೃಷ್ಣ ಅವರನ್ನು ಕಣಕ್ಕಿಳಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ಆಸಕ್ತಿ ತೋರಿಸಿದ್ದರು. ಆದರೆ ಪ್ರಿಯಾ ಕೃಷ್ಣ ಸ್ಪರ್ಧೆಗೆ ಹಿಂದೇಟು ಹಾಕಿದ್ದರಿಂದ ಒಕ್ಕಲಿಗ ಸಮುದಾಯದವರಿಗೆ ಟಿಕೆಟ್‌ ನೀಡಬೇಕೆಂಬ ಕಾರಣಕ್ಕೆ ಪಿ. ನಾಗರಾಜ್‌ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಜೆಡಿಎಸ್‌ನಿಂದ ಅಶೋಕ್‌ ಪೂಜಾರಿ ಸ್ಪರ್ಧೆ?
ಇನ್ನು ಗೋಕಾಕ್‌ನಲ್ಲಿ ಬಂಡೆದ್ದಿರುವ ಅಶೋಕ್‌ ಪೂಜಾರಿ ಮನವೊಲಿಕೆ ವಿಫ‌ಲವಾಗಿದೆ. ಶನಿವಾರವೇ ಕೇಂದ್ರ ಸಚಿವ ಸುರೇಶ್‌ ಅಂಗಡಿ, ಅಭ್ಯರ್ಥಿ ರಮೇಶ್‌ ಜಾರಕಿಹೊಳಿ ಮನವೊಲಿಕೆ ಮಾಡಿದ್ದರು. ರವಿವಾರ ಮಧ್ಯಾಹ್ನ ಎ.ಎಸ್‌.ನಡಹಳ್ಳಿ ಅವರು ನಡೆಸಿದ ಪ್ರಯತ್ನವೂ ವಿಫ‌ಲವಾಗಿದೆ. ಇನ್ನು ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಅಶೋಕ್‌ ಪೂಜಾರಿಗೆ ಜೆಡಿಎಸ್‌ ಗಾಳ ಹಾಕಿದೆ. ಜೆಡಿಎಸ್‌ ವರಿಷ್ಠರಾದ ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರು, ಅಶೋಕ್‌ ಪೂಜಾರಿ ಜತೆ ಮಾತನಾಡಿ, ಪಕ್ಷದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಅಶೋಕ್‌ ಪೂಜಾರಿ ಒಪ್ಪಿದ್ದಾರೆ ಎನ್ನಲಾಗಿದ್ದು, ಸೋಮವಾರ ಜೆಡಿಎಸ್‌ನಿಂದಲೇ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

ಡಾ|ನಾಶಿಗೆ
ಜೆಡಿಎಸ್‌ ಟಿಕೆಟ್‌
ಜೆಡಿಎಸ್‌ನಿಂದ ಹೊರಗೆ ಹೋಗಿರುವ ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ವಿರುದ್ಧ ಕಣಕ್ಕಿಳಿಸಲು ಪ್ರಬಲ ಅಭ್ಯರ್ಥಿಯೇ ಸಿಕ್ಕಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಮೂಲದ ಡಾ| ಗಿರೀಶ್‌ ಕೆ. ನಾಶಿಗೆ ಜೆಡಿಎಸ್‌ ಟಿಕೆಟ್‌ ನೀಡಲಾಗಿದೆ. ಗೋಪಾಲಯ್ಯ ಸಂಬಂಧಿ ರಾಜಣ್ಣ ಮತ್ತು ಪರಿಷತ್‌ ಸದಸ್ಯ ಬೆಮೆಲ್‌ ಕಾಂತರಾಜ್‌ ಸ್ಪರ್ಧೆಗೆ ಹಿಂದೇಟು ಹಾಕಿದ್ದರಿಂದ ಅನಿವಾರ್ಯವಾಗಿ ಕಾಂಗ್ರೆಸ್‌ನಿಂದ ಬಂದಿರುವ ನಾಶಿಗೆ ಟಿಕೆಟ್‌ ಕೊಡಲಾಗಿದೆ.ಅತ್ತ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕೆ.ಪಿ.ಬಚ್ಚೇಗೌಡರು ಸ್ಪರ್ಧೆಗೆ ಹಿಂದೇಟು ಹಾಕಿರುವುದರಿಂದ ಎಚ್‌ಡಿಕೆ ಆಪ್ತ ಶಿಡ್ಲಘಟ್ಟ ಮೂಲದ ರಾಧಾಕೃಷ್ಣ ಅವರನ್ನು ಸ್ಪರ್ಧೆಗಿಳಿಸುವ ಸಾಧ್ಯತೆ ಇದೆ.

ಜೆಡಿಎಸ್‌ನಿಂದ ಹೊರಗೆ ಹೋಗಿರುವ ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ವಿರುದ್ಧ ಕಣಕ್ಕಿಳಿಸಲು ಪ್ರಬಲ ಅಭ್ಯರ್ಥಿಯೇ ಸಿಕ್ಕಿಲ್ಲ.

ಹೀಗಾಗಿ ಉತ್ತರ ಕರ್ನಾಟಕ ಮೂಲದ ಡಾ| ಗಿರೀಶ್‌ ಕೆ. ನಾಶಿಗೆ ಜೆಡಿಎಸ್‌ ಟಿಕೆಟ್‌ ನೀಡಲಾಗಿದೆ. ಗೋಪಾಲಯ್ಯ ಸಂಬಂಧಿ ರಾಜಣ್ಣ ಮತ್ತು ಪರಿಷತ್‌ ಸದಸ್ಯ ಬೆಮೆಲ್‌ ಕಾಂತರಾಜ್‌ ಸ್ಪರ್ಧೆಗೆ ಹಿಂದೇಟು ಹಾಕಿದ್ದರಿಂದ ಅನಿವಾರ್ಯವಾಗಿ ಕಾಂಗ್ರೆಸ್‌ನಿಂದ ಬಂದಿರುವ ನಾಶಿಗೆ ಟಿಕೆಟ್‌
ಕೊಡಲಾಗಿದೆ.

ಅತ್ತ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕೆ.ಪಿ.ಬಚ್ಚೇಗೌಡರು ಸ್ಪರ್ಧೆಗೆ ಹಿಂದೇಟು ಹಾಕಿರುವುದರಿಂದ ಎಚ್‌ಡಿಕೆ ಆಪ್ತ ಶಿಡ್ಲಘಟ್ಟ ಮೂಲದ ರಾಧಾಕೃಷ್ಣ ಅವರನ್ನು ಸ್ಪರ್ಧೆಗಿಳಿಸುವ ಸಾಧ್ಯತೆ ಇದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ