ಮಳೆಯಲ್ಲಿ ಆಟ; ಅಂಪಾಯರ್ ವಿರುದ್ಧ ನೊವಾಕ್ ಜೊಕೋವಿಕ್ ಗರಂ
Team Udayavani, May 13, 2021, 7:00 AM IST
ರೋಮ್: ಮಳೆ ಬರುತ್ತಿದ್ದರೂ ಪಂದ್ಯವನ್ನು ನಿಲ್ಲಿಸಲು ಸೂಚಿಸದ ಚೇರ್ ಅಂಪಾಯರ್ ವಿರುದ್ಧ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೋವಿಕ್ ಗರಂ ಆಗಿದ್ದಾರೆ. ಇಲ್ಲಿ ನಡೆಯುತ್ತಿರುವ “ಇಟಾಲಿಯನ್ ಓಪನ್’ ಪಂದ್ಯಾವಳಿಯ ವೇಳೆ ಈ ಘಟನೆ ನಡೆದಿದೆ.
ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ ದ್ವಿತೀಯ ಸುತ್ತಿನ ಪಂದ್ಯ ನಡೆಯುತ್ತಿದ್ದಾಗ ಮಳೆ ಸುರಿಯತೊಡಗಿತ್ತು. ಆದರೂ ಚೇರ್ ಅಂಪಾಯರ್ ನಾಕೋ ಫೋರ್ಕಾಡೆಲ್ ಪಂದ್ಯವನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿರಲಿಲ್ಲ. ಇದರಿಂದ ಕೆರಳಿದ ಜೊಕೋ, “ಇನ್ನೂ ಎಷ್ಟು ಆಡಬೇಕೆಂದು ನೀವು ಬಯಸುತ್ತೀರಿ. ಮೂರು ಸಲ ನಿಮ್ಮನ್ನು ಕೇಳಿಕೊಂಡೆ. ಆದರೂ ಪಂದ್ಯ ನಿಲ್ಲಿಸಲಿಲ್ಲ…’ ಎಂದು ಆರೋಪಿಸಿದರು.
ಮಳೆ: ಬಹುತೇಕ ಪಂದ್ಯ ಸ್ಥಗಿತ
ಈ ಪಂದ್ಯವನ್ನು ಜೊಕೋವಿಕ್ 6-3, 7-6 (7-5) ಅಂತರದಿಂದ ಗೆದ್ದು ಮುನ್ನಡೆದರು. ದ್ವಿತೀಯ ಸೆಟ್ ಸ್ಕೋರ್ 5-5ರಿಂದ ಸಮನಾಗಿದ್ದಾಗ ಆಟಗಾರರು ಹೊರನಡೆದರು. ಮಳೆಯಿಂದ ದಿನದ ಬಹುತೇಕ ಪಂದ್ಯಗಳು ಸ್ಥಗಿತಗೊಂಡವು.