ಪರಂ, ಜಾಲಪ್ಪಗೆ ಐಟಿ ಬಿಸಿ

ಮನೆ, ಶಿಕ್ಷಣ ಸಂಸ್ಥೆ , ಆಪ್ತರು ಗುರಿ; ಮತ್ತಿಬ್ಬರು ಕಾಂಗ್ರೆಸ್‌ ನಾಯಕರ ಮೇಲೆ ಐಟಿ ಕಣ್ಣು

Team Udayavani, Oct 11, 2019, 6:05 AM IST

ಐಟಿ ದಾಳಿ ನಡೆದ ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಅವರ ಮನೆಯ ಮುಂಭಾಗದಲ್ಲಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

250 ಅಧಿಕಾರಿಗಳು
60 ಬಾಡಿಗೆ ಕಾರುಗಳು
30 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌, ಕಾಂಗ್ರೆಸ್‌ನ ಹಿರಿಯ ನಾಯಕ ಆರ್‌.ಎಲ್‌. ಜಾಲಪ್ಪ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳು ಮತ್ತು ಕುಟುಂಬ ಸದಸ್ಯರು, ಆಪ್ತರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.

ಗುರುವಾರ ಮುಂಜಾವ ಮೂರು ಗಂಟೆ ಸುಮಾರಿಗೆ ಕ್ವೀನ್ಸ್‌ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಗೆ ಆಗಮಿಸಿದ 250ಕ್ಕೂ ಅಧಿಕ ಐಟಿ ಅಧಿಕಾರಿಗಳ ತಂಡ 60ಕ್ಕೂ ಹೆಚ್ಚು ಬಾಡಿಗೆ ಕಾರುಗಳಲ್ಲಿ ಹೊರಟು ಬೆಳಗ್ಗೆ ಆರು ಗಂಟೆಯಿಂದ ಪರಮೇಶ್ವರ್‌ ಮತ್ತು ಜಾಲಪ್ಪ ಅವರ ಮನೆಗಳು, ಕಚೇರಿಗಳು, ಸಮೂಹ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸೇರಿ 30 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದೆ. ಅಲ್ಲದೆ ಜಾಲಪ್ಪ ಅವರ ಪುತ್ರ ರಾಜೇಂದ್ರ ಮತ್ತು ಅಳಿಯ ನಾಗರಾಜ್‌ ಮನೆಗಳ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಪರಿಶೀಲನೆ ಮುಂದುವರಿಸಿದ್ದಾರೆ.

ವಿವಿಧೆಡೆ ದಾಳಿ
ಡಾ| ಜಿ. ಪರಮೇಶ್ವರ್‌ ಅವರ ಒಡೆತನದ ಬೆಂಗ ಳೂರಿನ ಸದಾಶಿವನಗರದ ಮನೆ, ತುಮ ಕೂರು, ಕೊರಟಗೆರೆಯ ನಿವಾಸಗಳು ಮತ್ತು ಅವರ ಸಹೋದರ ದಿ| ಶಿವಪ್ರಸಾದ್‌ ಅವರ ಪುತ್ರ ಆನಂದ್‌ ಮನೆ, ಕಚೇರಿಗಳು, ನೆಲಮಂಗಲದಲ್ಲಿರುವ ವೈದ್ಯಕೀಯ ಕಾಲೇಜು, ಕುಣಿಗಲ್‌ ರಸ್ತೆಯ ಮರಳೂರು ದಿಣ್ಣೆಯಲ್ಲಿರುವ ಸಿದ್ಧಾರ್ಥ ಎಂಜಿನಿಯರಿಂಗ್‌ ಕಾಲೇಜು, ತುಮಕೂರು ನಗರದಲ್ಲಿರುವ ವೈದ್ಯಕೀಯ ಕಾಲೇಜು ಸಹಿತ ಜಿಲ್ಲೆಯ ವಿವಿಧೆಡೆ ಇರುವ ಸಿದ್ಧಾರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ.

ದಾಳಿ ವೇಳೆ ಪರಮೇಶ್ವರ್‌ ಕೊರಟಗೆರೆಯಲ್ಲಿದ್ದರು. ಅನಂತರ ಐಟಿ ಅಧಿಕಾರಿಗಳ ಸೂಚನೆ ಮೇರೆಗೆ ಬೆಂಗಳೂರಿಗೆ ಆಗಮಿಸಿದ ಪರಮೇಶ್ವರ್‌ ಮತ್ತು ಮನೆಯಲ್ಲಿದ್ದ ಅವರ ಪತ್ನಿ, ಪುತ್ರರನ್ನು ಐಟಿ ಅಧಿಕಾರಿಗಳು ಸುಮಾರು ನಾಲ್ಕು ತಾಸುಗಳ ಕಾಲ ವಿಚಾರಣೆಗೊಳಪಡಿಸಿದ್ದರು. ಬಳಿಕ ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕ್‌ ಖಾತೆಗಳ ವಿವರ ಪಡೆಯಲು ಅವರನ್ನು ತುಮಕೂರಿಗೆ ಕರೆದೊಯ್ದರು.

ಸ್ವಲ್ಪ ಹೊತ್ತಿನ ಬಳಿಕ ಪರಮೇಶ್ವರ್‌ ಅವರ ಆಪ್ತ ಸಹಾಯಕ ರಮೇಶ್‌ ಅವರನ್ನೂ ವಿಚಾರಣೆಗೆ ಕರೆದೊಯ್ದು ಅಧಿಕಾರಿಗಳು, ಪರಮೇಶ್ವರ್‌ ಮತ್ತು ಅವರ ಕುಟುಂಬ ಸದಸ್ಯರು ಹೊಂದಿರುವ ಬ್ಯಾಂಕ್‌ ಖಾತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಪರಮೇಶ್ವರ್‌ ಭೇಟಿಗೆ ಆಗಮಿಸಿದ ವಕೀಲರು ಮತ್ತು ಲೆಕ್ಕಪರಿಶೋಧಕರು ಮನೆಯೊಳಗೆ ತೆರಳಿ, ಐಟಿ ಅಧಿಕಾರಿಗಳ ಜತೆ ಚರ್ಚಿಸಿ ಹೊರಬಂದರು. ಸಂಜೆ ಐದು ಗಂಟೆಯ ಅನಂತರ ಅವಕಾಶ ನೀಡುವುದಾಗಿ ತಿಳಿಸಿ ಅಧಿಕಾರಿಗಳು ಅವರನ್ನು ಹೊರ ಕಳುಹಿಸಿದರು.

ಪರಮೇಶ್ವರ್‌ ಅವರ ಆಪ್ತ ವಲಯಗಳಲ್ಲಿ ಗುರುತಿಸಿಕೊಂಡಿದ್ದ ನೆಲಮಂಗಲ ಪುರಸಭೆ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಕೆ.ಎನ್‌. ಶಿವಕುಮಾರ್‌ ಅವರ ಮನೆ, ಮುನಿರಾಮಯ್ಯ ಎಂಬವರ ಮನೆ, ಟಿ. ಬೇಗೂರು ನಿವಾಸಿ, ಗುತ್ತಿಗೆದಾರ ರಂಗನಾಥ್‌ ಕಚೇರಿ ಮತ್ತು ಮನೆ ಮೇಲೂ ದಾಳಿ ನಡೆಸಲಾಗಿದೆ.

4.5 ಕೋ.ರೂ. ಪತ್ತೆ?
ಐಟಿ ದಾಳಿ ವೇಳೆ ಸುಮಾರು ನಾಲ್ಕೂವರೆ ಕೋ.ರೂ. ಪತ್ತೆಯಾಗಿದೆ ಎಂದು ಹೇಳಲಾಗಿದೆ. ಈ ಪೈಕಿ 70 ಲ. ರೂ. ಪರಮೇಶ್ವರ್‌ ಅವರ ಸದಾಶಿವನಗರ ಮನೆಯಲ್ಲಿ ಸಿಕ್ಕಿದೆ ಎನ್ನಲಾಗಿದ್ದು, 1.86 ಕೋ. ರೂ. ನೆಲಮಂಗಲದಲ್ಲಿ ಹಾಗೂ ಇನ್ನುಳಿದ ಹಣ ಇತರ ವ್ಯಕ್ತಿಗಳ ಮನೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ಜಾಲಪ್ಪ ಪುತ್ರ, ಅಳಿಯನ ನಿವಾಸ
ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಆರ್‌.ಎಲ್‌. ಜಾಲಪ್ಪ ಅವರ ತೃತೀಯ ಪುತ್ರ, ನಗರಸಭೆ ಮಾಜಿ ಅಧ್ಯಕ್ಷ ಜೆ. ರಾಜೇಂದ್ರ ಅವರ ದೊಡ್ಡಬಳ್ಳಾಪುರದ ಮನೆ, ಆರ್‌.ಎಲ್‌. ಜಾಲಪ್ಪ ತಾಂತ್ರಿಕ ವಿದ್ಯಾಲಯದ ಕಚೇರಿ ಮೇಲೆಯೂ ದಾಳಿ ನಡೆದಿದೆ. ಕೋಲಾರ ಹೊರವಲಯ ದಲ್ಲಿರುವ ದೇವರಾಜು ಅರಸು ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಚಿಕ್ಕಬಳ್ಳಾಪುರದಲ್ಲಿರುವ ಜಾಲಪ್ಪ ಅವರ ಅಳಿಯ ಜಿ.ಎಚ್‌. ನಾಗರಾಜ್‌ ಮನೆ ಮತ್ತು ಕಚೇರಿಗಳ ಮೇಲೆಯೂ ದಾಳಿ ನಡೆಸಲಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ.

ವಿಚಲಿತಗೊಂಡ ಪರಂ
ಐಟಿ ದಾಳಿ ವಿಚಾರ ತಿಳಿದು ಬೆಂಗಳೂರಿನ ಸದಾಶಿವನಗರಕ್ಕೆ ಆಗಮಿಸಿದ ಪರಮೇಶ್ವರ್‌ ಆತಂಕ ಗೊಳಗಾದರು. ಐಟಿ ಅಧಿಕಾರಿಗಳ ತಾಸುಗಟ್ಟಲೆ ವಿಚಾರಣೆ ಬಳಿಕ ಮನೆಯಿಂದ ಹೊರ ಬಂದ ಅವರು ಮಾಧ್ಯಮಗಳ ಎದುರು ಮಾತನಾಡುವಾಗ ವಿಚಲಿತ ಗೊಂಡದ್ದು ಕಂಡು ಬಂತು.

ಸೀಟು ಹಂಚಿಕೆ ಅವ್ಯವಹಾರ?
ಜಾಲಪ್ಪ ಮತ್ತು ಸಿದ್ಧಾರ್ಥ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಹಂಚಿಕೆ ವಿಚಾರವಾಗಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಸರಕಾರಿ ಸೀಟುಗಳ ಜತೆಗೆ ಮ್ಯಾನೇಜ್‌ಮೆಂಟ್‌ ಸೀಟುಗಳಿರುತ್ತವೆ. ಈ ಸೀಟು ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ಆದಾಯ ತೆರಿಗೆ ವಂಚನೆ ಮಾಡಲು ಪ್ರತಿ ಸೀಟಿಗೆ ನಗದು ರೂಪದಲ್ಲೇ ಹಣ ಪಡೆಯುತ್ತಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ತಿಂಗಳಿಂದ ಎರಡೂ ಶಿಕ್ಷಣ ಸಂಸ್ಥೆಗಳ ವ್ಯವಹಾರ, ಮಾಲಕರ ಹಣಕಾಸು ವಹಿವಾಟಿನ ವಿವರ ಸಂಗ್ರಹ ಮಾಡಿದ್ದ ಐಟಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಗುರುವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನಮ್ಮ ಸಂಸ್ಥೆ ಮೇಲೆ ಐಟಿ ದಾಳಿ ಮಾಡಲಿ, ಸಂತೋಷ. ತಪ್ಪುಗಳಿದ್ದರೆ ತೋರಿಸಲಿ, ತಿದ್ದಿಕೊಳ್ಳುತ್ತೇವೆ. ನಾವು ಶಿಕ್ಷಣ ಸಂಸ್ಥೆ ಬಿಟ್ಟು ಬೇರೆ ವ್ಯವಹಾರ ಮಾಡಿಲ್ಲ. ಎಲ್ಲದಕ್ಕೂ ತೆರಿಗೆ ಕಟ್ಟಿದ್ದೇವೆ.
– ಡಾ| ಜಿ. ಪರಮೇಶ್ವರ್‌, ಮಾಜಿ ಉಪ ಮುಖ್ಯಮಂತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ