ಫ‌ಲಿತಾಂಶ : ಯಡಿಯೂರಪ್ಪ ಸರಕಾರದ ಭವಿಷ್ಯ ನಿರ್ಧಾರ

Team Udayavani, Dec 9, 2019, 6:30 AM IST

ಬೆಂಗಳೂರು: ರಾಜ್ಯದಲ್ಲಿ ಐದು ತಿಂಗಳ ಹಿಂದೆ ನಡೆದ ರಾಜಕೀಯ ಪ್ರಹಸನದ ಅನಂತರ ರಚನೆಯಾದ ಬಿಜೆಪಿ ಸರಕಾರದ ಅಳಿವು-ಉಳಿವು ಹಾಗೂ ಅನರ್ಹಗೊಂಡ 17 ಶಾಸಕರ ಪೈಕಿ ಉಪಚುನಾವಣೆಗೆ ಸ್ಪರ್ಧಿಸಿರುವ 13 ಅನರ್ಹ ಶಾಸಕರ ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಫ‌ಲಿತಾಂಶ ಸೋಮವಾರ ಪ್ರಕಟವಾಗಲಿದೆ.

ಅನರ್ಹರಿಗೆ ನ್ಯಾಯ ಖಚಿತ: ಬಿಜೆಪಿ
ಸಮೀಕ್ಷೆಯ ಹಿನ್ನೆಲೆಯಲ್ಲಿ ಭರ್ಜರಿ ಗೆಲುವನ್ನು ನಿರೀಕ್ಷಿಸುತ್ತಿರುವ ಬಿಜೆಪಿಯಲ್ಲಿ ಈಗ “ಅನರ್ಹರಿಗೆ ನ್ಯಾಯ’ ಕೊಡುವ ಚರ್ಚೆ ಆರಂಭವಾಗಿದೆ. ಫ‌ಲಿತಾಂಶ ಆಧರಿಸಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳಲು ರಾಜ್ಯ ಬಿಜೆಪಿ ನಾಯಕರು ಸಜ್ಜಾಗಿದ್ದಾರೆ.

ಸೋತ ಅನರ್ಹರಿಗೆ ಸ್ಥಾನಮಾನ ಇಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದ ಬೆನ್ನಲ್ಲೇ ಅದು ಬಿಜೆಪಿ ಅಧಿಕೃತ ಹೇಳಿಕೆಯಲ್ಲ ಎಂಬ ಮಾತುಗಳೂ ಕೇಳಲಾರಂಭಿಸಿವೆ. ರವಿವಾರ ಬೆಳಗ್ಗೆ ತನ್ನ ಡಾಲರ್ ಕಾಲನಿ ನಿವಾಸಕ್ಕೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಇತರರೊಂದಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚರ್ಚೆ ನಡೆಸಿದರು. ಬಳಿಕ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು 13 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಹುಬ್ಬಳ್ಳಿಯಲ್ಲಿ ರವಿವಾರ ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್‌ ಕುಮಾರ್‌ ಕಟೀಲು ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲೂ ಉಪ ಚುನಾವಣ ಫ‌ಲಿತಾಂಶದ ಬಗ್ಗೆ ಚರ್ಚೆಯಾಗಿದೆ. “ಅನರ್ಹರಿಗೆ ಈವರೆಗೆ ನ್ಯಾಯ ಕೊಟ್ಟಿದ್ದೇವೆ, ಇನ್ನೂ ಕೊಡುತ್ತೇವೆ’ ಎಂದು ಹೇಳಿರುವ ನಳಿನ್‌, 9ರಿಂದ 12 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದಿದ್ದಾರೆ. ಪಕ್ಷೇತರ ಶಾಸಕ ಎನ್‌. ನಾಗೇಶ್‌ ಬೆಂಬಲದೊಂದಿಗೆ ಬಿಜೆಪಿ ವಿಧಾನಸಭೆಯಲ್ಲಿ 106 ಸದಸ್ಯ ಬಲ ಹೊಂದಿದೆ. ಹಾಗಾಗಿ ಇನ್ನು ಆರೇಳು ಸ್ಥಾನಗಳಲ್ಲಿ ಗೆದ್ದರೂ ಬಿಜೆಪಿ ಸರಕಾರ ಸುಭದ್ರವಾಗಲಿದೆ.

ಕಾಂಗ್ರೆಸ್‌: ಕಾದು ನೋಡುವ ತಂತ್ರ
ಮತದಾನೋತ್ತರ ಸಮೀಕ್ಷೆ ಉಲ್ಟಾ ಆಗಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್‌ ನಾಯಕರು ಇದ್ದಾರೆ.
ಜೆಡಿಎಸ್‌ ಜತೆ ಮರು ಮೈತ್ರಿಗೆ ಕಾಂಗ್ರೆಸ್‌ನ ಕೆಲವರು ಒಲವು ವ್ಯಕ್ತಪಡಿಸಿರುವುದರಿಂದ ಒಂದೊಮ್ಮೆ ಕಾಂಗ್ರೆಸ್‌ ಸ್ಥಾನಗಳ ಸಂಖ್ಯೆ ಹೆಚ್ಚಾದರೆ ತತ್‌ಕ್ಷಣ ಕಾರ್ಯರಂಗಕ್ಕೆ ಇಳಿದು ಮುಂದಿನ ರಣತಂತ್ರ ರೂಪಿಸಲು ನಾಯಕರು ಸಜ್ಜಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಇದಕ್ಕೆ ಪಕ್ಷದ ಇನ್ನೊಂದು ಬಣ ವಿರೋಧಿಸುತ್ತಿದ್ದು, ಜೆಡಿಎಸ್‌ ಜತೆಗೆ ಮರುಸಂಬಂಧ ಬೇಡ ಎನ್ನುತ್ತಿದೆ. 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅತಂತ್ರ ಫ‌ಲಿತಾಂಶದ ಮುನ್ಸೂಚನೆ ಸಿಕ್ಕ ತತ್‌ಕ್ಷಣ ಕಾಂಗ್ರೆಸ್‌ ಹೈಕಮಾಂಡ್‌ ಕ್ಷಿಪ್ರವಾಗಿ ರಂಗಪ್ರವೇಶ ಮಾಡಿ, ಪರಿಸ್ಥಿತಿಯನ್ನು ತನ್ನ ಹತೋಟಿಗೆ ತೆಗೆದುಕೊಂಡಿತ್ತು.

ಸೋಮವಾರವೂ ಅದೇ ರೀತಿ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸಹಿತ ಬಹುತೇಕ ಘಟಾನುಘಟಿ ನಾಯಕರು ಸೋಮವಾರ ಬೆಂಗಳೂರಿನಲ್ಲೇ ಇರಲಿದ್ದು, ಬೆಳಗ್ಗೆಯಿಂದಲೇ ಫ‌ಲಿತಾಂಶದತ್ತ ಚಿತ್ತ ನೆಟ್ಟು, ಮುಂದಿನ ನಡೆ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಕಾಂಗ್ರೆಸ್‌ ಪಕ್ಷಕ್ಕೆ ನಿರೀಕ್ಷಿತ ಸ್ಥಾನಗಳು ಲಭಿಸದಿದ್ದರೆ, ಪಕ್ಷದ ಆಂತರಿಕ ಬೆಳವಣಿಗೆಗಳು ಮತ್ತು ಮುಂದಿನ ತೀರ್ಮಾನಗಳ ಬಗ್ಗೆ ಬಿರುಸಿನ ಚರ್ಚೆಯೂ ಸೋಮವಾರವೇ ಆರಂಭವಾಗುವ ಸಾಧ್ಯತೆಯಿದೆ.

ಜೆಡಿಎಸ್‌: ಅಸ್ತಿತ್ವ ನಿರ್ಧಾರ?
ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫ‌ಲಿತಾಂಶವು ಸರಕಾರದ ಭವಿಷ್ಯ ಮಾತ್ರವಲ್ಲ; ಜೆಡಿಎಸ್‌ ಅಸ್ತಿತ್ವವನ್ನೂ ನಿರ್ಧರಿಸಲಿದೆ. ಹೀಗಾಗಿ ಸೋಮವಾರದ ಮತ ಎಣಿಕೆ ಎಲ್ಲರ ಕುತೂಹಲ ಕೆರಳಿಸಿದೆ.

ಬಿಜೆಪಿಗೆ ಸರಳ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳು ಲಭಿಸದಿದ್ದರೆ ಜೆಡಿಎಸ್‌ ನಿರ್ಣಾಯಕ ಪಾತ್ರ ವಹಿಸಲಿದೆ. ಇಲ್ಲವಾದಲ್ಲಿ ತಾತ್ಕಾಲಿಕವಾಗಿ ನೇಪಥ್ಯಕ್ಕೆ ಸರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಂಕಿಗಳ ಮೇಲೆ ಜೆಡಿಎಸ್‌ ಅಸ್ತಿತ್ವ ಅವಲಂಬಿಸಿದೆ. ಆದರೆ ಮತಗಟ್ಟೆ ಸಮೀಕ್ಷೆಗಳು ಜೆಡಿಎಸ್‌ಗೆ ಪೂರಕವಾಗಿಲ್ಲ. ಇದು  ಕೊಂಚ ಆತಂಕ ಸೃಷ್ಟಿಸಿದೆ. ಇದಕ್ಕೆ ಮಧ್ಯಾಹ್ನದ ವೇಳೆಗೆ ತೆರೆ ಬೀಳಲಿದೆ.

ಅಕಸ್ಮಾತ್‌ ಮತದಾನೋತ್ತರ ಸಮೀಕ್ಷೆ ತಿರುವು-ಮುರುವಾದರೆ ಮೂರೂ ಪಕ್ಷಗಳಲ್ಲಿ ರಾಜಕೀಯ ಮೇಲಾಟ ಜೋರಾಗಲಿದೆ. ಜೆಡಿಎಸ್‌ಗೆ ಮತ್ತೆ ಬೇಡಿಕೆ ಬರಲಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಆ ಪಕ್ಷದಲ್ಲೇ ಮೈತ್ರಿಯ ಭಿನ್ನರಾಗ ಕೇಳಿಬರುತ್ತಿದೆ.

ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಮರುಮೈತ್ರಿಯತ್ತ ಒಲವು ತೋರಿದರೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿಯತ್ತ ಮುಖಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಶಾಸಕರಲ್ಲಿ ತುಸು ಗೊಂದಲ ಸೃಷ್ಟಿಸಿದೆ. ಅಷ್ಟೇ ಅಲ್ಲ, ಮುಂದುವರಿದು ಕುಟುಂಬದಲ್ಲಿನ ಒಡಕಿಗೂ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ