ಜಾರಕಿಹೊಳಿ ಸಹೋದರರ ವಾಗ್ಯುದ್ಧ!

Team Udayavani, Apr 24, 2019, 3:32 AM IST

ಬೆಳಗಾವಿ: ಲೋಕಸಭೆ ಚುನಾವಣೆ ಬೆನ್ನಲ್ಲೇ ಗೋಕಾಕದ ಜಾರಕಿಹೊಳಿ ಸಹೋದರರು ಪರಸ್ಪರ ಆರೋಪ ಹಾಗೂ ವಿಭಿನ್ನ ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಮತ್ತೆ ಹೊಸ ಸಂಚಲನ ಮೂಡಿಸುವ ಸಾಧ್ಯತೆಯ ಸುಳಿವು ನೀಡಿದ್ದಾರೆ.

ಮಂಗಳವಾರ ಮತದಾನ ಸಂದರ್ಭದಲ್ಲೇ ಬೆಳಗಾವಿ ಜಿಲ್ಲೆ ಗೋಕಾಕದಲ್ಲಿ ಜಾರಕಿಹೊಳಿ ಸಹೋದರರಾದ ರಮೇಶ, ಸತೀಶ , ಬಾಲಚಂದ್ರ ಹಾಗೂ ಲಖನ್‌ ಅವರು ಹೇಳಿಕೆ-ಪ್ರತಿ ಹೇಳಿಕೆ ನೀಡುವ ಮೂಲಕ ಲೋಕಸಭೆ ಚುನಾವಣೆ ನಂತರ ಮೈತ್ರಿ ಸರಕಾರಕ್ಕೆ ಕಂಟಕವಿದೆ ಎಂಬ ಸುದ್ದಿಯ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಸಹೋದರರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಸಿದ್ದು ಬರುವ ದಿನಗಳಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರುವ ಲಕ್ಷಣಗಳು ಗೋಚರಿಸಿವೆ.

ತಾಂತ್ರಿಕವಾಗಿ ಕಾಂಗ್ರೆಸ್‌ನಲ್ಲಿದ್ದೇನೆ: ರಮೇಶ
* ತಾಂತ್ರಿಕವಾಗಿ ಕಾಂಗ್ರೆಸ್‌ ಪಕ್ಷದಲ್ಲಿದ್ದೇನೆ. ನನಗೆ ನನ್ನ ಜವಾಬ್ದಾರಿ ಗೊತ್ತಿದೆ. ಕತ್ತಲಲ್ಲಿ ಕುಳಿತು ಕಲ್ಲು ಎಸೆಯುವ ವ್ಯಕ್ತಿ ನಾನಲ್ಲ. ಸಚಿವ ಸತೀಶ ಜಾರಕಿಹೊಳಿಗೆ ಏನೂ ಗೊತ್ತಿಲ್ಲ. ತಲೆ ಸರಿಯಿಲ್ಲ. ಈಗಾಗಲೇ ಒಬ್ಬರನ್ನು ಹಾಳು ಮಾಡಿದ್ದಾರೆ. ಇನ್ನು ಲಖನ್‌ ಜಾರಕಿಹೊಳಿ ಶಾಸಕರಾದರೆ ನನ್ನಷ್ಟು ಸಂತೋಷ ಪಡುವವರು ಬೇರೆ ಯಾರಿಲ್ಲ. ಅವರಿಗಾಗಿ ಯಾವ ತ್ಯಾಗಕ್ಕೂ ಸಿದ್ಧ. ಲಖನ್‌ ಜಾರಕಿಹೊಳಿ ಗೋಕಾಕದಲ್ಲಿ ಸ್ಪರ್ಧೆ ಮಾಡಿದರೆ ನನಗೆ ಬೇರೆ ಕ್ಷೇತ್ರಗಳಿವೆ.

* ಕಾಂಗ್ರೆಸ್‌ ಬಗ್ಗೆ ನನಗಿರುವ ಅಸಮಾಧಾನವನ್ನು ಸರಿಪಡಿಸಲು ಇದುವರೆಗೆ ಯಾವ ನಾಯಕರೂ ಪ್ರಯತ್ನ ಮಾಡಲಿಲ್ಲ. ದಳ ಬಿಟ್ಟು ಬಂದವರಿಂದ ಕಾಂಗ್ರೆಸ್‌ನಲ್ಲಿ ಗೊಂದಲ ಆರಂಭವಾಗಿದೆ. 1999ರ ನಂತರ ಆಂತರಿಕ ಗೊಂದಲ ಜಾಸ್ತಿಯಾಗಿದ್ದು, ಇದೀಗ ತಾರಕಕ್ಕೇರಿದೆ. ಬಿಜೆಪಿಯಲ್ಲಿ ಅಸಮಾಧಾನ ಉಂಟಾದ ತಕ್ಷಣ ಅದರ ನಾಯಕರು ಸಮಾಲೋಚನೆ ಮಾಡಿ ಸರಿಪಡಿಸುತ್ತಾರೆ. ಅದು ಕಾಂಗ್ರೆಸ್‌ನಲ್ಲಿ ಇಂಥ ಪ್ರಯತ್ನ ಕಾಣುತ್ತಿಲ್ಲ. ಕಾಂಗ್ರೆಸ್‌ಗೆ ಯಾವಾಗ ರಾಜೀನಾಮೆ ಕೊಡುತ್ತೇನೆ ಎಂಬುದನ್ನು ಈಗಲೇ ಹೇಳುವುದಿಲ್ಲ.

ಸಚಿವ ಸ್ಥಾನಕ್ಕಿಂತ ಬೇರೆ ಕಿರೀಟ ಕೊಡಬೇಕಿತ್ತೇ?: ಸತೀಶ
* ರಮೇಶ ಸಚಿವರಿದ್ದಾಗಲೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದರು. ಅವರಿಗೆ ಸಚಿವ ಸ್ಥಾನಕ್ಕಿಂತ ಬೇರೆ ಕಿರೀಟ ಕೊಡಬೇಕಿತ್ತೇ?

* ಅವರು ಕಾಂಗ್ರೆಸ್‌ ಎಂದು ಬಿಜೆಪಿ ಪರ ಕೆಲಸ ಮಾಡುತ್ತಾರೆ. ಇದನ್ನೇ ಕತ್ತಲಲ್ಲಿ ಕುಳಿತು ಕಲ್ಲು ಎಸೆಯೋದು ಅಂತ ಹೇಳಿದ್ದು. ಅವರು ಬಹಿರಂಗವಾಗಿ ಬಿಜೆಪಿ ಸೇರಿದರೆ ಗೋಕಾಕದ ಸ್ಪಷ್ಟ ಚಿತ್ರಣ ಸಿಗಲಿದೆ.

* ಗೋಕಾಕ ತಾಲೂಕಿನ ಇತಿಹಾಸ ನೋಡಿದರೆ ಯಾರು, ಯಾರನ್ನು ಹಾಳು ಮಾಡಿದರು ಎನ್ನುವುದು ಗೊತ್ತಿದೆ. ನನ್ನ ವಿರುದ್ಧ ಯಾರು ಸ್ಪರ್ಧೆ ಮಾಡಿದರೂ ಸ್ವಾಗತ. ಗೋಕಾಕದಿಂದ ಲಖನ್‌ ಸ್ಪರ್ಧೆ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳಲಿದೆ. ರಮೇಶ ಜಾರಕಿಹೊಳಿ ಬೇಗ ನಿರ್ಧಾರ ಕೈಗೊಂಡರೆ ಒಳ್ಳೆಯದು.

ನಾನು ಎಲ್ಲೂ ಹೋಗಿ ಹಾಳಾಗಿಲ್ಲ: ಲಖನ್‌
* ಸದ್ಯ ಲೋಕಸಭೆ ಚುನಾವಣೆ ಬಗ್ಗೆ ಮಾತ್ರ ಗಮನಹರಿಸಿದ್ದೇವೆ. ಕಾಂಗ್ರೆಸ್‌ ಪರ ಪ್ರಚಾರ ಮಾಡುತ್ತಿದ್ದೇನೆ. ಮುಂದೆ ಎಲ್ಲ ಸಹೋದರರು ಇದರ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಈಗ ರಮೇಶ ಜಾರಕಿಹೊಳಿ ಬಗ್ಗೆ ಏನೂ ಹೇಳುವುದಿಲ್ಲ.

* ಕಾಂಗ್ರೆಸ್‌ನಲ್ಲೇ ಇದ್ದೇನೆ. ಪಕ್ಷಕ್ಕಾಗಿ ದುಡಿಯುತ್ತೇನೆ. ನಾನು ಎಲ್ಲೂ ಹೋಗಿ ಹಾಳಾಗಿಲ್ಲ. ನಮ್ಮ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ರಮೇಶ ಕಾಂಗ್ರೆಸ್‌ ಪರ ನಿರ್ಧಾರ ಕೈಗೊಂಡರೆ ಅವರಿಗೆ ಬೆಂಬಲ ನೀಡುತ್ತೇವೆ. ಗೋಕಾಕದಲ್ಲಿ ಕಾಂಗ್ರೆಸ್‌ ಗೆಲ್ಲಿಸುವುದು ನಮ್ಮ ಗುರಿ.

ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ: ಬಾಲಚಂದ್ರ
* ಲೋಕಸಭೆ ಚುನಾವಣೆ ಮುಗಿದ ಬಳಿಕ ಬಹಳ ಬದಲಾವಣೆ ಆಗಲಿದೆ. ರಮೇಶ ಜಾರಕಿಹೊಳಿ ಕಾಂಗ್ರೆಸ್‌ನಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ಆದರೆ ಕುಟುಂಬ ವಿಚಾರ ಬಂದಾಗ ನಾವೆಲ್ಲ ಒಂದೇ. ರಾಜಕೀಯ ಬಂದಾಗ ಮಾತ್ರ ನಿರ್ಧಾರ ಬೇರೆ ಬೇರೆ. ಈಗ ಉಂಟಾಗಿರುವ ಗೊಂದಲ ಹಾಗೂ ವಿವಾದ ಇತ್ಯರ್ಥ ಮಾಡಲು ಮಧ್ಯಸ್ಥಿಕೆ ವಹಿಸಲು ಸಿದ್ಧ.

* ರಮೇಶ ಜಾರಕಿಹೊಳಿ ಯಾರ ಬಳಿಯೂ ಒಂದು ರೂಪಾಯಿ ಪಡೆದಿಲ್ಲ. ಆದರೆ ಬೇರೆ ಬೇರೆ ಕಾರಣದಿಂದ ಅವರು ಕಾಂಗ್ರೆಸ್‌ ಬಿಡಲು ನಿರ್ಧರಿಸಿದ್ದಾರೆ. ರಮೇಶ ಮತ್ತು ಸತೀಶ ಇಬ್ಬರೂ ಒಂದು ಕಡೆ ಕುಳಿತು ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು. ಇಬ್ಬರು ಒಂದಾದರೆ ರಾಜ್ಯದಲ್ಲಿ ಉತ್ತಮ ರಾಜಕೀಯ ಶಕ್ತಿಯಾಗಲಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ