ಪ್ರೇಕ್ಷಕರಿಗೆ ತೆರೆಯಲಿದೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ
Team Udayavani, Jul 6, 2021, 10:48 PM IST
ಲಂಡನ್: ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಪಂದ್ಯಗಳು ತುಂಬಿದ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ. ಇಂಗ್ಲೆಂಡ್ನಲ್ಲಿ ಕೊರೊನಾ ನಿರ್ಬಂಧಗಳನ್ನು ತೆರವುಗೊಳಿಸಲು ಸರಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.
ಜು. 19ರಿಂದ ಮಾಸ್ಕ್ ಧರಿಸುವುದು, ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಅವಕಾಶ ನಿರಾಕರಣೆ ಸೇರಿದಂತೆ ಎಲ್ಲ ರೀತಿಯ ದಿಗ್ಬಂಧನ ತೆರವುಗೊಳಿಸಲಾಗುವುದು ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಮಂಗಳವಾರ ಘೋಷಿಸಿದ್ದಾರೆ. ಈ ಹಿನ್ನೆಲೆ ಭಾರತ-ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ಪೂರ್ಣ ಪ್ರಮಾಣದ ಪ್ರೇಕ್ಷಕರಿಗೆ ಅವಕಾಶ ಸಿಗುವುದು ಬಹುತೇಕ ಖಚಿತ.
ಇತ್ತೀಚೆಗಷ್ಟೇ ಭಾರತ-ನ್ಯೂಜಿಲ್ಯಾಂಡ್ ತಂಡಗಳ ನಡುವೆ ಸೌತಾಂಪ್ಟನ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಗರಿಷ್ಠ 4,000 ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ :ಅಫ್ಘಾನಿಸ್ಥಾನ ಟಿ20 ತಂಡಕ್ಕೆ ರಶೀದ್ ಖಾನ್ ನಾಯಕ
ಕ್ರಿಕೆಟಿಗರಿಗೆ ವಿರಾಮ
ಸದ್ಯ ಟೀಮ್ ಇಂಡಿಯಾ ಆಟಗಾರರಿಗೆ ವಿರಾಮ ನೀಡಲಾಗಿದ್ದು, ಕುಟುಂಬ ಸಮೇತ ಯುಕೆ ಸುತ್ತಾಟ ನಡೆಸುತ್ತಿದ್ದಾರೆ. ಜುಲೈ 14ರಿಂದ ಭಾರತೀಯ ಕ್ರಿಕೆಟಿಗರು ಮತ್ತೆ ಒಗ್ಗೂಡಲಿದ್ದು, ಮುಂದಿನ ಸರಣಿಗೆ ಸಿದ್ಧತೆಯನ್ನು ನಡೆಸಲಿದ್ದಾರೆ.