ಕೈಗಾರಿಕಾ ಭೂಮಿ ದುರ್ಬಳಕೆಗೆ ಬಿಡಲ್ಲ: ಜಗದೀಶ್‌ ಶೆಟ್ಟರ್‌

Team Udayavani, Jan 17, 2020, 9:17 PM IST

ಬೆಂಗಳೂರು : ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರದಿಂದ ಮಂಜೂರಾಗಿರುವ ಭೂಮಿಯನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲಿ ಅಥವಾ ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳದಿದ್ದರೆ, ಆ ಭೂಮಿಯನ್ನು ವಾಪಾಸ್‌ ಪಡೆಯುವ ಪ್ರಕ್ರಿಯೆ ಆರಂಭಿಸಲಿದ್ದೇವೆ ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು.

ನಗರದ ಖನಿಜ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಥವಾ ಸರ್ಕಾರದಿಂದ ನೇರವಾಗಿ ಕೈಗಾರಿಕಾ ಉದ್ದೇಶಗಳಿಗೆ ಭೂಮಿಯನ್ನು ಪಡೆದು, ಅದನ್ನು ದುರ್ಬಳಕೆ ಮಾಡಿಕೊಂಡಿದ್ದರೆ ಅಥವಾ ಕೈಗಾರಿಕೆಯನ್ನು ಆರಂಭಿಸದೇ ಹಾಗೆಯೇ ಬಿಟ್ಟದರೂ, ಅಂತಹ ಭೂಮಿಗಳ ಸರ್ವೆ ನಡೆಸಿ, ವಾಪಾಸ್‌ ಸರ್ಕಾರಕ್ಕೆ ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಆರಂಭಿಸಲಿದ್ದೇವೆ ಎಂದು ಹೇಳಿದರು.

ಸರ್ವೆ ನಡೆಸಿದ ನಂತರ ಎಲ್ಲವೂ ತಿಳಿಯುತ್ತದೆ. ಕೆಲವೊಂದು ಸಂಸ್ಥೆಗಳು ನಿಗದಿತ ಕಾಲಮಿತಿಯಲ್ಲಿ ಕೈಗಾರಿಕೆ ಸ್ಥಾಪಿಸಿರುವುದಿಲ್ಲ. ಆಗ ಅವಧಿ ವಿಸ್ತರಣೆ ಮಾಡಬೇಕಾಗುತ್ತದೆ. ಅವಧಿ ವಿಸ್ತರಣೆಯ ನಂತರವೂ ಕೈಗಾರಿಕೆ ಆರಂಭಿಸಿದೆ ಇದ್ದಾಗ ಅದನ್ನು ವಾಪಾಸ್‌ ಪಡೆಯುವ ಚಿಂತನೆ ನಡೆಸಬೇಕಾಗುತ್ತದೆ ಎಂದರು.

ಎರಡನೇ ಹಂತದ ನಗರಗಳಿಗೆ ಆದ್ಯತೆ:
ಹೊಸ ಕೈಗಾರಿಕಾ ನೀತಿ ಅಂತಿಮಗೊಂಡಿದೆ. ಆರ್ಥಿಕ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭೀವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗೆ ಪರಿಶೀಲನೆಗೆ ಕಳುಹಿಸಿದ್ದೇವೆ. ಆ ಇಲಾಖೆಗಳ ಅಭಿಪ್ರಾಯವು ಮುಖ್ಯವಾಗುತ್ತದೆ. ನಂತರ ಸಚಿವ ಸಂಪುಟಕ್ಕೆ ತಂದು ಅಂತಿಮಗೊಳಿಸಲಿದ್ದೇವೆ. 2014ರಿಂದ 2019ರ ಕೈಗಾರಿಕಾ ನೀತಿ ಮುಗಿದೆ. ಹಿಂದಿನ ನೀತಿಯಿಂದ ಆಗಿರುವ ಸಾಧನೆ, ಸದ್ಯದ ಕೈಗಾರಿಕಾ ಪರಿಸ್ಥಿತಿ, ಮುಂದಿನ ಕಾರ್ಯಚಟುವಟಿಕೆಗಳನ್ನು ಹೊಸ ನೀತಿಯಲ್ಲಿ ಉಲ್ಲೇಖೀಸಲಿದ್ದೇವೆ. ಮುಖ್ಯವಾಗಿ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದೇವೆ. ಈ ಸಂಬಂಧ ಕಾಯ್ದೆ ರೂಪಿಸಿ, ಕಾನೂನು ಜಾರಿಗೆ ತರಲು ಚಿಂತನೆ ನಡೆಸುತ್ತಿದ್ದೇವೆ. ಬೆಂಗಳೂರು ಹೊರತುಪಡಿಸಿ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳಿಗೆ ವಿಫ‌ುಲವಾದ ಅವಕಾಶ ಇದೆ ಮತ್ತು ಭೂಮಿಯ ಲಭ್ಯತೆಯೂ ಹೆಚ್ಚಿದೆ. ಹೀಗಾಗಿ ಹೊಸ ಕೈಗಾರಿಕಾ ನೀತಿಯಲ್ಲಿ ಎರಡನೇ ಹಂತದ ನಗರಗಳಿಗೆ ಅತಿಹೆಚ್ಚಿನ ಮಹತ್ವ ನೀಡಲಿದ್ದೇವೆ ಎಂದು ಹೇಳಿದರು.

ಲ್ಯಾಂಡ್‌ ಬ್ಯಾಂಕ್‌ :
ರಾಜ್ಯದಲ್ಲಿ ಕೈಗಾರಿಕೆ ಆರಂಭಿಸಲು ಮತ್ತು ಹೂಡಿಕೆಗೆ ಭೂಮಿಯ ಕೊರತೆ ಇಲ್ಲ. ಈಗಾಗಲೇ 30 ಸಾವಿರ ಎಕರೆ ಭೂಮಿ ಲಭ್ಯವಿದೆ. ಜತೆಗೆ 12 ಸಾವಿರ ಎಕರೆ ಭೂಮಿ ಗುರುತಿಸಿದ್ದೇವೆ. ಹಾಗೆಯೇ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಭೂಮಿಯ ಅಭಿವೃದ್ಧಿಪಡಿಸುವ ಕಾರ್ಯವೂ ನಡೆಯುತ್ತಿದೆ. ಎರಡನೇ ಹಂತದ ನಗರಕ್ಕೆ ವಿಮಾನಯಾನ ಸೌಲಭ್ಯ ಇದೆ ಎಂಬುದನ್ನು ಹೂಡಿಕೆದಾರರಿಗೆ ಮನದಟ್ಟು ಮಾಡಿಕೊಡುವ ಅಗತ್ಯವಿದೆ ಎಂದರು.

ಏಕರೂಪ ತೆರಿಗೆ ಪದ್ಧತಿ:
ಕೈಗಾರಿಕಾ ತೆರಿಗೆಗೆ ಸಂಬಂಧಿಸಿದ ಕೆಲವೊಂದು ಗೊಂದಲವಿದೆ. ನಗರದಲ್ಲಿ ನಿರ್ಮಾಣವಾಗಿರುವ ಕೈಗಾರಿಕಾ ಎಸ್ಟೇಟ್‌ಗಳಲ್ಲಿ ಹಸ್ತಾಂತರವಾಗಿರುವ ಮತ್ತು ಹಸ್ತಾಂತರವಾಗದೇ ಇರುವುದಕ್ಕೆ ಯಾವ ರೀತಿಯಲ್ಲಿ ತೆರಿಗೆ ಹಾಕಬೇಕು ಎನ್ನುವುದಕ್ಕೆ ಹೊಸ ನೀತಿ ತರುವ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ವಿಚಾರವಾಗಿ ಸಚಿವ ಸಂಪುಟ ಮುಂದಿಟ್ಟು, ಅನುಮತಿ ಪಡೆಯಲಿದ್ದೇವೆ. ಬೇರೆ ಬೇರೆ ಇಲಾಖೆಯ ಅಧಿಕಾರಿಗಳನ್ನು ಕರೆದು ಈ ಸಂಬಂಧ ಸುದೀರ್ಘ‌ ಚರ್ಚೆ ನಡೆಸಿ, ಯಾವುದೇ ರೀತಿಯಲ್ಲೂ ಹೊರೆಯಾಗದಂತೆ ಏಕರೂಪ ತೆರಿಗೆ ವ್ಯವಸ್ಥೆ ಜಾರಿ ತರುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದರು.

ಜಿಂದಾಲ್‌ ಸಂಸ್ಥೆಗೆ 3661 ಎಕರೆ ಭೂಮಿ ಹಸ್ತಾಂತರ ಸಂಬಂಧಿಸಿದಂತೆ ಕಾನೂನು ಇಲಾಖೆ ಹಾಗೂ ಅಡ್ವೋಕೇಟ್‌ ಜನರಲ್‌ ಅಭಿಪ್ರಾಯ ಬೇರೆ ಬೇರೆಯಾಗಿದೆ. ಇದನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದೇನೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ, ಮುಖ್ಯಮಂತ್ರಿಗಳೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆದ್ದರಿಂದ ಈ ಸಂಬಂಧ ಏನೂ ಈಗ ಹೇಳಲು ಸಾಧ್ಯವಿಲ್ಲ ಎಂದರು.

ಹಿಂದು ನಾಯಕರ ಹತ್ಯೆಗೆ ಎಸ್‌ಡಿಪಿಐ ಕಾರ್ಯಕರ್ತರು ಸಂಚು ರೂಪಿಸಿರುವುದರಿಂದ ಕೆಲವರನ್ನು ಪೊಲೀಸರು ಬಂದಿಸಿದ್ದಾರೆ. ಪೊಲೀಸರ ಕಾರ್ಯವನ್ನು ಸ್ವಾಗತಿಸುತ್ತೇನೆ. ಕಾನೂನು ರೀತಿಯಲ್ಲಿ ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳಬೇಕು. ಈ ಸಂಘಟನೆ ನಿರ್ಧಾರ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚೆಗೆ ಬಂದಲ್ಲಿ ತಿಳಿಯುತ್ತದೆ. ಅಂತಿಮ ನಿರ್ಧಾರ ಕೇಂದ್ರ ಸರ್ಕಾರವೇ ಪ್ರಕಟಿಸಬೇಕು.
-ಜಗದೀಶ್‌ ಶೆಟ್ಟರ್‌, ಕೈಗಾರಿಕಾ ಸಚಿವ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ