ಮುಖ್ಯಮಂತ್ರಿ ಆಗಲೇಬೇಕೆಂಬ ಚಟ ನನಗಿಲ್ಲ

ಮತ್ತೆ ಸ್ಪರ್ಧೆ ರಾಜ್ಯ ಹಾಗೂ ಕ್ಷೇತ್ರದ ಜನತೆಗೆ ಬಿಟ್ಟಿದ್ದು : ಉದಯವಾಣಿ ಸಂವಾದದಲ್ಲಿ ಸಿದ್ದರಾಮಯ್ಯ

Team Udayavani, Nov 15, 2019, 6:45 AM IST

ಬೆಂಗಳೂರು: “ಬಿ.ಎಸ್‌. ಯಡಿಯೂರಪ್ಪ ಅವರಂತೆ ನನಗೆ ಮತ್ತೆ ಮುಖ್ಯ ಮಂತ್ರಿ ಯಾಗಲೇಬೇಕು ಎಂಬ ಚಟ ಇಲ್ಲ. ಆದರೆ ರಾಜ್ಯ ಹಾಗೂ ಕ್ಷೇತ್ರದ ಜನತೆಯ ಅಭಿಪ್ರಾಯದಂತೆ ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ತೀರ್ಮಾನವಾಗುತ್ತದೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು, ಜನರ ಆಶೀರ್ವಾದ ದೊರೆತರೆ ಮತ್ತೆ ಮುಖ್ಯಮಂತ್ರಿ ಯಾಕಾಗಬಾರದು ಎಂದು ಪ್ರಶ್ನಿಸಿದ್ದಾರೆ.

ಉದಯವಾಣಿ ಕಚೇರಿಯಲ್ಲಿ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಸೆ ಆಮಿಷಗಳಿಗೆ ಬಲಿಯಾಗಿ ಹದಿನೈದು ಮಂದಿ ಅನರ್ಹತೆ ಕಳಂಕ ಹೊತ್ತಿರುವುದೇ ಈ ಉಪ ಚುನಾವಣೆಯಲ್ಲಿ ನಮ್ಮ ಪ್ರಮುಖ ವಿಚಾರ. ಅವರನ್ನು ಸೋಲಿಸುವುದೇ ನಮ್ಮ ಗುರಿ, ಗೆಲ್ಲುವ ಅಭ್ಯರ್ಥಿ ಎಂಬ ಮಾನದಂಡವನ್ನು ಆಧರಿಸಿ ಎಂಟು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.

ಈಗಲೂ ಸರಕಾರಕ್ಕೆ ಬಹುಮತ ಇಲ್ಲ. ಹದಿನೇಳು ಮಂದಿಯ ಕೈಯಲ್ಲಿ ರಾಜೀನಾಮೆ ಕೊಡಿಸಿ ವಿಧಾನಸಭೆ ಸಂಖ್ಯಾಬಲ ಕಡಿಮೆ ಮಾಡಿಸಿ ಸರಕಾರ ರಚಿಸಿದ್ದಾರೆ. ಉಪ ಚುನಾವಣೆ ಅನಂತರ ಬಿಜೆಪಿ ಎಂಟು ಸ್ಥಾನ ಗಳಿಸದಿದ್ದರೆ ಸರಕಾರಕ್ಕೆ ಬಹುಮತವೇ ಇಲ್ಲದಂತಾಗುತ್ತದೆ. ಆಗ ಯಡಿಯೂರಪ್ಪ ರಾಜೀನಾಮೆ ನೀಡ ಬೇಕಾಗು ತ್ತದೆ. ಹೀಗಾಗಿ ಮತ್ತೆ ಚುನಾವಣೆಗೆ ಹೋಗ ಬೇಕಾಗುತ್ತದೆ ಎಂದು ತಿಳಿಸಿದರು.

ಮತ್ತೆ ಜೆಡಿಎಸ್‌ ಜತೆ ಕೈಜೋಡಿಸಲ್ಲ
ಹದಿನೈದು ಕ್ಷೇತ್ರಗಳ ಪೈಕಿ ಹದಿಮೂರು ಕ್ಷೇತ್ರಗಳು ಕಾಂಗ್ರೆಸ್‌ ಪಕ್ಷದ್ದೇ. ಹೀಗಾಗಿ ನಾವು ಅಷ್ಟೂ ಸ್ಥಾನ ಗೆಲ್ಲುತ್ತೇವೆ ಎಂದು ಧೈರ್ಯವಾಗಿ ಹೇಳುತ್ತಿದ್ದೇನೆ. ಚುನಾವಣೆ ಫ‌ಲಿತಾಂಶದ ಬಳಿಕ ಕಾಂಗ್ರೆಸ್‌- ಜೆಡಿಎಸ್‌ ಮತ್ತೆ ಒಂದಾಗುವ ಸಾಧ್ಯತೆಗಳು ಇಲ್ಲ ಎಂದು ಹೇಳಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಸ್ಥಾನ ಗಳಿಸಿದರೆ ಮತ್ತೆ ಚುನಾವಣೆ ಎದುರಾಗಬಹುದು ಎಂದು ನಾನು ಹೇಳಿದ್ದೆ. ಆ ರೀತಿ ಹೇಳಿಕೆ ಕೊಟ್ಟ ಮರುದಿನವೇ ಎಚ್‌.ಡಿ. ಕುಮಾರಸ್ವಾಮಿಯವರು ಈ ಸರಕಾರ ಬೀಳಲು ಬಿಡಲ್ಲ ಎಂದರು. ಎಚ್‌.ಡಿ. ದೇವೇಗೌಡರು ಅದೇ ಧಾಟಿಯ ಮಾತುಗಳನ್ನು ಆಡಿದರು. ಈಗ ಹದಿನೈದು ಕ್ಷೇತ್ರಗಳಲ್ಲಿ ಅನರ್ಹರನ್ನು ಸೋಲಿಸುವುದೇ ಗುರಿ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಅಲ್ಲಿ ಬಿಜೆಪಿ ಗೆದ್ದರೆ ಇವರಿಗೆ ಡಿಮ್ಯಾಂಡ್‌ ಎಲ್ಲಿರುತ್ತದೆ. ಅದಕ್ಕಾಗಿ ಇಂತಹ ಹೇಳಿಕೆಗಳು ಎಂದು ವ್ಯಂಗ್ಯವಾಡಿದರು. ಬಿಜೆಪಿಯವರು ಎಲ್ಲ ಸಂದರ್ಭಗಳಲ್ಲೂ ಸುಳ್ಳೇ ಹೇಳುತ್ತಿದ್ದಾರೆ ಎಂದರು.

ಪಿತೂರಿ ಮಾಡಿ ಸೋಲಿಸಿದ್ರು
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ವಿರುದ್ಧ ದೊಡ್ಡ ಮಟ್ಟದ ಪಿತೂರಿಯೇ ನಡೆಯಿತು. ಬಿಜೆಪಿಯವರು ಡಮ್ಮಿ ಅಭ್ಯರ್ಥಿ ಹಾಕಿ ಜೆಡಿಎಸ್‌ಗೆ ಬೆಂಬ ಲಿಸಿದರು. ವಿಶ್ವನಾಥ್‌, ಶ್ರೀನಿವಾಸ ಪ್ರಸಾದ್‌ ಸೇರಿ ಎಲ್ಲರೂ ಒಟ್ಟಾಗಿ ಸಂಚು ರೂಪಿಸಿ ಸೋಲಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ