ಪತಿ-ಪತ್ನಿ ಗಾಂಜಾ ಬಿರಿಯಾನಿ ಕಹಾನಿ

ಬಿರಿಯಾನಿ ಜತೆಗಿತ್ತು 450 ಗ್ರಾಂ ಮಾದಕ ವಸ್ತು ; ಪರಪ್ಪನ ಅಗ್ರಹಾರದಲ್ಲಿರುವ ಪತಿಗೆ ಗಾಂಜಾ

Team Udayavani, May 14, 2019, 6:00 AM IST

ಬೆಂಗಳೂರು: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಗಂಡನಿಗೆ ಬಿರಿಯಾನಿಯಲ್ಲಿ ‘ಗಾಂಜಾ’ ಬಚ್ಚಿಟ್ಟು ಆತನ ಪತ್ನಿ ತಲುಪಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗಾಂಜಾ ಸೇರಿದಂತೆ ಮಾದಕವಸ್ತುಗಳು ಜೈಲಿನ ಕೈದಿಗಳಿಗೆ ತಲುಪುವುದನ್ನು ತಡೆಗಟ್ಟಲು ಹಲವು ಪ್ರಯತ್ನ ನಡೆಸುತ್ತಿದ್ದರೂ ವಿಚಾರಣಾಧೀನ ಕೈದಿ ಪತಿಗೆ ಬಿರಿಯಾನಿಯಲ್ಲಿ ‘ಗಾಂಜಾ’ ಬಚ್ಚಿಟ್ಟು ಕೊಟ್ಟ ಮಹಿಳೆಯ ಕೌಶಲತೆಗೆ ಅಧಿಕಾರಿಗಳು ಬೆಸ್ತುಬಿದ್ದಿದ್ದಾರೆ.

ಮೇ 8ರಂದು ಈ ಘಟನೆ ನಡೆದಿದ್ದು, ಜೈಲ ುನಿಯಮಗಳನ್ನು ಉಲ್ಲಂಘಿಸಿ ಪತಿಗೆ ಗಾಂಜಾ ತಲುಪಿ ಸಲು ಯತ್ನಿಸಿದ ಪವಿತ್ರಾ ಕೆ. ಹಾಗೂ ಆಕೆಯ ಪತಿ ವಿಚಾರಣಾಧೀನ ಕೈದಿ ನಾಗರಾಜನ ವಿರುದ್ಧ ಜೈಲು ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

2018ರಲ್ಲಿ ವರ್ತೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಕೇಸ್‌ ಆರೋಪಿಯಾಗಿರುವ ನಾಗರಾಜ್‌ ಅಲಿಯಾಸ್‌ ನಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾನೆ. ಈತನನ್ನು ನೋಡಲು ಆತನ ಪತ್ನಿ ಕೆ. ಪವಿತ್ರ ಮೇ 8ರಂದು ಸಂಜೆ 5.30ರ ಸುಮಾರಿಗೆ ಜೈಲಿಗೆ ಆಗಮಿಸಿದ್ದರು.

ಕೆಲಸಮಯ ಪತಿಯ ಜತೆ ಮಾತನಾಡಿದ ಪವಿತ್ರ ಮನೆಯಿಂದ ತಂದಿದ್ದ ಊಟ ಕೊಟ್ಟು ಹೋಗಿದ್ದಾರೆ. ಪತ್ನಿ ನೀಡಿದ ಊಟದ ಬ್ಯಾಗ್‌ ಪಡೆದುಕೊಂಡ ನಾಗರಾಜ್‌ ತನ್ನ ಬ್ಯಾರಕ್‌ಗೆ ಹೋಗಲು ಸಿದ್ಧನಾಗಿದ್ದ. ಈ ವೇಳೆ ಅನುಮಾನ ಬಂದು ಬಿ ಗೇಟ್‌ನಲ್ಲಿದ್ದ ಜೈಲು ಅಧಿಕಾರಿ ದಿಲೀಪ್‌ ಹಂಗರಗಿ ಅವರು ನಾಗರಾಜ್‌ ಬಳಿಯಿದ್ದ ಬ್ಯಾಗ್‌ ಪಡೆದುಕೊಂಡಿದ್ದು ತಪಾಸಣೆಗೊಳಪಡಿಸಿದ್ದಾರೆ.

ಬಿರಿಯಾನಿ ಕೆಳಗಿತ್ತು ಗಾಂಜಾ!: ನಾಗರಾಜ್‌ ಪತ್ನಿ ಪವಿತ್ರಾಳಿಂದ ಪಡೆದಿದ್ದ ಬುಟ್ಟಿ ಬ್ಯಾಗ್‌ನಲ್ಲಿದ್ದ ಎರಡು ಸ್ಟೀಲ್ ಡಬ್ಬಗಳಲ್ಲಿ ತೆರೆದು ನೋಡಿದಾಗ ಮೇಲ್ಭಾಗದಲ್ಲಿ ಬಿರಿಯಾನಿ ತುಂಬಿಸಲಾಗಿತ್ತು. ಅದರ ತಳಭಾಗದಲ್ಲಿ ಬರೋಬ್ಬರಿ 450 ಗ್ರಾಂ ಗಾಂಜಾ ಇರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಗಾಂಜಾವನ್ನು ಜಪ್ತಿಪಡಿಸಿಕೊಂಡಿದ್ದಾರೆ.

ಜೈಲು ಅಧಿಕಾರಿಗಳು ನೀಡಿರುವ ದೂರು ಆಧರಿಸಿ ಪವಿತ್ರ ಹಾಗೂ ನಾಗರಾಜ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪವಿತ್ರ ತಲೆಮರೆಸಿಕೊಂಡಿದ್ದು ಆಕೆಯ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಊಟದ ಜತೆ ಗಾಂಜಾ,ಬೀಡಿ ಸಿಗರೇಟ್!: ಜೈಲಿನಲ್ಲಿರುವ ಕೈದಿಗಳನ್ನು ನೋಡಲು ಬರುವವರು ಊಟ, ಹಣ್ಣು, ಜತೆಗೆ ಅವರಿಗೆ ಗಾಂಜಾ, ಬೀಡಿ, ಸಿಗರೇಟ್ ಸೇರಿದಂತೆ ಇನ್ನಿತರೆ ಪರಿಕರಗಳನ್ನು ತಲುಪಿಸುತ್ತಾರೆ ಎಂಬ ಆರೋಪಗಳು ಮೊದಲಿನಿಂದಲೂ ಇವೆ. ರೌಡಿಶೀಟರ್‌ಗಳು, ಡಕಾಯಿತಿ ಪ್ರಕರಣಗಲ್ಲಿ ಜೈಲು ಸೇರಿರುವ ಆರೋಪಿಗಳು ಹೊರಗಡೆಯಿರುವ ಸ್ನೇಹಿತರ ಕಡೆಯಿಂದ ತರಿಸಿಕೊಳ್ಳಲು ಯತ್ನಿಸುತ್ತಾರೆ. ಕೆಲವೊಮ್ಮೆ ಯಶಸ್ವಿಯಾಗುತ್ತಾರೆ ಇದಕ್ಕೆ ತಪಾಸಣೆ ಲೋಪವೇ ಕಾರಣ ಎಂಬ ಆರೋಪವಿದೆ.

ಕೈದಿಗಳಿಗೆ ಗಾಂಜಾ ಪೂರೈಕೆ ಸೇರಿದಂತೆ ಮತ್ತಿತರ ವಸ್ತುಗಳನ್ನು ತಲುಪಿಸುತ್ತಿದ್ದ ಆರೋಪ ಪ್ರಕರಣದಲ್ಲಿ ಜೈಲಿನಲ್ಲಿ ಎಸ್‌ಡಿಎ ಆಗಿದ್ದ ಕುಮಾರಸ್ವಾಮಿ ಎಂಬಾತನನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದರು. ಈ ಬೆನ್ನಲ್ಲೇ ಕೈದಿಗಳಿಗೆ ಮಾಂಸ ಪೂರೈಕೆಯಾಗುವ ವಾಹನದಲ್ಲಿ ಮೊಬೈಲ್ ಹಾಗೂ ಸಿಮ್‌ ಕಾರ್ಡ್‌ಗಳು ಪತ್ತೆಯಾಗಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಆರೋಪ ನಿರಾಕರಣೆ!
ಜೈಲಿನೊಳಗಡೆ ಮಾದಕವಸ್ತು ಸರಬರಾಜು ಸಾಗಣೆ ಆರೋಪವನ್ನು ನಿರಾಕರಿಸಿದ ಜೈಲು ಅಧಿಕಾರಿಗಳು, ಕೈದಿಗಳು ಸಂದರ್ಶಕರ ಭೇಟಿ ಬಳಿಕ ಅವರು ಪಡೆದುಕೊಳ್ಳುವ ಎಲ್ಲ ವಸ್ತುಗಳನ್ನು ತಪಾಸಣೆ ನಡೆಸಲಾಗುತ್ತದೆ. ಊಟ ಹೊರತುಪಡಿಸಿ ಬೇರೆ ಯಾವುದೇ ಪದಾರ್ಥ ಕಂಡುಬಂದರೂ ಒಳಗಡೆ ಬಿಡುವುದಿಲ್ಲ. ಜತೆಗೆ, ಸಂಶಯ ಕಂಡು ಬಂದ ಕೂಡಲೇ ಈ ಬಗ್ಗೆ ದೂರುನೀಡುತ್ತೇವೆ ಎನ್ನುತ್ತಾರೆ.

ಗಾಂಜಾ ಹಿಂದಿನ ಕಥೆ
ವಿಚಾರಣಾಧೀನ ಕೈದಿಯಾಗಿರುವ ನಾಗರಾಜ್‌, ಕೆಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾನೆ. ಜತೆಗೆ ಗಾಂಜಾ ವ್ಯಸನಿಯಾಗಿದ್ದು, ಹಲವು ತಿಂಗಳುಗಳಿಂದ ಜೈಲು ವಾಸ ಅನುಭವಿಸುತ್ತಿದ್ದಾನೆ. ಗಾಂಜಾಗಾಗಿ ಪತ್ನಿಗೆ ಮೊರೆಹೋಗಿದ್ದ. ನಾಗ, ತನ್ನ ಪತ್ನಿ ಬಗ್ಗೆ ಅಪಾರ ಪ್ರೇಮ ಇಟ್ಟುಕೊಂಡಿದ್ದು, ಆತನನ್ನು ಖುಷಿಪಡಿಸಲು ಆಕೆ ಈ ಅಪರಾಧ ಕೃತ್ಯ ನಡೆಸಿರಬಹುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕೆಗೆ ಎಲ್ಲಿಂದ, ಹೇಗೆ ಗಾಂಜಾ ತಲುಪಿತು ಮತ್ತು ನಾಗ ಜೈಲಿನ ಇತರ ಕೈದಿಗಳಿಗೂ ಗಾಂಜಾ ಪೂರೈಸುವ ಯತ್ನ ನಡೆಸಿದ್ದನೇ ಎಂಬ ಬಗ್ಗೆಯೂ ತನಿಖೆ ನಡೆದಿದೆ.

-ಮಂಜುನಾಥ ಲಘುಮೇನಹಳ್ಳಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ